ಪೋಷಕರನ್ನು ಅವಮಾನಿಸಿದ್ದ ಡಿ ಸಿ; ‘ದಿ ಫೈಲ್‌’ ವರದಿ ವಿಸ್ತರಿಸಿದ ವಿಜಯವಾಣಿ, ಪ್ರಜಾವಾಣಿ

ಬೆಂಗಳೂರು; ಶಾಲಾ ಶುಲ್ಕ ನಿಗದಿ ಕುರಿತು ಅಸಮಾಧನ ವ್ಯಕ್ತಪಡಿಸಿ ದೂರು ನೀಡಿದ್ದ ಪೋಷಕರನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ್‌ ಅವರು ಅವಮಾನಿಸಿದ್ದರು ಎಂಬ ಸಂಗತಿಯನ್ನು ‘ದಿ ಫೈಲ್‌’ ಬಹಿರಂಗಗೊಳಿಸುತ್ತಿದ್ದಂತೆ ಪೋಷಕರ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆಯಲ್ಲದೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇದೀಗ ವಿಜಯವಾಣಿ ಪತ್ರಿಕೆಯೂ ‘ದಿ ಫೈಲ್‌’ ವರದಿಯನ್ನು ವಿಸ್ತರಿಸಿದೆಯಲ್ಲದೆ ವರದಿಯಲ್ಲಿದ್ದ ಶೀರ್ಷಿಕೆಯನ್ನೂ ಹಾಗೇ ಉಳಿಸಿಕೊಂಡು ಸಹಭಾಗಿ ಪತ್ರಿಕೋದ್ಯಮವನ್ನೂ ವಿಸ್ತರಿಸಿದೆ. ಅದೇ ರೀತಿ ಪ್ರಜಾವಾಣಿಯೂ ವರದಿಯನ್ನು ವಿಸ್ತರಿಸಿದೆ.

ಬೇರೊಂದು ಮಾಧ್ಯಮದಲ್ಲಿ ಪ್ರಕಟವಾಗುವ ಸಾರ್ವಜನಿಕ ಹಿತಾಸಕ್ತಿಯ ವರದಿಯನ್ನು ಮುಖ್ಯವಾಹಿನಿಯ ಮಾಧ್ಯಮಗಳು ಪ್ರಕಟಿಸುವ ಮೂಲಕ ಆಡಳಿತ ಇಲಾಖೆಯ ಮುಖ್ಯಸ್ಥರನ್ನು ಎಚ್ಚರಿಸಲು ನೆರವಾಗಲಿದೆ. ಈ ನಿಟ್ಟಿನಲ್ಲಿ ವಿಜಯವಾಣಿ ಪತ್ರಿಕೆಯೂ ಸಹಭಾಗಿ ಪತ್ರಿಕೋದ್ಯಮದ ಆಶಯವನ್ನು ಮತ್ತಷ್ಟು ಬಲಪಡಿಸಿದೆ.

‘ಹೇಯ್‌ ಸುಮ್ನೆ ಕುತ್ಕೋಳಯ್ಯ, ಎಷ್ಟು ಮಾತಾಡ್ತಿಯಾ, ಯಾವ ಡಿಪಾರ್ಟ್‌ಮೆಂಟ್‌ ನಿಂದು? ನಿಂಗೆ ಬಿಟ್ಟಿ ಎಜುಕೇಷನ್‌ ಬೇಕಾ? ಫೀಸ್‌ ಕಟ್ಟೋಕೆ ಆಗೋಲ್ವಾ? ಎಂತಾ ಪೇರೆಂಟ್ಸ್‌ ನೀವು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ್‌ ಅವರು ಬೆದರಿಸಿದ್ದರಲ್ಲದೆ ಅವಮಾನಿಸಿದ್ದಾರೆ ಎಂದು ಪೋಷಕರು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಈ ದೂರಿನ ಆಧಾರದ ಮೇಲೆ ‘ದಿ ಫೈಲ್‌’ 2021ರ ನವೆಂಬರ್‌ 22ರಂದು ವರದಿಯನ್ನು ಪ್ರಕಟಿಸಿದ್ದನ್ನು ಸ್ಮರಿಸಬಹುದು.

ಬೆಂಗಳೂರು ನಗರ ಜಿಲ್ಲೆಯ ಶಿಕ್ಷಣ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷ ಹಾಗೂ ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ್‌. ಶಾಲಾ ಶುಲ್ಕ ನಿಗದಿ ಸಂಬಂಧ ಜಿಲ್ಲಾ ಸಮಿತಿಯು ಯಾವುದೇ ಕ್ರಮ ವಹಿಸದೇ ವಿಳಂಬ ಎಸಗಿದ್ದರೂ ದೂರುದಾರ ಪೋಷಕರನ್ನೇ ಅವಮಾನಿಸಿ, ಬೆದರಿಸಿ ಮಾನಸಿಕ ಕಿರುಕುಳ ನೀಡಿದ್ದಾರೆ ಎಂಬ ಪ್ರಕರಣವನ್ನು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ಗಂಭೀರವಾಗಿ ಪರಿಗಣಿಸಿದೆ.

ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಇಡುತ್ತಿರುವ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಪರವಾಗಿಯೇ ಜೆ ಮಂಜುನಾಥ್‌ ಅವರು ನಿಂತಿದ್ದಾರಲ್ಲದೇ ಹೆಚ್ಚಿನ ಶುಲ್ಕಕ್ಕೆ ಬೇಡಿಕೆ ಇರಿಸಿದ್ದ ಕುರಿತು ಸಮಿತಿ ಮುಂದೆ ಅಹವಾಲು ಮಂಡಿಸಿದ್ದ ಪೋಷಕರನ್ನೇ ಅವಮಾನಿಸಿದ್ದರು ಎಂಬ ಆರೋಪ ಕುರಿತಾದ ಪ್ರಕರಣವನ್ನು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ವಿಚಾರಣೆಗೆ ಕೈಗೆತ್ತಿಕೊಂಡಿದೆ. ಈ ಸಂಬಂಧ ಆಯೋಗದ ಸದಸ್ಯ ಆರ್‌ ಕೆ ದತ್ತಾ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ 2021ರ ಸೆಪ್ಟಂಬರ್‌ 7ರಂದು ನೋಟೀಸ್‌ ಜಾರಿಗೊಳಿಸಿತ್ತು.

ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಇಡುತ್ತಿರುವ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ವಹಿಸಬೇಕಿದ್ದ ಜೆ ಮಂಜುನಾಥ್‌ ಅವರು ಪೋಷಕರ ಮೂಲಭೂತ ಹಕ್ಕನ್ನೂ ಉಲ್ಲಂಘಿಸಿದ್ದಾರೆ. ಜಿಲ್ಲಾ ಸಮಿತಿಯು ನಿಗದಿಪಡಿಸಿರುವ ಶುಲ್ಕ ಪಾವತಿಸಿಕೊಳ್ಳುವಂತೆ ಆದೇಶಿಸಬೇಕಿದ್ದ ಮಂಜುನಾಥ್‌ ಅವರು ಪೋಷಕರನ್ನು ಅವಮಾನಿಸಿದ್ದಾರೆ ಎಂಬ ಪ್ರಕರಣದ ಕುರಿತು ವರದಿ ನೀಡಲು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ಸರ್ಕಾರಕ್ಕೆ ಸೂಚಿಸಿತ್ತು.

ಜಿ ರವಿಕುಮಾರ್‌, ಲಕ್ಷ್ಮಿನಾರಾಯಣ ಮತ್ತು ಡಾ ಅರುಣ್‌ಕುಮಾರ್‌ ಜಿ ಎಂಬುವರು ಶ್ರೀ ವಾಣಿ ಎಜುಕೇಷನ್‌ ಸೆಂಟರ್‌ ಶಾಲೆ ಆಡಳಿತ ಮಂಡಳಿ ವಿರುದ್ಧ ಜಿಲ್ಲಾ ಸಮಿತಿ ಮುಂದೆ ದೂರನ್ನು ನೀಡಿತ್ತು. ಈ ದೂರನ್ನು ಆಲಿಸಿದ್ದ ಜಿಲ್ಲಾ ಸಮಿತಿಯ ಅಧ್ಯಕ್ಷ ಜಿಲ್ಲಾಧಿಕಾರಿ ಜೆ ಮಂಜುನಾಥ್‌ ಅವರು ಪೋಷಕರನ್ನೇ ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದ ಪೋಷಕರು ಅವರಿಬ್ಬರ ಮಧ್ಯೆ ನಡೆದಿದ್ದ ಸಂಭಾಷಣೆಯನ್ನೂ ದೂರಿನಲ್ಲಿ ಪ್ರಸ್ತಾಪಿಸಿದ್ದರು.

ಸಮಿತಿ ಮುಂದೆ ಅಹವಾಲು ಮಂಡಿಸಿದ್ದ ಸಂದರ್ಭದಲ್ಲಿ ಜೆ ಮಂಜುನಾಥ್‌ ಅವರು ದೂರುದಾರ ಪೋಷಕರನ್ನು ನಡೆಸಿಕೊಂಡ ರೀತಿ ಕುರಿತು ದೂರಿನಲ್ಲಿ ವಿವರವಾಗಿ ಪ್ರಸ್ತಾಪಿಸಲಾಗಿದೆ. ‘ ನಿಮ್ಗೆ ಈ ಮೂರು ಮಕ್ಕಳಿಗೆ ಆನ್‌ಲೈನ್‌ ಕ್ಲಾಸ್‌ ಕೊಡೋಕೆ ಆದ್ರೆ ಕೊಡಿ, ಫೀಸ್‌ ಕಟ್ಟಿಲ್ಲ ಅಂದ್ರೆ ಆನ್‌ಲೈನ್‌ ಕ್ಲಾಸ್‌ ಸ್ಟಾಪ್‌ ಮಾಡುವದಿದ್ರೆ ಮಾಡಿ. ನಿಮ್ದು ಪ್ರೈವೈಟ್‌ ಸ್ಕೂಲ್‌ ಅಲ್ವಾ? ನಿಮ್ಗೆ ಸರ್ಕಾರಿ ರೂಲ್ಸ್‌ ಅಪ್ಲೈ ಆಗುತ್ತಾ? ಇಲ್ಲ. ಯು ಟೇಕ್‌ ಎ ಸ್ಟ್ಯಾಂಡ್‌. ನೀವು ಒಂದು ಹೆಜ್ಜೆ ಮುಂದೆ ಇಟ್ಟು ಎರಡು ಹೆಜ್ಜೆ ಹಿಂದೆ ಇಡ್ತೀರ? ಯು ಟೇಕ್‌ ಎ ಸ್ಟ್ಯಾಂಡ್‌,’ ಎಂದು ಶಾಲಾ ವಕೀಲರಿಗೆ ಸಲಹೆ ನೀಡಿದ್ದಾರೆ ಎಂಬುದು ದೂರಿನಲ್ಲಿ ಉಲ್ಲೇಖಿಸಿದ್ದರು.

ಜಿಲ್ಲಾಧಿಕಾರಿ ಮಾತುಗಳಿವು


ಹೇಯ್‌ ಸುಮ್ನೆ ಕುತ್ಕೂಳಯ್ಯ, ಎಷ್ಟು ಮಾತಾಡ್ತಿಯಾ? ಯಾವ್‌ ಡಿಪಾರ್ಟ್‌ಮೆಂಟ್‌ ನಿಂದು?


ಐ ಯಾಮ್‌ ಡೆಪ್ಯುಟಿ ಕಮಿಷನರ್‌ ಸ್ಪೀಕಿಂಗ್‌


ನಿಂಗೆ ಬಿಟ್ಟಿ ಎಜುಕೇಷನ್‌ ಬೇಕಾ?


ನಿಂಗೆ ಫೀಸ್‌ ಕಟ್ಟೋಕೆ ಆಗಲ್ವಾ?


ಸರ್ಕಾರಿ ಸ್ಕೂಲ್‌ ಆಪ್ಷನ್‌ ಇತ್ತಲ್ಲಾ ಸೇರಿಸಬೇಕಾಗಿತ್ತು


ನಿಂಗೆ ಸಂಬಳ ಕೊಡೋದು ಯಾಕೆ?


ನಿನ್ನ ಸಂಬಳ ಕಟ್‌ ಮಾಡಿಸ್ತೀನಿ


ಸುಮ್ನೆ ಬಂದು ನಮ್‌ ಟೈಂ ವೇಸ್ಟ್‌ ಮಾಡಿಸ್ತೀರ


ನೀನು ಡಾಕ್ಟರ್‌ ಅಂತೀಯ, ಎಷ್ಟು ನಿನ್ನ ಸಂಬಳ
ನಿನ್‌ ಮೇಲೆ ಯಾಕೆ ಕ್ರಮ ತಗೋಬಾರ್ದು?


ನಿಮ್ದು ಬರೀ ಪ್ರತಿಷ್ಠೆ, ಎಂತಾ ಪೇರೆಂಟ್ಸ್‌ ನೀವೆಲ್ಲಾ ?


ಡೇರಾ ಹೇಗೆ ಸ್ಕೂಲ್‌ ಫೀಸ್‌ ಫಿಕ್ಸ್‌ ಮಾಡೋಕೆ ಅಗುತ್ತೇ?


ನಿಮ್ಗೆ ಎರಡು ಆಪ್ಷನ್‌ ಕೊಡ್ತೀನಿ, ಶೇ.40ರಷ್ಟು ಫೀಸ್‌ ಕಟ್ಟಿ, ಇಲ್ಲಾಂದ್ರೆ ಪೂರ್ತಿ ಫೀಸ್‌ ಕಟ್ಟಿ, ಆಮೇಲೆ ಫೀಸ್‌ ಫಿಕ್ಸ್‌ ಮಾಡುವುದರ ಬಗ್ಗೆ ನೋಡೋಣ


ಫೀಸ್‌ ಕಟ್ಟಿಲ್ಲ ಅಂದ್ಮೇಲೆ ನಿಂಗೆ ಏನ್‌ ರೈಟ್ಸ್‌ ಇದೆ ಕಂಪ್ಲೇಟ್‌ ಕೊಡೋಕೆ?


ಹೇಯ್‌ ನೀನ್‌ ಯಾವ ಅಥಾರಿಟಿ ಡಿಸೈಡ್‌ ಮಾಡಲು, ಇಲ್ಲಿ ನಾನೇ ಫೈನಲ್‌ ಅಥಾರಿಟಿ
ನಿಮ್ದು ಬರೀ ಒಣ ಪ್ರತಿಷ್ಠೆ, ಎಂತಾ ಪೇರೆಂಟ್ಸ್‌ ನೀವೆಲ್ಲಾ?


ನಿಂಗೆ ಸಂಬಳ, ಡಿ ಎ ಯಾಕೆ ಕೊಡ್ತಾರೆ?


ಏನಪ್ಪಾ ಡಾಕ್ಟರ್‌ ಅಂತೀಯ, ಹೋಗಿ ನಿನ್ನ ಡ್ಯೂಟಿ ಮಾಡು, ಕೋವಿಡ್‌ ಕಂಟ್ರೋಲ್‌ ಮಾಡೋಕೆ ವ್ಯಾಕ್ಸಿನ್‌ ಕೊಡು, ಇಲ್ಲಿ ಏನ್‌ ಮಾಡ್ತಿಯಾ


ಡಾಕ್ಟರ್‌ ಆಗಿ ನೀನು ಈ ತರ ಫೈಟ್‌ ಯಾಕೆ ಮಾಡ್ತೀಯಾ? ಬೇರೆ ಫೈಟ್‌ ಮಾಡು


ನಿಂಗೆ ಮಗು ಫೀಸ್‌ ಕಟ್ಟೋಕೆ ಆಗಲ್ವಾ?


ನಿಮ್‌ ಮಕ್ಳು ಏನ್‌ ಪಾಪ ಮಾಡಿವೆ?

ಇವಿಷ್ಟು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ್‌ ಅವರು ಸಭೆಯಲ್ಲಿ ಪೋಷಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ವಿವರವಾಗಿ ಪ್ರಸ್ತಾಸಿದ್ದರು.

‘ಸಾಮಾನ್ಯ ಪ್ರಜೆಯಾದರೂ ಗೌರವಿಸಲ್ಪಡುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು. ಜಿಲ್ಲಾಧಿಕಾರಿ ಜೆ ಮಂಜುನಾಥ್‌ ಅವರು ಅದನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿದ್ದೂ ಅಲ್ಲದೆ ಫೀ ನಿಗದಿಪಡಿಸುವ ಬದಲು ವಿಳಂಬ ನೀತಿ ಅನುಸರಿಸಿ ಕರ್ತವ್ಯ ಲೋಪವೆಸಗಿದ್ದಾರೆ. ಕಾನೂನಾತ್ಮಕವಾಗಿ ಎರಡು ವರ್ಷದ ಹಿಂದೆಯೇ ಡೇರಾದಲ್ಲಿ ಫೀ ನಿಗದಿಯಾಗಿದ್ದರೆ ನಾವು ಶಾಲಾ ಶುಲ್ಕ ಭರಿಸುತ್ತಿದ್ದೆವು. ನಮಗೂ ನಮ್ಮ ಮಕ್ಕಳಿಗೂ ಈ ರೀತಿಯ ಹಿಂಸೆಯಾಗುತ್ತಿರಲಿಲ್ಲ,’ ಎಂದು ಮಾನವ ಹಕ್ಕುಗಳ ಆಯೋಗಕ್ಕೆ ನೀಡಿರುವ ದೂರಿನಲ್ಲಿ ವಿವರಿಸಿದ್ದರು.

ಅಲ್ಲದೆ ‘ಈ ಅಮಾನವೀಯ ಘಟನೆಯಿಂದ ನಮಗಾದ ಮಾನಸಿಕ ಹಿಂಸೆ, ಅನುಭವಿಸಿದ ನರಕಯಾತನೆ ಅಷ್ಟಿಷ್ಟಲ್ಲ. ಡೇರಾ ಸಭೆಯು ನಡೆದ ಆ ದಿನದಂದು ನಮ್ಮ ದೂರಿಗೆ ಸಂಬಂಧಪಟ್ಟ ಯಾವುದೇ ಪ್ರಸಕ್ತತೆಯುಳ್ಳ ವಿಷಯವು ಚರ್ಚೆಯಾಗದೇ ಬಿಇಒ ಅವರು ಶುಲ್ಕ ನಿಗದಿಪಡಿಸಿದ ಸಂಬಂಧಪಟ್ಟ ದಾಖಲೆಗಳನ್ನು ತರದೇ ಉದಾಸೀನ ಮಾಡಿರುವ ಬಗೆಗಾಗಲೇ ಪ್ರಸ್ತಾಪ ಮಾಡದೆ ಶುಲ್ಕವನ್ನು ನಿಗದಿಪಡಿಸದೇ ಬರೀ ನಮ್ಮನ್ನು ಬೆದರಿಸಿ ಅವಮಾನಗೊಳಿಸಲು ಸೀಮಿತವಾಗಿದ್ದು ಎರಡು ವರ್ಷ ವಿಳಂಬ ಮಾಡಿದ್ದೂ ಅಲ್ಲದೇ ವೃಥಾ ಕಾಲಹರಣ ಮಾಡಿ ನಮ್ಮ ಅತ್ಯಮೂಲ್ಯ ಸಮಯವನ್ನು ವ್ಯರ್ಥ ಮಾಡಿರುತ್ತಾರೆ,’ ಎಂದು ದೂರಿನಲ್ಲಿ ಆರೋಪಿಸಿದ್ದರು.

the fil favicon

SUPPORT THE FILE

Latest News

Related Posts