ಯುವ ನೀತಿ ; ತಜ್ಞರ ಸಮಿತಿಗೆ ಸೂಲಿಬೆಲೆ, ಸಂಕಲ್ಪ್‌ ಶೆಟ್ಟರ್‌, ಐಶ್ವರ್ಯ ನೇಮಕ

ಬೆಂಗಳೂರು; ಕರ್ನಾಟಕ ಯುವ ನೀತಿ ರೂಪಿಸಲು ರಾಜ್ಯ ಸರ್ಕಾರವು ರಚಿಸಿರುವ ತಜ್ಞರ ಸಮಿತಿಯಲ್ಲಿ ಸಂಘ ಪರಿವಾರದ ಹಿನ್ನೆಲೆ ಹೊಂದಿರುವ ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರ ಪುತ್ರ ಸಂಕಲ್ಪ್‌ ಶೆಟ್ಟರ್‌ ಕೇಂದ್ರದ ಮಾಜಿ ಸಚಿವ ದಿ.ಅನಂತಕುಮಾರ್‌ ಅವರ ಪುತ್ರಿ ಐಶ್ವರ್ಯ ದಿವೇಶ್‌ ಅವರೂ ಸೇರಿದಂತೆ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಂಟು ಹೊಂದಿರುವ ಹಲವರನ್ನು ಸದಸ್ಯರನ್ನಾಗಿ ನೇಮಿಸಿರುವುದು ಇದೀಗ ವಿವಾದಕ್ಕೆ ದಾರಿಮಾಡಿಕೊಟ್ಟಿದೆ.

ಹೊಸ ಧರ್ಮಗಳ ಉದಯ ಪಠ್ಯ ಕಡಿತಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ರಚಿಸಿದ್ದ ತಜ್ಞರ ಸಮಿತಿಗೆ ರೋಹಿತ್‌ ಚಕ್ರತೀರ್ಥ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದರ ಬೆನ್ನಲ್ಲೇ ಯುವ ನೀತಿ ರೂಪಿಸಲು ಡಾ ಬಾಲಸುಬ್ರಹ್ಮಣ್ಯಂ ಅವರ ಅಧ್ಯಕ್ಷತೆಯ ಸಮಿತಿಯಲ್ಲಿ ಸಂಘಪರಿವಾರದ ನಂಟು ಹೊಂದಿರುವವರಿಗೇ ಅಗ್ರ ಸ್ಥಾನ ಲಭಿಸಿರುವುದು ಮುನ್ನೆಲೆಗೆ ಬಂದಿದೆ. ಯುವ ನೀತಿ ರೂಪಿಸುವ ಸಂಬಂಧ ರಚಿಸಿರುವ ಸಮಿತಿ ಸದಸ್ಯರ ಪಟ್ಟಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಸ್ವಾಮಿ ವಿವೇಕಾನಂದ ಯುವ ಚಳವಳಿಯ ಸಂಸ್ಥಾಪಕ ಡಾ ಆರ್‌ ಬಾಲಸುಬ್ರಹ್ಮಣ್ಯಂ ಅವರು ಯುವ ನೀತಿ ನಿರೂಪಣೆ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಚಕ್ರವರ್ತಿ ಸೂಲಿಬೆಲೆ, ಸಂಕಲ್ಪ್‌ ಶೆಟ್ಟರ್‌, ಚನ್ನಮಲ್ಲಿಕಾರ್ಜುನ್‌ ಬಿ ಪಾಟೀಲ್‌, ಡಾ ಕೃಷ್ಣ ಡಿ ಎಸ್‌, ಅನಂತ್‌ಕುಮಾರ್‌ ಪ್ರತಿಷ್ಠಾನದ ಐಶ್ವರ್ಯ ದಿವೇಶ್‌, ಮಂಡ್ಯದ ಕೆ ನಾಗಣ್ಣ ಗೌಡ, ಹಾಸನದ ಸಂತೋಷ್‌ ಸೋಮಶೇಖರ್‌ (ಕೆಂಚಾಂಬ), ಬೆಂಗಳೂರಿನ ವಿನೋದ್‌ ಕೃಷ್ಣಮೂರ್ತಿ ಅವರು ಇತರೆ ಸದಸ್ಯರಾಗಿದ್ದಾರೆ.

ಈ ಪೈಕಿ ಚನ್ನಮಲ್ಲಿಕಾರ್ಜುನ ಬಿ ಪಾಟೀಲ್ ಬಿಜೆಪಿ ಕರ್ನಾಟಕ ಸಾಮಾಜಿಕ ಮಾಧ್ಯಮ ತಂಡದ ಸಂಚಾಲಕರಾಗಿದ್ದಾರೆ ಎಂದು ತಿಳಿದು ಬಂದಿದೆ. ಅದೇ ರೀತಿ ವಿನೋದ್ ಕೃಷ್ಣಮೂರ್ತಿ ಪ್ರಸ್ತುತ ಸಾಮಾಜಿಕ ಮಾಧ್ಯಮ ಸಂಚಾಲಕರಾಗಿದ್ದಾರೆ, ಕೆ ನಾಗಣ್ಣ ಗೌಡ ಅವರು ಈ ಹಿಂದೆ ಮಂಡ್ಯ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಎಂದು ಗೊತ್ತಾಗಿದೆ.

ಉಳಿದಂತೆ ಸಮಿತಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್‌, ನೆಹರು ಯುವ ಕೇಂದ್ರದ ನಿರ್ದೇಶಕ ಎಂ ಎನ್‌ ನಟರಾಜ್‌, ರಾಜ್ಯ ಎನ್‌ಎಸ್‌ಎಸ್‌ ಅಧಿಕಾರಿ ಡಾ ಪ್ರತಾಪ್‌ ಲಿಂಗಯ್ಯ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

‘ಕರ್ನಾಟಕ ರಾಜ್ಯ ಯುವ ನೀತಿ 2012ರಲ್ಲಿ ರೂಪಿಸಲಾಗಿತ್ತು. ಪ್ರಸ್ತುತ ಸಾಕಷ್ಟು ಬದಲಾವಣೆಗಳಾಗಿರುವ ಹಿನ್ನೆಲೆಯಲ್ಲಿ ಕಾಲಮಾನಕ್ಕೆ ಅನುಗುಣವಾಗಿ ರಾಜ್ಯ ಯುವ ನೀತಿಯನ್ನು ಹೊಸದಾಗಿ ರೂಪಿಸುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಯುವ ನೀತಿ 2021ನ್ನು ಹೊರತರಲು ತಜ್ಞರ ಸಮಿತಿ ರಚಿಸಲಾಗಿದೆ, ‘ ಎಂದು ಸರ್ಕಾರವು ಆದೇಶದಲ್ಲಿ ತಿಳಿಸಿದೆ.

ಈ ಸಮಿತಿಯು ರಾಜ್ಯದ ಯುವಜನರು ತಮ್ಮ ಜೀವನವನ್ನು ಉತ್ತಮವಾಗಿ ಕಟ್ಟಿಕೊಳ್ಳಲು ಹಾಗೂ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಅನುವಾಗುವಂತೆ ಸಮಗ್ರವಾದ ರಾಜ್ಯ ಯುವ ನೀತಿ ರೂಪಿಸುವ ಸಂಬಂಧ 2 ತಿಂಗಳೊಳಗಾಗಿ ವರದಿ ನೀಡಲು ಸೂಚಿಸಲಾಗಿದೆ.

ಯುವ ನೀತಿ ರೂಪಿಸಲು ರಾಜ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿದ್ದರೂ ಅವರನ್ನೆಲ್ಲಾ ಬದಿಗೆ ಸರಿಸಿ ಮಾಜಿ ಮುಖ್ಯಮಂತ್ರಿ ಶೆಟ್ಟರ್‌ ಅವರ ಪುತ್ರ, ಕೇಂದ್ರದ ಮಾಜಿ ಸಚಿವ ದಿ.ಅನಂತಕುಮಾರ್‌ ಪುತ್ರಿ, ಚಕ್ರವರ್ತಿ ಸೂಲಿಬೆಲೆ ಅವರಿಗೆ ಸಮಿತಿಗೆ ನೇಮಕ ಮಾಡಿರುವುದು ಸರಿಯಲ್ಲ. ಯುವ ಕ್ಷೇತ್ರ ಮತ್ತು ಕ್ರೀಡಾ ಇಲಾಖೆಯಲ್ಲಿ ಉತ್ತಮ ಸಾಧನೆಗೈದಿರುವ ಕ್ರೀಡಾಪಟುಗಳನ್ನು ನೇಮಿಸಬೇಕಿದ್ದ ರಾಜ್ಯ ಸರ್ಕಾರವು ಯುವ ನೀತಿಯ ಮುಂದಿನ ಕಾರ್ಯಸೂಚಿಯನ್ನು ಸಮಿತಿ ವರದಿ ಕೊಡುವ ಮುನ್ನವೇ ಬಹಿರಂಗಗೊಳಿಸಿದಂತಾಗಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.

the fil favicon

SUPPORT THE FILE

Latest News

Related Posts