ಕರ್ನಾಟಕದ ಚರ್ಚ್‌ಗಳ ಮೇಲೆ ಗೂಢಚಾರಿಕೆ; ಗುಪ್ತಚರ ಇಲಾಖೆಯಿಂದ ಕಾರ್ಯಾಚರಣೆ

ಬೆಂಗಳೂರು; ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಲಾಗುತ್ತಿದೆ ಎಂದು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್‌ ಅವರು ಪ್ರಸ್ತಾಪಿಸಿದ್ದರ ಬೆನ್ನಲ್ಲೇ ರಾಜ್ಯ ಗುಪ್ತಚರ ಇಲಾಖೆಯು ರಾಜ್ಯದಲ್ಲಿರುವ ಚರ್ಚ್‌ಗಳ ಮೇಲೆ ಗೂಢಚಾರಿಕೆ ನಡೆಸಿದೆ ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ.

ರಾಜ್ಯದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಗೆ ತರುವ ಕುರಿತು ಸರ್ಕಾರದ ಹಂತದಲ್ಲಿ ಸಿದ್ಧತೆ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ ನಡುವೆಯೇ ಗುಪ್ತಚರ ದಳವು ಚರ್ಚ್‌ಗಳ ಸಮೀಕ್ಷೆ ನಡೆಸಿರುವುದು ಮಹತ್ವ ಪಡೆದುಕೊಂಡಿದೆ. ಈ ಕುರಿತು ‘ದಿ ಕ್ವಿಂಟ್‌’ ವರದಿ ಪ್ರಕಟಿಸಿದೆ.

ಗೂಳಿಹಟ್ಟಿ ಶೇಖರ್‌ ಅವರು ತಮ್ಮ ತಾಯಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂದು ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದರು. ಇದಕ್ಕೆ ಉತ್ತರಿಸಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮತಾಂತರ ನಿಷೇಧಿಸುವ ಕುರಿತು ಸರ್ಕಾರದ ನಿಲುವನ್ನು ತಿಳಿಸಿರಲಿಲ್ಲ. ಆದರೀಗ ಸದ್ದಿಲ್ಲದೇ ಚರ್ಚ್‌ಗಳ ಸಮೀಕ್ಷೆ ನಡೆಸಿರುವುದು ಮುನ್ನೆಲೆಗೆ ಬಂದಿದೆ.

ವಿಧಾನಮಂಡಲದ ಹಿಂದುಳಿದ ವರ್ಗಗಳ ಸಮಿತಿಯು ಜಿಲ್ಲಾಮಟ್ಟದಲ್ಲಿರುವ ಸಕ್ಷಮ ಪ್ರಾಧಿಕಾರಗಳ ಮೂಲಕ ಚರ್ಚಗಳ ಮಾಹಿತಿ ಕಲೆ ಹಾಕಲು ಶಿಫಾರಸ್ಸು ಮಾಡಿತ್ತು ಎಂದು ತಿಳಿದು ಬಂದಿದೆ. ಇದೀಗ ಗುಪ್ತಚರ ಇಲಾಖೆಯು ಪೊಲೀಸ್‌ ಅಧಿಕಾರಿಗಳನ್ನು ಬಳಸಿಕೊಂಡು ಚರ್ಚ್‌ಗಳ ಸಮೀಕ್ಷೆ ನಡೆಸಿದೆ ಎಂದು ಗೊತ್ತಾಗಿದೆ.

ಚರ್ಚ್‌ಗಳ ಸಮೀಕ್ಷೆ ಕುರಿತಂತೆ ರಾಜ್ಯ ಗುಪ್ತಚರ ದಳದ ಎಡಿಜಿಪಿ ಅವರು ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಗೊತ್ತಾಗಿದೆ. 2021ರ ಅಕ್ಟೋಬರ್‌ 16ರಂದೇ ಈ ಕುರಿತು ಆದೇಶವೊಂದು ಹೊರಬಿದ್ದಿತ್ತು. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಚರ್ಚ್‌ಗಳ ಪೈಕಿ ಅಧಿಕೃತವೆಷ್ಟು ಮತ್ತು ಅನಧಿಕೃತವೆಷ್ಟು ಎಂಬುದನ್ನು ಪತ್ತೆ ಹಚ್ಚಿ ವರದಿ ನೀಡಲು ಸೂಚಿಸಲಾಗಿದೆ.ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನೆರವಿನೊಂದಿಗೆ ಚರ್ಚ್‌ಗಳ ಸಮೀಕ್ಷೆ ನಡೆಸಿದೆ ಎಂದು ತಿಳಿದು ಬಂದಿದೆ.

ಗುಪ್ತಚರ ಇಲಾಖೆಯು ಹೊರಡಿಸಿರುವ ಆದೇಶದದಲ್ಲಿ ‘ಅತ್ಯಂತ ತುರ್ತು’ ಎಂಬ ಒಕ್ಕಣೆ ಹೊಂದಿದೆ. ಚರ್ಚ್‌ಗಳು ಹೊಂದಿರುವ ಆಸ್ತಿ, ಚರ್ಚ್‌ಗಳ ಮುಖ್ಯಸ್ಥರು, ಚರ್ಚ್‌ಗಳಲ್ಲಿ ಮಾಡುವ ಪ್ರಾರ್ಥನೆ ಮಾದರಿಯಲ್ಲಿಯೇ ಮನೆಗಳಲ್ಲಿ ಪ್ರಾರ್ಥನೆ ನಡೆಸುತ್ತಿರುವ ಸ್ಥಳಗಳನ್ನು ಶೋಧಿಸಿ ತನಿಖೆ ನಡೆಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿತ್ತು. ಅಲ್ಲದೆ ಅಕ್ಟೋಬರ್‌ 18ರೊಳಗೇ ಈ ಕುರಿತು ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿತ್ತು ಎಂದು ‘ದಿ ಕ್ವಿಂಟ್‌’ ವರದಿ ಮಾಡಿದೆ.

ಗುಪ್ತಚರ ವಿಭಾಗದ ಎಲ್ಲಾ ಡಿವೈಎಸ್‌ಪಿ ಮತ್ತು ಇನ್ಸ್‌ಪೆಕ್ಟರ್‌ಗಳಿಗೂ ಆದೇಶ ಹೊರಡಿಸಲಾಗಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿರುವ ಪ್ರತಿಯೊಂದು ಚರ್ಚ್‌ಗಳನ್ನು ಪ್ರೊಟೆಸ್ಟಂಟ್‌ ಅಥವಾ ಕ್ಯಾಥೋಲಿಕ್‌ ಎಂದು ವರ್ಗೀಕರಿಸಿ ಗುರುತಿಸಬೇಕು ಎಂದು ಸೂಚಿಸಲಾಗಿದೆ ಎಂದು ಗೊತ್ತಾಗಿದೆ.

ರಾಜ್ಯದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಗೆ ತರುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸರ್ಕಾರವೇ ಕೆಲವೇ ತಿಂಗಳುಗಳ ಹಿಂದೆಯೇ ಸ್ಪಷ್ಟಪಡಿಸಿತ್ತು. ಮತಾಂತರ ನಿಷೇಧಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್‌ನ ಸದಸ್ಯ ಬಿಜೆಪಿಯ ಎನ್‌ ರವಿಕುಮಾರ್‌ ಅವರು 2020ರ ಸೆ. 23ರಂದು ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ್ದ ಸಮಾಜ ಕಲ್ಯಾಣ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರು ರಾಜ್ಯದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಗೆ ತರುವ ಪ್ರಸ್ತಾವನೆಯೇ ಇಲ್ಲ ಎಂದಿದ್ದರು.

ಮಾಜಿ ಸಚಿವ ಸಿ ಟಿ ರವಿ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಕೆಲವೇ ದಿನಗಳಲ್ಲಿ ಮತಾಂತರ ನಿಷೇಧ ಕುರಿತು ಟ್ವೀಟ್‌ ಮಾಡಿದ್ದರು. ವಿವಾಹದ ಉದ್ದೇಶಕ್ಕಾಗಿ ಮತಾಂತರವನ್ನು ನಿಷೇಧಿಸುವ ಕಾನೂನು ತರಲಾಗುವುದು ಎಂದು ಸಿ ಟಿ ರವಿ ಅವರು ಸಮರ್ಥಿಸಿಕೊಂಡಿದ್ದರು. ಮತಾಂತರದ ಕುರಿತು ಸರ್ಕಾರದ ಮುಂದೆ ಯಾವ ಪ್ರಸ್ತಾವನೆಯೇ ಇಲ್ಲ ಎಂದು ಸರ್ಕಾರ ಉತ್ತರಿಸಿದ ನಂತರವೂ ಟ್ವೀಟ್‌ ಮಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು.

ಇತ್ತೀಚೆಗೆ ಅಲಹಾಬಾದ್ ಹೈಕೋರ್ಟ್ , ಕೇವಲ ಮದುವೆ ಉದ್ದೇಶಕ್ಕಾಗಿ ಮತಾಂತರ ಆಗುವುದನ್ನು ಒಪ್ಪಲಾಗದು ಎಂದು ತೀರ್ಪು ನೀಡಿತ್ತು. ತಮ್ಮ ಮದುವೆ ಬಳಿಕ ಮೂರು ತಿಂಗಳ ರಕ್ಷಣೆ ನೀಡುವಂತೆ ಮನವಿ ಮಾಡಿದ ಜೋಡಿಯೊಂದರ ಅರ್ಜಿಗೆ ಮಧ್ಯಪ್ರವೇಶಿಸಲು ನಿರಾಕರಿಸುತ್ತಾ ಕೋರ್ಟ್ ಈ ತೀರ್ಪು ನೀಡಿದ್ದನ್ನು ಸ್ಮರಿಸಬಹುದು.

ಕೇಂದ್ರ ಸರ್ಕಾರ ‘ಮತಾಂತರ ನಿಷೇಧ ಕಾಯ್ದೆ’ಯನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಕಾನೂನು ಸಚಿವಾಲಯ 2015ರಲ್ಲೇ ಹೇಳಿತ್ತು. ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ವಿಷಯ ಸಂಪೂರ್ಣವಾಗಿ ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಕಾಯ್ದೆ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಕಾನೂನು ಸಚಿವಾಲಯ ಹೇಳಿತ್ತು.

ಮತಾಂತರದ ವಿಷಯದ ಬಗ್ಗೆ ಸಂಸತ್‌ನಲ್ಲಿ ತೀವ್ರ ಚರ್ಚೆ ನಡೆದಾಗ, ಮತಾಂತರ ನಿಷೆಧ ಕಾಯ್ದೆ ಜಾರಿಗೊಳಿಸುವ ಸಂಬಂಧ ಗೃಹ ಇಲಾಖೆ, ಕಾನೂನು ಸಚಿವಾಲಯದ ಸಲಹೆ ಕೇಳಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದ ಸಚಿವಾಲಯ, ಮತಾಂತರದ ವಿಷಯ ಸಂಪೂರ್ಣವಾಗಿ ರಾಜ್ಯಗಳಿಗೆ ಸಂಬಂಧಿಸಿರುವ ವಿಷಯವಾಗಿರುವುದರಿಂದ ಕೇಂದ್ರ ಸರ್ಕಾರ ಕಾನೂನು ತರಲು ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿತ್ತು.

ಒಡಿಶಾ ಹಾಗೂ ಮಧ್ಯಪ್ರದೇಶದಲ್ಲಿ ಜಾರಿಗೆ ತರಲಾಗಿದ್ದ ಮತಾಂತರ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ 1977ರಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಉಲ್ಲೇಖಿಸಿರುವ ಕಾನೂನು ಸಚಿವಾಲಯ, ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವುದರ ಸಂಬಂಧ ರಾಜ್ಯಸರ್ಕಾರದ ಪರಮಾಧಿಕಾರವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು ಎಂದು ಹೇಳಿದೆ.

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್‌ ಮತಾಂತರ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ಚರ್ಚೆ ನಡೆಯಲಿ ಎಂದು ಇತ್ತೀಚೆಗಷ್ಟೇ ಹೇಳಿದ್ದರು. ವಿ.ಹೆಚ್.ಪಿ ನಡೆಸಿದ್ದ ಘರ್ ವಾಪಸಿ ಕಾರ್ಯಕ್ರಮದಿಂದಾಗಿ ಮತಾಂತರ ನಿಷೇಧ ಕಾಯ್ದೆ ಬಗ್ಗೆ ಚರ್ಚೆ ನಡೆಯುತ್ತಿದೆ.

SUPPORT THE FILE

Latest News

Related Posts