ಬೋಧಕರಿಗೆ ದೊರೆತಿಲ್ಲ ಪಿಂಚಣಿ ಸೌಲಭ್ಯ; 5 ವರ್ಷಗಳಿಂದಲೂ ಬಾಕಿ ಇದೆ 299 ಕೋಟಿ

ಬೆಂಗಳೂರು; ಸರ್ಕಾರದ ಸಾಧನೆ ಬಿಂಬಿಸಲು ದಿನಪತ್ರಿಕೆ ಮತ್ತು ಟಿ ವಿ ಚಾನಲ್‌ಗಳಿಗೆ ಜಾಹೀರಾತುಗಳಿಗೆ ಕೋಟ್ಯಂತರ ರುಪಾಯಿಗಳನ್ನು ವೆಚ್ಚ ಮಾಡುತ್ತಿರುವ ರಾಜ್ಯ ಬಿಜೆಪಿ ಸರ್ಕಾರವು ವಿಶ್ವವಿದ್ಯಾಲಯಗಳಲ್ಲಿ ವಯೋ ನಿವೃತ್ತಿ, ಸ್ವಯಂ ನಿವೃತ್ತಿ ಹೊಂದಿರುವ ಅಧ್ಯಾಪಕರು, ಪ್ರಾಧ್ಯಾಪಕರಿಗೆ ಕುಟುಂಬ ಪಿಂಚಣಿ, ವಿಶ್ರಾಂತಿ ವೇತನ, ಮರಣ ಉಪದಾನ ಮತ್ತು ನಿವೃತ್ತಿ ಉಪದಾನಗಳ ಶೀರ್ಷಿಕೆಯಡಿಯಲ್ಲಿ 299.24 ಕೋಟಿ ರು.ಗಳನ್ನು ಬಾಕಿ ಉಳಿಸಿಕೊಂಡಿದೆ.

ಪಿಂಚಣಿ ನೀಡಲು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಕಮಿಷನ್‌ ಕೇಳುತ್ತಿದ್ದಾರೆ ಎಂಬ ಗುರುತರವಾದ ಆರೋಪ ಕೇಳಿ ಬಂದ ಬೆನ್ನಲ್ಲೇ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಪಿಂಚಣಿ ಸೇರಿದಂತೆ ಇನ್ನಿತರೆ ಸೌಲಭ್ಯ ಒದಗಿಸಲು 299.24 ಕೋಟಿ ರು. ಬಾಕಿ ಉಳಿಸಿಕೊಂಡಿರುವುದು ಮುನ್ನೆಲೆಗೆ ಬಂದಿದೆ.

ವಿಶ್ವವಿದ್ಯಾಲಯಗಳಲ್ಲಿ 2016ರ ನಂತರ ನಿವೃತ್ತಿ ಹೊಂದಿದ ಪ್ರಾಧ್ಯಾಪಕರಿಗೆ ಪಿಂಚಣಿ ಸೌಲಭ್ಯಗಳನ್ನು ನೀಡಲು ಕನ್ನಡ ವಿಶ್ವವಿದ್ಯಾಲಯವೂ ಸೇರಿದಂತೆ ರಾಜ್ಯದ ಸಾಂಪ್ರದಾಯಿಕ 17 ವಿಶ್ವವಿದ್ಯಾಲಯಗಳು ಸಲ್ಲಿಸಿದ್ದ ಅನುದಾನದ ಕೋರಿಕೆ ಪ್ರಸ್ತಾವನೆಗಳು ಸರ್ಕಾರದ ಹಂತದಲ್ಲೇ ನೆನೆಗುದಿಗೆ ಬಿದ್ದಿವೆ. ಇದರಲ್ಲಿ ಯುಜಿಸಿ 7ನೇ ಆಯೋಗದ ಅನ್ವಯ ಪರಿಷ್ಕೃತ ವೇತನಕ್ಕೆ ಪರಿಷ್ಕರಿಸಿರುವ ಪಿಂಚಣಿ ಮತ್ತು ಪಿಂಚಣಿ ಸೌಲಭ್ಯಗಳ ಪಾವತಿಯ ಮೊತ್ತವೂ ಸೇರಿದೆ.

ಯುಜಿಸಿ 7ನೇ ಆಯೋಗದನ್ವಯ ಪರಿಷ್ಕೃತ ವೇತನಕ್ಕೆ ಪರಿಷ್ಕರಿಸಿರುವ ಪಿಂಚಣಿ, ಪಿಂಚಣಿ ಸೌಲಭ್ಯಗಳ ಪಾವತಿಗಾಗಿ ಮೈಸೂರು ವಿಶ್ವವಿದ್ಯಾಲಯವು ಒಟ್ಟು 15,14,43,829 ಕೋಟಿ ರು ಮತ್ತು ಕಾಲೇಜು, ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯ ಸರ್ಕಾರಿ, ಹಾಗೂ ಖಾಸಗಿ ಅನುದಾನಿತ ಕಾಲೇಜುಗಳಲ್ಲಿ 2016ರ ನಂತರ ನಿವೃತ್ತಿ ಹೊಂದಿರುವ ಅಧ್ಯಾಪಕರುಗಳಿಗೆ 2016ನೇ ಯುಜಿಸಿ ಪರಿಷ್ಕೃತ ಪಿಂಚಣಿ ಸೌಲಭ್ಯದ 154.57 ಕೋಟಿ ರು. .ಗಳ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಿದೆ.

ಕಳೆದ 2 ವರ್ಷದಿಂದಲೂ ವಿಶ್ವವಿದ್ಯಾಲಯಗಳು ಪಿಂಚಣಿ ಸೌಲಭ್ಯಗಳಿಗಾಗಿ ಅನುದಾನ ಕೋರಿಕೆ ಸಂಬಂಧ ಸಲ್ಲಿಸಿರುವ ಪ್ರಸ್ತಾವನೆಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 2016ರ ನಂತರ ವಯೋ ನಿವೃತ್ತಿ, ಸ್ವಯಂ ನಿವೃತ್ತಿ ಹೊಂದಿರುವ ಪ್ರಾಧ್ಯಾಪಕರಿಗೆ ಒಟ್ಟು 299, 24,33,378 ರು. ಅನುದಾನ ಕೋರಿಕೆ ಸಲ್ಲಿಸಿ ಪ್ರಸ್ತಾವನೆ ಸಲ್ಲಿಸಿದೆ. ಈ ಪ್ರಸ್ತಾವನೆಗಳಿಗೆ ಅನುಮೋದನೆ ದೊರಕಿಸಿಕೊಡಲು ಉನ್ನತ ಶಿಕ್ಷಣ ಇಲಾಖೆಯು ಕಳೆದ ಒಂದು ವರ್ಷದಿಂದ ಆರ್ಥಿಕ ಇಲಾಖೆಯ ಜತೆ ಪತ್ರ ವ್ಯವಹಾರಗಳಲ್ಲೇ ಕಾಲಹರಣ ಮಾಡಿರುವುದು ಇಲಾಖೆಯ ಟಿಪ್ಪಣಿ ಹಾಳೆಗಳಿಂದ ತಿಳಿದು ಬಂದಿದೆ.

ಪಿಂಚಣಿ ಅನುದಾನ ಕೋರಿಕೆ ಪಟ್ಟಿ

ಮೈಸೂರು ವಿಶ್ವವಿದ್ಯಾಲಯ – 50,70, 91,704 ರು.

ಕರ್ನಾಟಕ ವಿ ವಿ – 5,72,23,832 ರು.

ಬೆಂಗಳೂರು ವಿ ವಿ – 29, 62, 02, 932 ರು

ಗುಲ್ಬರ್ಗಾ ವಿ ವಿ – 7, 29, 17, 585 ರು.

ಮಂಗಳೂರು ವಿ ವಿ – 11, 83, 57,195 ರು.

ಕನ್ನಡ ವಿ ವಿ – 4, 59, 90, 595 ರು.

ಕುವೆಂಪು ವಿ ವಿ – 1, 40, 85,509 ರು.

ಅಕ್ಕಮಹಾದೇವಿ ಮಹಿಳಾ ವಿ ವಿ – 80, 20, 341 ರು.

ದಾವಣಗೆರೆ ವಿ ವಿ – 6, 49, 55, 545 ರು.

ವಿಜಯನಗರ ವಿ ವಿ – 1, 19, 37, 694 ರು.

ಬೆಳಗಾವಿ ವಿ ವಿ – 7, 81, 47, 268 ರು.

ಕರ್ನಾಟಕ ಮುಕ್ತ ವಿ ವಿ – 2, 03, 12, 228 ರು

ಕಾಲೇಜು, ತಾಂತ್ರಿಕ ಶಿಕ್ಷಣ – 154, 57, 47, 121 ರು.

2016ರ ಜನವರಿ 1ರ ನಂತರ ವಯೋ ನಿವೃತ್ತಿ ಹೊಂದಿರುವ ಅಧ್ಯಾಪಕರುಗಳಿಗೆ 7ನೇ ವೇತನ ಆಯೋಗದ ಅನ್ವಯ ಪರಿಷ್ಕೃತ ವೇತನಕ್ಕೆ ಪಿಂಚಣೀ ಸೌಲಭ್ಯಗಳನ್ನು ಮಂಜೂರು ಮಾಡಿತ್ತು. ಮೇ 2020ರ ನಂತರ ಪ್ರತಿತಿಂಗಳು ಪಿಂಚಣಿಯನ್ನು ಮಾತ್ರ ಪಾವತಿಸಲಾಗುತ್ತಿದೆ. 2016ರ ನಂತರ ನಿವೃತ್ತಿ ಹೊಂದಿದ ಅಧ್ಯಾಪಕರಿಗೆ ಇತರೆ ಪಿಂಚಣಿ ಸೌಲಭ್ಯಗಳನ್ನು ನೀಡಲು 50, 70, 91, 704 ರು.ಗಳ ಅನುದಾನವನ್ನು ಬಿಡುಗಡೆ ಮಾಡಲು ಮೈಸೂರು ವಿಶ್ವವಿದ್ಯಾಲಯವು ಸರ್ಕಾರಕ್ಕೆ ಕೋರಿಕೆ ಸಲ್ಲಿಸಿತ್ತು ಎಂದು ತಿಳಿದು ಬಂದಿದೆ.

ಅಲ್ಲದೆ ಯುಜಿಸಿ 7ನೇ ವೇತನ ಪರಿಷ್ಕೃತ ವೇತನ ವ್ಯತ್ಯಾಸದ ಪಾವತಿಗಾಗಿ ಸರ್ಕಾರದಿಂದ ಬಿಡುಗಡೆಗೊಳಿಸಿರುವ 78, 14, 40,000 ರು.ಗಳಅನುದಾನದಲ್ಲಿ ವೇತನ ವ್ಯತ್ಯಾಸ ಪಾವತಿಸಿ ಉಳಿದಿರುವ ಬಾಕಿ ಮೊತ್ತವನ್ನು ಯುಜಿಸಿ 7ನೇ ಪರಿಷ್ಕೃತ ವೇತನದ ಅನ್ವಯ ಪರಿಷ್ಕೃತಗೊಂಡ ಪಿಂಚಣಿ ಮತ್ತುಪಿಂಚಣಿ ಸೌಲಭ್ಯಗಳ ವ್ಯತ್ಯಾಸದ ಮೊತ್ತವನ್ನು ಪಾವತಿಸಲು ಉಪಯೋಗಿಸಲು ಆಡಳಿತಾತ್ಮಕ ಆದೇಶಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು ಎಂದು ಗೊತ್ತಾಗಿದೆ.

SUPPORT THE FILE

Latest News

Related Posts