ಬೆಂಗಳೂರು; ಬೆಂಗಳೂರು; ರಾಜ್ಯದ ಬ್ರಾಹ್ಮಣ ಅಭ್ಯರ್ಥಿಗಳಿಗೆ ಐಎಎಸ್ ಪರೀಕ್ಷಾ ಪೂರ್ವ ಆನ್‌ಲೈನ್ ತರಬೇತಿ ನೀಡಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಬೆಂಬಲಿತ ಎಂದೇ ಹೇಳಲಾಗುವ ದೆಹಲಿಯಲ್ಲಿರುವ ಸಂಕಲ್ಪ್ ಐಎಎಸ್ ಅಕಾಡೆಮಿ ಮೂಲಕ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಐಎಎಸ್ ಪರೀಕ್ಷಾ ಪೂರ್ವ ಆನ್‌ಲೈನ್ ತರಬೇತಿ ನೀಡಲು 4(ಜಿ) ವಿನಾಯಿತಿ ಅಡಿಯಲ್ಲಿ ಬ್ರಾಹ್ಮಣ ಅಭಿವೃದ್ದಿ ಮಂಡಳಿಗೆ ರಾಜ್ಯ ಬಿಜೆಪಿ ಸರ್ಕಾರವು ಅನುಮತಿ ನೀಡಿರುವ ಪ್ರಕರಣವನ್ನು ‘ದಿ ಫೈಲ್’ ಇದೀಗ ಹೊರಗೆಡವುತ್ತಿದೆ.
ಸಂಕಲ್ಪ್ ಐಎಎಸ್ ಅಕಾಡೆಮಿಯು 1986ರಿಂದಲೂ ಕೇಂದ್ರದ ನಾಗರಿಕ ಸೇವೆಗಳಿಗೆ ತರಬೇತಿ ನೀಡುತ್ತಿದೆಯಾದರೂ ತರಬೇತಿಯಲ್ಲಿ ಪ್ರಮುಖವಾಗಿ ‘ರಾಷ್ಟ್ರೀಯವಾದಿ’ ಚಿಂತನೆಯನ್ನೇ ಬಿತ್ತುತ್ತಿದೆ ಎಂಬ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿದೆ. ಆರ್‌ಎಸ್‌ಎಸ್ ಬೆಂಬಲಿತ ಎಂಬ ಹಣೆಪಟ್ಟಿ ಹೊಂದಿರುವ ಸಂಕಲ್ಪ್ ಐಎಎಸ್ ಅಕಾಡೆಮಿ ಮೂಲಕವೇ ರಾಜ್ಯದ ಬ್ರಾಹ್ಮಣ ವಿದ್ಯಾರ್ಥಿಗಳಿಗೂ ಆನ್‌ಲೈನ್ ತರಬೇತಿ ನೀಡಲು ರಾಜ್ಯ ಬಿಜೆಪಿ ಸರ್ಕಾರವು ಅನುಮೋದನೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಅಲ್ಲದೆ ನಾಗರಿಕ ಸೇವೆಯ ಅಧಿಕಾರಶಾಹಿ ವ್ಯವಸ್ಥೆಯೊಳಗೆ ರಾಜ್ಯದಿಂದಲೂ ರಾಷ್ಟ್ರೀಯವಾದಿಗಳ ಸೇರ್ಪಡೆಗೆ ಬಿಜೆಪಿ ಸರ್ಕಾರವು ತನ್ನ ಕೊಡುಗೆಯನ್ನು ನೀಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಪಿಡಿಒನಿಂದ ಐಎಎಸ್ ಹಂತದವರೆಗೂ ಆರ್‌ಎಸ್‌ಎಸ್ ಕಾರ್ಯಕರ್ತರಿದ್ದಾರೆ ಎಂದು ಸಚಿವ ಸುನೀಲ್‌ಕುಮಾರ್ ಹೇಳಿಕೆ ನೀಡಿದ್ದರ ಬೆನ್ನಲ್ಲೇ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಆರ್‌ಎಸ್‌ಎಸ್ ಬೆಂಬಲಿತ ಸಂಕಲ್ಪ್ ಐಎಎಸ್ ಅಕಾಡೆಮಿ ಮೂಲಕ ಆನ್‌ಲೈನ್ ತರಬೇತಿ ನೀಡಲು ಅನುಮತಿ ನೀಡಿರುವ ಪ್ರಕರಣವು ವಿವಾದ ಹುಟ್ಟು ಹಾಕುವ ಸಾಧ್ಯತೆಗಳಿವೆ.
ಸಂಕಲ್ಪ್ ಅಕಾಡೆಮಿಗೆ 64.50 ಲಕ್ಷ ರು.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮೂಲಕ ಅರ್ಹ ಮತ್ತು ಆಸಕ್ತ 150 ಬ್ರಾಹ್ಮಣ ಅಭ್ಯರ್ಥಿಗಳಿಗೆ ಚಾಣಕ್ಯ ಆಡಳಿತ ತರಬೇತಿ ಯೋಜನೆಯಡಿ ಸಂಕಲ್ಪ್ ಐಎಎಸ್ ಅಕಾಡೆಮಿ ಮೂಲಕ ಅನ್‌ಲೈನ್ ತರಬೇತಿ ನೀಡಲು ಕಂದಾಯ ಇಲಾಖೆಯು 2020ರಲ್ಲಿ ಅನುಮೋದಿಸಿದೆ.
ಪ್ರತಿ ಅಭ್ಯರ್ಥಿಗೆ 43,000 ರು.ನಂತೆ ಒಟ್ಟು 64.50 ಲಕ್ಷ ರು. (ಜಿಎಸ್‌ಟಿ ಪ್ರತ್ಯೇಕ) ವೆಚ್ಚದಲ್ಲಿ ತರಬೇತಿ ನೀಡಲು 4(ಜಿ) ವಿನಾಯಿತಿ ನೀಡಲಾಗಿದೆ. ಈ ಸಂಬಂಧ ‘ದಿ ಫೈಲ್’ಗೆ ದಾಖಲೆ ಲಭ್ಯವಾಗಿದೆ.
ಐಎಎಸ್ ತರಬೇತಿ ನೀಡುವ ಸಂಬಂಧ ಬೆಂಗಳೂರು ನಗರದಲ್ಲಿ ಜೆಎಸ್‌ಎಸ್ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವೂ ಸೇರಿದಂತೆ 20ಕ್ಕೂ ಹೆಚ್ಚೂ ಕೇಂದ್ರಗಳಿವೆ. ಅನ್‌ಲೈನ್ ಮತ್ತು ಆಫ್‌ಲೈನ್ ತರಗತಿಗಳನ್ನು ನಡೆಸುವ ಸಂಬಂಧ ಬೆಂಗಳೂರು ನಗರದಲ್ಲಿ ಹಲವು ಕೇಂದ್ರಗಳಿವೆ. ತರಬೇತಿ ತರಗತಿಗಳನ್ನು ನಡೆಸಲು ಸ್ಪರ್ಧಾತ್ಮಕ ಟೆಂಡರ್ ಅಥವಾ ಆಸಕ್ತಿ ವ್ಯಕ್ತಪಡಿಸುವಿಕೆ ಟೆಂಡರ್ ಪ್ರಕ್ರಿಯೆ ನಡೆಸಿದ್ದಲ್ಲಿ ಇನ್ನಷ್ಟು ತರಬೇತಿ ಕೇಂದ್ರಗಳು ಭಾಗವಹಿಸಲು ಅವಕಾಶ ಲಭಿಸುತ್ತಿದ್ದವು.
ಆದರೆ ಟೆಂಡರ್ ಪ್ರಕ್ರಿಯೆ ನಡೆಸುವ ಗೋಜಿಗೆ ಹೋಗದೆಯೇ 4(ಜಿ) ವಿನಾಯಿತಿ ಅಡಿಯಲ್ಲಿ ಸಂಕಲ್ಪ್ ಐಎಎಸ್ ಅಕಾಡೆಮಿಯನ್ನೇ ಆಯ್ಕೆ ಮಾಡಿಕೊಂಡಿರುವುದರ ಹಿಂದೆ ಆರ್‌ಎಸ್‌ಎಸ್‌ನ ರಹಸ್ಯ ಕಾರ್ಯಸೂಚಿಗಳನ್ನು ಆಡಳಿತ ಹಂತದಲ್ಲಿಯೂ ಅನುಷ್ಠಾನಗೊಳಿಸುವ ಉದ್ದೇಶವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಆರ್‌ಎಸ್‌ಎಸ್ ಜತೆಗೆ ಸೇರದೆಯೇ ಬಿಜೆಪಿ, ವಿಎಚ್‌ಪಿ, ಭಾರತೀಯ ಮಜ್ದೂರ್ ಸಂಘ ಅಥವಾ ಎಬಿವಿಪಿ ಸಂಘಟನೆಗಳು ಕೆಲಸ ಮಾಡುವ ರೀತಿಯಂತೆಯೇ ಸಂಕಲ್ಪ್ ಐಎಎಸ್ ಅಕಾಡೆಮಿಯೂ ಸಂಘ ಪ್ರೇರಿತ ಸಂಸ್ಥೆಗಳಲ್ಲಿ ಒಂದು. ಈ ಅಕಾಡೆಮಿಯಲ್ಲಿ ತರಬೇತಿ ನೀಡಲಿರುವ ಬಹುತೇಕ ಸಂಪನ್ಮೂಲ ವ್ಯಕ್ತಿಗಳು ಆರ್‌ಎಸ್‌ಎಸ್‌ನ ಪ್ರಭಾವಕ್ಕೊಳಾದವರು ಮತ್ತು ಆರ್‌ಎಸ್‌ಎಸ್ ಸಿದ್ಧಾಂತಗಳತ್ತ ಸೆಳೆಯುವ ಕುಶಲತೆ ಹೊಂದಿರುವವರೇ ತರಬೇತಿ ನೀಡುತ್ತಿದ್ದಾರೆ.
ಸಂಕಲ್ಪ್ ಅನ್ನು ಆಗ ಆರ್‌ಎಸ್‌ಎಸ್ ಕಾರ್ಯಕರ್ತ ಸಂತೋಷ್ ತನೇಜ ಆರಂಭಿಸಿದ್ದರು. ಈ ಕೆಲಸಕ್ಕೆ ಆರ್‌ಎಸ್‌ಎಸ್ ಕಾರ್ಯಕಾರಿಯೂ ಬೆಂಬಲಿಸಿದೆ. ನಾಗರಿಕ ಸೇವೆಗಳ ಮೂಲಕ ರಾಷ್ಟ್ರಕಟ್ಟುವ ನಿಟ್ಟಿನಲ್ಲಿ ನೆರವಾಗಬಲ್ಲ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಮಾರ್ಗದರ್ಶನ ನೀಡುತ್ತದೆ. ಮತ್ತು ಅವರಲ್ಲಿ ಭಾರತೀಯ ಮೌಲ್ಯಗಳು ಮತ್ತು ಗುಣಗಳನ್ನು ತುಂಬುತ್ತದೆ ಎಂದು ಹೇಳಲಾಗಿದೆ. ಈ ಸಂಸ್ಥೆ ಈಗಾಗಲೇ ನಾಗರಿಕ ಸೇವೆಯಲ್ಲಿ ತೊಡಗುವವರಿಗೆ ಪಾಠ ಮಾಡುವುದು, ಟ್ಯುಟೋರಿಯಲ್ ನಡೆಸುವುದು, ಅಣುಕು ಸಂದರ್ಶನ ನಡೆಸುವುದು ತರಬೇತಿ ನೀಡುತ್ತಾ ಎರಡು ದಶಕಗಳನ್ನು ಪೂರ್ಣಗೊಳಿಸಿದೆ ಎಂದು ತಿಳಿದು ಬಂದಿದೆ.
1996ರಲ್ಲಿ ಮೊದಲ ಬ್ಯಾಚ್‌ನಲ್ಲಿ 26 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿತ್ತು. ಈ ಪೈಕಿ 14 ಮಂದಿ ನಾಗರಿಕ ಸೇವೆಗೆ ಆಯ್ಕೆಯಾದರು. ಯಾರೂ ಐಎಎಸ್ ಪಾಸಾಗದೇ ಇದ್ದರೂ ಐಪಿಎಸ್ ಮತ್ತು ಕೇಂದ್ರೀಯ ಸೇವೆಗೆ ಸೇರಿದ್ದರು. ಆ ನಂತರ 13 ಮಂದಿ ಐಎಎಸ್‌ಗೆ ಆಯ್ಕೆಯಾಗಿದ್ದರು.
ನಂತರದ ವರ್ಷಗಳಲ್ಲಿ 84 ಮಂದಿ ತರಬೇತಿ ಪಡೆದರೆ 59 ಮಂದಿ ವಿಭಿನ್ನಸೇವೆಗಳಿಗೆ ಸೇರಿದ್ದಾರೆ. 1999-2000 ನಡುವೆ 100ಕ್ಕೂ ಅಧಿಕ ಮಂದಿ ಸಂದರ್ಶನ ತರಬೇತಿಗೆ ಸೇರಿದರು. ಮತ್ತು ಶೇ. 90ರಷ್ಟು ಮಂದಿ ನಾಗರಿಕ ಸೇವೆಗೆ ಸೇರಿದ್ದರು. ಇತ್ತಿಚಿನ ವರ್ಷಗಳಲ್ಲಿ ಸಂಕಲ್ಪ್ ಐಎಎಸ್ ಅಕಾಡೆಮಿಯು ಕೇಂದ್ರಗಳನ್ನು ವಿಸ್ತರಿಸಿಕೊಳ್ಳುತ್ತಿದೆ.
ಇದೇ ಸಂಕಲ್ಪ್ ಐಎಎಸ್ ಅಕಾಡೆಮಿಯು ಆಯೋಜಿಸಿದ್ದ ತರಗತಿಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸ್ಮೃತಿ ಇರಾನಿ, ಪ್ರಕಾಶ್ ಜಾವಡೇಕರ್, ರಮೇಶ್ ಪೋಖ್ರಿಯಾಲ್ ಸೇರಿದಂತೆ ಸಂಘ ಪರಿವಾರದ ಹಿನ್ನೆಲೆ ಹೊಂದಿರುವ ಸಚಿವರುಗಳೂ ಉಪನ್ಯಾಸ ನೀಡಿದ್ದರು.