ಶಾಸಕ ಪ್ರಶಸ್ತಿ; ಬಿಎಸ್‌ವೈ ಓಲೈಕೆಗಿಳಿದು ರಮೇಶ್‌ಕುಮಾರ್‌ ಹೆಸರು ಕೈಬಿಡಲಾಗಿತ್ತೇ?

ಬೆಂಗಳೂರು; ಕರ್ನಾಟಕ ವಿಧಾನಸಭೆಯ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಕಾಂಗ್ರೆಸ್‌ನ ಶಾಸಕ ಹಾಗೂ ಮಾಜಿ ಸ್ಪೀಕರ್‌ ಕೆ ಆರ್‌ ರಮೇಶ್‌ಕುಮಾರ್‌ ಅವರ ಹೆಸರನ್ನೂ ಆಯ್ಕೆ ಸಮಿತಿಯು ಅಂತಿಮಗೊಳಿಸಿತ್ತು. ಕಡೇ ಗಳಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಶಿಕಾರಿಪುರ ಶಾಸಕ ಬಿ ಎಸ್‌ ಯಡಿಯೂರಪ್ಪ ಅವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ನೀಡಲು ಆಯ್ಕೆ ಸಮಿತಿಯು ತೀರ್ಮಾನಿಸಿತ್ತು ಎಂಬ ಅಂಶ ಇದೀಗ ಆರ್‌ಟಿಐನಿಂದ ಬಹಿರಂಗವಾಗಿದೆ.

ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಆಯ್ಕೆ ಮಾಡಿರುವ ಸಂಬಂಧ ‘ದಿ ಫೈಲ್‌’ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಉತ್ತರಿಸಿರುವ ಕರ್ನಾಟಕ ವಿಧಾನಸಭೆ ಸಚಿವಾಲಯವು ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಆಯ್ಕೆ ಮಾಡುವ ಸಂಬಂಧ ಅಖೈರುಗೊಳಿಸಿದ್ದ ಶಾಸಕರ ಪಟ್ಟಿಯನ್ನು ಒದಗಿಸಿಲ್ಲ.

2021ನೆ ಸಾಲಿನ ಕರ್ನಾಟಕ ವಿಧಾನಸಭೆ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಆಯ್ಕೆ ಮಾಡಲು 2021ರ ಸೆಪ್ಟಂಬರ್‌ 21ರಂದು ಸಭೆ ಸೇರಿದ್ದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಸಮಿತಿಯು ವಿಧಾನಸಭೆಯ ಸದಸ್ಯರುಗಳ ಸಾಧನೆಗಳನ್ನು ಪರಿಶೀಲಿಸಿತ್ತು. ಆದರೆ ಯಾವ್ಯಾವ ಶಾಸಕರ ಸಾಧನೆಗಳನ್ನು ಪರಿಶೀಲಿಸಿದೆ ಎಂಬ ಮಾಹಿತಿಯನ್ನು ಆರ್‌ಟಿಐನಲ್ಲಿ ಒದಗಿಸಿಲ್ಲ.

‘ಪ್ರಶಸ್ತಿಗೆ ನಾವು ಹಲವು ಹೆಸರನ್ನು ಪರಿಶೀಲಿಸಿದೆವು. ಅದರೆ, ಆಯ್ಕೆ ಕ್ಲಿಷ್ಟಕರವಾಗಿತ್ತು. ಯಡಿಯೂರಪ್ಪನವರ ಆಯ್ಕೆಯು ಸರ್ವಾನುಮತದಿಂದ ಕೂಡಿದೆ,’ ಎಂದು ಕಾಗೇರಿ ಹೇಳಿದ್ದನ್ನು ಸ್ಮರಿಸಬಹುದು.

‘ಕರ್ನಾಟಕ ವಿಧಾನಸಭೆಯ ಅತ್ಯುತ್ತಮ ಶಾಸಕ ಪ್ರಶಸ್ತಿ’ ನೀಡುವ ವಿಚಾರವಾಗಿ ಸಮಿತಿಯು ವಿಧಾನಸಭೆಯ ಸದಸ್ಯರುಗಳ ಸಾಧನೆಗಳನ್ನು ಪರಿಶೀಲಿಸಿತು. ನಂತರ ಸಭೆಯಲ್ಲಿ ಕರ್ನಾಟಕ ವಿಧಾನಸಭೆಯ ಅತ್ಯುತ್ತಮ ಶಾಸಕ ಪ್ರಶಸ್ತಿಗಾಗಿ ಬಿಜೆಪಿ ಪಕ್ಷದ ಸದಸ್ಯರಾದ ಬಿ ಎಸ್‌ ಯಡಿಯೂರಪ್ಪ ಹಾಗೂ ಕಾಂಗ್ರೆಸ್‌ ಪಕ್ಷದ ಸದಸ್ಯರಾದ ಕೆ ಆರ್‌ ರಮೇಶ್‌ಕುಮಾರ್‌ ಇವರುಗಳ ಹೆಸರುಗಳನ್ನು ಅಂತಿಮಗೊಳಿಸಿ ಇವರಿಬ್ಬರಲ್ಲಿ ಒಬ್ಬ ಸದಸ್ಯರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ನೀಡುವ ಕುರಿತು ತೀರ್ಮಾನವನ್ನು ತೆಗೆದುಕೊಳ್ಳುವ ಅಧಿಕಾರವನ್ನು ಸಭಾಧ್ಯಕ್ಷರಿಗೆ ವಹಿಸಲಾಗಿತ್ತು,’ ಎಂಬುದು ಆರ್‌ಟಿಐ ನಿಂದ ತಿಳಿದು ಬಂದಿದೆ.

ಆಯ್ಕೆಗೆ ಮಾರ್ಗಸೂಚಿಗಳೇನು?

ವಿಧಾನಸಭಾ ಸದಸ್ಯರು ಸಾರ್ವಜನಿಕ ಜೀವನದಲ್ಲಿ ಶಾಸಕರಾಗಿ ಮತಕ್ಷೇತ್ರಕ್ಕೆ ನೀಡಿರುವ ಕೊಡುಗೆಯ ಪರಿಗಣನೆ

ತಮ್ಮ ಮತ ಕ್ಷೇತ್ರಗಳಲ್ಲಿ ಶಾಸಕರಾಗಿ ಕಾರ್ಯನಿರ್ವಹಿಸಿ ಗಳಿಸಿರುವ ಅನುಭವದ ಪರಿಗಣನೆ

ಸದನದಲ್ಲಿ ನಡೆಯುವ ಚರ್ಚೆಗಳಲ್ಲಿ ಸದಸ್ಯರು ತೋರಿಸುವ ಕೌಶಲ್ಯ

ಸಾರ್ವಜನಿಕ ಹಿತಾಸಕ್ತಿ ಇರುವಂತಹ ವಿಷಯಗಳ ಬಗ್ಗೆ ಸದಸ್ಯರಿಗೆ ಇರುವ ಆಸಕ್ತಿ

ಸದನದಲ್ಲಿ ಸದಸ್ಯರು ಪ್ರಸ್ತಾಪಿಸುವ ವಿಷಯ ಹಾಗೂ ಅದರ ಗಂಭೀರತೆಯ ಪರಿಗಣನೆ

ಸದನದಲ್ಲಿ ವಿಷಯಗಳನ್ನು ಪ್ರಸ್ತುತಪಡಿಸುವ ವಿಧಾನ ಹಾಗೂ ಸದನದ ಸಂಪ್ರದಾಯಗಳ ಬಗ್ಗೆ ಅವರಿಗೆ ಇರುವ ಮನೋಭಾವನೆ

ಕನ್ನಡ ಭಾಷೆಯಲ್ಲಿ ಹೊಂದಿರುವ ಪಾಂಡಿತ್ಯ

ಸದನದ ಒಳಗೆ ಹಾಗೂ ಹೊರಗೆ ವಿಧಾನಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆ ನಿಯಮಗಳ ಅರಿವು, ಅವುಗಳ ಪಾಲನೆ

ಸಭಾಧ್ಯಕ್ಷರು ನೀಡುವ ಸೂಚನೆಗಳನ್ನು ಅನುಸರಿಸಲು ಗ್ರಹಿಸುವಲ್ಲಿನ ಸಾಮರ್ಥ್ಯ

ವಿಧಾನಮಂಡಲದ/ವಿಧಾನಸಭೆಯ ಸಮಿತಿಗಳಲ್ಲಿನ ಭಾಗವಹಿಸುವಿಕೆ

ಶಾಸಕರಾಗಿ ಸದನದ ಒಳಗೆ ಹಾಗೂ ಹೊರಗೆ ಸದಸ್ಯರ ನಡವಳಿಕೆ

ಸದನದಲ್ಲಿ ಹಾಜರಾತಿ

ಇತರೆ ಸದಸ್ಯರುಗೊಳೊಂದಿಗೆ ತೋರ್ಪಡಿಸುವ ಸೌಹಾರ್ದಯುತ ಸಂಬಂಧ ಸದನದಲ್ಲಿ ಕೇಳಲಾದ ಪ್ರಶ್ನೆಗಳ ಗುಣಮಟ್ಟ, ವ್ಯಾಪ್ತಿ ಮತ್ತು ಪ್ರಸ್ತುತಪಡಿಸುವ ವಿಧಾನ

ಸದನದಲ್ಲಿ ಉಂಟಾಗುವ ಪ್ರತಿರೋಧದ ಪರಿಸ್ಥಿತಿಗಳ ಕಾರ್ಯನಿರ್ವಹಣೆ ಸಂದರ್ಭದಲ್ಲಿ ತೋರಿಸುವ ಸಹಕಾರ

ಪ್ರಶಸ್ತಿಗೆ ಆಯ್ಕೆ ಮಾಡುವ ಸಮಿತಿಯು ವಿಧಾನಸಭೆ ಸದಸ್ಯರ ಜೇಷ್ಠತೆಯನ್ನು ಪರಿಶೀಲಿಸಿರುವುದು ಗೊತ್ತಾಗಿದೆ. ಮಾರ್ಗಸೂಚಿಗಳ ಅನ್ವಯ ಪ್ರಶಸ್ತಿಗೆ ಶಾಸಕರುಗಳ ಪಟ್ಟಿಯನ್ನು ತಯಾರಿಸಲಾಗಿತ್ತೇ ಅಥವಾ ಇಲ್ಲವೇ ಎಂಬುದನ್ನು ವಿಧಾನಸಭೆ ಸಚಿವಾಲಯವು ಆರ್‌ಟಿಐನಲ್ಲಿ ಮಾಹಿತಿ ಒದಗಿಸಿಲ್ಲ.

ಸ್ಪೀಕರ್‌ ಕಾಗೇರಿ ನೇತೃತ್ವದ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ಸಚಿವ ಜೆಸಿ ಮಾಧುಸ್ವಾಮಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಹಿರಿಯ ಕಾಂಗ್ರೆಸ್ ಶಾಸಕ ಆರ್.ವಿ.ದೇಶಪಾಂಡೆ ಅವರು ಸಮಿತಿಯ ಸದಸ್ಯರಾಗಿದ್ದರು.

the fil favicon

SUPPORT THE FILE

Latest News

Related Posts