ತರಳಬಾಳು ಮಠದ ಪೀಠಾಧಿಪತಿ ವಿರುದ್ಧದ ಅಸಲು ದಾವೆ; ವಿಚಾರಣೆಗೆ ನ್ಯಾಯಾಲಯ ಅಂಗೀಕಾರ

ಬೆಂಗಳೂರು; ರಾಜ್ಯದ ಲಿಂಗಾಯತ ಮಠಗಳಲ್ಲೊಂದಾದ ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ತರಳಬಾಳು ಮಠದ ಪೀಠಾಧಿಪತಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಶ್ರೀಮತ್‌ ಸಾಧು ಸದ್ಧರ್ಮ ವೀರಶೈವ ಸಂಘ, ತರಳಬಾಳು ವಿದ್ಯಾಸಂಸ್ಥೆ ವಿರುದ್ಧ ಮಠದ ಭಕ್ತರು ಸಲ್ಲಿಸಿದ್ದ ಅಸಲು ದಾವೆಯನ್ನು ವಿಚಾರಣೆಗೆ ಅರ್ಹ ಎಂದು ಚಿತ್ರದುರ್ಗ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯವು ಪ್ರಾಥಮಿಕವಾಗಿ ಅಂಗೀಕರಿಸಿರುವುದು ಇದೀಗ ಬಹಿರಂಗವಾಗಿದೆ.

ಭೂ ಕಬಳಿಕೆ ಹಾಗೂ 19 ಕೋಟಿ ಪಡೆದಿರುವ ಹಣದ ಲೆಕ್ಕವನ್ನು ನೀಡುತ್ತಿಲ್ಲ ಎಂದು ಮಠದ ಭಕ್ತರು ಮಾಡಿದ್ದ ಆರೋಪ ಮತ್ತು ಭೂ ಕಬಳಿಕೆ ಆರೋಪವನ್ನು ಸಾಬೀತುಪಡಿಸಿ ಎಂದು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಸವಾಲು ಎಸೆದಿರುವ ಬೆನ್ನಲ್ಲೇ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯವು ಅಂಗೀಕರಿಸಿರುವ ಅಸಲು ದಾವೆಯೂ ಮುನ್ನೆಲೆಗೆ ಬಂದಿದೆ.

ಮಠದ ಭಕ್ತರಾದ ಹಾವೇರಿಯ ಎಸ್‌ ಎಸ್‌ ಪಾಟೀಲ್‌, ಬಿ ಎಚ್‌ ಮಂಜಪ್ಪ, ಶಿವಕುಮಾರ ಸ್ವಾಮಿ ಎಂ., ಸುಭಾಷ್‌ಚಂದ್ರ, ಡಾ ಜಿ ಎಂ ಲಿಂಗರಾಜು, ಕಾಂತರಾಜು, ಡಾ ಎಚ್‌ ಕರಿಬಸಪ್ಪ, ಶಿವಕುಮಾರ್‌ ಮಾಳಿಗೆ ಅವರು ಸಲ್ಲಿಸಿರುವ ಅಸಲು ದಾವೆಯು ನ್ಯಾಯಾಲಯದ ಮುಂದೆ ವಿಸ್ತೃತವಾದ ವಿಚಾರಣೆಗೆ ಒಳಪಡಲಿದೆ. ಅಸಲು ದಾವೆಯ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಅರ್ಜಿದಾರರು 2021ರ ಜೂನ್‌ 21ರಂದು ಅಸಲು ದಾವೆಯನ್ನು ಸಲ್ಲಿಸಿದ್ದರು. ಇದನ್ನು 4 ತಿಂಗಳ ಬಳಿಕ ಅಂದರೆ 2021ರ ಅಕ್ಟೋಬರ್‌ 21ರಂದು ವಿಚಾರಣೆಗೆ ಅರ್ಹ ಎಂದು ಪ್ರಾಥಮಿಕವಾಗಿ ಅಂಗೀಕರಿಸಿರುವುದು ಆದೇಶದ ಪ್ರತಿಯಿಂದ ಗೊತ್ತಾಗಿದೆ

