ಪರಿಶಿಷ್ಟರ ಹಣ ದುರ್ಬಳಕೆ; ಪ್ರಭಾಕರ್‌ ಚಿಣಿ ನಿವೃತ್ತಿ ಸೌಲಭ್ಯ ಮಂಜೂರಾತಿಗೆ ತಡೆಹಿಡಿದ ಆಯೋಗ

ಬೆಂಗಳೂರು; ಗುತ್ತಿಗೆದಾರರಿಂದ ಬಿಲ್‌ ಮೊತ್ತದಲ್ಲಿ ಶೇ. 4ರಷ್ಟು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂಬ ಗುರುತರವಾದ ಆರೋಪಕ್ಕೆ ಗುರಿಯಾಗಿರುವ ಕೃಷ್ಣ ಭಾಗ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಭಾಕರ ಚಿಣಿ ಅವರಿಗೆ ನಿವೃತ್ತಿ ನಂತರದ ಸೌಲಭ್ಯಗಳನ್ನು ಮಂಜೂರು ಮಾಡಬಾರದು ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗವು ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ನಿರ್ದೇಶಿಸಿದೆ.

ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಭೂ ಸ್ವಾಧೀನ ಹಾಗೂ ಪುನರ್‌ ವಸತಿ, ಪುನರ್‌ ನಿರ್ಮಾಣ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪ ಯೋಜನೆ ಕಾರ್ಯಕ್ರಮಗಳಿಗೆ ಮೀಸಲಿರಿಸಿದ್ದ 300 ಕೋಟಿ ರು. ಅನುದಾನದಲ್ಲಿ ಅವ್ಯವಹಾರ ಮತ್ತು ಭ್ರಷ್ಟಾಚಾರ ನಡೆಸಿ ಕಾನೂನಿನ ನಿರ್ದೇಶನಗಳನ್ನು ಉಲ್ಲಂಘಿಸಿರುವ ಆರೋಪ ಪ್ರಕರಣವು ಆಯೋಗದಲ್ಲಿ ಇತ್ಯರ್ಥವಾಗುವವರೆಗೂ ಪ್ರಭಾಕರ ಚಿಣಿ ಅವರ ನಿವೃತ್ತಿ ನಂತರದ ಸೌಲಭ್ಯಗಳನ್ನು ಮಂಜೂರು ಮಾಡಬಾರದು ಎಂದು ಆಯೋಗವು ಸರ್ಕಾರಕ್ಕೆ ಸೂಚಿಸಿದೆ.

ಈ ಕುರಿತು ಆಯೋಗದ ಕಾರ್ಯದರ್ಶಿಯು ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ 2021ರ ಅಕ್ಟೋಬರ್‌ 11ರಂದು ನಿರ್ದೇಶಿಸಿದ್ಧಾರೆ. ಇದರ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ. ಪ್ರಭಾಕರ್‌ ಚಿಣಿ ಅವರು ಇದೇ ತಿಂಗಳ ಅಂತ್ಯದಂದು ನಿವೃತ್ತಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕರಣದ ವಿವರ

2017-18, 2019-20ನೇ ಸಾಲಿನಲ್ಲಿ ಎಸ್‌ಸಿಪಿ ಮತ್ತು ಟಿ ಎಸ್‌ ಪಿ ಯೋಜನೆಗಾಗಿ 300 ಕೋಟಿ ರು.ಗಳನ್ನು ಮೀಸಲಿರಿಸಲಾಗಿತ್ತು. ಈ ಅನುದಾನವನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಕ್ಕೆ ಬಳಸಬೇಕಿದ್ದ ಪ್ರಭಾಕರ್‌ ಚಿಣಿ ಅವರು ಈ ಸಮುದಾಯಕ್ಕೆ ಸಂಬಂಧಪಡದ ಕಾಮಗಾರಿಗಳಿಗೆ ಪಾವತಿಸಿ ಕರ್ತವ್ಯಲೋಪವೆಸಗಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಪಂಚಾಯ್ತಿಯ ಮಾಜಿ ಅಧ್ಯಕ್ಷ ಮುಕುಂದರಾವ್‌ ಭವಾನಿಮಠ ಅವರು ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟು ಸಮುದಾಯಕ್ಕೆ ಬಳಸಬೇಕಿದ್ದ ಅನುದಾನವನ್ನು ಈ ಸಮುದಾಯಕ್ಕೆ ಸಂಬಂಧಪಡದ ಕಾಮಗಾರಿಗಳಿಗೆ ಬಳಸುವ ಮೂಲಕ ಕಾನೂನಿನ ನಿರ್ದೇಶನಗಳನ್ನು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು. ಸದ್ಯ ಈ ಪ್ರಕರಣವು ಆಯೋಗದಲ್ಲಿ ವಿಚಾರಣೆ ಹಂತದಲ್ಲಿದೆ. ಹೀಗಾಗಿ ಈ ಪ್ರಕರಣವು ಆಯೋಗದಲ್ಲಿ ಇತ್ಯರ್ಥವಾಗುವವರೆಗೂ ಪ್ರಭಾಕರ್‌ ಚಿಣಿ ಅವರಿಗೆ ನಿವೃತ್ತಿ ನಂತರದ ಸೌಲಭ್ಯಗಳನ್ನು ಮಂಜೂರು ಮಾಡದೆ ತಡೆಹಿಡಿಯಬೇಕು ಎಂದು ಆಯೋಗವು ನಿರ್ದೇಶಿಸಿದೆ.

ಸಣ್ಣ ನೀರಾವರಿ ಇಲಾಖೆಯ ಕುಷ್ಟಗಿ ವಿಭಾಗದಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿಲ್ಲಿ ಕಳಪೆ ಗುಣಮಟ್ಟದ ಚೆಕ್‌ ಡ್ಯಾಂ ನಿರ್ಮಿಸಿರುವ ಮತ್ತು ಯಾವುದೇ ಚೆಕ್‌ ಡ್ಯಾಂ ನಿರ್ಮಿಸದೇ ಬೋಗಸ್‌ ದಾಖಲೆಗಳನ್ನು ಸೃಷ್ಟಿಸಿರುವ ಆರೋಪಕ್ಕೂ ಚಿಣಿ ಅವರು ಗುರಿಯಾಗಿದ್ದಾರೆ. ಅಲ್ಲದೆ ಸುಮಾರು 50.00 ಕೋಟಿ ಅನುದಾನವನ್ನು ದುರ್ಬಳಕೆ ಪಡಿಸಿಕೊಂಡಿದ್ದಾರಲ್ಲದೆ ಕೃಷ್ಣ ಭಾಗ್ಯ ಜಲನಿಗಮದಲ್ಲಿ 2019-209ರವರೆಗೆ ಬಳಕೆಯಾಗದೆ ಉಳಿದಿದ್ದ 401.77 ಕೋಟಿ, 2020-21ನೇ ಸಾಲಿನಲ್ಲಿ ಬಿಡುಗಡೆಯಾಗಿದ್ದ 384.88 ಕೋಟಿ ಹಣವನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸಂಬಂಧಪಡದ ಕಾಮಗಾರಿಗೆ ಉಪಯೋಗಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಈ ಗುತ್ತಿಗೆಯಯನ್ನು ಕಾನೂನಿನ ನಿರ್ದೇಶನಗಳನ್ನು ಉಲ್ಲಂಘಿಸಿ ಸ್ವಜಾತಿಯ ಮತ್ತು ತಮ್ಮ ಸಂಬಂಧಿ ಗುತ್ತಿಗೆದಾರರಿಗೆ ನೀಡಿ ನೂರಾರು ಕೋಟಿ ಅವ್ಯವಹಾರ ನಡೆಸಿರುತ್ತಾರೆ. ಇದನ್ನು ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಭವಾನಿಮಠ ಅವರು ದೂರಿನಲ್ಲಿ ಕೋರಿದ್ದರು.

ಅಲ್ಲದೆ ಕೃಷ್ಣ ಜಲಭಾಗ್ಯ ನಿಗಮದ ಹಲವು ಕಾಮಗಾರಿಗಳನ್ನು ನಿರ್ವಹಿಸಿರುವ ಗುತ್ತಿಗೆದಾರ ಡಿ ವೈ ಉಪ್ಪಾರ್‌ ಸಹಭಾಗಿತ್ವದ ಮತ್ತು ಕೃಷ್ಣ ಜಲಭಾಗ್ಯ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಭಾಕರ್‌ ಚಿಣಿ ಅವರ ಅಳಿಯನ ಒಡೆತನದ ಎಡಿಯು (ಅರುಣ್‌ ಡಿ ಉಪ್ಪಾರ್‌) ಇನ್ಫ್ರಾ ಕಂಪನಿಗೆ ನಿಯಮಬಾಹಿರವಾಗಿ ಮತ್ತು ಕಾನೂನಿನ ನಿರ್ದೇಶನಗಳನ್ನು ಉಲ್ಲಂಘಿಸಿ 1,141 ಕೋಟಿ ರು. ಪಾವತಿಸಲಾಗಿದೆ ಎಂಬ ಆರೋಪವೂ ಇವರ ಮೇಲಿದೆ.

ಎಸ್‌ಸಿಪಿ ಟಿಎಸ್‌ಪಿ ಯೋಜನೆಯಡಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳಿಗೆ ಸಂಬಂಧಪಡದ ಕಾಮಗಾರಿಗಳಿಗೆ ಕಾನೂನುಬಾಹಿರವಾಗಿ ಅಕ್ರಮವಾಗಿ ಲೆಕ್ಕ ಶೀರ್ಷಿಕೆ ಬದಲಾವಣೆ ಮಾಡಿ ತಮಗೆ ಬೇಕಾದ ಗುತ್ತಿಗೆದಾರರಿಗೆ ಅನುದಾನ ಪಾವತಿಸುವ ಮೂಲಕ ಪ್ರಭಾಕರ ಚಿಣಿ ಅವರು ಕಾನೂನಿನ ನಿರ್ದೇಶನಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿರುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದಿದ್ದ ದೂರಿನ ಪತ್ರದಲ್ಲಿ ವಿವರಿಸಲಾಗಿತ್ತು.

850 ಕೋಟಿ ದುರ್ಬಳಕೆ

2017-18ನೇ ಸಾಲಿನಿಂದ ಕೃಷ್ಣ ಭಾಗ್ಯ ಜಲನಿಗಮದಲ್ಲಿ ಭೂ ಸ್ವಾಧೀನ ಮತ್ತು ಪುನರ್‌ವಸತಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅನುಷ್ಠಾನಗೊಳಿಸಲು ಪ್ರತ್ಯೇಕ ಲೆಕ್ಕಶೀರ್ಷಿಕೆಯಡಿ ಎಸ್‌ಸಿಎಸ್‌ಪಿ ಟಿಎಸ್‌ಪಿ ಯೋಜನೆ ಒಳಗೊಂಡಂತೆ ಅನುದಾನ ಕಲ್ಪಿಸಲಾಗಿದೆ. ಆದರೆ ಇದುವರೆಗೂ ಎಸ್‌ಸಿ ಎಸ್‌ಟಿ ಸಮುದಾಯಗಳಿಗೆ ಮನೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಂಬಂಧಪಟ್ಟ ಅನುದಾನವನ್ನು ಖರ್ಚು ಮಾಡಿಲ್ಲ ಎಂದು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.

2017-18ನೇ ಸಾಲಿನಿಂದ 2019-20ನೇ ಸಾಲಿನವರೆಗೆ ಬಿಡುಗಡೆ ಮಾಡಲಾದ ಅನುದಾನ 631.59 ಕೋಟಿ ಪೈಕಿ 214.16 ಕೋಟಿ ರು. 7(ಡಿ) ಅಡಿ ವೆಚ್ಚ ಮಾಡಲಾಗಿದೆ. ಇದಲ್ಲದೆ 91 ಕೋಟಿ ರು.,ನಲ್ಲಿ ರಸ್ತೆ, ಚರಂಡಿ, ಸಮುದಾಯ ಭವನ ಕಾಮಗಾರಿಗಳಿಗೆ ಅನಮೋದನೆ ನೀಡಲಾಗಿದೆ. ಒಟ್ಟು 305.10 ಕೋಟಿ ಅನುದಾನ ಉಪಯೋಗಿಸಲಾಗಿದೆ.

ಆದರೆ ಕಳೆದ 2 ವರ್ಷಗಳಿಂದ ಮನೆಗಳ ನಿರ್ಮಾಣದ ಕುರಿತು ಫಲಾನುಭವಿಗಳ ಪಟ್ಟಿಯನ್ನು ಸಂಬಂಧದಪಟ್ಟ ವಿಭಾಗದಿಂದ ಮತ್ತು ಸಕ್ಷಮ ಪ್ರಾಧಿಕಾರದಿಂದ ಅಂತಿಮಗೊಳಿಸದೇ ಇರುವುದರಿಂದ ಈ ಮನೆಗಳ ನಿರ್ಮಾಣಕ್ಕಾಗಿ ಇನ್ನೂ ಸಹ ಟೆಂಡರ್‌ ಕರೆದಿಲ್ಲ ಹೀಗಾಗಿ ಅನುದಾನ ಖರ್ಚು ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಭವಾನಿಮಠ ಅವರು ದೂರಿನಲ್ಲಿ ವಿವರಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts