ಜಾರಕಿಹೊಳಿ ವಿರುದ್ಧ ಎಫ್‌ಐಆರ್‌ ದಾಖಲು ಮಾಡದ ಪಂತ್‌,ಅನುಚೇತ್‌ ವಿರುದ್ಧ ತನಿಖೆಗೆ ಆದೇಶ

ಬೆಂಗಳೂರು: ಯುವತಿಯೊಬ್ಬಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ವಂಚಿಸಿದ ಆರೋಪಕ್ಕೆ ಗುರಿಯಾಗಿರುವ ಜಲ ಸಂಪನ್ಮೂಲ ಸಚಿವರಾಗಿದ್ದ ರಮೇಶ ಜಾರಕಿಹೊಳಿ ಪ್ರಕರಣದಲ್ಲಿ ದಿನೇಶ್‌ ಕಲ್ಲಹಳ್ಳಿ ನೀಡಿದ್ದ ದೂರನ್ನಾಧರಿಸಿ ಎಫ್‌ಐಆರ್‌ ದಾಖಲಿಸದ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌, ಡಿಸಿಪಿ ಅನುಚೇತ್‌ ಮತ್ತು ಕಬ್ಬನ್‌ ಪಾರ್ಕ್‌ ಠಾಣಾಧಿಕಾರಿ ಮಾರುತಿ ಬಿ ಅವರ ವಿರುದ್ಧ ತನಿಖೆ ನಡೆಸಲು 8ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.

ಎಫ್‌ಐಆರ್‌ ದಾಖಲಿಸದೇ ವಿಫಲರಾಗಿದ್ದ ಈ ಮೂವರು ಪೊಲೀಸ್‌ ಅಧಿಕಾರಿಗಳ ವಿರುದ್ಧ ಜನಾಧಿಕಾರ ಸಂಘರ್ಷ ಪರಿಷತ್‌ ಖಾಸಗಿ ದೂರು (ಪಿಸಿಆರ್‌) ದಾಖಲಿಸಿತ್ತು. ಈ ದೂರನ್ನಾಧರಿಸಿ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಕಮಲ್‌ಪಂತ್‌ ಸೇರಿದಂತೆ ಮೂವರು ಪೊಲೀಸ್‌ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕು ಎಂದು 8ನೇ ಎಸಿಎಂಎಂ ನ್ಯಾಯಾಲಯವು 2021ರ ನವೆಂಬರ್‌ 23ರಂದು ಆದೇಶಿಸಿದೆ. ಈ ಆದೇಶದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌, ಡಿಸಿಪಿ ಅನುಚೇತ್‌ ಮತ್ತು ಕಬ್ಬನ್‌ ಪಾರ್ಕ್‌ ಠಾಣಾಧಿಕಾರಿ ಮಾರುತಿ ಬಿ ಅವರ ವಿರುದ್ಧ ತನಿಖೆ ನಡೆಸಲು ಸಿಆರ್‌ಪಿಸಿ ಕಲಂ 156 (3) ಅಡಿಯಲ್ಲಿ ತನಿಖೆ ನಡೆಸಲು ನ್ಯಾಯಾಲಯವು ಆದೇಶಿಸಿದೆ. 2022ರ ಫೆ.2ರೊಳಗೆ ವರದಿ ಸಲ್ಲಿಸಲು ಸೂಚಿಸಿದೆ.

ಯಾವುದೇ ಸಂಜ್ಞೆ ಅಪರಾಧಕ್ಕೆ ಸಂಬಂಧಿಸಿದಂತೆ ದೂರು ಅಥವಾ ಮಾಹಿತಿ ಬಂದಲ್ಲಿ ಅದನ್ನು ತಕ್ಷಣವೇ ಸಿಆರ್‌ಪಿಸಿ ಸೆಕ್ಷನ್‌ 154ರ ಅಡಿಯಲ್ಲಿ ದೂರನ್ನು ದಾಖಲಿಸಿಕೊಂಡು ಅದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಬೇಕಾದ ಜವಾಬ್ದಾರಿ ಪೋಲೀಸರ ಮೇಲಿದೆ. 154ರ ಅಡಿಯಲ್ಲಿ ಮಾಹಿತಿ ಅಥವಾ ದೂರನ್ನು ದಾಖಲಿಸದಿರುವುದು ಐಪಿಸಿ ಸೆಕ್ಷನ್‌ 166-ಎ ಕಲಂ ಪ್ರಕಾರ ಅಪರಾಧವಾಗಿರುತ್ತದೆ. ಅಂತಹ ಆರೋಪ ಸಾಬೀತಾದಲ್ಲಿ ಆ ಅಪರಾಧಕ್ಕೆ ಆ ಅಧಿಕಾರಿಗೆ 6 ತಿಂಗಳಿಗಿಂತಲೂ ಕಡಿಮೆ ಆಗದ ಸಜೆ ಮತ್ತು 2 ವರ್ಷದ ತನಕ ಹೆಚ್ಚಿಸಬಹುದಾದ ಶಿಕ್ಷೆ ವಿಧಿಸಲು ಅವಕಾಶವಿದೆ.

ಇದು ತುಂಬಾ ಮುಖ್ಯವಾದ ಕಾನೂನು. ಇದು ಸಂಜ್ಞೆಯ ಅಪರಾಧಕ್ಕೆ ಸಂಬಂಧಿಸಿರುವುದರಿಂದ ದೂರು ಅಥವಾ ಮಾಹಿತಿಯನ್ನು ತಕ್ಷಣವೇ ದಾಖಲಿಸಿಕೊಳ್ಳಬೇಕಿತ್ತು. ನಂತರ ವಿಚಾರಣೆ ನಡೆಸಬಹುದು. ಆದರೆ ಈ ಸಂಬಂಧ ಪ್ರಯತ್ನ ನಡೆದಿಲ್ಲ. ಹಾಗಾಗಿ ಇದು ಪೊಲಿಸ್‌ ಅಧಿಕಾರಿಯ ಬೇಜವಾಬ್ದಾರಿ ಎಂಬುದು ತೋರಿಸುತ್ತದೆ. ಹೀಗಾಗಿ ಸೆಕ್ಷನ್‌ 166-ಎ ಅಡಿಯಲ್ಲಿ ಅಪರಾಧ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಮಾಜಿ ರಾಜ್ಯ ಸರ್ಕಾರಿ ಅಭಿಯೋಜಕ ಬಿ ಟಿ ವೆಂಕಟೇಶ್‌ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದನ್ನು ಸ್ಮರಿಸಬಹುದು.

ಜಾರಕಿಹೊಳಿ ಪ್ರಕರಣವನ್ನು ಮತ್ತೊಂದು ಮಗ್ಗುಲಿಗೆ ಹೊರಳಿಸಿದೆ. ರಮೇಶ್‌ ಜಾರಕಿಹೊಳಿ ವಿರುದ್ಧ ಸಂತ್ರಸ್ತೆ ಪರವಾಗಿ ವಕೀಲ ವಕೀಲ ಜಗದೀಶ್‌ ಅವರು ನೀಡಿದ್ದ ದೂರನ್ನಾಧರಿಸಿ ಎಫ್‌ಐಆರ್‌ ದಾಖಲಿಸಲಾಗಿದೆಯೇ ವಿನಃ ದಿನೇಶ್‌ ಕಲ್ಲಹಳ್ಳಿ ನೀಡಿದ್ದ ದೂರನ್ನು ಪೊಲೀಸ್‌ ಅಧಿಕಾರಿಗಳು ಎಫ್‌ಐಆರ್‌ ದಾಖಲಿಸಿರಲಿಲ್ಲ. ಇದು ಪೊಲೀಸ್‌ ಅಧಿಕಾರಿಗಳ ಇಬ್ಬಂದಿತನಕ್ಕೆ ಸಾಕ್ಷಿಯಾಗಿತ್ತು.

ಮತ್ತೊಂದು ಸಂಗತಿ ಎಂದರೆ ಸಂತ್ರಸ್ತೆ ಬಹಿರಂಗವಾಗಿ ಕಾಣಿಸಿಕೊಳ್ಳುವ ಮೊದಲೇ ದಿನೇಶ್‌ ಕಲ್ಲಹಳ್ಳಿ ದೂರು ನೀಡಿದ್ದರು. ಆದರೆ ಪೊಲೀಸ್‌ ಅಧಿಕಾರಿಗಳು ಎಫ್‌ಐಆರ್‌ ದಾಖಲಿಸಲು ಮೀನಮೇಷ ಎಣಿಸಿದ್ದರು. ಇನ್ನು, ಜಗದೀಶ್‌ ಅವರು ಸಲ್ಲಿಸಿದ್ದ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಾಗಿದ್ದರೂ ಸಂತ್ರಸ್ತೆ ಆಗಲೂ ಬಹಿರಂಗವಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ದಿನೇಶ್‌ ಕಲ್ಲಹಳ್ಳಿ ನೀಡಿದ್ದ ದೂರಿನ ಮೇರೆಗೆ ಎಫ್‌ಐಆರ್‌ನ್ನು ಏಕೆ ದಾಖಲಿಸಿಕೊಳ್ಳಲಿಲ್ಲ ಎಂಬ ಪ್ರಶ್ನೆಯನ್ನು ಜನಾಧಿಕಾರ ಸಂಘರ್ಷ ಪರಿಷತ್‌ ಎತ್ತಿತ್ತು. ಈ ಕುರಿತು ‘ದಿ ಫೈಲ್‌’ 2021ರ ಏಪ್ರಿಲ್‌ 6ರಂದು ವಿಶೇಷ ವರದಿಯನ್ನು ಪ್ರಕಟಿಸಿದ್ದನ್ನು ಸ್ಮರಿಸಬಹುದು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಭಯಾ ಕಾಯ್ದೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ ಎಂದು ಜನಾಧಿಕಾರ ಸಂಘರ್ಷ ಪರಿಷತ್‌ ಮುಖ್ಯ ನ್ಯಾಯಾಧೀಶರಿಗೆ ಮನವಿಯನ್ನೂ ಸಲ್ಲಿಸಿತ್ತು. ಕಮಲ್‌ ಪಂತ್‌ ಮತ್ತಿತರ ಅಧಿಕಾರಿಗಳ ವಿರುದ್ಧದ ದೂರನ್ನು ಕಬ್ಬನ್‌ ಪಾರ್ಕ್‌ ಠಾಣಾಧಿಕಾರಿಗೆ ಪರಿಷತ್‌ ನೀಡಿತ್ತಾದರೂ ಠಾಣಾಧಿಕಾರಿ ದೂರನ್ನು ಸ್ವೀಕರಿಸಿರಲಿಲ್ಲ. ಹೀಗಾಗಿ ಈ ಮೇಲ್‌ ಮತ್ತು ನೋಂದಾಯಿತ ಅಂಚೆ ಮೂಲಕ ಸಲ್ಲಿಸಿದ್ದ ದೂರನ್ನೂ ಕಬ್ಬನ್‌ ಪಾರ್ಕ್‌ ಠಾಣಾಧಿಕಾರಿ ಮುಕ್ತಾಯಗೊಳಿಸಿದ್ದರು. ಇದೇ ದೂರಿನಲ್ಲಿಯೂ ಕಬ್ಬನ್‌ ಪಾರ್ಕ್‌ ಠಾಣಾಧಿಕಾರಿ ಮಾರುತಿ ಅವರ ಹೆಸರನ್ನೂ ಉಲ್ಲೇಖಿಸಿರುವುದನ್ನು ಸ್ಮರಿಸಬಹುದು.

ಸಚಿವರಾಗಿದ್ದವರೊಬ್ಬರ ವಿರುದ್ಧ ಯುವತಿಯೊಬ್ಬರು ಮಾಡಿರುವ ಲೈಂಗಿಕ ದೌರ್ಜನ್ಯದ ಆರೋಪದ ಕುರಿತು ದೂರು ನೋಂದಾಯಿಸಲ್ಪಟ್ಟಿದೆ. ಸಂತ್ರಸ್ತೆ ತನ್ನ ದೂರಿನಲ್ಲಿ ಸಚಿವರು ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದರೆ ನೌಕರಿ ಕೊಡಿಸುವ ಆಮಿಷ ಒಡ್ಡಿ ಬಲೆಗೆ ಹಾಕಿಕೊಂಡಿದ್ದಾಗಿ ತಿಳಿಸಿದ್ದಾರೆ. ಸಚಿವರೊಬ್ಬರು ಸಾರ್ವಜನಿಕ ನೌಕರ. ತನ್ನ ಶಾಸನಬದ್ಧ ಅಧಿಕಾರವನ್ನು ಬಳಸಿ ಅಕ್ರಮವಾಗಿ ಕೆಲಸ ಕೊಡಿಸುವುದನ್ನು ದುರ್ನಡತೆ ಎಂದು ವ್ಯಾಖ್ಯಾನಿಸಲಾಗಿದೆ. ಭ್ರಷ್ಟಾಚಾರ ಕೇವಲ ಹಣದ ರೂಪದಲ್ಲಿಯೇ ಇರಬೇಕಾಗಿಲ್ಲ. ಅದು ಯಾವ ಬಗೆಯಲ್ಲಾದರೂ ಇರಬಹುದು. ಇದು ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹವಾದುದು ಎಂದು ಹೇಳಿಕೆಯಲ್ಲಿ ಸಿ ಎಚ್‌ ಹನುಮಂತರಾಯ, ವಕೀಲರಾದ ಕೆ.ಬಿ.ಕೆ.ಸ್ವಾಮಿ, ಡೆರಿಕ್ ಅನಿಲ್‌ ವಿವರಿಸಿದ್ದರು.

ಬಾಧಿತೆಯ ದೂರನ್ನು ಆಧರಿಸಿ ಐಪಿಸಿ ಸೆಕ್ಷನ್ 376C ಅಡಿಯಲ್ಲಿ ಎಫ್.ಐ.ಆರ್ ಹೂಡಲಾಗಿದೆ. ಹೆಣ್ಣೊಂದು ಸಾಂಸ್ಥಿಕವಾಗಿ ಕಾನೂನಿನ ರಕ್ಷಣೆಯಲ್ಲಿದ್ದಾಗ ನಡೆಯುವ ದೌರ್ಜನ್ಯದ ಕುರಿತು ಈ ಕಲಂ ಸ್ಪಷ್ಟವಾಗಿ ಹೇಳುತ್ತದೆ. ಮಾಜಿ ಸಚಿವರ ಪ್ರಕರಣದಲ್ಲಿ ಸಂತ್ರಸ್ತೆಯು ಕಾನೂನಿನ ದೃಷ್ಟಿಯಿಂದ ಯಾವುದೇ ಸಾಂಸ್ಥಿಕ ಹಿಡಿತದಲ್ಲಿ ಇರಲಿಲ್ಲ. ಅಲ್ಲದೆ ಸಚಿವರನ್ನು ಒಂದು ಸಂಸ್ಥೆಯೆಂದು ಅರ್ಥೈಸಲಾಗದು.

ಜೈಲು, ಆಸ್ಪತ್ರೆ, ಮಹಿಳಾ ರಕ್ಷಣಾ ಕೇಂದ್ರ, ಮಹಿಳಾ ಹಾಸ್ಟೆಲ್‌ನಂತಹ ವಸತಿ ಕೇಂದ್ರದಲ್ಲಿ ಮಹಿಳೆಯರು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಕಾನೂನಿನ ಅಡಿಯಲ್ಲಿ ರಕ್ಷಣೆಯಲ್ಲಿರುತ್ತಾರೆ. ಅಲ್ಲಿ ಜರುಗುವ ಲೈಂಗಿಕ ಅಪರಾಧ ಪ್ರಕರಣಗಳನ್ನು ಗಣನೆಗೆ ತೆಗೆದುಕೊಂಡು ರೂಪಿಸಿರುವ ಕಾನೂನಿನ ಅಂಶವನ್ನು ಸದರಿ ಪ್ರಕರಣದಲ್ಲಿ ಅಳವಡಿಸುವುದು ಸರಿಯಲ್ಲ ಎಂದು ಪ್ರತಿಪಾದಿಸಿದ್ದರು.

ಈ ಸರಳ ಕಾನೂನಿನ ಅಂಶ ಪೊಲೀಸ್‌ ಇಲಾಖೆಗೆ ತಿಳಿದಿಲ್ಲ ಎಂದು ಭಾವಿಸಲಾಗದು. ಇದರ ಹಿಂದೆ ಆರೋಪಿಗೆ ಅನುಕೂಲ ಮಾಡಿಕೊಡುವ ಕಪಟತನವಿದೆ. ಸಾಂಸ್ಥಿಕ ದೌರ್ಜನ್ಯದ ವ್ಯಾಪ್ತಿಗೆ ಈ ದೂರನ್ನು ಸೀಮಿತಗೊಳಿಸಿದರೆ ಆರೋಪಿಯು ಸುಲಭವಾಗಿ ಜಾಮೀನು ಪಡೆದುಕೊಳ್ಳಲು ಅನುವಾಗುತ್ತದೆ. ಅಲ್ಲದೆ ಈ ಪ್ರಕರಣವನ್ನು ಅತ್ಯಾಚಾರವಲ್ಲದ ಲೈಂಗಿಕ ಕ್ರಿಯೆ ಎಂದು ವ್ಯಾಖ್ಯಾನಿಸಿ, ಕಾನೂನಿನ ಅಡಿಯಲ್ಲಿ ಸಂತ್ರಸ್ತೆಗೆ ದೊರಕುವ ಕಾನೂನಿನ ಮೂಲಭೂತ ರಕ್ಷಣೆಯನ್ನು ಹೊಸಕಿ ಹಾಕುವ ಹುನ್ನಾರ ಅಡಗಿದೆಯೇ ಎಂಬ ಬಲವಾದ ಶಂಕೆಗೆ ಎಡೆಮಾಡಿಕೊಟ್ಟಂತಾಗುತ್ತದೆ.

ಹಾಗಾಗಿ ಈ ಪ್ರಕರಣದಲ್ಲಿ ಸೆಕ್ಷನ್ 376ರ ಅಡಿಯಲ್ಲಿಯೇ ತನಿಖೆಯನ್ನು ಸ್ಥಿರಗೊಳಿಸಬೇಕು. ಕಾನೂನಿನ ಅಡಿಯಲ್ಲಿ ಶೋಷಿತರಿಗೆ ನ್ಯಾಯಬದ್ಧವಾಗಿ ಲಭಿಸಬೇಕಾದ ರಕ್ಷಣೆಗಳನ್ನು ತಪ್ಪಿಸುವುದು ಅಕ್ಷ್ಯಮ. ಇಲ್ಲದೇ ಹೋದಲ್ಲಿ ಇದು ಸರ್ಕಾರದ ತನಿಖಾ ಸಂಸ್ಥೆಗಳು ಅತ್ಯಾಚಾರ ಸಂತ್ರಸ್ತೆಯ ಮೇಲೆ ನಡೆಸುವ ಪರೋಕ್ಷ ದಾಳಿಯೆಂದು ಅರ್ಥೈಸಬೇಕಾದೀತು ಎಂದು ವಿಶ್ಲೇಷಿಸಿದ್ದರು.

the fil favicon

SUPPORT THE FILE

Latest News

Related Posts