ಅವಧಿ ಮುಗಿದ ನಂತರ ಪೀಠವನ್ನು ಬಿಟ್ಟುಕೊಡಬೇಕಿತ್ತು ಎಂಬ ಅಂಶವನ್ನು ನ್ಯಾಯಾಲಯಕ್ಕೆ ಪ್ರಾಥಮಿಕವಾಗಿ ಮನವರಿಕೆ ಮಾಡಿಕೊಡುವಲ್ಲಿ ಅರ್ಜಿದಾರರು ಯಶಸ್ವಿಯಾಗಿದ್ದಾರೆ ಎಂಬ ನಿಟ್ಟಿನಲ್ಲಿ ಮಧ್ಯಂತರ ಆದೇಶ ಹೊರಡಿಸಿದೆ ಎಂಬುದು ಆದೇಶದ ತಿರುಳಿನಿಂದ ಗ್ರಹಿಸಬಹುದಾಗಿದೆ.

ಅಸಲು ದಾವೆಯನ್ನು ವಿಚಾರಣೆಗೆ ಅರ್ಹ ಎಂದು ಪ್ರಾಥಮಿಕವಾಗಿ ಅಂಗೀಕರಿಸಿರುವ ಚಿತ್ರದುರ್ಗ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಮನಗೂಳಿ ಪ್ರೇಮಾವತಿ ಅವರು 2021ರ ಅಕ್ಟೋಬರ್‌ 21ರಂದು ಮಧ್ಯಂತರ ಆದೇಶ ಹೊರಡಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಶ್ರೀಮತ್‌ ಸಾದು ಸದ್ಧರ್ಮ ವೀರಶೈವ ಸಂಘವನ್ನು 1977ರಲ್ಲಿ ನೋಂದಾಯಿಸಲಾಗಿತ್ತು. ಸಂಘದ ಬೈಲಾ ಪ್ರಕಾರ ಡಾ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳನ್ನು ಆಯ್ಕೆ ಮಾಡಲಾಗಿತ್ತು. 1979ರಲ್ಲಿ ಪೀಠವನ್ನು ಅಲಂಕರಿಸಿದ್ದರು ಎಂಬುದು ತಿಳಿದು ಬಂದಿದೆ.

ಮಠದ ಹಾಗೂ ಭಕ್ತರ ಎಲ್ಲ ಪದ್ಧತಿ, ಪರಂಪರೆ ಮತ್ತು ತತ್ವ ಸಿದ್ಧಾಂತಗಳಿಗೆ ವಿರುದ್ಧವಾದ ಮತ್ತು ಸಂಘದ ಬೈಲಾದಲ್ಲಿನ ಎಲ್ಲಾ ಅಂಶಗಳನ್ನು ಬುಡಮೇಲು ಮಾಡಬಲ್ಲ ಟ್ರಸ್ಟ್‌ವೊಂದನ್ನು 1990 ರ ಜುಲೈ 27ರಂದು ನೋಂದಾಯಿಸಲಾಗಿತ್ತು ಎಂಬ ಆರೋಪವೂ ಡಾ ಶಿವಮೂರ್ತಿ ಶಿವಾಚಾರ್ಯರ ವಿರುದ್ಧ ಕೇಳಿ ಬಂದಿತ್ತು. ಭಕ್ತ ಮಂಡಳಿಯ ಹಾಗೂ ಮಠದ ರೀತಿ ರಿವಾಜುಗಳು ಮತ್ತು ಸಾಧು ವೀರಶೈವ ಸಮಾಜದ ಸಂವಿಧಾನ ಮತ್ತು ಕಾನೂನಿಗೆ ವಿರುದ್ಧವಾಗದ ರೀತಿಯಲ್ಲಿ ರಚನೆ ಮಾಡಿಕೊಳ್ಳಲಾಗಿದೆ ಎಂಬ ಆಪಾದನೆಯೂ ಕೇಳಿ ಬಂದಿತ್ತು.

ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಾಸನ ಶ್ರೀಮಠ ಪಾಲ್ಕುರಿಕೆ ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಎಂಬುದು ಮಠದ ಮೂಲ ಹೆಸರು. ಆದರೆ ಟ್ರಸ್ಟ್‌ ಡೀಡ್‌ನಲ್ಲಿ ‘ ಶ್ರೀಮದಜ್ಜಯಿನಿ ಸದ್ಧರ್ಮ ಸಿಂಹಾಸನ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಎಂದು ಮಠದ ಮೂಲ ಹೆಸರನ್ನು ಬದಲಾಯಿಸಿ ಟ್ರಸ್ಟ್‌ ಡೀಡ್‌ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿದೆಯಲ್ಲದೆ ಈ ಟ್ರಸ್ಟ್‌ ಡೀಡ್‌ ಪ್ರಕಾರ ಮೂಲ ಮಠವನ್ನೇ ಅಸ್ತಿತ್ವದಲ್ಲಿ ಇಲ್ಲದಂತೆ ಮಾಡಲಾಗಿದೆ ಎಂದು ಮಠದ ಭಕ್ತಾದಿಗಳು ಆಪಾದಿಸಿದ್ದಾರೆ.

ಅಲ್ಲದೆ ಮಠದ ಪರಂಪರೆ ಅಡಯಲ್ಲಿ ಆಯ್ಕೆಯಾಗುವ ಜಗದ್ಗುರುಗಳು ಮಠದ ಆಸ್ತಿಗಳನ್ನು ಮತ್ತು ಆಡಳಿತವನ್ನು ಭಕ್ತರ ಉಪಯೋಗಕ್ಕಾಗಿ ಮತ್ತು ಹಿತಾಸಕ್ತಿಗಾಗಿ ಮೇಲುಸ್ತುವಾರಿ ನೋಡಿಕೊಳ್ಳುವ ಜವಾಬ್ದಾರಿ ಹೊಂದಿರುತ್ತಾರೆ. ಆದರೆ ಟ್ರಸ್ಟ್‌ ಡೀಡ್‌ನಲ್ಲಿ ಬೃಹನ್ಮಠಕ್ಕೆ ಸೇರಿದ ಎಲ್ಲಾ ಆಸ್ತಿಗಳು ಸಹ ಇನ್ನು ಮುಂದೆ ಒಬ್ಬರೇ ಟ್ರಸ್ಟಿಯಿಂದ (SOLE TRUSTEE) ತನ್ನ ಒಡೆತನಕ್ಕೆ ಸೇರಿದವುಗಳು ಎಂದು ಡಾ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಟ್ರಸ್ಟ್‌ ಡೀಡ್‌ನಲ್ಲಿ ಘೋಷಣೆ ಮಾಡಿಕೊಂಡಿದ್ದಾರೆ ಎಂಬುದು ಮಠದ ಭಕ್ತಾದಿಗಳ ಮತ್ತೊಂದು ಆರೋಪವಾಗಿದೆ.

‘ಇನ್ನು ಮುಂದೆ ಮಠಕ್ಕೆ ಸೇರಿದ ಎಲ್ಲಾ ಆಸ್ತಿಗಳು ಸಹ ಜಗದ್ಗುರುಗಳಿಗೆ ಮತ್ತು ಆಯ್ಕೆಯಾಗುವ ಉತ್ತರಾಧಿಕಾರಿಗಳಿಗೆ ಸೇರುತ್ತವೆ. ಈ ಕಾರಣದಿಂದ ಇನ್ನು ಮುಂದೆ ಸಾಧು ವೀರಶೈವ ಸಮಾಜಕ್ಕೆ ಮಠದ ಆಸ್ತಿಗಳ ವಿಚಾರಕ್ಕೆ ಸಂಬಂಧಪಟ್ಟಂತೆ ಯಾವುದೇ ಅಧಿಕಾರವಾಗಲೀ, ಜಬಾಬ್ದಾರಿಗಳಾಗಲಿ ಅಥವಾ ಹಕ್ಕುಗಳಾಗಲೀ ಇರುವುದಿಲ್ಲ. ಇವೆಲ್ಲವುಗಳನ್ನು ಟ್ರಸ್ಟ್‌ ಡೀಡ್‌ ಮೂಲಕ ಕಸಿದುಕೊಳ್ಳಲಾಗಿದೆ,’ ಎಂದು ಅರ್ಜಿದಾರರೊಬ್ಬರು ಆಪಾದಿಸುತ್ತಾರೆ.

ಅಲ್ಲದೆ ಟ್ರಸ್ಟ್‌ ಡೀಡ್‌ನಲ್ಲಿ ಎಲ್ಲಿಯೂ ಸಹ ಆಸ್ತಿಗಳನ್ನು ಸಾಧು ವೀರಶೈವ ಭಕ್ತರ ಶ್ರೇಯೋಭಿವೃದ್ಧಿಗಾಗಿ ಉಪಯೋಗಿಸಬೇಕು ಎಂದು ನಮೂದಿಸಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಬೃಹನ್ಮಠಕ್ಕೆ ಸೇರಿದ ಆಸ್ತಿಗಳು ಜಗದ್ಗುರುಗಳಿಗೆ ಸೇರುವುದರಿಂದ ಇದರ ಉಪಯೋಗ ಸಂಘಕ್ಕಾಗಲಿ ಅಥವಾ ಮಠದ ಭಕ್ತರಿಗಾಗಲಿ ಇರುವುದಿಲ್ಲ ಎಂದೂ ಅರ್ಜಿದಾರರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಟ್ರಸ್ಟ್‌ ಡೀಡ್‌ ಗೌಪ್ಯವಾಗಿರಿಸಲಾಗಿತ್ತೇ?

ಡಾ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ರಚಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿರುವ ಟ್ರಸ್ಟ್‌ ಡೀಡ್‌ನಲ್ಲಿ ಹಲವು ಲೋಪದೋಷಗಳಿವೆ ಇವೆ ಎನ್ನಲಾಗಿದೆ. ಯಾವುದೇ ಅಧಿಕಾರವಿಲ್ಲದಿದ್ದರೂ ಡಾ ಶಿವಮೂರ್ತಿ ಶಿವಚಾರ್ಯ ಮಹಾಸ್ವಾಮಿಗಳು 1990ರ ಜುಲೈ 27ರಂದು ತಾವೇ ಸ್ವತಃ ಟ್ರಸ್ಟ್‌ನ್ನು ರಚಿಸಿಕೊಂಡಿದ್ದಾರೆ. ಈ ರೀತಿ ಮಾಡಿಕೊಂಡಿರುವ ಟ್ರಸ್ಟ್‌ ಡೀಡ್‌ನ್ನು 2021ರ ಏಪ್ರಿಲ್‌ ತಿಂಗಳಿನವರೆಗೂ ಭಕ್ತಾದಿಗಳು ಮತ್ತು ಸಮಾಜದ ಎಲ್ಲರಿಂದಲೂ ಗೌಪ್ಯವಾಗಿ ಇಟ್ಟಿದ್ದರು ಎಂದು ಮಠದ ಭಕ್ತರು ಆರೋಪಿಸುತ್ತಾರೆ.

1979ರಿಂದಲೂ ಇಲ್ಲಿಯವರೆಗೆ ಮೂರು ಆಶ್ರಿತ ಮಠಗಳಿಗೆ ಉತ್ತರಾಧಿಕಾರಿಗಳ ನೇಮಕ ಮಾಡುವ ಯಾವುದೇ ಪ್ರಯತ್ನವನ್ನು ಮಾಡಿಲ್ಲ ಎಂಬ ಅರೋಪಕ್ಕೆ ಗುರಿಯಾಗಿರುವ ಡಾ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಾಧು ವೀರಶೈವ ಸಮಾಜದ ಯಾವುದೇ ಸರ್ವ ಸದಸ್ಯರ ಸಭೆಯನ್ನು ಬೈಲಾ ಪ್ರಕಾರ ಆಯೋಜಿಸಲು ಅನುವು ಮಾಡಿಕೊಟ್ಟಿಲ್ಲ ಎಂದು ಶ್ರೀಗಳ ವಿರುದ್ಧ ಆಪಾದನೆಯನ್ನೂ ಮಠದ ಭಕ್ತರು ಹೊರಿಸಿದ್ದಾರೆ.

the fil favicon

SUPPORT THE FILE

Latest News

Related Posts