ಮತಾಂತರ ನಿಷೇಧ ಕಾನೂನು ಜಾರಿಗೊಳಿಸುವ ಪ್ರಸ್ತಾಪವೇ ಇಲ್ಲವೆಂದು ನಿಲುವು ಬದಲಿಸಿದ್ದೇಕೆ?

ಬೆಂಗಳೂರು; ರಾಜ್ಯದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಗೆ ತರುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಅಧಿವೇಶನದಲ್ಲಿ ಹೇಳಿಕೆ ನೀಡಿದ ಒಂದು ವರ್ಷದ ಅಂತರದಲ್ಲೇ ಮತಾಂತರ ನಿಷೇಧ ಮಸೂದೆ ಮಂಡನೆಯಾಗಿದೆ. ಮತಾಂತರ ನಿಷೇಧ ಕಾನೂನು ಜಾರಿಗೊಳಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಅಧಿವೇಶನದಲ್ಲೇ ಹೇಳಿಕೆ ನೀಡಿ ಇದೀಗ ತನ್ನ ನಿಲುವುನ್ನು ಬದಲಿಸಿರುವುದು ವಿವಾದಕ್ಕೆ ದಾರಿಮಾಡಿಕೊಟ್ಟಿದೆ.

ಮತಾಂತರ ನಿಷೇಧಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್‌ನ ಸದಸ್ಯ ಬಿಜೆಪಿಯ ಎನ್‌ ರವಿಕುಮಾರ್‌ ಅವರು 2020ರ ಸೆ. 23ರಂದು ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ್ದ ಸಮಾಜ ಕಲ್ಯಾಣ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರು ರಾಜ್ಯದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಗೆ ತರುವ ಪ್ರಸ್ತಾವನೆಯೇ ಇಲ್ಲ ಎಂದಿದ್ದರು.

‘ಮತಾಂತರ ನಿಷೇಧ ಕಾನೂನು ಜಾರಿಗೆ ತರುವ ಪ್ರಸ್ತಾವ ಸರ್ಕಾರದ ಮುಂದೆ ಯಾವುದೇ ಪ್ರಸ್ತಾಪವಿರುವುದಿಲ್ಲ. ಕಳೆದ 2 ವರ್ಷಗಳಲ್ಲಿ ಮತಾಂತರಗೊಂಡವರ ಸಂಖ್ಯೆ ಮತ್ತು ಮತಾಂತರಗೊಂಡವರು ಯಾವ ಧರ್ಮದಿಂದ ಯಾವ ಧರ್ಮಕ್ಕೆ ಮತಾಂತರಗೊಂಡಿರುತ್ತಾರೆ ಎಂಬುದಕ್ಕೆ ಯಾವುದೇ ಕಾನೂನು ಇಲ್ಲದೇ ಇರುವದರಿಂದ ಯಾವುದೇ ಅಂಕಿ ಅಂಶಗಳು ಲಭ್ಯವಿರುವುದಿಲ್ಲ,’ ಎಂದು ಸಮಾಜ ಕಲ್ಯಾಣ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರು ಉತ್ತರಿಸಿದ್ದರು.

ಅಲ್ಲದೆ ಪರಿಶಿಷ್ಟ ಜಾತಿ ಜನರು ಹಿಂದೂ, ಸಿಖ್‌ ಮತ್ತು ಬೌದ್ಧ ಧರ್ಮವನ್ನು ಮಾತ್ರ ಆಚರಿಸುತ್ತಿರುವವರು ಪರಿಶಿಷ್ಟ ಜಾತಿ ಮೀಸಲಾತಿ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ. ಆದರೆ ಪರಿಶಿಷ್ಟ ಜಾತಿ ಜನರು ಇತರ ಯಾವುದೇ ಧರ್ಮಕ್ಕೆ ಸೇರಿದಲ್ಲಿ ಮೀಸಲಾತಿ ಸವಲಭ್ಯ ಪಡೆಯಲು ಅರ್ಹರಿರುವುದಿಲ್ಲ. ಪರಿಶಿಷ್ಟ ಪಂಗಡದವರು ಯಾವುದೇ ಧರ್ಮಕ್ಕೆ ಸೇರಿದರೂ ಮೀಸಲಾತಿ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ,’ ಎಂದೂ ಉತ್ತರಿಸಿದ್ದರು.

ಮತಾಂತರ ನಿಷೇಧ ಕಾನೂನು ತರುವ ಕುರಿತು ಗೋವಿಂದ ಕಾರಜೋಳ ಅವರು ಸ್ಪಷ್ಟಪಡಿಸಿದ ಒಂದು ತಿಂಗಳಲ್ಲೇ ಪ್ರತಿಕ್ರಿಯಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಸಿ ಟಿ ರವಿ ಶೀಘ್ರವೇ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗುತ್ತದೆ ಎಂದು ಹೇಳಿಕೆ ನೀಡಿದ್ದರು.

ವಿವಾಹದ ಉದ್ದೇಶಕ್ಕಾಗಿ ಮತಾಂತರವನ್ನು ನಿಷೇಧಿಸುವ ಕಾನೂನು ತರಲಾಗುವುದು ಎಂದು ಸಿ ಟಿ ರವಿ ಅವರು ಸಮರ್ಥಿಸಿಕೊಂಡಿದ್ದರಾದರೂ, ಮತಾಂತರದ ಕುರಿತು ಸರ್ಕಾರದ ಮುಂದೆ ಯಾವ ಪ್ರಸ್ತಾವನೆಯೇ ಇಲ್ಲ ಎಂದು ಸರ್ಕಾರ ಉತ್ತರಿಸಿದ ನಂತರವೂ ಟ್ವೀಟ್‌ ಮಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು.

ಸಿ ಟಿ ರವಿ ಹೇಳಿದ್ದೇನು?

ಅಲಹಾಬಾದ್ ಹೈಕೋರ್ಟ್ ಆದೇಶದಂತೆ, ಕರ್ನಾಟಕ ಸರ್ಕಾರ ಕೂಡ ವಿವಾಹದ ಉದ್ದೇಶಕ್ಕಾಗಿ ಮತಾಂತರವನ್ನು ನಿಷೇಧಿಸುವ ಕಾನೂನನ್ನು ಜಾರಿಗೆ ತರಲಿದೆ. ಜಿಹಾದಿಗಳು ನಮ್ಮ ಸಹೋದರಿಯರ ಘನತೆಯನ್ನು ಹಾಳು ಮಾಡುವಾಗ ನಾವು ಮೌನವಾಗಿರುವುದಿಲ್ಲ. ಮತಾಂತರದ ಕೃತ್ಯದಲ್ಲಿ ಭಾಗಿಯಾಗಿರುವವರಿಗೆ ಕಠಿಣ ಮತ್ತು ತ್ವರಿತ ಶಿಕ್ಷೆ ವಿಧಿಸಬೇಕಾಗಿದೆ,’ ಎಂದು ಹೇಳಿದ್ದರು.

ಕೇಂದ್ರ ಸರ್ಕಾರ ‘ಮತಾಂತರ ನಿಷೇಧ ಕಾಯ್ದೆ’ಯನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಕಾನೂನು ಸಚಿವಾಲಯ 2015ರಲ್ಲೇ ಹೇಳಿತ್ತು. ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ವಿಷಯ ಸಂಪೂರ್ಣವಾಗಿ ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಕಾಯ್ದೆ ಜಾರಿಗೊಳಿಸಲು ಸಾದ್ಯವಿಲ್ಲ ಎಂದು ಕಾನೂನು ಸಚಿವಾಲಯ ಹೇಳಿದ್ದನ್ನು ಸ್ಮರಿಸಬಹುದು.

ಮತಾಂತರದ ವಿಷಯದ ಬಗ್ಗೆ ಸಂಸತ್‌ನಲ್ಲಿ ತೀವ್ರ ಚರ್ಚೆ ನಡೆದಾಗ, ಮತಾಂತರ ನಿಷೆಧ ಕಾಯ್ದೆ ಜಾರಿಗೊಳಿಸುವ ಸಂಬಂಧ ಗೃಹ ಇಲಾಖೆ, ಕಾನೂನು ಸಚಿವಾಲಯದ ಸಲಹೆ ಕೇಳಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದ ಸಚಿವಾಲಯ, ಮತಾಂತರದ ವಿಷಯ ಸಂಪೂರ್ಣವಾಗಿ ರಾಜ್ಯಗಳಿಗೆ ಸಂಬಂಧಿಸಿರುವ ವಿಷಯವಾಗಿರುವುದರಿಂದ ಕೇಂದ್ರ ಸರ್ಕಾರ ಕಾನೂನು ತರಲು ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿತ್ತು.

ಒಡಿಶಾ ಹಾಗೂ ಮಧ್ಯಪ್ರದೇಶದಲ್ಲಿ ಜಾರಿಗೆ ತರಲಾಗಿದ್ದ ಮತಾಂತರ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ 1977ರಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಉಲ್ಲೇಖಿಸಿರುವ ಕಾನೂನು ಸಚಿವಾಲಯ, ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವುದರ ಸಂಬಂಧ ರಾಜ್ಯಸರ್ಕಾರದ ಪರಮಾಧಿಕಾರವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು ಎಂದು ಹೇಳಿದೆ.

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್‌ ಮತಾಂತರ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ಚರ್ಚೆ ನಡೆಯಲಿ ಎಂದು ಇತ್ತೀಚೆಗಷ್ಟೇ ಹೇಳಿದ್ದರು. ವಿ.ಹೆಚ್.ಪಿ ನಡೆಸಿದ್ದ ಘರ್ ವಾಪಸಿ ಕಾರ್ಯಕ್ರಮದಿಂದಾಗಿ ಮತಾಂತರ ನಿಷೇಧ ಕಾಯ್ದೆ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ.

the fil favicon

SUPPORT THE FILE

Latest News

Related Posts