ಬಿಸಿಯೂಟ; ಸಿಬ್ಬಂದಿ ಸಂಭಾವನೆ, ಆಹಾರ ಧಾನ್ಯ, ಅಡುಗೆ ವೆಚ್ಚದ ಅನುದಾನ ಅಕ್ಷಯಪಾತ್ರೆಗೆ ವರ್ಗಾವಣೆ

ಬೆಂಗಳೂರು; ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯಡಿ ನೀಡಬೇಕಿರುವ ಅಡುಗೆ ತಯಾರಿಕೆ ವೆಚ್ಚದ ಅನುದಾನ, ಅಡುಗೆ ಸಿಬ್ಬಂದಿಗಳ ಸಂಭಾವನೆ ಮೊತ್ತ ಮತ್ತು ಅಡುಗೆ ಕೋಣೆ ನಿರ್ವಹಣೆ, ಆಹಾರ ಧಾನ್ಯ ಹಾಗೂ ಯೋಜನೆ ಅನುಷ್ಠಾನದ ಸಂಪೂರ್ಣ ಸುಪರ್ದಿಯನ್ನು ಅಕ್ಷಯ ಪಾತ್ರ ಫೌಂಡೇಷನ್‌ಗೆ ವಹಿಸಲು ರಾಜ್ಯ ಬಿಜೆಪಿ ಸರ್ಕಾರವು ಅನುಮೋದಿಸಿದೆ.

ಆಡಳಿತಾತ್ಮಕ ಲೋಪ, ಲೆಕ್ಕಪತ್ರಗಳಲ್ಲಿನ ವ್ಯತ್ಯಾಸ, ನಿಯಮಬಾಹಿರ ಚಟುವಟಿಕೆಗಳೂ ಸೇರಿದಂತೆ ಇನ್ನಿತರೆ ಗಂಭೀರ ಲೋಪಗಳನ್ನು ಎಸಗಿರುವ ಗಂಭೀರ ಆರೋಪಕ್ಕೆ ಗುರಿಯಾಗಿರುವ ಅಕ್ಷಯ ಪಾತ್ರ ಫೌಂಡೇಷನ್‌ಗೆ ರಾಜ್ಯದ ಜಿಲ್ಲೆಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯ ಅನುಷ್ಠಾನಗೊಳಿಸಲು ಮುಂದಾಗಿರುವ ಸರ್ಕಾರದ ಕ್ರಮವು ಮುನ್ನೆಲೆಗೆ ಬಂದಿದೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್‌ ಅವರು ಉಸ್ತುವಾರಿ ಹೊತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆಯ 08 ಸರ್ಕಾರಿ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಿದೆ. ಮಧ್ಯಾಹ್ನ ಉಪಹಾರ ಯೋಜನೆ ಅನುಷ್ಠಾನ, ನಿರ್ವಹಣೆ ಜವಾಬ್ದಾರಿಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಅಕ್ಷಯ ಪಾತ್ರ ಫೌಂಡೇಷನ್‌ಗೆ ವಹಿಸಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು 2021ರ ನವಂಬರ್‌ 17ರಂದು ಆದೇಶ ಹೊರಡಿಸಿದೆ. ಇದರ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ನಮ್ಮ ಶಾಲೆ ನಮ್ಮ ಕೊಡುಗೆ ಕಾರ್ಯಕ್ರಮದಡಿಯಲ್ಲಿ ಚಿಕ್ಕಬಳ್ಳಾಪುರದ ನಲ್ಲಕದಿರೇನಹಳ್ಳಿ, ಯಗ್ರಮಾರೇನಹಳ್ಳಿ, ರಾಮಾಪಟ್ಟಣ, ಕಠಾರಿಕದಿರೇನಹಳ್ಳಿ, ಪೈಯೂರು, ದರಬೂರು, ಮಂಡಿಕಲ್ಲು ಸರ್ಕಾರಿ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಅಕ್ಷಯ ಪಾತ್ರ ಪ್ರತಿಷ್ಠಾನದೊಂದಿಗೆ ಅನುಷ್ಠಾನಗೊಳಿಸಲಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಅವರು ಈ ಯೋಜನೆಯನ್ನು ಅನುಮೋದಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಧ್ಯಾಹ್ನ ಉಪಹಾರ ಯೋಜನೆಯ ಅನುಷ್ಠಾನ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಿದೆ. ಇಲ್ಲಿನ ಷರತ್ತುಗಳ ಪ್ರಕಾರ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಅಗತ್ಯವಿರುವ ಮತ್ತು ಮಧ್ಯಾಹ್ಯ ಉಪಹಾರ ಯೋಜನೆಗೆ ಮೀಸಲಿಟ್ಟಿರುವ ಆಹಾರ ಧಾನ್ಯಗಳನ್ನು ನೇರವಾಗಿ ಅಕ್ಷಯ ಪಾತ್ರ ಪ್ರತಿಷ್ಠಾನಕ್ಕೆ ನೇರವಾಗಿ ಒದಗಿಸಬೇಕಿದೆ.

ಅಲ್ಲದೆ ಈ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಗಳ ಸಂಭಾವನೆ ಮೊತ್ತವನ್ನು ಅಕ್ಷಯ ಪಾತ್ರ ಪ್ರತಿಷ್ಠಾನಕ್ಕೆ ವರ್ಗಾಯಿಸಬೇಕು. ಶಾಲೆಯ ಅಡುಗೆ ಕೋಣೆ ನಿರ್ವಹಣೆ ಮತ್ತು ಸಂಪೂರ್ಣ ಸುಪರ್ದಿಯ ಪ್ರತಿಷ್ಠಾನಕ್ಕೆ ವಹಿಸಬೇಕು. ಅಡುಗೆ ತಯಾರಿಕೆ ವೆಚ್ಚದ ಅನುದಾನವನ್ನೂ ಪ್ರತಿಷ್ಠಾನಕ್ಕೆ ನೀಡಬೇಕು.

ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಅಕ್ಷಯ ಪಾತ್ರ ಪ್ರತಿಷ್ಠಾನದಿಂದ 25.00 ಲಕ್ಷ ರು ಭರಿಸಲು ಉದ್ದೇಶಿಸಿದೆ. ಈ ಪೈಕಿ 12.50 ಲಕ್ಷ ರು. ಅಡುಗೆ ಕೋಣೆಗಳ ನವೀಕರಣ ಮತ್ತು 13.00 ಲಕ್ಷ ರು.ಗಳನ್ನು ಅಡುಗೆ ಸಿಬ್ಬಂದಿಗೆ ಹೆಚ್ಚುವರಿ ಸಂಭಾವನೆ ಪಾವತಿಸಲು ಮೀಸಲಿಟ್ಟಿರುವುದು ಆದೇಶದಿಂದ ಗೊತ್ತಾಗಿದೆ.

ಮುಖ್ಯ ಅಡುಗೆಯವರಿಗೆ ಹೆಚ್ಚುವರಿಯಾಗಿ 1,200 (ಮಾಸಿಕ) ಮತ್ತು ಸಹಾಯಕ ಅಡುಗೆಯವರಿಗೆ 800 ರು.ಗಳ ಸಂಭಾವನೆಯನ್ನೂ ಪ್ರತಿಷ್ಠಾನದಿಂದಲೇ ಪಾವತಿಯಾಗಲಿದೆ. ಇದಕ್ಕೆ ಪೂರಕವಾಗಿ ಅಡುಗೆ ಸಿಬ್ಬಂದಿಗಳಿಗೆ ಸರ್ಕಾರ ನೀಡುತ್ತಿರುವ ಸಂಭಾವನೆ ಮೊತ್ತವನ್ನು ಅಕ್ಷಯ ಪಾತ್ರ ಪ್ರತಿಷ್ಠಾನಕ್ಕೆ ವರ್ಗಾಯಿಸಬೇಕಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013ರಲ್ಲಿ ಮಧ್ಯಾಹ್ನ ಉಪಹಾರ ನೀಡಲು ನೀಡಲು ನಿಗದಿಪಡಿಸಿರುವ ಪರಿಮಾಣ ಮತ್ತು ಪೌಷ್ಠಿಕಾಂಶದಂತೆ ಹಾಗೂ ರಾಜ್ಯ ಸರ್ಕಾರದಿಂದ ಕಾಲಕಾಲಕ್ಕೆ ನಿಗದಿಪಡಿಸಿರುವ ಆಹಾರ ಸೂಚಿತ ಪಟ್ಟಿಯಂತೆ ಈ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ಸಿದ್ಧಪಡಿಸಿ ಮಕ್ಕಳಿಗೆ ನೀಡಬೇಕು ಎಂಬ ಷರತ್ತನ್ನೂ ವಿಧಿಸಿರುವುದು ಆದೇಶದಿಂದ ತಿಳಿದು ಬಂದಿದೆ.

ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯ ಸರ್ಕಾರಗಳು ಅನುಷ್ಠಾನಗೊಳಿಸಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಜಾರಿ ಏಜೆನ್ಸಿಯಾಗಿ ಅವಕಾಶ ಗಿಟ್ಟಿಸಿಕೊಂಡಿರುವ ಅಕ್ಷಯ ಪಾತ್ರಾ ಫೌಂಡೇ‍ಷನ್‌ನ ಆಡಳಿತಾತ್ಮಕ ಲೋಪ, ಲೆಕ್ಕಪತ್ರಗಳಲ್ಲಿನ ವ್ಯತ್ಯಾಸ, ನಿಯಮಬಾಹಿರ ಚಟುವಟಿಕೆಗಳೂ ಸೇರಿದಂತೆ ಕಂಡು ಬಂದಿರುವ ಇನ್ನಿತರೆ ಗಂಭೀರ ಲೋಪಗಳ ಕುರಿತು ವಿಧಾನಪರಿಷತ್‌ನ ಬಿಜೆಪಿ ಸದಸ್ಯ ಲೆಹರ್‌ ಸಿಂಗ್‌ ಸಿರೋಯಾ ಅವರು ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರ ಪತ್ರ ಬರೆದಿದ್ದಾರೆ.

ಅಕ್ಷಯ ಪಾತ್ರಾ ಫೌಂಡೇಷನ್‌ನ ಸ್ವತಂತ್ರ ಟ್ರಸ್ಟಿಗಳಾದ ಟಿ ವಿ ಮೋಹನ್ ದಾಸ್ ಪೈ, ರಾಜ್ ಪಿ ಕೊಂಡೂರ್, ವಿ ಬಾಲಕೃಷ್ಣನ್ ಮತ್ತು ಅಭಯ್ ಜೈನ್ ಅವರು ಬಯಲು ಮಾಡಿದ್ದ ಸಂಸ್ಥೆಯ ಲೋಪಗಳು ಮತ್ತು ಈ ಕುರಿತು ‘ದಿ ಫೈಲ್‌’ ಸೇರಿದಂತೆ ಸ್ವತಂತ್ರ ಮಾಧ್ಯಮಗಳು ಮತ್ತು ಮುಖ್ಯವಾಹಿನಿಯಲ್ಲಿರುವ ಆಂಗ್ಲ ದೈನಿಕಗಳು ಪ್ರಕಟಿಸಿದ್ದ ವರದಿಗಳನ್ನೂ ಮುಖ್ಯ ನ್ಯಾಯಾಧೀಶರ ಗಮನಕ್ಕೆ ತಂದಿದ್ದರು. ಅಲ್ಲದೆ ಈ ಸಂಬಂಧ ಮುಖ್ಯ ನ್ಯಾಯಾಧೀಶರಿಗೆ 2020ರ ಡಿಸೆಂಬರ್‌ 7ರಂದು ಪತ್ರ ಬರೆದಿದ್ದರು.


ಫೌಂಡೇಷನ್‌ನ ಆಡಳಿತಾತ್ಮಕ ಲೋಪಗಳಿಗೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆ ನಡೆಸುವ ಸಂಬಂಧ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ಪರಿಷತ್‌ ಸದಸ್ಯ ಲೆಹರ್‌ ಸಿಂಗ್‌ ಸಿರೋಯಾ ಅವರು ಮತ್ತು ಅಕ್ಷಯಪಾತ್ರಾ ಫೌಂಡೇಷನ್‌ನ ಅಧ್ಯಕ್ಷರಿಗೂ ಪತ್ರ ಬರೆದಿದ್ದರು.


ಫೌಂಡೇಷನ್‌ನ ಚಟುವಟಿಕೆಗಳ ಬಗ್ಗೆ ಫೌಂಡೇಷನ್‌ ಟ್ರಸ್ಟಿಗಳ ಮಧ್ಯೆ ನಡೆಯುತ್ತಿದ್ದ ಶೀತಲ ಸಮರವನ್ನು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು ಕಳೆದ ಅಕ್ಟೋಬರ್‌ 17ರಂದೇ ಬಯಲುಗೊಳಿಸಿದ್ದರು. ಈ ಕುರಿತು ಸರಣಿ ಟ್ವೀಟ್‌ ಮಾಡಿದ್ದ ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು, ಫೌಂಡೇಷನ್‌ನ ಒಳಗುಟ್ಟುಗಳನ್ನು ಸಾರ್ವಜನಿಕ ವಲಯದಲ್ಲಿ ಮುನ್ನೆಲೆಗೆ ತಂದಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts