ಬೆಂಗಳೂರು; ಶೈಕ್ಷಣಿಕ ಉದ್ದೇಶಕ್ಕೆ 11.22 ಎಕರೆ ಜಮೀನು ಮಂಜೂರಾತಿ ಕೋರಿ ಜಚನಿ ರಾಷ್ಟ್ರೀಯ ಪೀಠದ ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರು ಸಲ್ಲಿಸಿದ್ದ ಪ್ರಸ್ತಾವನೆಗೆ ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿ ಸಹಮತ ವ್ಯಕ್ತಪಡಿಸಿಲ್ಲ. ಸಾರ್ವಜನಿಕ ಮತ್ತು ಸರ್ಕಾರದ ಉದ್ದೇಶಗಳಿಗಾಗಿಯೇ ಮೀಸಲಿರಿಸಿದ್ದ ಜಮೀನುಗಳನ್ನು ಖಾಸಗಿ ವ್ಯಕ್ತಿ, ಸಂಘ, ಸಂಸ್ಥೆಗೆ ಮಂಜೂರು ಮಾಡಲು ಭೂ ಕಂದಾಯ ನಿಯಮಗಳಲ್ಲಿ ಅವಕಾಶಗಳಿಲ್ಲ ಎಂದು ಕಂದಾಯ ಇಲಾಖೆಗೆ ವಾಸ್ತವಾಂಶದ ವರದಿಯನ್ನು ಸಲ್ಲಿಸಿದ್ದಾರೆ.
ಬಿ ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಸಂಬಂಧ ಬಿಜೆಪಿ ಹೈಕಮಾಂಡ್ ಚಾಲನೆ ನೀಡಿದ್ದ ಸಂದರ್ಭದಲ್ಲಿ ‘ವಯಸ್ಸಾಗಿದೆ ಎಂಬ ಕಾರಣ ನೀಡಿ ಅಧಿಕಾರದಿಂದ ಕೆಳಗಿಳಿಸುವುದು ಸರಿಯಲ್ಲ ಎಂದು ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಪ್ರತಿಪಾದಿಸಿದ್ದರು. ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು ಎಂದು ಯಡಿಯೂರಪ್ಪ ಅವರ ಪರ ಅಖಾಡಕ್ಕಿಳಿದಿದ್ದರೂ ಬಿಜೆಪಿ ಜಮೀನು ಮಂಜೂರು ಮಾಡಿಸಿಕೊಳ್ಳುವಲ್ಲಿ ನಡೆಸಿದ್ದ ಪ್ರಯತ್ನವನ್ನು ಆರಂಭಿಕ ಹಂತದಲ್ಲಿಯೇ ಬಿಜೆಪಿ ಸರ್ಕಾರವು ಚಿವುಟಿ ಹಾಕಿದೆ.
ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಿದ್ದ ಜಮೀನು ಕೋರಿದ್ದ ನಿಡುಮಾಮಿಡಿ
ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಗ್ರಾಮದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಉದ್ದೇಶದಿಂದ ಬಾಗೇಪಲ್ಲಿ ಗ್ರಾಮದ ಸರ್ವೆ ನಂಬರ್ 402ರಲ್ಲಿ 11.22 ಎಕರೆ ವಿಸ್ತೀರ್ಣದ ಜಮೀನಿನನ್ನು ಮಂಜೂರು ಮಾಡುವಂತೆ ಜಚನಿ ರಾಷ್ಟ್ರೀಯ ಪೀಠದ ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಕಂದಾಯ ಸಚಿವ ಆರ್ ಅಶೋಕ್ ಅವರನ್ನು ಕೋರಿದ್ದರು. ನಿಡುಮಾಮಿಡಿ ಸ್ವಾಮೀಜಿ ಕೋರಿದ್ದ ಜಮೀನು ಸರ್ಕಾರದ ಉದ್ದೇಶ ಮತ್ತು ಸಾರ್ವಜನಿಕ ಉದ್ದೇಶಕ್ಕೆ ಕಂದಾಯ ಇಲಾಖೆಯು ಕಾಯ್ದರಿಸಿತ್ತು.
ಖಾಸಗಿ ವ್ಯಕ್ತಿ, ಸಂಸ್ಥೆಗಳಿಗೆ ಜಮೀನನ್ನು ಮಂಜೂರು ಮಾಡಲು ಭೂ ಕಂದಾಯ ಮತ್ತು ಭೂ ಮಂಜೂರಾತಿ ನಿಯಮಗಳಲ್ಲಿ ಅವಕಾಶಗಳಿಲ್ಲ ಎಂದು ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿ ವಾಸ್ತವಾಂಶ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಉಪ ವಿಭಾಗಾಧಿಕಾರಿಗಳು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ 2021ರ ಜುಲೈ 5ರಂದು ಸಲ್ಲಿಸಿದ್ದಾರೆ. ಈ ವರದಿಯ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ವರದಿಯಲ್ಲೇನಿದೆ?
