ವಿದ್ಯುತ್‌ ಖರೀದಿ ಶುಲ್ಕ ಪಾವತಿ; ಪ್ರಸಕ್ತ ವರ್ಷದಲ್ಲೇ ಎಸ್ಕಾಂಗಳಿಗೆ 1,000 ಕೋಟಿ ಹೊರೆ

ಬೆಂಗಳೂರು; ವಿದ್ಯುತ್‌ ಖರೀದಿ ಶುಲ್ಕಕ್ಕೆ ಸಂಬಂಧಿಸಿದಂತೆ ಲೇಟ್‌ ಪೇಮೆಂಟ್‌ ಸರ್ಚಾರ್ಜ್‌ನ್ನು ವಿದ್ಯುತ್‌ ಸರಬರಾಜು ಕಂಪನಿಗಳು ತಡವಾಗಿ ಪಾವತಿಸುತ್ತಿರುವ ಕಾರಣ ಪ್ರಸಕ್ತ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ ಇದರ ಮೊತ್ತವು ಅಂದಾಜು 1,000 ಕೋಟಿ ರು. ಗೆ ತಲುಪಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಈಗಾಗಲೇ ನಷ್ಟ ಅನುಭವಿಸುತ್ತಿರುವ ಮಧ್ಯೆಯೇ ಲೇಟ್‌ ಪೇಮೆಂಟ್‌ ಸರ್ಚಾಜ್‌ ಮೊತ್ತವು 1,000 ಕೋಟಿ ತಲುಪಲಿದೆ ಎಂದು ಅಧಿಕಾರಿಗಳು ಮಾಡಿರುವ ಅಂದಾಜು ವಿದ್ಯುತ್‌ ಸರಬರಾಜು ಕಂಪನಿಗಳ ನಷ್ಟದ ಮೊತ್ತವನ್ನು ಏರಿಕೆ ಮಾಡಲಿದೆ ಎಂಬುದನ್ನು ಸೂಚಿಸಿದೆ.

ಇಂಧನ ಇಲಾಖೆಯ ವಿವಿಧ ಹಂತದ ಯೋಜನೆಗಳ ಕುರಿತು 2021ರ ನವೆಂಬರ್‌ 18ರಂದು ನಡೆದಿದ್ದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿದ್ಯುತ್‌ ಖರೀದಿ ಶುಲ್ಕ ಮತ್ತು ಲೇಟ್‌ ಪೇಮೆಂಟ್‌ ಸರ್ಚಾರ್ಜ್‌ ಕುರಿತು ಚರ್ಚೆಯಾಗಿದೆ. ಸಭೆಯ ನಡವಳಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

2017-18ರಿಂದ 2021-22ರ ಸಾಲಿನ 2021ರ ನವೆಂಬರ್‌ 15ರವರೆಗೆ ವಿದ್ಯುತ್‌ ಖರೀದಿ ಶುಲ್ಕಕ್ಕೆ ಸಂಬಂಧಿಸಿದಂತೆ ವಿದ್ಯುತ್‌ ಸರಬರಾಜು ಕಂಪನಿಗಳು ಪಾವತಿಸಿರುವ ಲೇಟ್‌ ಪೇಮೆಂಟ್‌ ಸರ್ಚಾರ್ಜ್‌ ಮೊತ್ತದ ಅಂಕಿ ಅಂಶಗಳನ್ನು ಸಭೆಯು ಪರಿಶೀಲಿಸಿದೆ.

2020-21ರ ಸಾಲಿನಲ್ಲಿ ವಿದ್ಯುತ್‌ ಸರಬರಾಜು ಕಂಪನಿಗಳು ಲೇಟ್‌ ಪೇಮೆಂಟ್‌ ಸರ್ಚಾರ್ಜ್ ನ ಒಟ್ಟು ಮೊತ್ತ 649.24 ಕೋಟಿ ರು.ಇತ್ತು. 2021-22ರ ಸಾಲಿನಲ್ಲಿ 2021ರ ನವೆಂಬರ್‌ 15ರ ಅಂತ್ಯಕ್ಕೆ 449.17 ಕೋಟಿಗಳ ಮೊತ್ತವನ್ನು ಪಾವತಿಸಲಾಗಿದೆ. ಇದನ್ನು ಪರಿಗಣಿಸಿದರೆ ಈ ಆರ್ಥಿಕ ವರ್ಷದ ಅಂತ್ಯಕ್ಕೆ ಲೇಟ್‌ ಪೇಮೆಂಟ್‌ ಸರ್ಚಾರ್ಜ್‌ ಮೊತ್ತವು ಅಂದಾಜು 1,000 ಕೋಟಿ ಗಳವರೆಗೆ ತಲುಪುವ ಸಾಧ್ಯತೆ ಇದೆ ಎಂದು ಇಂಧನ ಇಲಾಖೆಯ ಅಧಿಕಾರಿಗಳು ಅಂದಾಜಿಸಿರುವುದು ಸಭೆ ನಡವಳಿಯಿಂದ ತಿಳಿದು ಬಂದಿದೆ.

2019-20ನೇ ಸಾಲಿನಲ್ಲಿ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮವು 366.63 ಕೋಟಿ, ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿಯು 682.21 ಕೋಟಿ ಮತ್ತು ಗುಲ್ಬರ್ಗಾ ವಿದ್ಯುತ್‌ ಸರಬರಾಜು ಕಂಪನಿಯು 992.77 ಕೋಟಿಗಳಷ್ಟು ನಷ್ಟ ಅನುಭವಿಸಿವೆ. ವಿದ್ಯುತ್‌ ಬೇಡಿಕೆ ಪೂರೈಸಲು ಹೊಸ ಉಷ್ಣ ಕೇಂದ್ರ ಹಾಗೂ ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್‌ ಖರೀದಿಸಬೇಕಾಗಿರುವುದರಿಂದ ವಿದ್ಯುತ್‌ ಖರೀದಿಯ ವೆಚ್ಚವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

ಅಲ್ಲದೆ ದೀರ್ಘ ಕಾಲದ ವಿದ್ಯುತ್‌ ಖರೀದಿ ಒಪ್ಪಂದಗಳಿಂದಾಗಿ ವಿದ್ಯುತ್‌ ಸರಬರಾಜು ಕಂಪನಿಗಳು ಉಷ್ಣಕೇಂದ್ರಗಳಿಗೆ ಪ್ರತಿ ತಿಂಗಳು ನಿಗದಿತ ವೆಚ್ಚವನ್ನು ಭರಿಸಬೇಕಾಗಿದೆ. ಅದಲ್ಲದೆ ವಿದ್ಯುತ್‌ ಖರೀದಿ ವೆಚ್ಚ ಮತ್ತು ವಿದ್ಯುತ್‌ ಮಾರಾಟದಿಂದ ಬರುತ್ತಿರುವ ಆದಾಯದ ವ್ಯತ್ಯಾಸವು ಹೆಚ್ಚಾಗುತ್ತಿದೆ. ವಿದ್ಯುತ್‌ ಸರಬರಾಜು ಕಂಪನಿಗಳ ನಷ್ಟಕ್ಕೆ ಇದು ಕೂಡ ಒಂದು ಕಾರಣ ಎಂದು ಇಂಧನ ಸಚಿವ ವಿ ಸುನೀಲ್‌ಕುಮಾರ್‌ ಅವರು ಬೆಳಗಾವಿಯಲ್ಲಿ ನಡೆದಿದ್ದ ಚಳಿಗಾಲದ ಅಧಿವೇಶನದಲ್ಲಿ ವಿಧಾನಪರಿಷತ್‌ನ ಸದಸ್ಯ ಎನ್‌ ರವಿಕುಮಾರ್‌ ಅವರಿಗೆ 2021ರ ಡಿಸೆಂಬರ್‌ 13ರಂದು ಉತ್ತರಿಸಿದ್ದಾರೆ.

ಹೆಸ್ಕಾಂ, ಸೆಸ್ಕಾಂ ಮತ್ತು ಜೆಸ್ಕಾಂಗಳು ಕಳೆದ ಮೂರು ವರ್ಷಗಳಲ್ಲಿ (2018-19ರಿಂದ 2021-22ರ ಅಕ್ಟೋಬರ್‌ 21 ಅಂತ್ಯಕ್ಕೆ) ವಿದ್ಯುತ್‌ ಬಿಲ್‌ ಮೂಲಕ ಒಟ್ಟು 55,706.09 ಕೋಟಿಯಷ್ಟು ಸಂಗ್ರಹಿಸಿದೆ. ಈ ಪೈಕಿ ಸೆಸ್ಕಾಂ ಮೂರು ವರ್ಷಗಳಲ್ಲಿ 13,976.34 ಕೋಟಿ, ಹೆಸ್ಕಾಂ ಕಂಪನಿಯು 23,337.82 ಕೋಟಿ, ಜೆಸ್ಕಾಂ 18,391.93 ಕೋಟಿ ರು.ಗಳನ್ನು ಸಂಗ್ರಹಿಸಿರುವುದು ಸಚಿವ ಸುನೀಲ್‌ಕುಮಾರ್‌ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊಳವೆ ಬಾವಿಗಳ ವಿದ್ಯುದ್ದೀಕರಣದ ಪ್ರಗತಿ ಕುರಿತು ಚರ್ಚಿಸಲಾಗಿದೆ. ಈ ಯೋಜನೆಗಾಗಿ ಡಾ ಬಿ ಆರ್‌ ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ ಸಿದ್ಧಪಡಿಸಲಾದ ತಂತ್ರಾಂಶವು ಹಳೆಯದಾಗಿದೆ. ತಂತ್ರಾಂಶ ಅಭಿವೃದ್ಧಿದಾರರು ಲಭ್ಯವಿಲ್ಲದ ಕಾರಣ ಸಮಾಲೋಚಕರ ಸೇವೆಯೂ ಇಲ್ಲವಾಗಿದೆ. ಇರುವ ತಂತ್ರಾಂಶದಲ್ಲಿ ನ್ಯೂನತೆಗಳಿರುವ ಕಾರಣ ಅರ್ಜಿ ನೋಂದಣಿ ಕಾರ್ಯದಲ್ಲಿ ವಿಳಂಬವಾಗಿರುವುದು ನಡವಳಿಯಿಂದ ಗೊತ್ತಾಗಿದೆ.

ಅದೇ ರೀತಿ ಕೊಳವೆ ಬಾವಿಗಳ ಪ್ರತಿ ಪಂಪ್‌ಸೆಟ್‌ ವಿದ್ಯುದ್ದೀಕರಣಕ್ಕಾಗಿ 50,000 ರು.ಬಿಡುಗಡೆಯಾಗುತ್ತಿದ್ದು ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಸರಾಸರಿ 1.60 ಲಕ್ಷ ರು.ವೆಚ್ಚವಾಉತ್ತಿದೆ. ಹೀಗಾಗಿ ಈ ಮೊತ್ತವನ್ನು 1.60 ಲಕ್ಷ ರು.ಗಳಿಗೆ ಹೆಚ್ಚಿಸಬೇಕು ಎಂಬ ಪ್ರಸ್ತಾವನೆಯನ್ನು ವಿವಿಧ ಇಲಾಖೆಗಳು ಇಂಧನ ಇಲಾಖೆಗೆ ಮಾಹಿತಿಯನ್ನು ನೀಡಿಲ್ಲ.

ಕುಡಿಯುವ ನೀರಿನ ಯೋಜನೆಗಳ ವಿದ್ಯುದ್ದೀಕರಣಕ್ಕೆ ಸಂಬಂಧಿಸಿದಂತೆ 2021ರ ಅಕ್ಟೋಬರ್‌ ಅಂತ್ಯಕ್ಕೆ 836 ಅರ್ಜಿಗಳು ಬಾಕಿ ಇವೆ. ಈ ಪೈಕಿ ಸ್ಥಳೀಯ ಸಂಸ್ಥೆಗಳಿಮದ ನಿಯಮಗಳನ್ನು ಪಾಲಿಸಲು ಇನ್ನು 539 ಅರ್ಜಿಗಳು ಬಾಕಿ ಇವೆ. ವಿದ್ಯುತ್‌ ಸರಬರಾಜು ಕಂಪನಿಗಳಿಂದಲೇ 297 ಅರ್ಜಿಗಳು ಬಾಕಿ ಇರುವ ಕಾರಣ ಕುಡಿಯುವ ನೀರಿನ ಯೋಜನೆ ವಿದ್ಯುದ್ದೀಕರಣ ಯೋಜನೆಯನ್ನು ಆದ್ಯತೆ ಮೇಲೆ ಪರಿಗಣಿಸಿಲ್ಲ ಎಂಬುದು ಗೊತ್ತಾಗಿದೆ.

ಕುಡಿಯುವ ನೀರಿನ ಸ್ಥಾವರ ವಿದ್ಯುದ್ದೀಕರಣದ ಮೂಲ ಸೌಕರ್ಯ ರಚನೆ ಸಂಬಂಧ ಎಲ್ಲಾ ವಿದ್ಯುತ್‌ ಸರಬರಾಜು ಕಂಪನಿಗಳು ಭರಿಸಿರುವ ವೆಚ್ಚದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌ ಇಲಾಖೆಯಿಂದ 125 ಕೋಟಿ ಮತ್ತು ನಗರಾಭಿವೃದ್ಧಿ ಇಲಾಖೆಯಿಂದ 10.93 ಕೋಟಿ ರು.ಗಳು ಬಾಕಿ ಇವೆ. ಹಾಗೆಯೇ ಫೀಡರ್‌ ಮಾಪಕಗಳ ಅಳವಡಿಕೆಯಲ್ಲಿಯೂ ಹಿಂದುಳಿದಿದೆ. ಕೆಪಿಟಿಸಿಎಲ್‌ನಿಂದ 16,800 ಸಂಖ್ಯೆಯ ಮಾಪಕಗಳ ಖರೀದಿಗೆ ಆದೇಶ ನೀಡಲಾಗಿದ್ದರೂ ಈವರೆಗೆ 14,285 ಮಾಪಕಗಳನ್ನು ಮಾತ್ರ ಅಳವಡಿಸಲಾಗಿದೆ. ಇನ್ನೂ 2,515 ಮಾಪಕಗಳನ್ನು ಅಳವಡಿಸುವ ಪ್ರಕ್ರಿಯೆ ವಿಳಂಬವಾಗಿರುವುದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts