ಪೌರಕಾರ್ಮಿಕರಿಗೆ ಬಿಸಿಯೂಟ; ಇಂದಿರಾ ಕ್ಯಾಂಟೀನ್‌ ಬದಲಿಸಿ ಇಸ್ಕಾನ್‌ಗೆ ಹಿಂಬಾಗಿಲಲ್ಲಿ ರತ್ನಗಂಬಳಿ

ಬೆಂಗಳೂರು: ಟೆಂಡರ್‌ ಇಲ್ಲದೆಯೇ ಪೌರ ಕಾರ್ಮಿಕರಿಗೆ ಬಿಸಿಯೂಟ ಯೋಜನೆಯನ್ನು ಇಸ್ಕಾನ್‌ನ ಟಚ್‌ ಸ್ಟೋನ್‌ ಫೌಂಡೇ‍ಷನ್‌ಗೆ ವಹಿಸಲು ಮುಂದಾಗಿದ್ದ ಬಿಬಿಎಂಪಿ ನಡೆಗೆ ಆರ್ಥಿಕ ಇಲಾಖೆಯು ಆಕ್ಷೇಪಿಸಿದ್ದರೂ ನಗರಾಭಿವೃದ್ದಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ಸಿಂಗ್‌ ಅವರು ಇಸ್ಕಾನ್‌ ಪರ ಅಖಾಡಕ್ಕಿಳಿದಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಅಕ್ಷಯಪಾತ್ರ ಫೌಂಡೇಷನ್‌ ಸುಪರ್ದಿಗೆ ವಹಿಸಿ ಸರ್ಕಾರ ಆದೇಶಿಸಿರುವ ಬೆನ್ನಲ್ಲೇ ಬಿಬಿಎಂಪಿ ಪೌರ ಕಾರ್ಮಿಕರಿಗೆ ಬಿಸಿಯೂಟ ಒದಗಿಸುವ ಯೋಜನೆಯನ್ನು ಅಕ್ಷಯಪಾತ್ರೆ ಫೌಂಡೇಷನ್‌ನ ಮತ್ತೊಂದು ಅಂಗ ಸಂಸ್ಥೆ ಟಚ್‌ ಸ್ಟೋನ್‌ ಫೌಂಡೇಷನ್‌ಗೆ ನೀಡಲು ಮುಂದಾಗಿದೆ. ಈ ಫೌಂಡೇಷನ್‌ಗೆ ಗುತ್ತಿಗೆ ನೀಡಲು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅವರು ಅತ್ಯಾಸಕ್ತಿ ವಹಿಸಿ ಸರ್ಕಾರದ ಮಟ್ಟದಲ್ಲಿ ಲಾಬಿ ನಡೆಸಿದ್ದಾರೆ ಎಂದು ಬಿಬಿಎಂಪಿಯ ಉನ್ನತ ಮೂಲಗಳು ತಿಳಿಸಿವೆ.

ಬಿಸಿಯೂಟ ಸರಬರಾಜು ಮಾಡುವ ಸಂಬಂಧ ಟೆಂಡರ್‌ ಕರೆದಲ್ಲಿ ಹೆಚ್ಚಿನ ಸಂಸ್ಥೆಗಳು ಭಾಗವಹಿಸಲು ಅವಕಾಶಗಳಿರುವ ಕಾರಣ 4(ಜಿ) ವಿನಾಯಿತಿ ಪ್ರಸ್ತಾವನೆ ಕೈಬಿಟ್ಟು ಟೆಂಡರ್‌ ಕರೆಯಬೇಕು ಎಂದು ಆರ್ಥಿಕ ಇಲಾಖೆಯು ಸೂಚಿಸಿತ್ತು. ಆದರೆ ಇದೀಗ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೇ ನೇರವಾಗಿ ಇಸ್ಕಾನ್‌ ಪರ ಅಖಾಡಕಿಳಿದಿರುವುದಲ್ಲದೆ 4(ಜಿ) ವಿನಾಯಿತಿ ಅಡಿಯಲ್ಲಿ ನೇರವಾಗಿ ಟಚ್‌ ಸ್ಟೋನ್‌ ಫೌಂಡೇಷನ್‌ಗೆ ಯೋಜನೆ ವಹಿಸುವ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಹಿಂಬಾಗಿಲ ಮೂಲಕ ಬಿಸಿಯೂಟ ಯೋಜನೆ ಗುತ್ತಿಗೆಯನ್ನು ತನ್ನದಾಗಿಸಿಕೊಳ್ಳಲು ಮುಂದಾಗಿದ್ದ ಇಸ್ಕಾನ್‌ ಸಂಸ್ಥೆ ನಡೆಸಿದ್ದ ಯತ್ನದ ಕುರಿತು ‘ದಿ ಫೈಲ್‌’ ವರದಿ ಪ್ರಕಟಿಸಿತ್ತು. ಆ ನಂತರ ಆರ್ಥಿಕ ಇಲಾಖೆಯು ನೇರವಾಗಿ ಯೋಜನೆ ವಹಿಸಲು ತಕರಾರು ಎತ್ತಿತ್ತಲ್ಲದೆ ಟೆಂಡರ್‌ ಕರೆಯುವ ಮೂಲಕ ಯೋಜನೆ ಗುತ್ತಿಗೆ ನೀಡಲು ಸೂಚಿಸಿತ್ತು.

ಬಿಬಿಎಂಪಿ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಸದರಿ ಪ್ರಸ್ತಾವನೆಯಲ್ಲಿ ಟಚ್‌ ಸ್ಟೋನ್‌ ಫೌಂಡೇಷನ್‌ ರವರಿಂದಲೇ ಪ್ರಸ್ತಾಪಿತ ಬಿಸಿಯೂಟವನ್ನು ಪಡೆಯಲು ಏಕೆ ಉದ್ದೇಶಿಸಲಾಗಿದೆ, ಇದರ ಗುಣಮಟ್ಟವನ್ನು ಹೇಗೆ ಪರಿಶೀಲಿಸಲಾಗಿದೆ, ಟೆಂಡರ್‌ ಪ್ರಕ್ರಿಯೆ ಮೂಲಕ ಏಕೆ ಬಿಸಿಯೂಟ ಒದಗಿಸುವ ಸೇವೆಯನ್ನು ಪಡೆಯಲು ಸಾಧ್ಯವಿಲ್ಲ ಎಂಬುದರ ಕುರಿತು ಯಾವುದೇ ಮಾಹಿತಿ ಒದಗಿಸಿರುವುದಿಲ್ಲ,’ ಎಂದು ಆರ್ಥಿಕ ಇಲಾಖೆಯು ನಗರಾಭಿವೃದ್ಧಿ ಇಲಾಖೆಗೆ ಪತ್ರವನ್ನು ಬರೆದಿತ್ತು.

ಇಸ್ಕಾನ್‌ ಅಕ್ಷಯ ನಿಧಿ ಪ್ರತಿಷ್ಠಾನ, ಟಚ್‌ ಸ್ಟೋನ್‌ ಫೌಂಡೇಷನ್‌ ಪ್ರತಿಷ್ಠಾನದಂತಹ ಸಂಸ್ಥೆಗಳು ಬಿಸಿಯೂಟವನ್ನು ಒದಗಿಸಲು ಮುಂದೆ ಬರಲಿವೆ. ಆಡಳಿತ ಇಲಾಖೆಯು ಟೆಂಡರ್‌ ಕರೆದಲ್ಲಿ ಇನ್ನೂ ಹೆಚ್ಚಿನ ಸಂಸ್ಥೆಗಳು ಟೆಂಡರ್‌ನಲ್ಲಿ ಭಾಗವಹಿಸುವ ಅವಕಾಶ/ಸಾಧ್ಯತೆಗಳು ಇರುತ್ತವೆ ಎಂದು ಆರ್ಥಿಕ ಇಲಾಖೆಯು ಅಭಿಪ್ರಾಯ ನೀಡಿದೆ ಎಂದು ಗೊತ್ತಾಗಿದೆ.ಈ ಕುರಿತು ‘ದಿ ಫೈಲ್‌’ 2021ರ ಜುಲೈ 31ರಂದು ವರದಿ ಪ್ರಕಟಿಸಿತ್ತು.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಬಿಸಿಯೂಟವನ್ನು ಒದಗಿಸುವ ಸೇವೆಯನ್ನು ಟೆಂಡರ್‌ ಪ್ರಕ್ರಿಯೆ ಮೂಲಕ ಕೈಗೊಳ್ಳಬೇಕು,’ ಎಂದು ಆಡಳಿತ ಇಲಾಖೆಗೆ ಸೂಚಿಸಿತ್ತು.

ಟಚ್‌ ಸ್ಟೋನ್‌ ಫೌಂಡೇಷನ್‌ಗೆ ಬಿಸಿಯೂಟ ಯೋಜನೆ ಗುತ್ತಿಗೆ ನೀಡುವ ಸಲುವಾಗಿ 4 ಜಿ ವಿನಾಯಿತಿ ಕೋರಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ 2021ರ ಮೇ 26ರಂದು ಬಿಬಿಎಂಪಿ ಬರೆದಿದ್ದ ಪತ್ರವನ್ನಾಧರಿಸಿ ‘ದಿ ಫೈಲ್‌’ ಈ ವರದಿಯನ್ನು ಪ್ರಕಟಿಸಿದ್ದನ್ನು ಸ್ಮರಿಸಬಹುದು.

ಪ್ರಕರಣದ ವಿವರ

ಬಿಸಿಯೂಟ ಸರಬರಾಜಿನ ಗುತ್ತಿಗೆಯನ್ನು ಇಂದಿರಾ ಕ್ಯಾಂಟೀನ್‌ ಬದಲಿಗೆ ಅಕ್ಷಯ ನಿಧಿ ಫೌಂಡೇಷನ್‌ಗೆ ನೀಡಲು ಬಿಬಿಎಂಪಿಯು ಆರ್ಥಿಕ ಇಲಾಖೆಯ ಸಹಮತಿ ಕೋರಿತ್ತು. ಇದಕ್ಕೆ ಆರ್ಥಿಕ ಇಲಾಖೆ ಸಹಮತಿ ವ್ಯಕ್ತಪಡಿಸುವ ಮುನ್ನವೇ ಅಕ್ಷಯ ನಿಧಿ ಫೌಂಡೇಷನ್‌ನ ಮತ್ತೊಂದು ಅಂಗ ಸಂಸ್ಥೆ ಟಚ್‌ ಸ್ಟೋನ್‌ ಫೌಂಡೇಷನ್‌ಗೆ ಕಾರ್ಯಾದೇಶ ನೀಡಲು ಪರಿಷ್ಕೃತ ಪ್ರಸ್ತಾವನೆಯನ್ನು ಸಲ್ಲಿಸಿತ್ತು.

ಇದೇ ಪ್ರಸ್ತಾವನೆಯನ್ನು ಒಪ್ಪಿರುವ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯು ಮುಖ್ಯ ಆಯುಕ್ತರು ಟಚ್‌ ಸ್ಟೋನ್‌ ಫೌಂಡೇಷನ್‌ ಪ್ರತಿಷ್ಠಾನದಿಂದ ಬಿಸಿಯೂಟ ಪಡೆದುಕೊಳ್ಳಲು ಮತ್ತು ಕೆಟಿಪಿಪಿ ಕಾಯ್ದೆಯ 4(ಜಿ) ಅಡಿ ವಿನಾಯಿತಿ ಕೋರಿ ಸರ್ಕಾರಕ್ಕೆ ಮರು ಪ್ರಸ್ತಾವನೆ ಸಲ್ಲಿಸಿದ್ದರು.

ಇಂದಿರಾ ಕ್ಯಾಂಟೀನ್‌ ಮೂಲಕ ನೀಡುತ್ತಿದ್ದ ರೈಸ್‌ಬಾತ್‌, ಪಲಾವ್‌ ಇತ್ಯಾದಿಗಳ ಬದಲಿಗೆ ಪ್ರತಿ ದಿನ ಅನ್ನ ಸಾಂಬರ್,‌ ಕರಿ, ಉಪ್ಪಿನಕಾಯಿಯನ್ನು 20 ರು. ದರದಲ್ಲಿಯೇ ವಿತರಿಸಲು ಅಕ್ಷಯ ನಿಧಿ ಫೌಂಡೇಷನ್‌ಗೆ ಬಿಬಿಎಂಪಿ ಷರತ್ತು ವಿಧಿಸಿತ್ತು. ಆದರೀಗ ದರದಲ್ಲಿ 3 ರು. ಹೆಚ್ಚಳ ಮಾಡಿ ಟಚ್‌ ಸ್ಟೋನ್‌ ಫೌಂಡೇಷನ್‌ಗೆ ಗುತ್ತಿಗೆ ನೀಡಲು ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಿರುವುದನ್ನು ಸ್ಮರಿಸಬಹುದು. ಈ ಕುರಿತು 2021ರ ಜುಲೈ 6ರಂದೇ ‘ದಿ ಫೈಲ್‌’ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.

‘ಅಕ್ಷಯ ನಿಧಿ ಫೌಂಡೇಷನ್‌ನ ಬದಲಾಗಿ ಟಚ್‌ ಸ್ಟೋನ್‌ ಫೌಂಡೇಷನ್‌ ಸಂಸ್ಥೆಯ ಹೆಸರಿನಲ್ಲಿ ಒಡಂಬಡಿಕೆ ಮಾಡಿಕೊಂಡು ಕಾರ್ಯಾದೇಶವನ್ನು ನೀಡಲು ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ. ಕಚ್ಛಾ ವಸ್ತುಗಳು, ಅಡುಗೆ ಅನಿಲ ಹಾಗೂ ಇಂಧನ ವೆಚ್ಚವು ಅಧಿಕವಾಗಿರುವ ಕಾರಣ ಸಾರಿಗೆ ವೆಚ್ಚವೂ ಹೆಚ್ಚಾಗಿರುತ್ತದೆ. ಆದ್ದರಿಂದ ಪ್ರತಿ ಊಟಕ್ಕೆ 20 ರು.ಗಳಿಂದ 22 ರು.ಗಳಿಗೆ ಹೆಚ್ಚಿಸಲು ಕೋರಿರುತ್ತಾರೆ’ ಎಂದು ಬಿಬಿಎಂಪಿಯು ಸರ್ಕಾರಕ್ಕೆ ಪರಿಷ್ಕೃತ ಪ್ರಸ್ತಾವನೆಯನ್ನು ಸಲ್ಲಿಸಿರುವುದು ದಾಖಲೆಯಿಂದ ಗೊತ್ತಾಗಿತ್ತು.

ಪ್ರತಿ ಊಟಕ್ಕೆ 22 ರು.ಗಳಿಗೆ ಹೆಚ್ಚಿಸಲು ಪ್ರಸ್ತಾವನೆ ಕೋರಿದ್ದ ಬಿಬಿಎಂಪಿಯು ‘ಟಚ್‌ ಸ್ಟೋನ್‌ ಫೌಂಡೇಷನ್‌ ಸಂಸ್ಥೆಯವರು ವಾರದ ಎಲ್ಲಾ 7 ದಿನಗಳಲ್ಲಿಯೂ ವೈವಿಧ್ಯಮಯವಾದ ಊಟ ನೀಡಲು ಸಿದ್ಧರಾಗಿರುವುದರಿಂದ ಪ್ರತಿ ಊಟಕ್ಕೆ ರು.22ಕ್ಕಿಂತ ಹೆಚ್ಚಿನ 1 ರು. ಗಳನ್ನು ಅಂದರೆ 23 ರು.ಗಳನ್ನು ಪಾವತಿಸಲು ಕೋರಿರುವುದು,’ ಪ್ರಸ್ತಾವನೆ ಸಲ್ಲಿಸಿತ್ತು.

ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯ ಸರ್ಕಾರಗಳು ಅನುಷ್ಠಾನಗೊಳಿಸಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಜಾರಿ ಏಜೆನ್ಸಿಯಾಗಿ ಅವಕಾಶ ಗಿಟ್ಟಿಸಿಕೊಂಡಿರುವ ಅಕ್ಷಯ ಪಾತ್ರಾ ಫೌಂಡೇ‍ಷನ್‌ನ ಆಡಳಿತಾತ್ಮಕ ಲೋಪ, ಲೆಕ್ಕಪತ್ರಗಳಲ್ಲಿನ ವ್ಯತ್ಯಾಸ, ನಿಯಮಬಾಹಿರ ಚಟುವಟಿಕೆಗಳೂ ಸೇರಿದಂತೆ ಕಂಡು ಬಂದಿರುವ ಇನ್ನಿತರೆ ಗಂಭೀರ ಲೋಪಗಳ ಕುರಿತು ವಿಧಾನಪರಿಷತ್‌ನ ಬಿಜೆಪಿ ಸದಸ್ಯ ಲೆಹರ್‌ ಸಿಂಗ್‌ ಸಿರೋಯಾ ಅವರು ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರ ಪತ್ರ ಬರೆದಿದ್ದರು.

ಅಕ್ಷಯ ಪಾತ್ರಾ ಫೌಂಡೇಷನ್‌ನ ಸ್ವತಂತ್ರ ಟ್ರಸ್ಟಿಗಳಾದ ಟಿ ವಿ ಮೋಹನ್ ದಾಸ್ ಪೈ, ರಾಜ್ ಪಿ ಕೊಂಡೂರ್, ವಿ ಬಾಲಕೃಷ್ಣನ್ ಮತ್ತು ಅಭಯ್ ಜೈನ್ ಅವರು ಬಯಲು ಮಾಡಿದ್ದ ಸಂಸ್ಥೆಯ ಲೋಪಗಳು ಮತ್ತು ಈ ಕುರಿತು ‘ದಿ ಫೈಲ್‌’ ಸೇರಿದಂತೆ ಸ್ವತಂತ್ರ ಮಾಧ್ಯಮಗಳು ಮತ್ತು ಮುಖ್ಯವಾಹಿನಿಯಲ್ಲಿರುವ ಆಂಗ್ಲ ದೈನಿಕಗಳು ಪ್ರಕಟಿಸಿದ್ದ ವರದಿಗಳನ್ನೂ ಮುಖ್ಯ ನ್ಯಾಯಾಧೀಶರ ಗಮನಕ್ಕೆ ತಂದಿದ್ದರು. ಅಲ್ಲದೆ ಈ ಸಂಬಂಧ ಮುಖ್ಯ ನ್ಯಾಯಾಧೀಶರಿಗೆ 2020ರ ಡಿಸೆಂಬರ್‌ 7ರಂದು ಪತ್ರ ಬರೆದಿದ್ದರು.

ಫೌಂಡೇಷನ್‌ನ ಆಡಳಿತಾತ್ಮಕ ಲೋಪಗಳಿಗೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆ ನಡೆಸುವ ಸಂಬಂಧ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ಪರಿಷತ್‌ ಸದಸ್ಯ ಲೆಹರ್‌ ಸಿಂಗ್‌ ಸಿರೋಯಾ ಅವರು ಮತ್ತು ಅಕ್ಷಯಪಾತ್ರಾ ಫೌಂಡೇಷನ್‌ನ ಅಧ್ಯಕ್ಷರಿಗೂ ಪತ್ರ ಬರೆದಿದ್ದರು.

ಫೌಂಡೇಷನ್‌ನ ಚಟುವಟಿಕೆಗಳ ಬಗ್ಗೆ ಫೌಂಡೇಷನ್‌ ಟ್ರಸ್ಟಿಗಳ ಮಧ್ಯೆ ನಡೆಯುತ್ತಿದ್ದ ಶೀತಲ ಸಮರವನ್ನು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು ಕಳೆದ ಅಕ್ಟೋಬರ್‌ 17ರಂದೇ ಬಯಲುಗೊಳಿಸಿದ್ದರು. ಈ ಕುರಿತು ಸರಣಿ ಟ್ವೀಟ್‌ ಮಾಡಿದ್ದ ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು, ಫೌಂಡೇಷನ್‌ನ ಒಳಗುಟ್ಟುಗಳನ್ನು ಸಾರ್ವಜನಿಕ ವಲಯದಲ್ಲಿ ಮುನ್ನೆಲೆಗೆ ತಂದಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts