ದುಪ್ಪಟ್ಟು ದರದಲ್ಲಿ ಸಲಕರಣೆ ಖರೀದಿ; 154 ಕೋಟಿ ರು. ಹೊರೆ ಹೊರಿಸಿದ ಸಂಪುಟ

ಬೆಂಗಳೂರು; ಕೋವಿಡ್‌ 19 ಮೂರನೇ ಅಲೆ ಸಿದ್ಧತೆಗಾಗಿ ಅಗತ್ಯವಿರುವ ವೈದ್ಯಕೀಯ ಸಲಕರಣೆಗಳ ಖರೀದಿ ಸಂಬಂಧ ಮಾರುಕಟ್ಟೆ ದರಕ್ಕಿಂತಲೂ ಶೇ.5ರಿಂದ 10 ಪಟ್ಟು ಹೆಚ್ಚಳ ದರ ನಮೂದಿಸಿ ವೈದ್ಯಕೀಯ ಶಿಕ್ಷಣ ಇಲಾಖೆಯು ಪಡೆದುಕೊಂಡಿದ್ದ ಆಡಳಿತಾತ್ಮಕ ಅನುಮೋದನೆಗೆ ಇದೀಗ ಸಚಿವ ಸಂಪುಟವೂ ಘಟನೋತ್ತರವಾಗಿ ಅನುಮೋದಿಸಿದೆ.

ಕೋವಿಡ್‌ 19ರ ಮೂರನೇ ಅಲೆ ನಿರ್ವಹಣೆಗೆ ಪೂರ್ವ ಸಿದ್ಥತೆಗೆ ಪೂರಕವಾಗಿ ಬ್ಲಾಕ್‌ ಫಂಗಸ್‌ ತಪಾಸಣೆ ಮತ್ತು ಚಿಕಿತ್ಸೆಗೆ ಅತ್ಯಗತ್ಯವಾಗಿರುವ ವೆಂಟಿಲೇಟರ್‌ ಸೇರಿದಂತೆ ವೈದ್ಯಕೀಯ ಇನ್ನಿತರೆ ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ಉಪಕರಣವಾರು ಖರೀದಿ ಮೊತ್ತವು ಮಾರುಕಟ್ಟೆಯಲ್ಲಿನ ದರಕ್ಕಿಂತಲೂ ಶೇ. 5ರಿಂದ 10 ಪಟ್ಟು ಹೆಚ್ಚಳ ದರವನ್ನು ವೈದ್ಯಕೀಯ ಶಿಕ್ಷಣ ಇಲಾಖೆಯು ನಮೂದಿಸಿತ್ತು. ಇಲಾಖೆ ನಮೂದಿಸಿದ್ದ ದರವನ್ನು ಪರಾಮರ್ಶಿಸದೆಯೇ ಅನುಮೋದಿಸಿರುವ ಸಚಿವ ಸಂಪುಟದ ನಡೆಯು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ವೆಂಟಿಲೇಟರ್‌ ಒಳಗೊಂಡ ಪಿಐಸಿಯು ಹಾಸಿಗೆ, ಫೆಸ್‌ ಉಪಕರಣ ಮತ್ತು ಟೆಲಿಸ್ಕೋಪ್‌ ಸಲಕರಣೆ ಖರೀದಿಗೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆಯು ಮಾರುಕಟ್ಟೆಯಲ್ಲಿನ ದರಕ್ಕಿಂತಲೂ ದುಪ್ಪಟ್ಟು ದರ ನಮೂದಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದೆ ಎಂಬ ಆರೋಪದ ನಡುವೆಯೇ ಇನ್ನಿತರೆ ಉಪಕರಣಗಳನ್ನು ಮಾರುಕಟ್ಟೆಯಲ್ಲಿನ ದರಕ್ಕಿಂತಲೂ ಹೆಚ್ಚುವರಿ ದರದಲ್ಲಿ ಖರೀದಿಸಲು ಅನುಮೋದನೆ ನೀಡಿರುವ ಸಚಿವ ಸಂಪುಟವು ಬೊಕ್ಕಸಕ್ಕೆ ಮತ್ತಷ್ಟು ನಷ್ಟ ಸಂಭವಿಸಲು ಕಾರಣವಾಗಲಿದೆ.

‘ಕೋವಿಡ್‌ 19 3ನೇ ಅಲೆಯ ಸಿದ್ಧತೆಗಾಗಿ 317.00 ಕೋಟಿ ಮೊತ್ತದಲ್ಲಿ ಉಪಕರಣ ಮತ್ತು ಪರಿಕರಗಳನ್ನು ಖರೀದಿಸಲು ಮತ್ತು 52.00 ಕೋಟಿ ರು. ಮೊತ್ತದಲ್ಲಿ ಸಿವಿಲ್‌ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಹೊರಡಿಸಿರುವ ಆದೇಶಕ್ಕೆ ಘಟನೋತ್ತರ ಅನುಮೋದನೆ ಕೋರಿದ್ದ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಸ್ತಾವನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ 2021ರ ನವೆಂಬರ್‌ 25ರಂದು ನಡೆದ ಸಚಿವ ಸಂಪುಟವು ಅನುಮೋದನೆ ನೀಡಿದೆ ಎಂದು ತಿಳಿದು ಬಂದಿದೆ.

ವೆಂಟಿಲೇಟರ್‌ ಒಳಗೊಂಡ ಪಿಐಸಿಯು ಹಾಸಿಗೆ, ವೆಂಟಿಲೇಟರ್‌ ರಹಿತ ಹಾಸಿಗೆ, ವೆಂಟಿಲೇಟರ್‌ ಒಳಗೊಂಡ ಎನ್‌ಐಸಿಯು ಹಾಸಿಗೆ, ಫೆಸ್‌ ಉಪಕರಣ, ಟೆಲಿಸ್ಕೋಪ್‌, ಕೊಬಾಲ್ಟರ್‌, ವಾಂಡ್ಸ್‌, ಪಿಎಪಿ ಆರ್‌, ರಿಜಿಡ್‌ ಬ್ರೋನ್ಚೋಸ್ಕೋಪ್‌, ಕಾರ್ಡಿಯಾಕ್‌ ಟೇಬಲ್‌ ಉಪಕರಣಗಳಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯು ಮಾರುಕಟ್ಟೆ ದರಕ್ಕಿಂತಲೂ ಶೇ.5ರಿಂದ 10 ಪಟ್ಟು ದರ ನಮೂದಿಸಿದ್ದ ಪ್ರಸ್ತಾವನೆಗೆ ಕೆಲ ದಿನಗಳ ಹಿಂದೆಯೇ ಆಡಳಿತಾತ್ಮಕ ಅನುಮೋದನೆ ದೊರಕಿತ್ತು.

ಕೋವಿಡ್‌ ಮೂರನೇ ಅಲೆಯ ನಿರ್ವಹಣೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುವ ಸಲುವಾಗಿ ಉಪಕರಣ ಖರೀದಿ ಮತ್ತು ಕಾಮಗಾರಿಗಳಿಗೆ ಒಟ್ಟು 1,594.59 ಕೋಟಿ ರು. ಒದಗಿಸಲು ವೈದ್ಯಕೀಯ ಶಿಕ್ಷಣ ಇಲಾಖೆಯು ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆ ಸೇರಿದಂತೆ ಇನ್ನಿತರೆ ದಾಖಲೆಗಳು ‘ದಿ ಫೈಲ್‌’ ಈ ಕುರಿತು ಸರಣಿ ವರದಿಗಳನ್ನು ಪ್ರಕಟಿಸಿದ್ದನ್ನು ಸ್ಮರಿಸಬಹುದು. ಪ್ರತಿ ಉಪಕರಣದ ಖರೀದಿಗೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆಯು ನಮೂದಿಸಿರುವ ದರವನ್ನು ‘ದಿ ಫೈಲ್‌’ ತನಿಖಾ ತಂಡವು ಬೆಂಗಳೂರು ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರ ನೆರವಿನೊಂದಿಗೆ ಮಾರುಕಟ್ಟೆಯಲ್ಲಿನ ದರದೊಂದಿಗೆ ಒರೆಗೆ ಹಚ್ಚಿದೆ.

ಇಲಾಖೆಯು ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ನಮೂದಿಸಿರುವ ಒಟ್ಟು ಮೊತ್ತದಲ್ಲಿ 16 ವೈದ್ಯಕೀಯ ಉಪಕರಣಗಳ ಖರೀದಿಗೆ 214,98,98,740 ರು.ಗಳನ್ನು ನಮೂದಿಸಿದೆ. ಆದರೆ ಮಾರುಕಟ್ಟೆಯಲ್ಲಿ ವಾಸ್ತವವಾಗಿ 16 ಉಪಕರಣಗಳಿಗೆ 60.38 ಕೋಟಿ ರು. ವೆಚ್ಚವಾಗಲಿದೆ. ಇಲಾಖೆಯು ನಮೂದಿಸಿರುವ ಒಟ್ಟು ದರವನ್ನು ಮಾರುಕಟ್ಟೆಯಲ್ಲಿನ ದರಕ್ಕೆ ಹೋಲಿಸಿದರೆ 154.60 ಕೋಟಿ ರು. ಹೆಚ್ಚಳವಿರುವುದು ಕಂಡು ಬಂದಿತ್ತು.

ಪ್ರತಿ ಉಪಕರಣದ ಖರೀದಿಗೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆಯು ನಮೂದಿಸಿರುವ ದರವನ್ನು ‘ದಿ ಫೈಲ್‌’ ತನಿಖಾ ತಂಡವು ಬೆಂಗಳೂರು ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರ ನೆರವಿನೊಂದಿಗೆ ಮಾರುಕಟ್ಟೆಯಲ್ಲಿನ ದರದೊಂದಿಗೆ ಒರೆಗೆ ಹಚ್ಚಿದೆ. ಇದರ ಪ್ರಕಾರ ಪ್ರತಿ ಉಪಕರಣದ ದರವು ಶೇ.5ರಿಂದ 10 ಪಟ್ಟು ಹೆಚ್ಚಳವಿದೆ. ಉಪಕರಣಗಳ ಒಟ್ಟಾರೆ ದರದಲ್ಲಿ ಶೇ.5ರಷ್ಟು ಹೆಚ್ಚಳವಿರುವುದು ಮೇಲ್ನೋಟಕ್ಕೆ ಗೊತ್ತಾಗಿತ್ತು.

ವೈದ್ಯಕೀಯ ಉಪಕರಣಗಳ ಖರೀದಿಗೆ 317 ಕೋಟಿ ರು.ಗಳಿಗೆ ಸಚಿವ ಸಂಪುಟದ ಘಟನೋತ್ತರ ಅನುಮೋದನೆ ಬಾಕಿ ಇರಿಸಿ ಆಡಳಿತಾತ್ಮಕ ಅನುಮೋದನೆ ನೀಡಿರುವ ಆದೇಶದಲ್ಲಿ ಉಪಕರಣಗಳ ನಿರ್ದಿಷ್ಟತೆಯನ್ನು ನಮೂದಿಸಿಲ್ಲ. ಬದಲಿಗೆ ಘಟಕ ವೆಚ್ಚ ಮತ್ತು ವೈದ್ಯಕೀಯ ಕಾಲೇಜುಗಳಿಗೆ ತಗಲುವ ಒಟ್ಟು ವೆಚ್ಚವನ್ನು ಮಾತ್ರ ನಮೂದಿಸಿದೆ. ಹೀಗಾಗಿ ‘ದಿ ಫೈಲ್‌’ ತನಿಖಾ ತಂಡವು ಉಪಕರಣಗಳ ಗರಿಷ್ಠ ಮತ್ತು ಉತ್ಕೃಷ್ಟ ನಿರ್ದಿಷ್ಟತೆ ಮತ್ತು ಗರಿಷ್ಠ ದರಕ್ಕೆ ಹೋಲಿಸಿ ನೋಡಿದ್ದರೂ ವೈದ್ಯಕೀಯ ಶಿಕ್ಷಣ ಇಲಾಖೆಯು ನಮೂದಿಸಿರುವ ದರವು ಮಾರುಕಟ್ಟೆಯಲ್ಲಿನ ದರಕ್ಕಿಂತಲೂ ಶೇ.5ರಿಂದ 10ಪಟ್ಟು ಹೆಚ್ಚಳ ಇರುವುದು ಕಂಡು ಬಂದಿತ್ತು.

ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರು ಸಲ್ಲಿಸಿರುವ(ಏಕ ಕಡತ ಸಂಖ್ಯೆ; M/E TENDER/20/2021-22- ದಿನಾಂಕ 23.06.2021 ಮತ್ತು 20.07.2021) ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ( ಟಿಪ್ಪಣಿ ಸಂಖ್ಯೆ FD 125 EXP-5/2021 ದಿನಾಂಕ 14.07.2021) ಸಿವಿಲ್‌ ಕಾಮಗಾರಿಗೆ 217 ಕೋಟಿ ಮತ್ತು ಉಪಕರಣಗಳಿಗೆ 152 ಕೋಟಿ ಸೇರಿ ಒಟ್ಟು ಮೊತ್ತ 369.00 ಕೋಟಿ ರು.ಗಳಿಗೆ ಸಹಮತಿ ನೀಡಿತ್ತು.

ಪಿಐಸಿಯು ವೆಂಟಿಲೇಟರ್ ಸಹಿತ ಹಾಸಿಗೆ, ವೆಂಟಿಲೇಟರ್‌ ರಹಿತ ಹಾಸಿಗೆ ಮತ್ತು ವೆಂಟಿಲೇಟರ್‌ ಸಹಿತ ಎನ್‌ಐಸಿ ಹಾಸಿಗೆ (ಒಟ್ಟು 1,280 ಹಾಸಿಗೆ)ಗಳನ್ನು ಮಾರುಕಟ್ಟೆಯಲ್ಲಿನ ದರಕ್ಕಿಂತಲೂ 141.51 ಕೋಟಿ ರು. ಹೆಚ್ಚಳ ದರದಲ್ಲಿ ಖರೀದಿಸಲು ಮುಂದಾಗಿದೆ. ವಾಸ್ತವದಲ್ಲಿ 1,280 ಹಾಸಿಗೆಗಳನ್ನು 55,76,00,000 ಕೋಟಿ ರು.ನಲ್ಲಿ ಖರೀದಿಸಬಹುದಾಗಿದ್ದರೂ ವೈದ್ಯಕೀಯ ಶಿಕ್ಷಣ ಇಲಾಖೆಯು 197.27 ಕೋಟಿ ರು ದರದಲ್ಲಿ ಖರೀದಿಸಲು ಅನುಮೋದನೆ ಪಡೆದಿದೆ. ಮಾರುಕಟ್ಟೆಯಲ್ಲಿನ ದರಕ್ಕೂ ಮತ್ತು ಇಲಾಖೆಯು ನಮೂದಿಸಿರುವ ದರ ಮಧ್ಯೆ ಅಪಾರ ಹೆಚ್ಚಳ ಇದ್ದರೂ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡುವ ಮೂಲಕ ಅಕ್ರಮಕ್ಕೆ ದಾರಿ ಮಾಡಿಕೊಟ್ಟಂತಾಗಿತ್ತು.

ಪಿಐಸಿಯು ವೆಂಟಿಲೇಟರ್‌ ಹಾಸಿಗೆಗಳಿಗೆ 72.69 ಕೋಟಿ ಹೆಚ್ಚಳ

ವೆಂಟಿಲೇಟರ್‌ ಒಳಗೊಂಡ ಪಿಐಸಿಯು ಹಾಸಿಗೆ (320)ಗೆ ವೈದ್ಯಕೀಯ ಶಿಕ್ಷಣ ಇಲಾಖೆಯು ತಲಾ 1,04,69,60,000 ರು. ನಮೂದಿಸಿದೆ. ಆದರೆ ಮಾರುಕಟ್ಟೆಯಲ್ಲಿ ತಲಾ ವೆಂಟಿಲೇಟರ್‌ ಒಳಗೊಂಡ ಹಾಸಿಗೆಯೊಂದಕ್ಕೆ 10,00,000 ರು. ದರವಿದೆ. ಮಾರುಕಟ್ಟೆಯಲ್ಲಿರುವ ವಾಸ್ತವ ದರದಂತೆ ಅಂದರೆ 10,00,000 ರು. ದರದಲ್ಲಿ 320 ಹಾಸಿಗೆ (ವೆಂಟಿಲೇಟರ್‌ ಒಳಗೊಂಡಂತೆ)ಗೆ 32,00,00,000 ರು.ಗಳಾಗಲಿವೆ. ಆದರೆ ವೈದ್ಯಕೀಯ ಶಿಕ್ಷಣ ಇಲಾಖೆಯು ತಲಾ ಹಾಸಿಗೆಗೆ 32, 71, 750 ರು.ಲೆಕ್ಕದಲ್ಲಿ ಒಟ್ಟು 321 ಹಾಸಿಗೆಗಳಿಗೆ 104.69 ಕೋಟಿ ರು. ನಮೂದಿಸಿದೆ. ವೆಂಟಿಲೇಟರ್‌ ಒಳಗೊಂಡ ಪಿಐಸಿಯು ತಲಾ ಹಾಸಿಗೆಗೆ 22,71,750 ರು. ವ್ಯತ್ಯಾಸವಿದ್ದರೆ ಒಟ್ಟು 320 ಹಾಸಿಗೆಗಳ ಖರೀದಿ ದರದಲ್ಲಿ 72,69,60,000 ರು. ಹೆಚ್ಚಳವಿತ್ತು.

ಪಿಐಸಿಯು ವೆಂಟಿಲೇಟರ್‌ ರಹಿತ ಹಾಸಿಗೆಗೆ 35.03 ಕೋಟಿ ಹೆಚ್ಚಳ

ವೆಂಟಿಲೇಟರ್‌ ರಹಿತ ಪಿಐಸಿಯು ಹಾಸಿಗೆಗೆ ಮಾರುಕಟ್ಟೆಯಲ್ಲಿ 1,20,000 ರು. ದರವಿದೆ. ಈ ದರದಂತೆ ಒಟ್ಟು 780 ಹಾಸಿಗೆಗಳಿಗೆ 9,36,00,000 ರು.ಗಳಾಗಲಿದೆ. ಆದರೆ ವೈದ್ಯಕೀಯ ಶಿಕ್ಷಣ ಇಲಾಖೆಯು ತಲಾ ಹಾಸಿಗೆಗೆ 5,67,966 ರು. ದರ ನಮೂದಿಸಿದೆ. ಒಟ್ಟು ಈ ದರದಲ್ಲಿ 780 ಹಾಸಿಗೆಗಳಿಗೆ 44,30, 14,000 ರು.ಗಳಾಗಿದ್ದರೆ ಮಾರುಕಟ್ಟೆಯಲ್ಲಿರುವ ದರಕ್ಕೂ ಮತ್ತು ಇಲಾಖೆಯು ನಮೂದಿಸಿರುವ ದರದ ಮಧ್ಯೆ 35,03,14,000 ರು. ವ್ಯತ್ಯಾಸವಿತ್ತು.

ಎನ್‌ಸಿಯು ಹಾಸಿಗೆ ವೆಂಟಿಲೇಟರ್‌ ಸಹಿತ ಹಾಸಿಗೆ 33.79 ಕೋಟಿ ಹೆಚ್ಚಳ

ಎನ್‌ಸಿಯು ಹಾಸಿಗೆ (ವೆಂಟಿಲೇಟರ್‌ ಸಹಿತ)ಗೆ ಮಾರುಕಟ್ಟೆಯಲ್ಲಿ 8,00,000 ರು. ಇದೆ. ಈ ದರದಂತೆ ಒಟ್ಟು 180 ಹಾಸಿಗೆಗಳಿಗೆ 14,40,00,000 ರು.ಗಳಾಗಲಿದೆ. ಆದರೆ ವೈದ್ಯಕೀಯ ಶಿಕ್ಷಣ ಇಲಾಖೆಯು ತಲಾ ಹಾಸಿಗೆಗೆ 26,77,300 ರು. ನಮೂದಿಸಿದೆ. ಈ ದರದಂತೆ ಒಟ್ಟು 180 ಹಾಸಿಗೆಗಳಿಗೆ 48,19,14,000 ರು.ಗಳಾಗಲಿದೆ. ಮಾರುಕಟ್ಟೆಯಲ್ಲಿನ ದರಕ್ಕೂ ಇಲಾಖೆಯು ನಮೂದಿಸಿರುವ ದರ ಮಧ್ಯೆ 33, 79,14,000 ರು. ಹೆಚ್ಚಳವಿತ್ತು.

ಅದೇ ರೀತಿ ರಾಜ್ಯದ 12 ವೈದ್ಯಕೀಯ ಕಾಲೇಜುಗಳಿಗೆ ಫೆಸ್‌ (ವಯಸ್ಕ ಮತ್ತು ಮಕ್ಕಳಿಗೆ) ಉಪಕರಣ, ಟೆಲಿಸ್ಕೋಪ್‌ (ಜೀರೋ ಡಿಗ್ರಿಯಿಂದ 70 ಡಿಗ್ರಿವರೆಗೆ) ಮಾರುಕಟ್ಟೆಯಲ್ಲಿರುವ ದರದಂತೆ ಒಟ್ಟು 6 ಉಪಕರಣಗಳನ್ನು ಖರೀದಿ ಮಾಡಿದರೆ 34,80,000 ಕೋಟಿ ವೆಚ್ಚವಾಗಲಿದೆ. ಇಲಾಖೆ ನಮೂದಿಸಿರುವ ದರದಂತೆ ಖರೀದಿಸಿದರೆ 2,66,91,792 ರು.ವೆಚ್ಚವಾಗಲಿದೆ. ಇಲಾಖೆ ನಮೂದಿಸಿರುವ ದರಕ್ಕೂ ಮತ್ತು ಮಾರುಕಟ್ಟೆಯಲ್ಲಿರುವ ದರದ ಮಧ್ಯೆ 2,32,11,792 ರು. ಹೆಚ್ಚಳವಿದೆ.

ಅಲ್ಟ್ರಾ ಇಎನ್‌ಟಿ ಇಮೇಜಿಂಗ್‌ ಸಿಸ್ಟಂ, ಮೈಕ್ರೋ ಡೈನರೈಡರ್‌, ಕೊಬಾಲ್ಟರ್‌, ವಾಂಡ್ಸ್‌, ಪಿಎಪಿ ಆರ್‌ ರಿಜಿಡ್‌ ಬ್ರೋನ್ಚೋಸ್ಕೋಪ್‌, ಕಾರ್ಡಿಯಾಕ್‌ ಟೇಬಲ್‌ ಉಪಕರಣಗಳನ್ನು ಹೆಚ್ಚುವರಿ ದರದಲ್ಲಿ ಖರೀದಿಸಲು ಸಚಿವ ಸಂಪುಟ ಅನುಮೋದಿಸಿದೆ.

4ಕೆ ಅಲ್ಟ್ರಾ ಇಎನ್‌ಟಿ ಇಮೇಜಿಂಗ್‌ ಸಿಸ್ಟಂ ಸೇರಿದಂತೆ 7 ಉಪಕರಣಗಳನ್ನು ಮಾರುಕಟ್ಟೆ ದರದಂತೆ ಖರೀದಿಸಿದರೆ 4,27,59,600 ರು.ವೆಚ್ಚವಾಗಲಿದೆ. ಇಲಾಖೆ ನಮೂದಿಸಿರುವ ದರದಂತೆ ಈ 7 ಉಪಕರಣಗಳಿಗೆ 15,04,18,948 ರು.ತಗುಲಲಿದೆ. ಆದರೆ ಮಾರುಕಟ್ಟೆಯಲ್ಲಿ ನಮೂದಿಸಿರುವ ದರಕ್ಕೂ ಮತ್ತು ಇಲಾಖೆ ನಮೂದಿಸಿರುವ ದರದ ಮಧ್ಯೆ 10,88,69,348 ರು. ವ್ಯತ್ಯಾಸವಿದೆ.

ಕೋವಿಡ್‌ ಮೊದಲ ಅಲೆಯಲ್ಲಿಯೂ ವೆಂಟಿಲೇಟರ್‌ಗಳನ್ನು ದುಪ್ಪಟ್ಟು ದರದಲ್ಲಿ ಖರೀದಿಸಲಾಗಿತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು. ಆದರೆ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್‌ ಮತ್ತು ಹಿಂದಿನ ಆರೋಗ್ಯ ಸಚಿವ ಬಿ ಶ್ರೀರಾಮುಲು ಅವರು ಇದನ್ನು ಅಲ್ಲಗಳೆದಿದ್ದರು. ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವೆಂಟಿಲೇಟರ್‌ ಖರೀದಿಯಲ್ಲಿ ಅಕ್ರಮಗಳಾಗಿವೆ ಎಂದು ಆರೋಪಿಸಿದ್ದರು. ವೆಂಟಿಲೇಟರ್‌ಗಳ ಖರೀದಿಯಲ್ಲಿ ಅಕ್ರಮಗಳಾಗಿವೆ ಎಂದು ‘ದಿ ಫೈಲ್‌’ ದಾಖಲೆ ಸಮೇತ ವರದಿ ಮಾಡಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts