ಅಪೆಕ್ಸ್‌ ಬ್ಯಾಂಕ್‌ ಅಕ್ರಮ; ‘ದಿ ಫೈಲ್‌’ ಸರಣಿ ವರದಿಯಿಂದ ಎಚ್ಚೆತ್ತ ಜೆಡಿಎಸ್‌ನಿಂದ ಸದನದಲ್ಲಿ ಧರಣಿ

ಬೆಂಗಳೂರು: ರಾಜ್ಯ ಅಪೆಕ್ಸ್‌ ಬ್ಯಾಂಕ್‌ನಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ‘ದಿ ಫೈಲ್‌’ ಸರಣಿ ವರದಿಗಳನ್ನು ಪ್ರಕಟಿಸಿದ ನಂತರ ಅಕ್ರಮಗಳನ್ನು ಸಿಬಿಐ ತನಿಖೆಗೊಳಪಡಿಸಬೇಕು ಎಂದು ವಿಧಾನಸಭೆಯಲ್ಲಿ ಜೆಡಿಎಸ್‌ ಸದಸ್ಯರು ಒತ್ತಾಯಿಸಿದ್ದಾರೆ. 

ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ನಲ್ಲಿ ವಸೂಲಾಗದ ಸಾಲದ ವಿವರಗಳು, ರಾಜಕೀಯ ಪ್ರಭಾವಿಗಳ ಒಡೆತನದಲ್ಲಿರುವ ಸಕ್ಕರೆ ಕಾರ್ಖಾನೆಗಳು, ರೈತ ಸಹಕಾರೇತರ ಉದ್ದೇಶ ಹೊಂದಿರುವ ಕಟ್ಟಡ  ನಿರ್ಮಾಣ ಕಂಪನಿಗಳು, ವಾಣಿಜ್ಯ ಸಂಸ್ಥೆಗಳಿಗೆ ನೀಡಿದ್ದ ಸಾಲ ಮತ್ತು ಮರು ಪಾವತಿಸದ ಪ್ರಭಾವಿಗಳ ಪಟ್ಟಿಯನ್ನು ‘ದಿ ಫೈಲ್‌’ 2020ರ ಮಾರ್ಚ್ 19ರಿಂದ 23ರವರೆಗೆ ಒಟ್ಟು 5 ವರದಿಗಳಲ್ಲಿ ಬಹಿರಂಗಪಡಿಸಿತ್ತು. 

ಸಹಕಾರ ಸಂಘಗಳ ಜಂಟಿ ನಿಬಂಧಕ ಎಂ ಡಿ ನರಸಿಂಹಮೂರ್ತಿ ನೇತೃತ್ವದ ತನಿಖಾ ವರದಿ ಆಧರಿಸಿ ವರದಿ ಪ್ರಕಟಿಸಿದ್ದ  ‘ದಿ ಫೈಲ್‌’ ಬ್ಯಾಂಕ್‌ನ ಅಧ್ಯಕ್ಷರಾಗಿದ್ದ ಆರ್‌ ಎಂ ಮಂಜುನಾಥಗೌಡ ಅವರ ಅವಧಿಯಿಂದ ಹಾಲಿ ಅಧ್ಯಕ್ಷ ಕೆ  ಎನ್‌ ರಾಜಣ್ಣ ಅವರ ಅಧಿಕಾರಾವಧಿಯವರೆಗೆ ನಡೆದಿರುವ  ಗಂಭೀರ ಸ್ವರೂಪದ ಅಕ್ರಮಗಳನ್ನು ಬಯಲಿಗೆಳೆದಿತ್ತು. 

ಈ  ವಿಚಾರದ ಬಗ್ಗೆ ಚರ್ಚಿಸಲು ಜೆಡಿಎಸ್‌ ಸದಸ್ಯರು ನಿಯಮ 60ರ ಅಡಿಯಲ್ಲಿ ಪ್ರಸ್ತಾಪ ಸಲ್ಲಿಸಿದ್ದರು. ಆದರೆ  ವಿಧಾನಸಭೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇದಕ್ಕೆ ಅವಕಾಶ ಕಲ್ಪಿಸದ  ಕಾರಣ ಜೆಡಿಎಸ್‌  ಸದಸ್ಯರು ಧರಣಿ ಕೈಗೊಂಡಿದ್ದರು. ‘ಅಪೆಕ್ಸ್‌ ಬ್ಯಾಂಕ್‌ನ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ಹಾಗೂ ಇತರರು ಒಂದುಗೂಡಿ ನಿಯಮಗಳನ್ನು ಉಲ್ಲಂಘಿಸಿ ಖಾಸಗಿ ವ್ಯಕ್ತಿಗಳಿಗೆ, ವಾಣಿಜ್ಯ ಸಂಸ್ಥೆಗಳಿಗೆ, ಪ್ರಭಾವಿಗಳ ಒಡೆತನದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ನೂರಾರು ಕೋಟಿ ಸಾಲ ನೀಡಿದ್ದಾರೆ. ಈ ಸಾಲವನ್ನು ಸ್ವಂತ ಉದ್ದೇಶಕ್ಕೆ  ಬಳಸಿಕೊಂಡು ದುರುಪಯೋಗಪಡಿಸಿಕೊಂಡಿದ್ದಾರೆ,’ ಎಂದು ಜೆಡಿಎಸ್‌ನ ಎಚ್‌ ಡಿ ರೇವಣ್ಣ ಅವರು ಆರೋಪಿಸಿದರು.

ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ ನೀಡಿದ್ದ ಒಟ್ಟು 1,022.55 ಕೋಟಿ ರು.ಗಳ ಸಾಲ ಮೊತ್ತದ ಪೈಕಿ ಒಟ್ಟಾರೆ  610 ಕೋಟಿಯಷ್ಟು  ಅನುತ್ಪಾದಕ ಆಸ್ತಿ (ಎನ್ಪಿಎ) ಇರುವುದು ಬಹಿರಂಗವಾಗಿತ್ತು. ಒಟ್ಟು 27 ಸಕ್ಕರೆ ಕಾರ್ಖಾನೆಗಳಿಗೆ 2019ರ ಮಾರ್ಚ್‌ 31ರ ಅಂತ್ಯಕ್ಕೆ 47 ಪ್ರಕರಣಗಳಲ್ಲಿ ಒಟ್ಟು 1,603.36 ಕೋಟಿ ರು.ಸಾಲದ ಹೊರಬಾಕಿ ಇರುವುದನ್ನು ‘ದಿ ಫೈಲ್‌’ ಎಳೆಎಳೆಯಾಗಿ ಬಿಚ್ಚಿಟ್ಟಿತ್ತು. 

27 ಸಹಕಾರಿ ಮತ್ತು ಸಹಕಾರೇತರ ಸಕ್ಕರೆ ಕಾರ್ಖಾನೆಗಳಿಗೆ ವಿವಿಧ ರೀತಿಯ ಅಂದರೆ ದುಡಿಯುವ ಬಂಡವಾಳ, ಅವಧಿ ಸಾಲ, ಬ್ರಿಡ್ಜ್‌ ಲೋನ್‌, ಸಾಫ್ಟ್‌ ಲೋನ್‌ ಹೆಸರಿನಲ್ಲಿ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್‌ ಬ್ಯಾಂಕ್‌  ಒಟ್ಟು 1,022.55 ಕೋಟಿ ರು.ಗಳ ಸಾಲ ನೀಡಿದೆ. ಈ ಪೈಕಿ  860.48 ಕೋಟಿ ರು.ಸಾಲ ವಸೂಲಾಗಿಲ್ಲ.

10 ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ 517.80 ಕೋಟಿ ರು.ಸಾಲ ಮಂಜೂರಾಗಿದ್ದು, ಈ ಪೈಕಿ 2019ರ ಮಾರ್ಚ್‌ 31ರ ಅಂತ್ಯಕ್ಕೆ 454.89 ಕೋಟಿ ರು. ಹೊರಬಾಕಿ ಇದೆ. ಇದರಲ್ಲಿ 2019ರ ಮಾರ್ಚ್‌ ಅಂತ್ಯಕ್ಕೆ 70.57 ಕೋಟಿ ರು. ಅಸಲು ಮತ್ತು 83.43 ಕೋಟಿ ರು.ಬಡ್ಡಿ ಸೇರಿ ಒಟ್ಟು 154.00 ಕೋಟಿ ಸುಸ್ತಿಯಾಗಿದೆಯಲ್ಲದೆ ಸಾಲ ವಸೂಲಾತಿಗೆ ಬಾಕಿ ಇದೆ. ಈ 10 ಸಕ್ಕರೆ ಕಾರ್ಖಾನೆಗಳಿಗೆ ನೀಡಲಾದ ಸಾಲಗಳಲ್ಲಿ 95.27 ಕೋಟಿ ರು. ಎನ್‌ಪಿಎ ಆಗಿದೆ.

ಹಾಗೆಯೇ 1,262.00 ಕೋಟಿ ರು. ಸಾಲ ಪಡೆದಿರುವ 17 ಖಾಸಗಿ ಸಕ್ಕರೆ ಕಾರ್ಖಾನೆಗಳು 1,148 ಕೋಟಿ ರು.ಹೊರಬಾಕಿ ಉಳಿಸಿಕೊಂಡಿವೆ. ಈ ಪೈಕಿ 136.00 ಕೋಟಿ  ರು. ಅಸಲು ಮತ್ತು 101.00 ಕೋಟಿ ರು.ಬಡ್ಡಿ ಸೇರಿ ಒಟ್ಟು 237.00 ಕೋಟಿ ಸುಸ್ತಿ ಸಾಲ ವಸೂಲಾತಿಗೆ ಬಾಕಿ ಇದೆ.  ಇದರಲ್ಲಿ 210.00 ಕೋಟಿ ರು. ಎನ್‌ಪಿಎ ಆಗಿದೆ ಎಂದು ದಿ ಫೈಲ್‌ ವಿವರಿಸಿತ್ತು. 

ಒಟ್ಟಾರೆ 27 ಸಕ್ಕರೆ ಕಾರ್ಖಾನೆಗಳ 47 ಪ್ರಕರಣಗಳಲ್ಲಿ ದುಡಿಯುವ ಬಂಡವಾಳ ಸಾಲವಾಗಿ 1,176  ಕೋಟಿ ಹಾಗೂ 29 ಪ್ರಕರಣಗಳಲ್ಲಿ ಅವಧಿ ಸಾಲವಾಗಿ 427.24 ಕೋಟಿ ರು.  ಹೊರಬಾಕಿ ಇದೆ. ಇದೂ ಸೇರಿದಂತೆ ಒಟ್ಟಾರೆಯಾಗಿ 1,603.36 ಕೋಟಿ ಸಾಲ ಹೊರಬಾಕಿ ಇದೆ. ಈ ಪೈಕಿ 206.32  ಕೋಟಿ ಅಸಲು ಮತ್ತು 184.83 ಕೋಟಿ ಬಡ್ಡಿ ಸೇರಿ ಒಟ್ಟು 391.15 ಕೋಟಿ ರು.ಸಾಲ ಸುಸ್ತಿಯಾಗಿ ಮುಂದುವರೆಯುತ್ತಿದೆ.  

ಪ್ರಭಾವಿ ರಾಜಕೀಯ ಮುಖಂಡರ ಒಡೆತನದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಸಾಲ ನೀಡಿರುವ ಅಪೆಕ್ಸ್‌ ಬ್ಯಾಂಕ್‌, ಕಾರ್ಖಾನೆಗಳಿಂದ ಅಡಮಾನ ಮಾಡಿಕೊಂಡಿರುವ ಸ್ಥಿರಾಸ್ತಿಯ ಮೌಲ್ಯವು ನೀಡಿರುವ ಸಾಲದ ಮೊತ್ತಕ್ಕಿಂತ ಕಡಿಮೆಯಾಗಿದೆ. ಕೆಲ ಸಕ್ಕರೆ ಕಾರ್ಖಾನೆಗಳಿಂದ  ಸಕ್ಕರೆ ದಾಸ್ತಾನು ಇರುವ ಬಗ್ಗೆ ಖಾತರಿಪಡಿಸಿಕೊಂಡಿರುವ ಸಂಬಂಧ ಬ್ಯಾಂಕ್‌ನಲ್ಲಿ ಯಾವುದೇ ದಾಖಲೆಗಳು ಲಭ್ಯ ಇರಲಿಲ್ಲ ಎಂಬುದನ್ನು  ದಿ  ಫೈಲ್‌ ಹೊರಗೆಡವಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts