ಅಲ್ಟ್ರಾ ಇಎನ್‌ಟಿ ಉಪಕರಣಗಳ ಖರೀದಿ; 10.88 ಕೋಟಿ ಹೆಚ್ಚಳ ದರಕ್ಕೆ ಅನುಮೋದನೆ

ಬೆಂಗಳೂರು; ಅಲ್ಟ್ರಾ ಇಎನ್‌ಟಿ ಇಮೇಜಿಂಗ್‌ ಸಿಸ್ಟಂ, ಮೈಕ್ರೋ ಡೈನರೈಡರ್‌, ಕೊಬಾಲ್ಟರ್‌, ವಾಂಡ್ಸ್‌, ಪಿಎಪಿ ಆರ್‌ ರಿಜಿಡ್‌ ಬ್ರೋನ್ಚೋಸ್ಕೋಪ್‌, ಕಾರ್ಡಿಯಾಕ್‌ ಟೇಬಲ್‌ ಉಪಕರಣಗಳನ್ನು ಹೆಚ್ಚುವರಿ ದರದಲ್ಲಿ ಖರೀದಿಸಲು ಮುಂದಾಗಿರುವುದು ಇದೀಗ ಬಹಿರಂಗವಾಗಿದೆ.

ಪ್ರತಿ ಉಪಕರಣದ ಖರೀದಿಗೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆಯು ನಮೂದಿಸಿರುವ ದರವನ್ನು ‘ದಿ ಫೈಲ್‌’ ತನಿಖಾ ತಂಡವು ಬೆಂಗಳೂರು ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರ ನೆರವಿನೊಂದಿಗೆ ಮಾರುಕಟ್ಟೆಯಲ್ಲಿನ ದರದೊಂದಿಗೆ ಒರೆಗೆ ಹಚ್ಚಿದೆ.

ವೆಂಟಿಲೇಟರ್‌ ಒಳಗೊಂಡ ಪಿಐಸಿಯು ಹಾಸಿಗೆ, ಫೆಸ್‌ ಉಪಕರಣ ಮತ್ತು ಟೆಲಿಸ್ಕೋಪ್‌ ಸಲಕರಣೆ ಖರೀದಿಗೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆಯು ಮಾರುಕಟ್ಟೆಯಲ್ಲಿನ ದರಕ್ಕಿಂತಲೂ ದುಪ್ಪಟ್ಟು ದರ ನಮೂದಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದೆ ಎಂಬ ಆರೋಪದ ನಡುವೆಯೇ ಇನ್ನಿತರೆ ಉಪಕರಣಗಳನ್ನು ಮಾರುಕಟ್ಟೆಯಲ್ಲಿನ ದರಕ್ಕಿಂತಲೂ ಹೆಚ್ಚುವರಿ ದರದಲ್ಲಿ ಖರೀದಿಸಲು ಮುಂದಾಗಿರುವುದು ಬೊಕ್ಕಸಕ್ಕೆ ಮತ್ತಷ್ಟು ನಷ್ಟವಾಗಲಿದೆ.

4ಕೆ ಅಲ್ಟ್ರಾ ಇಎನ್‌ಟಿ ಇಮೇಜಿಂಗ್‌ ಸಿಸ್ಟಂ ಸೇರಿದಂತೆ 7 ಉಪಕರಣಗಳನ್ನು ಮಾರುಕಟ್ಟೆ ದರದಂತೆ ಖರೀದಿಸಿದರೆ 4,27,59,600 ರು.ವೆಚ್ಚವಾಗಲಿದೆ. ಇಲಾಖೆ ನಮೂದಿಸಿರುವ ದರದಂತೆ ಈ 7 ಉಪಕರಣಗಳಿಗೆ 15,04,18,948 ರು.ತಗುಲಲಿದೆ. ಆದರೆ ಮಾರುಕಟ್ಟೆಯಲ್ಲಿ ನಮೂದಿಸಿರುವ ದರಕ್ಕೂ ಮತ್ತು ಇಲಾಖೆ ನಮೂದಿಸಿರುವ ದರದ ಮಧ್ಯೆ 10,88,69,348 ರು. ವ್ಯತ್ಯಾಸವಿದೆ.

4ಕೆ ಅಲ್ಟ್ರಾ ಇಎನ್‌ಟಿ ಇಮೇಜಿಂಗ್‌ ಸಿಸ್ಟಂಗೆ ಮಾರುಕಟ್ಟೆಯಲ್ಲಿ 17,00,000 ರು. ಇದೆ. ಇದೇ ದರದಲ್ಲಿ 12 ವೈದ್ಯಕೀಯ ಕಾಲೇಜುಗಳಿಗೆ ಖರೀದಿಸಿದರೆ 2,04,00,000 ರು.ಗಳಾಗಲಿದೆ. ಆದರೆ ಇಲಾಖೆಯು ಇದೇ ಉಪಕರಣಕ್ಕೆ 60,76,000 ರು. ನಮೂದಿಸಿದೆ. ಈ ದರದಲ್ಲಿ ಖರೀದಿಸಿದರೆ 7,29,12,000 ರು.ಗಳಾಗಲಿದೆ. ಮಾರುಕಟ್ಟೆಯಲ್ಲಿನ ದರ ಮತ್ತು ಇಲಾಖೆ ನಮೂದಿಸಿರುವ ದರದ ಮಧ್ಯೆ 5,25,12,000 ರು.ಹೆಚ್ಚಳವಿದೆ.

ಮೈಕ್ರೋಡೆನ್‌ರೈಡರ್‌ ಉಪಕರಣವೊಂದಕ್ಕೆ ಮಾರುಕಟ್ಟೆಯಲ್ಲಿ 13,00,000 ರು. ದರವಿದೆ. ಈ ದರದಂತೆ 12 ವೈದ್ಯಕೀಯ ಕಾಲೇಜುಗಳಿಗೆ ಖರೀದಿಸಿದರೆ 1,56,00,000 ರು.ವೆಚ್ಚವಾಗಲಿದೆ. ಆದರೆ ಇಲಾಖೆಯು ಇದೇ ಉಪಕರಣಕ್ಕೆ 45,87,094 ರು. ನಮೂದಿಸಿದೆ. ಈ ದರದಂತೆ ಖರೀದಿಸಿದರೆ 5,50,45,128 ರು.ಗಳಾಗಲಿದೆ. ಮಾರುಕಟ್ಟೆ ದರ ಮತ್ತು ಇಲಾಖೆಯು ನಮೂದಿಸಿರುವ ದರದ ಮಧ್ಯೆ 3,94,45,128 ರು. ಹೆಚ್ಚಳವಿದೆ.

ಕೊಬಾಲ್ಟರ್‌ ತಲಾ ಉಪಕರಣಕ್ಕೆ ಮಾರುಕಟ್ಟೆಯಲ್ಲಿ 1,70,000 ರು. ಇದೆ ಎಂದು ತಿಳಿದು ಬಂದಿದೆ. ಇದೇ ದರದಲ್ಲಿ 12 ವೈದ್ಯಕೀಯ ಕಾಲೇಜುಗಳಿಗೆ ಖರೀದಿಸಿದರೆ 20,40,000 ರು.ವೆಚ್ಚವಾಗಲಿದೆ. ಆದರೆ ಸರ್ಕಾರವು ಇದೇ ಉಪಕರಣಕ್ಕೆ 7,01,000 ರು. ನಮೂದಿಸಿದೆ. ಈ ದರದಲ್ಲಿ 12 ವೈದ್ಯಕೀಯ ಕಾಲೇಜುಗಳಿಗೆ ಖರೀದಿಸಿದರೆ 84,12,000 ರು.ವೆಚ್ಚವಾಗಲಿದೆ. ಮಾರುಕಟ್ಟೆಯಲ್ಲಿನ ದರ ಮತ್ತು ಇಲಾಖೆಯು ನಮೂದಿಸಿರುವ ದರದ ಮಧ್ಯೆ 63,72,000 ರು. ವ್ಯತ್ಯಾಸವಿದೆ.

ವಾಂಡ್ಸ್‌ ಉಪಕರಣಕ್ಕೆ ಮಾರುಕಟ್ಟೆಯಲ್ಲಿ 3,800 ರು. ದರವಿದೆ. ಈ ದರದಲ್ಲಿ 12 ವೈದ್ಯಕೀಯ ಕಾಲೇಜುಗಳಿಗೆ ಖರೀದಿಸಿದರೆ 45,600 ರು.ವೆಚ್ಚವಾಗಲಿದೆ. ಆದರೆ ಸರ್ಕಾರವು ಇದೇ ಉಪಕರಣಕ್ಕೆ 20,639 ರು. ನಮೂದಿಸಿದೆ. ತಲಾ ಕಾಲೇಜಿಗೆ 5,12,975 ಗಳಂತೆ ಈ ದರದಲ್ಲಿ 12 ವೈದ್ಯಕೀಯ ಕಾಲೇಜುಗಳಿಗೆ ಖರೀದಿಸಿದರೆ 61,91,700 ರು.ವೆಚ್ಚವಾಗಲಿದೆ. ಮಾರುಕಟ್ಟೆಯಲ್ಲಿನ ದರಕ್ಕೂ ಇಲಾಖೆ ನಮೂದಿಸಿರುವ ದರದ ಮಧ್ಯೆ 61,46,100 ರು. ಹೆಚ್ಚಳವಿರುವುದು ಕಂಡು ಬಂದಿದೆ.

ಪಿಎಪಿ ಆರ್‌ ಉಪಕರಣಕ್ಕೆ ಮಾರುಕಟ್ಟೆಯಲ್ಲಿ 72,000 ರು. ಇದೆ ಎಂದು ಗೊತ್ತಾಗಿದೆ. ಇದೇ ದರದಲ್ಲಿ 12 ವೈದ್ಯಕೀಯ ಕಾಲೇಜುಗಳಿಗೆ ಖರೀದಿಸಿದರೆ 8,64,000 ರು. ವೆಚ್ಚವಾಗಲಿದೆ. ಆದರೆ ಇಲಾಖೆಯು ಇದೇ ಉಪಕರಣಕ್ಕೆ 1,37,760 ರು. ಎಂದು ನಮೂದಿಸಿದೆ. ಈ ದರದಲ್ಲಿ ಖರೀದಿಸಿದರೆ 16,53,120 ರು. ಗಳಾಗಲಿದೆ. ಮಾರುಕಟ್ಟೆಯಲ್ಲಿನ ದರಕ್ಕೂ ಇಲಾಖೆ ನಮೂದಿಸಿರುವ ದರದ ಮಧ್ಯೆ 7,89,120 ರು. ಹೆಚ್ಚಳವಿದೆ.

ರಿಜಿಡ್‌ ಬ್ರೋನ್ಚೋಸ್ಕೋಪ್‌ ಉಪಕರಣಕ್ಕೆ ಮಾರುಕಟ್ಟೆಯಲ್ಲಿ 13,00,000 ರು.ಇದೆ ಎಂದು ಗೊತ್ತಾಗಿದೆ. 2 ಉಪಕರಣಗಳಿಗೆ 26,00,000 ರು. ವೆಚ್ಚವಾಗಲಿದೆ. ಆದರೆ ಇಲಾಖೆಯು 28,00,000 ರು. ಎಂದು ನಮೂದಿಸಿದೆ. ಈ ದರದಂತೆ 12 ವೈದ್ಯಕೀಯ ಕಾಲೇಜುಗಳಿಗೆ 56,00,000 ರು. ವೆಚ್ಚವಾಗಲಿದೆ. ಮಾರುಕಟ್ಟೆಯಲ್ಲಿನ ದರ ಮತ್ತು ಇಲಾಖೆ ನಮೂದಿಸಿರುವ ದರದ ಮಧ್ಯೆ 30,00,000 ರು. ಹೆಚ್ಚಳವಿದೆ.

ಪಿಐಸಿಯು ವೆಂಟಿಲೇಟರ್ ಸಹಿತ ಹಾಸಿಗೆ, ವೆಂಟಿಲೇಟರ್‌ ರಹಿತ ಹಾಸಿಗೆ ಮತ್ತು ವೆಂಟಿಲೇಟರ್‌ ಸಹಿತ ಎನ್‌ಐಸಿ ಹಾಸಿಗೆ (ಒಟ್ಟು 1,280 ಹಾಸಿಗೆ)ಗಳನ್ನು ಮಾರುಕಟ್ಟೆಯಲ್ಲಿನ ದರಕ್ಕಿಂತಲೂ 141.51 ಕೋಟಿ ರು. ಹೆಚ್ಚಳ ದರದಲ್ಲಿ ಖರೀದಿಸಲು ಮುಂದಾಗಿದೆ. ವಾಸ್ತವದಲ್ಲಿ 1,280 ಹಾಸಿಗೆಗಳನ್ನು 55,76,00,000 ಕೋಟಿ ರು.ನಲ್ಲಿ ಖರೀದಿಸಬಹುದಾಗಿದ್ದರೂ ವೈದ್ಯಕೀಯ ಶಿಕ್ಷಣ ಇಲಾಖೆಯು 197.27 ಕೋಟಿ ರು ದರದಲ್ಲಿ ಖರೀದಿಸಲು ಅನುಮೋದನೆ ಪಡೆದಿದೆ. ಮಾರುಕಟ್ಟೆಯಲ್ಲಿನ ದರಕ್ಕೂ ಮತ್ತು ಇಲಾಖೆಯು ನಮೂದಿಸಿರುವ ದರ ಮಧ್ಯೆ ಅಪಾರ ಹೆಚ್ಚಳವಿದೆ.

ಕಪ್ಪು ಶಿಲೀಂಧ್ರ ತಪಾಸಣೆ ಮತ್ತು ಚಿಕಿತ್ಸೆಗೆ ಬೇಕಾಗುವ 11 ಉಪಕರಣಗಳನ್ನು ಮಾರುಕಟ್ಟೆಯಲ್ಲಿರುವ ದರದಂತೆ ಖರೀದಿ ಮಾಡಿದರೆ 4,24,29,600 ರು. ವೆಚ್ಚವಾಗಲಿದೆ. ಆದರೆ ವೈದ್ಯಕೀಯ ಶಿಕ್ಷಣ ಇಲಾಖೆಯು ನಮೂದಿಸಿರುವ ಬೆಲೆಯಂತೆ ಖರೀದಿಸಿದರೆ 170.09 ಕೋಟಿ ರು. ವೆಚ್ಚವಾಗಲಿದೆ. ಮಾರುಕಟ್ಟೆಯಲ್ಲಿನ ವಾಸ್ತವ ದರಕ್ಕೂ ಮತ್ತು ಇಲಾಖೆ ನಮೂದಿಸಿರುವ ದರದ ಮಧ್ಯೆ 128. 47 ಕೋಟಿ ರು ವ್ಯತ್ಯಾಸ ಇರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts