ಬೆಂಗಳೂರು; ಖಾದ್ಯ ತೈಲ ಉತ್ಪಾದಕ ಕಂಪನಿಗಳಲ್ಲೊಂದಾದ ಅದಾನಿ ವಿಲ್ಮಾರ್ ಕಂಪನಿಗೆ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ 11 ಜಿಲ್ಲೆಗಳ ಸರ್ಕಾರಿ ಶಾಲೆಗಳಿಗೆ ಮಧ್ಯಾಹ್ನ ಉಪಹಾರ ಯೋಜನೆಯಡಿ ಸೂರ್ಯಕಾಂತಿ ಎಣ್ಣೆಯನ್ನು ಸರಬರಾಜು ಮಾಡಲು ಸರ್ಕಾರವು ಅನುಮೋದನೆ ನೀಡಿದೆ. ಇ-ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಸಹಕಾರಿ ವಲಯದ ಸಂಸ್ಥೆಗಳನ್ನು ಹಿಂದಕ್ಕೆ ತಳ್ಳಿ ಸಿಂಹಪಾಲು ಪಡೆದಿದೆ.
ಮಧ್ಯಾಹ್ನ ಉಪಹಾರ ಯೋಜನೆಯಡಿ ಅಗತ್ಯವಿರುವ ಸೂರ್ಯಕಾಂತಿ ಎಣ್ಣೆಯನ್ನು ಸರಬರಾಜು ಮಾಡುವ ಸಂಬಂಧ ಇ-ಹರಾಜು ನಡೆಸಿದ್ದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ಎಲ್-1 ದರ ನಮೂದಿಸಿದ್ದ ಕಂಪನಿಗಳಿಗೆ ಅನುಮೋದನೆ ನೀಡಿರುವ ಕಂಪನಿಗಳ ಪೈಕಿ ಅದಾನಿ ವಿಲ್ಮಾರ್ ಸಮೂಹವೂ ಸೇರಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೂರ್ಯಕಾಂತಿ ಎಣ್ಣೆ ಸೇರಿದಂತೆ ಇನ್ನಿತರೆ ಖಾದ್ಯ ತೈಲಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತಿರುವ ಕರ್ನಾಟಕ ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಒಕ್ಕೂಟ ಸೇರಿದಂತೆ ಸಹಕಾರಿ ವಲಯದ ಸಂಸ್ಥೆಗಳಿಗೆ ಸರಬರಾಜು ಮಾಡಲು ಹೆಚ್ಚಿನ ಅವಕಾಶ ನೀಡುವ ಮೂಲಕ ಅವುಗಳನ್ನು ಬಲಪಡಿಸಬೇಕಿದ್ದ ಸರ್ಕಾರವು ಇ-ಹರಾಜು ನಡೆಸುವ ಮೂಲಕ ಅದಾನಿ ವಿಲ್ಮಾರ್ ನಂತಹ ಬೃಹತ್ ಉದ್ದಿಮೆಗಳಿಗೆ ಅನುಕೂಲ ಮಾಡಿಕೊಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ರಾಜ್ಯದ ಒಟ್ಟು 31 ಜಿಲ್ಲೆಗಳ ಸರ್ಕಾರಿ ಶಾಲೆಗಳಿಗೆ ಮಧ್ಯಾಹ್ನ ಉಪಹಾರ ಯೋಜನೆಯಡಿ ಸೂರ್ಯಕಾಂತಿ ಎಣ್ಣೆಯನ್ನು ಸರಬರಾಜು ಮಾಡುವ ಸಂಬಂಧ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮಕ್ಕೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ 2021ರ ಡಿಸೆಂಬರ್ 21ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
‘ಇ ಹರಾಜು ಪ್ರಕ್ರಿಯೆಯಲ್ಲಿ ಆಯ್ಕೆಯಾದ ಸರಬರಾಜುದಾರರ ಎಲ್ -1 ದರಗಳಿಗೆ ಅನುಮೋದನೆ ನೀಡುವಂತೆ ಸಲ್ಲಿಕೆಯಾಗಿರುವ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ. ಸೂರ್ಯಕಾಂತಿ ಎಣ್ಣೆಯ ಸರಬರಾಜಿಗೆ ಸಂಬಂಧಿಸಿದಂತೆ ಜಿಲ್ಲಾವಾರು ಎಲ್-1 ದರಗಳಿಗೆ ಅನುಮೋದನೆ ನೀಡಲಾಗಿದೆ. 2021-22ನೇ ಸಾಲಿನಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯಡಿ 2021ರ ಸೆಪ್ಟಂಬರ್, ಅಕ್ಟೋಬರ್, ಡಿಸೆಂಬರ್ ಮತ್ತು ಜನವರಿ 2022ರ ಮಾಹೆಗೆ 1ರಿಂದ 10ನೇ ತರಗತಿ ಮಕ್ಕಳಿಗೆ ಅವಶ್ಯವಿರುವ ಸೂರ್ಯಕಾಂತಿ ಎಣ್ಣೆಯನ್ನು ಸರಬರಾಜು ಮಾಡಲು ಅನುಮೋದನೆ ನೀಡಲಾಗಿದೆ,’ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಬಾಗಲಕೋಟೆ (ಪ್ರತಿ ಲೀಟರ್‌ಗೆ 145 ರು.) ಬಳ್ಳಾರಿ (145.30 ರು.), ಬೆಂಗಳೂರು ಉತ್ತರ (145.00 ರು), ಚಿಕ್ಕಮಗಳೂರು ( 144.90 ರು. ), ದಕ್ಷಿಣ ಕನ್ನಡ (144.70 ರು. ), ಗದಗ (145.30 ರು.), ಹಾಸನ ( 145.00 ರು.), ಕಲಬುರಗಿ ( 145.00 ರು.), ಕೊಪ್ಪಳ (145.00 ರು.), ಶಿವಮೊಗ್ಗ (144.90 ರು.), ಉಡುಪಿ (144.90), ಕಾರವಾರ (145.30 ರು.) ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಮಧ್ಯಾಹ್ನ ಉಪಹಾರ ಯೋಜನೆಯಡಿ ಸೂರ್ಯಕಾಂತಿ ಎಣ್ಣೆಯನ್ನು ಅದಾನಿ ವಿಲ್ಮಾರ್ ಕಂಪನಿಯು ಸರಬರಾಜು ಮಾಡಲಿದೆ.
ರಾಜ್ಯದಲ್ಲಿ ಹಲವು ವರ್ಷಗಳಿಂದಲೂ ಸೂರ್ಯಕಾಂತಿ ಎಣ್ಣೆಯನ್ನು ಉತ್ಪಾದಿಸುತ್ತಿರುವ ಸಹಕಾರಿ ವಲಯದ ಕರ್ನಾಟಕ ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರಿ ಸಂಘಗಳ ಒಕ್ಕೂಟವು ಇ-ಹರಾಜಿನಲ್ಲಿ ಪಾಲ್ಗೊಂಡಿತ್ತಾದರೂ ಕೇವಲ 2 ಜಿಲ್ಲೆಗಳಿಗೆ ಮಾತ್ರ ಅನುಮೋದನೆ ಪಡೆದುಕೊಂಡಿದೆ.
ಈ ಒಕ್ಕೂಟವು ತಯಾರಿಸುವ ಸೂರ್ಯಕಾಂತಿ ರಿಫೈನ್ಡ್ ಪ್ರತಿ ಲೀಟರ್‌ಗೆ ಸಗಟು ದರದಲ್ಲಿ 134 ರು. ಇದೆ. ರಾಯಚೂರು, ಹುಬ್ಬಳ್ಳಿ, ದಾವಣಗೆರೆಯಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿರುವ ಒಕ್ಕೂಟವು ತಿಂಗಳಿಗೆ ಕನಿಷ್ಠ 100ರಿಂದ ಗರಿಷ್ಠ 200 ಟನ್ ಸೂರ್ಯಕಾಂತಿ ಎಣ್ಣೆಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ‘ಖಾದ್ಯ ತೈಲ ಮಾರಾಟದಲ್ಲಿ ಉತ್ತಮ ಸಾಧನೆಗೈದಿರುವ ಸಹಕಾರಿ ವಲಯದ ಕರ್ನಾಟಕ ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಒಕ್ಕೂಟಕ್ಕೆ 4(ಜಿ) ವಿನಾಯಿತಿ ಪಡೆದು ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳ ಮಧ್ಯಾಹ್ನ ಉಪಹಾರ ಯೋಜನೆಯಡಿಯ ಸೂರ್ಯಕಾಂತಿ ಎಣ್ಣೆಯನ್ನು ಸರಬರಾಜು ಮಾಡಲು ಅವಕಾಶವಿತ್ತು. ಇದು ಸಾಧ್ಯವಾಗಿದ್ದರೆ ಸಹಕಾರಿ ವಲಯದ ಒಕ್ಕೂಟವನ್ನು ಆರ್ಥಿಕವಾಗಿ ಬಲಪಡಿಸಬಹುದಾಗಿತ್ತು,’ ಎನ್ನುತ್ತಾರೆ ಒಕ್ಕೂಟದ ಹಿರಿಯ ಅಧಿಕಾರಿಯೊಬ್ಬರು.
ಉಳಿದಂತೆ ಬೆಳಗಾವಿ ಜಿಲ್ಲೆಗೆ ರೀಜಿನಲ್ ಆಯಿಲ್ ಸೀಡ್ಸ್ ಗ್ರೋವರ್ಸ್ ಕೋ ಆಪ್ ಸೊಸೈಟಿ (144.30 ರು.), ಚಿಕ್ಕೋಡಿಗೆ ಚಳ್ಳಕೆರೆಯ ಮುರಾರಿ ಇಂಡಸ್ಟ್ರೀಸ್ (145.00), ಬೆಂಗಳೂರು ದಕ್ಷಿಣಕ್ಕೆ ಕರ್ನಾಟಕ ಕೋ ಅಪರೇಟೀವ್ ಆಯಿಲ್ಸ್ ಸೀಡ್ಸ್ ಗ್ರೋವರ್ಸ್ (144.60), ಬೀದರ್‌ಗೆ ಚಳ್ಳಕೆರೆಯ ಶಿವಸಾಯಿ ಇಂಡಸ್ಟ್ರೀಸ್ (145.10), ಚಾಮರಾಜನಗರಕ್ಕೆ ಸನ್‌ರಾಜ ಆಯಿಲ್ ಇಂಡಸ್ಟ್ರೀಸ್ ಪ್ರೈ ಲಿಮಿಟೆಡ್ (145.40), ಚಿಕ್ಕಬಳ್ಳಾಪುರದಲ್ಲಿ ಕರ್ನಾಟಕ ಕೋ ಆಪರೇಟೀವ್ ಆಯಿಲ್ ಸೀಡ್ಸ್ ಗ್ರೋವರ್ಸ್, (144.70), ಚಿತ್ರದುರ್ಗ (ರೀಜಿನಲ್ ಆಯಿಲ್‌ಸೀಡ್ಸ್ ಗ್ರೋವರ್ಸ್ (145.00), ಹಾವೇರಿಗೆ ಮಲ್ಲಿಕಾರ್ಜುನ ಆಯಿಲ್‌ಮಿಲ್ ಬೆಳಗಾವಿ (145.00), ಕೊಡಗು ವೀರನಾರಾಯಣ ಲಿಮಿಟೆಡ್ (145.00), ಕೋಲಾರ (ಕರ್ನಾಟಕ ಕೋ ಅಪರೇಟೀವ್ ಆಯಿಲ್ ಸೀಡ್ಸ್ (144.60), ಮಂಡ್ಯ ಮತ್ತು ಮೈಸೂರಿಗೆ ಸನ್‌ರಾಜ ಅಯಿಲ್ ಇಂಡಸ್ಟ್ರೀಸ್, (145.40), ರಾಯಚೂರು ಜಿಲ್ಲೆಗೆ ಬಸವೇಶ್ವರ ಇಂಡಸ್ಟ್ರೀಸ್( 145.00), ರಾಮನಗರಕ್ಕೆ ಕರ್ನಾಟಕ ಕೋ ಆಪರೇಟೀವ್ ಆಯಿಲ್ ಸೀಡ್ಸ್ (144.80), ತುಮಕೂರು ನಗರಕ್ಕೆ ಸನ್ ರಾಜ ಆಯಿಲ್ ಇಂಡಸ್ಟ್ರೀಸ್ (145.40), ತುಮಕೂರು ಮಧುಗಿರಿಗೆ ಶಿವಸಾಯಿ ಇಂಡಸ್ಟ್ರೀಸ್ (145.20), ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗೆ ಶಿವಸಾಯಿ ಇಂಡಸ್ಟ್ರೀಸ್ (143.50) ರು. ದರದಲ್ಲಿ ಸೂರ್ಯಕಾಂತಿ ಎಣ್ಣೆಯನ್ನು ಸರಬರಾಜು ಮಾಡಲು ಅನುಮೋದನೆ ದೊರೆತಿದೆ.
ಅದಾನಿ ವಿಲ್ಮಾರ್ ಲಿಮಿಟೆಡ್‌ನ 4,500 ಕೋಟಿ ಆರಂಭಿಕ ಷೇರು ಮಾರಾಟವನ್ನು ಸೆಬಿ ಸಂಸ್ಥೆಯು 2021ರ ಆಗಸ್ಟ್‌ನಲ್ಲಿ ತಡೆಹಿಡಿದಿದ್ದನ್ನು ಸ್ಮರಿಸಬಹುದು.