ಜಚನಿ ರಾಷ್ಟ್ರೀಯ ಪೀಠಕ್ಕೆ ಮಂಜೂರು ಮಾಡಲು ಕೋರಿರುವ ಜಮೀನು ಬಾಗೇಪಲ್ಲಿ ಗ್ರಾಮವು ಬಾಗೇಪಲ್ಲಿ ಪುರಸಭೆಗೆ ಹೊಂದಿಕೊಂಡಿದೆ. ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22ಎ(2)ರಂತೆ ಸರ್ಕಾರ ಭೂಮಿಯನ್ನು ನಗರ ಪೌರ ಸರಹದ್ದಿನೊಳಗೆ ಯಾವನೇ ವೈಯಕ್ತಿಕ ಅಥವಾ ಖಾಸಗಿ ಸಂಸ್ಥೆಗಳಿಗೆ ಮಂಜೂರು ಮಾಡತಕ್ಕದ್ದಲ್ಲ. ಅದನ್ನು ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸತಕ್ಕದ್ದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹಾಗೆಯೇ ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 108 ಐ(2)ರಂತೆ ನಗರ ಅಥವಾ ಪಟ್ಟಣ ಪರಿಮಿತಿಯೊಳಗೆ ಸರ್ಕಾರದ ಭೂಮಿಯನ್ನು ಯಾವನೇ ವ್ಯಕ್ತಿ ಅಥವಾ ಖಾಸಗಿ ಸಂಸ್ಥೆಗೆ ಮಂಜೂರಾತಿ ಮಾಡತಕ್ಕದ್ದಲ್ಲ. ಅಂತ ಎಲ್ಲಾ ಭೂಮಿಗಳನ್ನು ಬೆಳೆಯುತ್ತಿರುವ ಅಥವಾ ಪಟ್ಟಣದ ಸಾರ್ವಜನಿಕ ಅವಶ್ಯಕತೆಗಾಗಿ ಒದಗಿಸುವುದಕ್ಕಾಗಿ ಸಾರ್ವಜನಿಕ ಅಥವಾ ಸರ್ಕಾರದ ಉದ್ದೇಶಗಳಿಗಾಗಿ ಕಾಯ್ದಿರಿಸಬೇಕಾಗಿರುತ್ತದೆ ಎಂದು ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿ ಮತ್ತು ಬಾಗೇಪಲ್ಲಿ ತಹಶೀಲ್ದಾರ್ ವಾಸ್ತವಾಂಶದ ವರದಿಯನ್ನು ಸಲ್ಲಿಸಿದ್ದಾರೆ.ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿಗಳು ಸಲ್ಲಿಸಿರುವ ವಾಸ್ತವಾಂಶದ ವರದಿಯ ಮೇಲೆ ಸರ್ಕಾರ ಇದುವರೆಗೂ ಯಾವುದೇ ಕ್ರಮ ವಹಿಸಿಲ್ಲ ಎಂದು ತಿಳಿದು ಬಂದಿದೆ.
‘ಜಾತಿ, ಮತ ಎಲ್ಲವನ್ನೂ ಮೀರಿದ ನಾಯಕ ಬಿ.ಎಸ್. ಯಡಿಯೂರಪ್ಪ. ಅವರು ಕೇವಲ ಲಿಂಗಾಯತ ನಾಯಕರಾಗಲಿಲ್ಲ. ಸರ್ವ ಜನಾಂಗದ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಅವರಿಗೆ ವಯಸ್ಸಾಗಿದೆ ಎಂದು ಕಾರಣ ನೀಡಿ ಅಧಿಕಾರದಿಂದ ಕೆಳಗಿಳಿಸುವುದು ಸರಿಯಲ್ಲ. ಯಡಿಯೂರಪ್ಪನವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು’ ಎಂದು ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದ್ದನ್ನು ಸ್ಮರಿಸಬಹುದು.
‘ತಮಿಳುನಾಡಿನಲ್ಲಿ 75 ವರ್ಷ ವಯಸ್ಸು ಮೀರಿದ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿ, ಬಿಜೆಪಿಯು ಚುನಾವಣೆ ಎದುರಿಸಿತ್ತು. ಆದರೆ, ವಯಸ್ಸಾಯಿತು ಎಂಬ ಕಾರಣ ನೀಡಿ ಯಡಿಯೂರಪ್ಪನವರನ್ನು ಕೆಳಗಿಳಿಸುವ ಪ್ರಯತ್ನಗಳು ನಡೆಯುತ್ತಿವೆ. ಪಕ್ಷವು ಒಂದೊಂದು ಕಡೆ ಒಂದೊಂದು ನಿಯಮ ಪಾಲಿಸಬಾರದು. ಬಿಜೆಪಿಯಲ್ಲಿ ಸದ್ಯ, ಯಡಿಯೂರಪ್ಪನವರಿಗೆ ಸಾಟಿಯಾಗಬಲ್ಲ ಮತ್ತೊಬ್ಬ ನಾಯಕ ರಾಜ್ಯದಲ್ಲಿಲ್ಲ’ ಎಂದೂ ಹೇಳಿದ್ದರು.
‘ಸರ್ಕಾರದ ರಚನೆಯ ಸಂದರ್ಭದಲ್ಲಿ ಯಡಿಯೂರಪ್ಪ ಅಪಕೀರ್ತಿಗೆ ಒಳಗಾಗಿದ್ದರು. ನಂತರ, ಅತ್ಯಂತ ದಕ್ಷತೆಯಿಂದ ಕ್ರಿಯಾಶೀಲರಾಗಿ ಕೆಲಸ ಮಾಡಿದ್ದಾರೆ. ನೆರೆ, ಬರ ಹಾಗೂ ಕೋವಿಡ್‌ನಂತಹ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಿದ್ದಾರೆ. ಬಿಜೆಪಿ ನಾಯಕರು ಮಠಾಧೀಶರ ಮಾತಿಗೆ ಮನ್ನಣೆ ನೀಡಬೇಕು ಮತ್ತು ಸೂಕ್ತ ನಿರ್ಧಾರ ಕೈಗೊಳ್ಳಬೇಕು’ ಎಂದೂ ಹೇಳಿಕೆ ನೀಡುವ ಮೂಲಕ ಯಡಿಯೂರಪ್ಪರ ಬೆನ್ನಿಗೆ ನಿಂತಿದ್ದರು.