ಕ್ರಮಬದ್ಧವಾಗಿರದ ಲೆಕ್ಕ ಪರಿಶೋಧನೆ; ಬ್ಯಾಂಕ್‌, ಸಂಘಗಳಲ್ಲಿ 4,870.58 ಕೋಟಿ ದುರುಪಯೋಗ

ಬೆಂಗಳೂರು: ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‌, ಗುರು ಸಾರ್ವಭೌಮ ಕ್ರೆಡಿಟ್‌ ಸೌಹಾರ್ದ ಸೊಸೈಟಿ ಸೇರಿದಂತೆ ಸಹಕಾರ ಸಂಘಗಳು ಮತ್ತು ಸಹಕಾರ ಬ್ಯಾಂಕ್‌ಗಳ ಆಡಳಿತ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗುವ ಲೆಕ್ಕಪರಿಶೋಧನೆ ವರದಿಗಳನ್ನು ಕ್ರಮಬದ್ಧವಾಗಿ ಪರಿಶೀಲನೆ ನಡೆಸದ ಕಾರಣ 11 ಪ್ರಕರಣಗಳಲ್ಲಿ 4,870.58 ಕೋಟಿ ರು. ದುರುಪಯೋಗವಾಗಿದೆ ಎಂದು ಸಹಕಾರ ಇಲಾಖೆಯೇ ಒಪ್ಪಿಕೊಂಡಿದೆ.

ಸಹಕಾರ ಸಂಘಗಳ ಲೆಕ್ಕಪರಿಶೋಧನೆಗಾಗಿ ಸಂಘಗಳ ವ್ಯಾಪ್ತಿ ಮಿತಿಗೊಳಿಸುವ ಸಂಬಂಧ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ನಿರ್ದೇಶಕರು ನ. 6ರಂದು ಹೊರಡಿಸಿದ್ದ ಸುತ್ತೋಲೆಯನ್ನು ಸಮರ್ಥಿಸಿಕೊಂಡಿರುವ ಸಹಕಾರ ಇಲಾಖೆಯು ಸಿದ್ಧಪಡಿಸಿರುವ ಟಿಪ್ಪಣಿಯು ಲೆಕ್ಕಪರಿಶೋಧನೆ ವರದಿಗಳು ಕ್ರಮಬದ್ಧವಾಗಿ ಪರಿಶೀಲನೆ ನಡೆಯುತ್ತಿಲ್ಲ ಎಂಬುದನ್ನು ನಿರೂಪಿಸಿದೆ. ಟಿಪ್ಪಣಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ 1,800 ಕೋಟಿ, ಗುರು ಸಾರ್ವಭೌಮ ಕ್ರೆಡಿಟ್‌ ಸೌಹಾರ್ದ ಸೊಸೈಟಿಯಲ್ಲಿ 250 ಕೋಟಿ, ಐಎಂಎ ಕ್ರೆಡಿಟ್‌ ಕೋ ಆಪರೇಟೀವ್‌ ಸೊಸೈಟಿಯಲ್ಲಿ 1,200 ಕೋಟಿ, ವಸಿಷ್ಠ ಸೌಹಾರ್ದ ಸಹಕಾರಿ ಸೊಸೈಟಿಯಲ್ಲಿ 800 ಕೋಟಿ, ಅಳಗವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 4 ಕೋಟ1, ಕಣ್ವ ಪತ್ತಿನ ಸೌಹಾರ್ದ ಸೊಸೈಟಿಯಲ್ಲಿ 800 ಕೋಟಿ, ಚಿತ್ರದುರ್ಗದ ಬಸವೇಶ್ವರ ಪತ್ತಿನ ಸಹಕಾರ ಸಂಘದಲ್ಲಿ 4.59 ಕೋಟಿ, ಯಾದಗಿರಿಯ ಸಗರನಾಡು ಕೋ ಆಪರೇಟೀವ್‌ ಕ್ರೆಡಿಟ್‌ ಸೊಸೈಟಿಯಲ್ಲಿ 2.48 ಕೋಟಿ, ಧಾರವಾಡದ ನವಲಗುಂದ ತಾಲೂಕಿನ ಮಾದನಬಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 1.36 ಕೋಟಿ, ಬದಾಮಿಯ ಕನಕದಾಸ ಪತ್ತಿನ ಸಹಕಾರ ಸಂಘದಲ್ಲಿ 5.65 ಕೋಟಿ, ಬೆಳಗಾವಿಯ ಮೋಳೆಯಲ್ಲಿರುವ ಶಿವಾನಂದ ಕೋ ಆಪರೇಟೀವ್‌ ಕ್ರೆಡಿಟ್‌ ಸೊಸೈಟಿಯಲ್ಲಿ 2.50 ಕೋಟಿ ರು. ದುರುಪಯೋಗವಾಗಿದೆ. ಲೆಕ್ಕ ಪರಿಶೋಧನೆ ವರದಿಗಳನ್ನು ಕ್ರಮ ಬದ್ಧವಾಗಿ ಪರಿಶೀಲನೆ ನಡೆಸದೇ ಇರುವುದೇ ಹಣ ದುರುಪಯೋಗಕ್ಕೆ ಕಾರಣ ಎಂದು ಟಿಪ್ಪಣಿಯಲ್ಲಿ ವಿವರಿಸಲಾಗಿದೆ.

ಬೆಂಗಳೂರಿನ ವಸಿಷ್ಠ ಸೌಹಾರ್ದ ಸಹಕಾರಿ, ಮೈಕೋ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ, ಜಮಖಂಡಿಯ ಬನಶಂಕರಿ ಪತ್ತಿನ ಸಹಕಾರಿ ಸಂಘ, ಉತ್ತರ ಕನ್ನಡದ ಬಾಡಾ ಹಾಲು ಉತ್ಪಾದಕರ ಸಹಕಾರ ಸಂಘ, ದಕ್ಷಿಣ ಕನ್ನಡದ ಆಕಾಶವಾಣಿ ನೌಕರರ ಪತ್ತಿನ ಸಹಕಾರ ಸಂಘ, ಮೈಸೂರಿನ ಮೈಸೂರು ಜಿಲ್ಲಾ ತೆರೆಸಾ ವಿವಿದೊದ್ದೇಶ ಸೌಹಾರ್ದ ಸಹಕಾರಿ ಸಂಘದಲ್ಲಿ ಕೆಲವು ಸನ್ನದು ಲೆಕ್ಕ ಪರಿಶೋಧಕರು ಸತತವಾಗಿ ಒಂದೇ ಸಂಘ/ಸಹಕಾರಿಯ ಲೆಕ್ಕಪರಿಶೋಧನೆ ನಿರ್ವಹಿಸಿದ್ದಾರೆ ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

ರಾಜ್ಯದಲ್ಲಿ 38,579 ಕಾರ್ಯನಿರತ ಸಹಕಾರ ಸಂಘಗಳಿದ್ದು 2021ರ ನವೆಂಬರ್‌ 20ರ ಅಂತ್ಯಕ್ಕೆ ಜಿಲ್ಲಾ ಮಟ್ಟದ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಕಚೇರಿಗಳಲ್ಲಿ ಒಟ್ಟಾರೆ 1,625 ಸಹಕಾರ ಸಂಘಗಳಿಂದ ಲೆಕ್ಕ ಪರಿಶೋಧನೆಗೆ ಆಯ್ಕೆ ಮಾಡಿಕೊಂಡಿವೆ. ಅಂದರೆ ಶೇ.4.21ರಷ್ಟು ಸಹಕಾರ ಸಂಘಗಳು ಮಾತ್ರ ಲೆಕ್ಕ ಪರಿಶೋಧಕರನ್ನು ಆಯ್ಕೆ ಮಾಡಿಕೊಂಡಿವೆ. ಇದರಲ್ಲಿ 1,222 ಸಹಕಾರ ಸಂಘಗಳು ಸನ್ನದು ಲೆಕ್ಕ ಪರಿಶೋಧಕರನ್ನು ಹಾಗೂ 403 ಸಹಕಾರ ಸಂಘಗಳು ಇಲಾಖೆ ಲೆಕ್ಕ ಪರಿಶೋಧಕರನ್ನು ಆಯ್ಕೆ ಮಾಡಿಕೊಂಡಿವೆ.

‘38,579 ಸಹಕಾರ ಸಂಘಗಳ ಪೈಕಿ ವಾರ್ಷಿಕ ಮಹಾಸಭೆ ನಡೆದು ಸನ್ನದು ಲೆಕ್ಕ ಪರಿಶೋಧಕರನ್ನು ಆಯ್ಕೆ ಮಾಡಿಕೊಂಡಿರುವ ಪ್ರಮಾಣ ಕೇವಲ ಶೇ.3.16ರಷ್ಟಿದೆ. ಹೀಗಾಗಿ ಸನ್ನದು ಲೆಕ್ಕ ಪರಿಶೋಧಕರಿಗೆ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆಗೆ ಮಿತಿ ನಿಗದಿಪಡಿಸುವ ಸುತ್ತೋಲೆಯನ್ನು ಈ ವರ್ಷದಿಂದಲೇ ಜಾರಿಗೊಳಿಸಲು ಯಾವುದೇ ತೊಂದರೆ ಇಲ್ಲ,’ ಎಂದು ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ವಿಭಾಗವು ಟಿಪ್ಪಣಿಯಲ್ಲಿ ಸಮರ್ಥಿಸಿಕೊಂಡಿದೆ.

ಎ, ಬಿ ಮತ್ತು ಸಿ ಪ್ರವರ್ಗದ ಯಾವುದೇ ಸನ್ನದು ಲೆಕ್ಕ ಪರಿಶೋಧಕರು ಗರಿಷ್ಠ 43 ಸಹಕಾರ ಸಂಘಗಳ ಲೆಕ್ ಪರಿಶೋಧನೆ ನಿರ್ವಹಿಸಬಹುದು ಎಂದು ವಿಧಿಸಿರುವ ಗರಿಷ್ಠ ಮಿತಿಯು ಸಮಂಜಸವಾಗಿದೆ ಎಂದು ಸಮರ್ಥಿಸಿಕೊಂಡಿರುವ ಇಲಾಖೆಯು ಎಲ್ಲಾ ಕಾರ್ಯನಿರತ ಸಹಕಾರ ಸಂಘಗಳು ನಿರ್ದೇಶಕರಿಂದ ನಿರ್ವಹಿಸುವ ಪ್ಯಾನಲ್‌ನಲ್ಲಿ ಲಭ್ಯವಿರುವ ಸನ್ನದು ಲೆಕ್ಕ ಪರಿಶೋಧಕರನ್ನು ಆಯ್ಕೆ ಮಾಡಿಕೊಂಡಲ್ಲಿ ಮತ್ತು ನಿಯಮಾನುಸಾರ ಸನ್ನದು ಲೆಕ್ಕ ಪರಿಶೋಧಕರಿಗೆ ಸಹಕಾರ ಸಂಘಗಳು ಹಂಚಿಕೆಯಾದಲ್ಲಿ ಆಗಸ್ಟ್‌ ತಿಂಗಳ ಅಂತ್ಯದೊಳದಗೆ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ಪೂರ್ಣಗೊಳ್ಳುತ್ತದೆ. ಈ ಉದ್ದೇಶದಿಂದಲೇ ಸುತ್ತೋಲೆ ಹೊರಡಿಸಲಾಗಿದೆ ಎಂದು ಸಮರ್ಥಿಸಿಕೊಂಡಿದೆ.

ಲೆಕ್ಕಪರಿಶೋಧನೆಗಾಗಿ ಸನ್ನದು ಲೆಕ್ಕಪರಿಶೋಧಕ/ ಸಿಎ/ ಸಿಎ ಸಂಸ್ಥೆಗಳ ಸಂಖ್ಯಾ ಮಿತಿಗೊಳಿಸುವುದು, ಶ್ರೇಣಿಗಳಾಗಿ ವಿಂಗಡಣೆ, ನಿರ್ದಿಷ್ಟ ದಿನಗಳ ಮಿತಿ ನಿಗದಿಪಡಿಸಿ ಲೆಕ್ಕಪರಿಶೋಧನಾ ನಿರ್ದೇಶಕರು ಸುತ್ತೋಲೆ ಹೊರಡಿಸಿರುವುದು ಹಲವರ ವಿರೋಧಕ್ಕೆ ಕಾರಣವಾಗಿದೆ. ಈ ಸುತ್ತೋಲೆಯು ಸಹಕಾರ ಸಂಘದ ಮೂಲಭೂತ ಹಕ್ಕಿಗೆ ಮಿತಿ ಹೇರಿದಂತಿದೆ ಎಂದು ಸಹಕಾರ ಸಂಘಗಳು ಆರೋಪಿಸಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts