Bank Information

PARADARSHAK MEDIA FOUNDATION, Account Number: 40107584055, SBI,Mahalalakshmipuram branch IFSC Code : SBIN0017347 Bengaluru

‘ದಿ ಫೈಲ್‌’ ವರದಿ; ಇಸ್ಕಾನ್‌-ಟಚ್‌ಸ್ಟೋನ್‌ ಫೌಂಡೇ‍ಷನ್‌ ಪ್ರಸ್ತಾವನೆ ತಳ್ಳಿ ಹಾಕಿದ ಆರ್ಥಿಕ ಇಲಾಖೆ

ಬೆಂಗಳೂರು; ಟೆಂಡರ್‌ ಇಲ್ಲದೆಯೇ ಪೌರ ಕಾರ್ಮಿಕರಿಗೆ ಬಿಸಿಯೂಟ ಯೋಜನೆಯನ್ನು ಇಸ್ಕಾನ್‌ನ ಟಚ್‌ ಸ್ಟೋನ್‌ ಫೌಂಡೇ‍ಷನ್‌ಗೆ ವಹಿಸಲು ಮುಂದಾಗಿದ್ದ ಬಿಬಿಎಂಪಿ ನಡೆಸಿದ್ದ ಯತ್ನವನ್ನು ‘ದಿ ಫೈಲ್‌’ ಹೊರಗೆಡವುತ್ತಿದ್ದಂತೆ ಆರ್ಥಿಕ ಇಲಾಖೆಯು ಎಚ್ಚೆತ್ತುಕೊಂಡಿದೆ.

ಬಿಸಿಯೂಟ ಸರಬರಾಜು ಮಾಡುವ ಸಂಬಂಧ ಟೆಂಡರ್‌ ಕರೆದಲ್ಲಿ ಹೆಚ್ಚಿನ ಸಂಸ್ಥೆಗಳು ಭಾಗವಹಿಸಲು ಅವಕಾಶಗಳಿರುವ ಕಾರಣ 4(ಜಿ) ವಿನಾಯಿತಿ ಪ್ರಸ್ತಾವನೆ ಕೈಬಿಟ್ಟು ಟೆಂಡರ್‌ ಕರೆಯಬೇಕು ಎಂದು ಆರ್ಥಿಕ ಇಲಾಖೆಯು ಸೂಚಿಸಿದೆ ಎಂದು ಬಿಬಿಎಂಪಿಯ ಉನ್ನತ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಖಚಿತಪಡಿಸಿದ್ದಾರೆ. ಹಿಂಬಾಗಿಲ ಮೂಲಕ ಬಿಸಿಯೂಟ ಯೋಜನೆ ಗುತ್ತಿಗೆಯನ್ನು ತನ್ನದಾಗಿಸಿಕೊಳ್ಳಲು ಮುಂದಾಗಿದ್ದ ಇಸ್ಕಾನ್‌ ಸಂಸ್ಥೆ ನಡೆಸಿದ್ದ ಯತ್ನ ವಿಫಲವಾದಂತಿದೆ.

ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯು ಮುಖ್ಯ ಆಯುಕ್ತರು ಟಚ್‌ ಸ್ಟೋನ್‌ ಫೌಂಡೇಷನ್‌ ಪ್ರತಿಷ್ಠಾನದಿಂದ ಬಿಸಿಯೂಟ ಪಡೆದುಕೊಳ್ಳಲು ಮತ್ತು ಕೆಟಿಪಿಪಿ ಕಾಯ್ದೆಯ 4(ಜಿ) ಅಡಿ ವಿನಾಯಿತಿ ಕೋರಿ ಸರ್ಕಾರಕ್ಕೆ ಮರು ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಯನ್ನು ಪರಿಶೀಲಿಸಿರುವ ಆರ್ಥಿಕ ಇಲಾಖೆಯು ಕೇಳಿದ್ದ ಹಲವು ಪ್ರಶ್ನೆಗಳಿಗೆ ಬಿಬಿಎಂಪಿಯು ಯಾವುದೇ ಮಾಹಿತಿಯನ್ನೂ ನೀಡಿರಲಿಲ್ಲ ಎಂದು ಗೊತ್ತಾಗಿದೆ.

‘ಬಿಬಿಎಂಪಿ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಸದರಿ ಪ್ರಸ್ತಾವನೆಯಲ್ಲಿ ಟಚ್‌ ಸ್ಟೋನ್‌ ಫೌಂಡೇಷನ್‌ ರವರಿಂದಲೇ ಪ್ರಸ್ತಾಪಿತ ಬಿಸಿಯೂಟವನ್ನು ಪಡೆಯಲು ಏಕೆ ಉದ್ದೇಶಿಸಲಾಗಿದೆ, ಇದರ ಗುಣಮಟ್ಟವನ್ನು ಹೇಗೆ ಪರಿಶೀಲಿಸಲಾಗಿದೆ, ಟೆಂಡರ್‌ ಪ್ರಕ್ರಿಯೆ ಮೂಲಕ ಏಕೆ ಬಿಸಿಯೂಟ ಒದಗಿಸುವ ಸೇವೆಯನ್ನು ಪಡೆಯಲು ಸಾಧ್ಯವಿಲ್ಲ ಎಂಬುದರ ಕುರಿತು ಯಾವುದೇ ಮಾಹಿತಿ ಒದಗಿಸಿರುವುದಿಲ್ಲ,’ ಎಂದು ಆರ್ಥಿಕ ಇಲಾಖೆಯು ನಗರಾಭಿವೃದ್ಧಿ ಇಲಾಖೆಗೆ ಪತ್ರವನ್ನು ಬರೆದಿದೆ ಎಂದು ತಿಳಿದು ಬಂದಿದೆ.

ಇಸ್ಕಾನ್‌ ಅಕ್ಷಯ ನಿಧಿ ಪ್ರತಿಷ್ಠಾನ, ಟಚ್‌ ಸ್ಟೋನ್‌ ಫೌಂಡೇಷನ್‌ ಪ್ರತಿಷ್ಠಾನದಂತಹ ಸಂಸ್ಥೆಗಳು ಬಿಸಿಯೂಟವನ್ನು ಒದಗಿಸಲು ಮುಂದೆ ಬರಲಿವೆ. ಆಡಳಿತ ಇಲಾಖೆಯು ಟೆಂಡರ್‌ ಕರೆದಲ್ಲಿ ಇನ್ನೂ ಹೆಚ್ಚಿನ ಸಂಸ್ಥೆಗಳು ಟೆಂಡರ್‌ನಲ್ಲಿ ಭಾಗವಹಿಸುವ ಅವಕಾಶ/ಸಾಧ್ಯತೆಗಳು ಇರುತ್ತವೆ ಎಂದು ಆರ್ಥಿಕ ಇಲಾಖೆಯು ಅಭಿಪ್ರಾಯ ನೀಡಿದೆ ಎಂದು ಗೊತ್ತಾಗಿದೆ.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಬಿಸಿಯೂಟವನ್ನು ಒದಗಿಸುವ ಸೇವೆಯನ್ನು ಟೆಂಡರ್‌ ಪ್ರಕ್ರಿಯೆ ಮೂಲಕ ಕೈಗೊಳ್ಳಬೇಕು,’ ಎಂದು ಆಡಳಿತ ಇಲಾಖೆಗೆ ಸೂಚಿಸಿದೆ ಎಮದು ತಿಳಿದು ಬಂದಿದೆ.

ಟಚ್‌ ಸ್ಟೋನ್‌ ಫೌಂಡೇಷನ್‌ಗೆ ಬಿಸಿಯೂಟ ಯೋಜನೆ ಗುತ್ತಿಗೆ ನೀಡುವ ಸಲುವಾಗಿ 4 ಜಿ ವಿನಾಯಿತಿ ಕೋರಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ 2021ರ ಮೇ 26ರಂದು ಬಿಬಿಎಂಪಿ ಬರೆದಿದ್ದ ಪತ್ರವನ್ನಾಧರಿಸಿ ‘ದಿ ಫೈಲ್‌’ ಈ ವರದಿಯನ್ನು ಪ್ರಕಟಿಸಿದ್ದನ್ನು ಸ್ಮರಿಸಬಹುದು.

ಬಿಸಿಯೂಟ; ಹಿಂದೆ ಸರಿದ ಇಸ್ಕಾನ್‌, ಟಚ್‌ಸ್ಟೋನ್‌ ಫೌಂಡೇಷನ್‌ ಮೂಲಕ ಹಿಂಬಾಗಿಲ ಪ್ರವೇಶ?

ಪ್ರಕರಣದ ವಿವರ

ಬಿಸಿಯೂಟ ಸರಬರಾಜಿನ ಗುತ್ತಿಗೆಯನ್ನು ಇಂದಿರಾ ಕ್ಯಾಂಟೀನ್‌ ಬದಲಿಗೆ ಅಕ್ಷಯ ನಿಧಿ ಫೌಂಡೇಷನ್‌ಗೆ ನೀಡಲು ಬಿಬಿಎಂಪಿಯು ಆರ್ಥಿಕ ಇಲಾಖೆಯ ಸಹಮತಿ ಕೋರಿತ್ತು. ಇದಕ್ಕೆ ಆರ್ಥಿಕ ಇಲಾಖೆ ಸಹಮತಿ ವ್ಯಕ್ತಪಡಿಸುವ ಮುನ್ನವೇ ಅಕ್ಷಯ ನಿಧಿ ಫೌಂಡೇಷನ್‌ನ ಮತ್ತೊಂದು ಅಂಗ ಸಂಸ್ಥೆ ಟಚ್‌ ಸ್ಟೋನ್‌ ಫೌಂಡೇಷನ್‌ಗೆ ಕಾರ್ಯಾದೇಶ ನೀಡಲು ಪರಿಷ್ಕೃತ ಪ್ರಸ್ತಾವನೆಯನ್ನು ಸಲ್ಲಿಸಿತ್ತು.

ಇದೇ ಪ್ರಸ್ತಾವನೆಯನ್ನು ಒಪ್ಪಿರುವ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯು ಮುಖ್ಯ ಆಯುಕ್ತರು ಟಚ್‌ ಸ್ಟೋನ್‌ ಫೌಂಡೇಷನ್‌ ಪ್ರತಿಷ್ಠಾನದಿಂದ ಬಿಸಿಯೂಟ ಪಡೆದುಕೊಳ್ಳಲು ಮತ್ತು ಕೆಟಿಪಿಪಿ ಕಾಯ್ದೆಯ 4(ಜಿ) ಅಡಿ ವಿನಾಯಿತಿ ಕೋರಿ ಸರ್ಕಾರಕ್ಕೆ ಮರು ಪ್ರಸ್ತಾವನೆ ಸಲ್ಲಿಸಿದ್ದರು.

ಇಂದಿರಾ ಕ್ಯಾಂಟೀನ್‌ ಮೂಲಕ ನೀಡುತ್ತಿದ್ದ ರೈಸ್‌ಬಾತ್‌, ಪಲಾವ್‌ ಇತ್ಯಾದಿಗಳ ಬದಲಿಗೆ ಪ್ರತಿ ದಿನ ಅನ್ನ ಸಾಂಬರ್,‌ ಕರಿ, ಉಪ್ಪಿನಕಾಯಿಯನ್ನು 20 ರು. ದರದಲ್ಲಿಯೇ ವಿತರಿಸಲು ಅಕ್ಷಯ ನಿಧಿ ಫೌಂಡೇಷನ್‌ಗೆ ಬಿಬಿಎಂಪಿ ಷರತ್ತು ವಿಧಿಸಿತ್ತು. ಆದರೀಗ ದರದಲ್ಲಿ 3 ರು. ಹೆಚ್ಚಳ ಮಾಡಿ ಟಚ್‌ ಸ್ಟೋನ್‌ ಫೌಂಡೇಷನ್‌ಗೆ ಗುತ್ತಿಗೆ ನೀಡಲು ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಿರುವುದನ್ನು ಸ್ಮರಿಸಬಹುದು.

‘ಅಕ್ಷಯ ನಿಧಿ ಫೌಂಡೇಷನ್‌ನ ಬದಲಾಗಿ ಟಚ್‌ ಸ್ಟೋನ್‌ ಫೌಂಡೇಷನ್‌ ಸಂಸ್ಥೆಯ ಹೆಸರಿನಲ್ಲಿ ಒಡಂಬಡಿಕೆ ಮಾಡಿಕೊಂಡು ಕಾರ್ಯಾದೇಶವನ್ನು ನೀಡಲು ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ. ಕಚ್ಛಾ ವಸ್ತುಗಳು, ಅಡುಗೆ ಅನಿಲ ಹಾಗೂ ಇಂಧನ ವೆಚ್ಚವು ಅಧಿಕವಾಗಿರುವ ಕಾರಣ ಸಾರಿಗೆ ವೆಚ್ಚವೂ ಹೆಚ್ಚಾಗಿರುತ್ತದೆ. ಆದ್ದರಿಂದ ಪ್ರತಿ ಊಟಕ್ಕೆ 20 ರು.ಗಳಿಂದ 22 ರು.ಗಳಿಗೆ ಹೆಚ್ಚಿಸಲು ಕೋರಿರುತ್ತಾರೆ’ ಎಂದು ಬಿಬಿಎಂಪಿಯು ಸರ್ಕಾರಕ್ಕೆ ಪರಿಷ್ಕೃತ ಪ್ರಸ್ತಾವನೆಯನ್ನು ಸಲ್ಲಿಸಿರುವುದು ದಾಖಲೆಯಿಂದ ಗೊತ್ತಾಗಿತ್ತು.

ಪ್ರತಿ ಊಟಕ್ಕೆ 22 ರು.ಗಳಿಗೆ ಹೆಚ್ಚಿಸಲು ಪ್ರಸ್ತಾವನೆ ಕೋರಿದ್ದ ಬಿಬಿಎಂಪಿಯು ‘ಟಚ್‌ ಸ್ಟೋನ್‌ ಫೌಂಡೇಷನ್‌ ಸಂಸ್ಥೆಯವರು ವಾರದ ಎಲ್ಲಾ 7 ದಿನಗಳಲ್ಲಿಯೂ ವೈವಿಧ್ಯಮಯವಾದ ಊಟ ನೀಡಲು ಸಿದ್ಧರಾಗಿರುವುದರಿಂದ ಪ್ರತಿ ಊಟಕ್ಕೆ ರು.22ಕ್ಕಿಂತ ಹೆಚ್ಚಿನ 1 ರು. ಗಳನ್ನು ಅಂದರೆ 23 ರು.ಗಳನ್ನು ಪಾವತಿಸಲು ಕೋರಿರುವುದು,’ ಪ್ರಸ್ತಾವನೆಯಿಂದ ತಿಳಿದು ಬಂದಿದೆ.

Share:

Leave a Reply

Your email address will not be published. Required fields are marked *