ತಡವಾಗಿ ಆಗಮನ, ಹಾಜರಾತಿಯಲ್ಲಿ ಸಹಿಯಿಲ್ಲ, ಶಿಸ್ತಿಲ್ಲ; ಕಚೇರಿಗಳಲ್ಲಿ ಆಡಿದ್ದೇ ಆಟ ಹೂಡಿದ್ದೇ ಲಗ್ಗೆ

ಬೆಂಗಳೂರು; ಸಚಿವಾಲಯದ ಎಲ್ಲಾ ಇಲಾಖೆಗಳ ಅಧಿಕಾರಿ ಮತ್ತು ನೌಕರರು ನಿಗದಿತ ಸಮಯಕ್ಕೆ ಕಚೇರಿಗೆ ಹಾಜರಾಗುತ್ತಿಲ್ಲ. ಅಲ್ಲದೆ ತಡವಾಗಿ ಕಚೇರಿಗೆ ಆಗಮಿಸಿದರೂ ನಿಗದಿಪಡಿಸಿರುವ ಅವಧಿವರೆಗೆ ಕಾರ್ಯನಿರ್ವಹಿಸುತ್ತಿಲ್ಲ. ಹಾಜರಾತಿಯನ್ನೂ ದಾಖಲಿಸುತ್ತಿಲ್ಲ.

ಇವಿಷ್ಟೂ ಕರ್ನಾಟಕ ಸರ್ಕಾರದ ಸಚಿವಾಲಯದ ಅಧಿಕಾರಿ ನೌಕರರ ಬೇಜವಾಬ್ದಾರಿ ವರ್ತನೆಗಳು. ಸಾರ್ವಜನಿಕ ಆಡಳಿತದ ಮೇಲೆ ಮುಖ್ಯಮಂತ್ರಿ ಮತ್ತು ಮುಖ್ಯಕಾರ್ಯದರ್ಶಿ ಹಿಡಿತ ಕಳೆದುಕೊಂಡಿರುವುದೇ ಇದಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿಯೇ ಅಧಿಕಾರಿ, ನೌಕರರು ತಮಗಿಷ್ಟ ಬಂದಂತೆ ಕಚೇರಿಗೆ ಆಗಮಿಸುತ್ತಿದ್ದಾರೆ, ನಿಗದಿತ ಕಾಲಾವಧಿಗೂ ಮುನ್ನವೇ ಕಚೇರಿಗಳಿಂದ ಹೊರನಡೆಯುತ್ತಿದ್ದಾರೆ.

ಸಚಿವಾಲಯದ ಇಲಾಖೆಗಳಲ್ಲಿ ಅಧಿಕಾರಿ, ನೌಕರರದ್ದು ಆಡಿದ್ದೇ ಆಟ, ಹೂಡಿದ್ದೇ ಲಗ್ಗೆ ಎಂಬಂತಾಗಿದ್ದರೂ ಮುಖ್ಯ ಕಾರ್ಯದರ್ಶಿ ಕೇವಲ ಪತ್ರ ಬರೆದು ಕೈತೊಳೆದುಕೊಂಡಿದ್ದಾರೆಯೇ ವಿನಃ ತಡವಾಗಿ ಆಗಮಿಸಿದ, ಸಹಿ ಹಾಕದ ಮತ್ತು ನಿಗದಿತ ಅವಧಿಯವರೆಗೆ ಕಾರ್ಯನಿರ್ವಹಿಸದ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.

ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಸಂಬಂಧ ಪಟ್ಟು ಹಿಡಿಯುವ ಅಧಿಕಾರಿ, ನೌಕರರು ಇಲಾಖೆಗಳಲ್ಲಿ ನಿಗದಿತ 7.30 ಗಂಟೆಗಳ ಕಾಲ ಕಾರ್ಯನಿರ್ವಹಿಸದಿರುವುದು ಸಾರ್ವಜನಿಕ ಆಡಳಿತ ಹಳಿ ತಪ್ಪಿದೆ ಎಂಬುದನ್ನು ಸಾಕ್ಷ್ಯೀಕರಿಸಿದೆ. ಬಿಜೆಪಿಯಿಂದ ಜನ ಸ್ವರಾಜ್‌ ಸಮಾವೇಶ ನಡೆಯುತ್ತಿರುವ ಬೆನ್ನಲ್ಲೇ ಸಚಿವಾಲಯದ ಅಧಿಕಾರಿ, ನೌಕರರ ಬೇಜವಾಬ್ದಾರಿ ವರ್ತನೆ ಬಹಿರಂಗವಾಗಿದೆ.

ಅಧಿಕಾರಿ ನೌಕರರ ಈ ಬೇಜವಾಬ್ದಾರಿ ವರ್ತನೆ ಕುರಿತು ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್‌ ಅವರು 2021ರ ನವೆಂಬರ್‌ 16ರಂದು ಅಧಿಕಾರಿ ನೌಕರರಿಗೆ ಮತ್ತು ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಾರ್ಯದರ್ಶಿ, ಆಯುಕ್ತರು, ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಸರ್ಕಾರಿ ಅಧಿಕಾರಿ ನೌಕರರ ಕಾರ್ಯನಿರ್ವಹಣೆ ಸಂಬಂಧ ಕೆಸಿಎಸ್‌ಆರ್‌ ನಿಯಮಗಳನ್ನು ರೂಪಿಸಲಾಗಿದೆ. ಆದರೆ ಈ ಯಾವ ನಿಯಮಗಳನ್ನೂ ಅಧಿಕಾರಿ ನೌಕರರು ಪಾಲಿಸುತ್ತಿಲ್ಲ. ನಿಯಮ ಪಾಲನೆ ಸಂಬಂಧ ಹೊರಡಿಸಿರುವ ಸರ್ಕಾರದ ಆದೇಶಗಳು ಮತ್ತು ಸುತ್ತೋಲೆಗಳನ್ನು ಅಧಿಕಾರಿ ನೌಕರರು ಗಾಳಿಗೆ ತೂರಿ ಇಚ್ಚೆ ಬಂದಂತೆ ಕಚೇರಿಗೆ ಹಾಜರಾಗುತ್ತಿದ್ದಾರೆ ಎಂಬ ಸಂಗತಿಯು ಮುಖ್ಯ ಕಾರ್ಯದರ್ಶಿ ಬರೆದಿರುವ ಪತ್ರದಿಂದ ಗೊತ್ತಾಗಿದೆ.

ಮುಖ್ಯಕಾರ್ಯದರ್ಶಿಗಳ ಪತ್ರದಲ್ಲೇನಿದೆ?


ಬಹುತೇಕ ಅಧಿಕಾರಿ/ಸಿಬ್ಬಂದಿಗಳು ಕಚೇರಿಗೆ ತಡವಾಗಿ ಆಗಮಿಸುತ್ತಿರುವುದನ್ನುಮತ್ತು ನಿಗದಿತ 7.30 ಗಂಟೆಗಳಷ್ಟು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ಗಮನಿಸಲಾಗಿದೆ.

ವರ್ಗಾವಣೆಯಾದ, ಮುಂಬಡ್ತಿಯಾದ ಬಹುತೇಕ ಅಧಿಕಾರಿ/ಸಿಬ್ಬಂದಿಗಳ ಬಯೋಮೆಟ್ರಿಕ್‌ ಹಾಜರಾತಿಯನ್ನು ಅವರುಕಾರ್ಯನಿರ್ವಹಿಸುತ್ತಿರುವ ಇಲಾಖೆಯಲ್ಲಿ ದಾಖಲಿಸುತ್ತಿಲ್ಲ. ಬಹುತೇಕ ಅಧಿಕಾರಿ/ಸಿಬ್ಬಂದಿಗಳು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡುತ್ತಿಲ್ಲ.

ಅಧಿಕಾರಿಗಳು ಫ್ಲೆಕ್ಸಿ ಸೌಲಭ್ಯವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ಹಾಗೂ ತಿಂಗಳಿನಲ್ಲಿ ಬಹುತೇಕ ಮಿಸ್ಡ್‌ ಫ್ಲಾಶ್‌ಗಳನ್ನು ಸರಿಪಡಿಸಿಕೊಳ್ಳುತ್ತಿರುವುದನ್ನು ಗಮನಿಸಲಾಗಿದೆ.

ನಿವೃತ್ತಿ ಹೊಂದಿರುವ, ಮೃತಪಟ್ಟ ಅಧಿಕಾರಿ/ಸಿಬ್ಬಂದಿಗಳ ಹೆಸರುಗಳನ್ನು ತೆಗೆದು ಹಾಕಿರುವುದಿಲ್ಲ. ರಜೆ ಸೌಲಭ್ಯವನ್ನು ಪಡೆಯಲು ಇ-ಲೀವ್‌ ತಂತ್ರಾಂಶವನ್ನು ಕಡ್ಡಾಯವಾಗಿ ಉಪಯೋಗಿಸಿಕೊಳ್ಳುವಂತೆ ಸೂಚನೆ ನೀಡಿದ್ದರೂ ಸಹ ಈಗಲೂ ಭೌತಿಕ ರಜೆ ಅರ್ಜಿಗಳನ್ನು ಸಲ್ಲಿಸುತ್ತಿರುವುದು ಕಂಡು ಬಂದಿದೆ.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಮರು ಗಳಿಗೆಯೇ ಆಡಳಿತಕ್ಕೆ ಚುರುಕು ಮುಟ್ಟಿಸುವುದಾಗಿ ಹೇಳಿಕೆ ನೀಡಿದ್ದರು. ಚಲ್ತಾ ಹೈ ಎಂಬ ವರ್ತನೆ ಇನ್ನು ಮುಂದೆ ನಡೆಯುವುದಿಲ್ಲ ಎಂದೂ ಎಚ್ಚರಿಕೆ ಸಂದೇಶವನ್ನೂ ರವಾನಿಸಿದ್ದರು. ಬಸವರಾಜ ಬೊಮ್ಮಾಯಿ ಅವರು 100 ದಿನ ಪೂರ್ಣಗೊಳಿಸಿದ ನಂತರವೂ ಯಾವುದೇ ಅಡೆ ತಡೆ ಇಲ್ಲದೆಯೇ ಅಧಿಕಾರಿ, ನೌಕರರ ಬೇಜವಾಬ್ದಾರಿ ವರ್ತನೆಯನ್ನು ಪ್ರದರ್ಶಿಸುತ್ತಲೇ ಬಂದಿದ್ದಾರೆ.

ಇನ್ನು ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಕಡತಗಳು ವಿಲೇವಾರಿಯಾಗುತ್ತಿಲ್ಲ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿರುವ ಬೆನ್ನಲ್ಲೇ 18 ಇಲಾಖೆಗಳ ಮುಖ್ಯಸ್ಥರ ಹಂತದಲ್ಲೇ 31,308 ಕಡತಗಳು ವಿಲೇವಾರಿಯಾಗಿಲ್ಲ ಎಂಬುದು ಬಹಿರಂಗವಾಗಿತ್ತು.

18 ಇಲಾಖೆಗಳಲ್ಲಿ 16,543 ಭೌತಿಕ ಕಡತ (ಎಫ್‌ಎಂಎಸ್‌)ಮತ್ತು ಇ- ಆಫೀಸ್‌ ವಿಭಾಗದಲ್ಲಿ 14,765 ಕಡತಗಳು ವಿಲೇವಾರಿಗೆ ಬಾಕಿ ಇವೆ. ಅಕ್ಟೋಬರ್‌ 25ರ ಅಂತ್ಯಕ್ಕೆ ವಿಲೇವಾರಿಯಾಗದೇ ಕಡತಗಳು ಬಾಕಿ ಇರುವ ಸಂಬಂಧ ಇಲಾಖಾವಾರು ಮಾಹಿತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ. ಕಡತಗಳ ವಿಲೇವಾರಿಗೆ ಬಾಕಿ ಉಳಿಸಿಕೊಂಡಿರುವ ಇಲಾಖೆಗಳ ಪೈಕಿ ನಗರಾಭಿವೃದ್ಧಿ ಇಲಾಖೆಯು ಅಗ್ರ ಸ್ಥಾನದಲ್ಲಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts