ಬೆಂಗಳೂರು; ಬಿಎಂಟಿಸಿ ಬಸ್‌ಗಳಲ್ಲಿ ಸುಮಾರು 41 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ ಎಂಬ ಅಂದಾಜಿನಲ್ಲಿ ಕೋವಿಡ್ 19ರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಂಬಂಧ ಬಿಎಂಟಿಸಿ ವ್ಯಾಪ್ತಿಯ ಬಸ್ ನಿಲ್ದಾಣಗಳಲ್ಲಿ ಟಿ ವಿ ಸ್ಕ್ರೀನ್‌ಗಳ ಮೂಲಕ ಪ್ರಸಾರ ಮಾಡಿದ್ದ ಕಾರ್ಯಕ್ರಮಗಳಿಗೆ ರಾಜ್ಯ ಬಿಜೆಪಿ ಸರ್ಕಾರವು 78.37 ಲಕ್ಷ ರು. ಖರ್ಚು ಮಾಡಿದೆ.
ಲಾಕ್‌ಡೌನ್ ಅವಧಿಯಲ್ಲಿಯೂ ಕೋವಿಡ್ ಅರಿವಿನ ಜಾಹೀರಾತನ್ನು ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿ ಪ್ರಸಾರ ಮಾಡಿತ್ತು. ಲಾಕ್‌ಡೌನ್ ಅವಧಿಯಲ್ಲಿ ಮನೆಯಿಂದ ನಾಗರಿಕರು ಹೊರಗೆ ಬಂದಿರಲಿಲ್ಲ. ಆದರೂ 41 ಲಕ್ಷ ಪ್ರಯಾಣಿಕರು ಬಿಎಂಟಿಸಿ ಬಸ್ ನಿಲ್ದಾಣದ ಮೂಲಕ ಪ್ರಯಾಣಿಸುತ್ತಾರೆ ಎಂದು ಅಂದಾಜು ಮಾಡಿ ಖಾಸಗಿ ಸಂಸ್ಥೆ ಸಲ್ಲಿಸಿದ್ದ ಜಾಹೀರಾತು ಸಂಸ್ಥೆಗೆ 78.37 ಲಕ್ಷ ರು ಪಾವತಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಇಲಾಖೆಯ ಟಿಪ್ಪಣಿ ಹಾಳೆಗಳು ‘ದಿ ಫೈಲ್’ಗೆ ಲಭ್ಯವಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ (ಮೆಜೆಸ್ಟಿಕ್ ), ಶಾಂತಿನಗರ, ಯಶವಂತಪುರ, ಶಿವಾಜಿನಗರ, ಕೆಂಗೇರಿ ಬಸ್ ನಿಲ್ದಾಣಗಳಲ್ಲಿ ಟಿ ವಿ ಸ್ಕ್ರೀನ್‌ಗಳ ಮೂಲಕ ಜಾಹೀರಾತು ಪ್ರಸಾರ ಮಾಡಿತ್ತು. ಅಲ್ಲದೆ ಬಿಬಿಎಂಪಿ ವ್ಯಾಪ್ತಿಯ ಬನಶಂಕರಿ, ವಿಜಯನಗರ, ವೈಟ್ ಫೀಲ್ಡ್, ಜಯನಗರ, ದೊಮ್ಮಲೂರು ಮತ್ತು ಬನ್ನೇರು ಘಟ್ಟ ಬಸ್ ನಿಲ್ದಾಣಗಳಲ್ಲಿ 50 ಟಿ ವಿ ಸ್ಕ್ರೀನ್‌ಗಳ ಮೂಲಕ ಜಾಹೀರಾತನ್ನು 2021ರ ಜನವರಿ 10ರಿಂದ 24ರವರೆಗೆ ಒಟ್ಟು 15 ದಿನಗಳ ಕಾಲ 60 ಸೆಕೆಂಡು ಅವಧಿಯುಳ್ಳ ಅರಿವು ಮೂಡಿಸುವ ಕಾರ್ಯಕ್ರಮ ಪ್ರಸಾರ ಮಾಡಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕಾರ್ಯಾದೇಶ ನೀಡಿತ್ತು ಎಂದು ತಿಳಿದು ಬಂದಿದೆ.
ಬೆಂಗಳೂರು ಮಹಾನಗರಸಾರಿಗೆ ಸಂಸ್ಥೆಯ ಮುಖ್ಯ ನಿಲ್ದಾಣದಲ್ಲಿ 60 ಸೆಕೆಂಡ್ ಅವಧಿಯ ಅರಿವು ಮೂಡಿಸುವ ಕಾರ್ಯಕ್ರಮ ಪ್ರಸಾರ (150 ಬಾರಿ) ಮಾಡಿದ್ದಕ್ಕೆ ಒಟ್ಟು 20, 25,000 ರು. ಗಳನ್ನು ಜಾಹೀರಾತು ಸಂಸ್ಥೆಗೆ ಪಾವತಿಸಿದೆ.
ಅದೇ ರೀತಿ ಶಾಂತಿನಗರ, ಯಶವಂತಪುರ, ಶಿವಾಜಿನಗರ, ಕೆಂಗೇರಿ ಬಸ್ ನಿಲ್ದಾಣಗಳಲ್ಲಿ (44 ಟಿ ವಿ ಸ್ಕ್ರೀನ್) ಪ್ರಸಾರ ಮಾಡಿದ್ದಕ್ಕೆ 21, 02, 760 ರು., ಇದೇ ನಿಲ್ದಾಣದಲ್ಲಿ 2021ರ ಜನವರಿಯಲ್ಲಿ ಪ್ರಸಾರ ಮಾಡಿದ್ದಕ್ಕೆ 23, 89, 500 ರು. ಕೆಂಪೇಗೌಡ ಬಸ್ ನಿಲ್ದಾಣದಲ್ಲಿ (70 ಟಿ ವಿ ಸ್ಕ್ರೀನ್) ಪ್ರಸಾರ ಮಾಡಿದ್ದಕ್ಕೆ 33, 45, 300 ರು ಸೇರಿದಂತೆ ಒಟ್ಟು 78, 37, 560 ರು. ವೆಚ್ಚವಾಗಿರುವುದು ಗೊತ್ತಾಗಿದೆ.
ಬಿಎಂಟಿಸಿ ಬಸ್‌ಗಳಲ್ಲಿ ಸುಮಾರು 41 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ ಎಂಬ ಅಂದಾಜಿನಲ್ಲಿ ಟಿ ವಿ ಸ್ಕ್ರೀನ್‌ಗಳಲ್ಲಿ ಕೋವಿಡ್ ಸಾಂಕ್ರಾಮಿಕದ ವಿರುದ್ದ ಅರಿವು ಮೂಡಿಸಿದರೆ ಅದು ಹೆಚ್ಚಿನ ಜನರನ್ನು ತಲುಪಬಹುದು ಎಂದು ಜಾಹೀರಾತು ಕಂಪನಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಪ್ರತಿ ಸೆಕೆಂಡಿಗೆ 3 ರು. ದರದಲ್ಲಿ ವೆಚ್ಚವನ್ನು ಪಾವತಿಸಿದೆ ಎಂದು ತಿಳಿದು ಬಂದಿದೆ.
ಅತಿಥಿ ಉಪನ್ಯಾಸಕರಿಗೆ ಗೌರವ ಸಂಭಾವನೆ, ಆಟೋ ಚಾಲಕರು, ತರಕಾರಿ, ಹೂ ಬೆಳೆಗಾರರು, ನೇಕಾರರು, ಸವಿತಾ ಸಮಾಜ, ವಲಸೆ ಕಟ್ಟಡ ಕಾರ್ಮಿಕರು ಸೇರಿದಂತೆ ಇನ್ನಿತರರಿಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡದ ರಾಜ್ಯ ಬಿಜೆಪಿ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬಕ್ಕೆ ಪತ್ರಿಕೆಗಳ ಪ್ರಾಯೋಜಿತ ಪುರವಣಿಗಳಿಗೆ 44.85 ಲಕ್ಷ ರು., ಅಮಿತ್ ಶಾ ಕಾರ್ಯಕ್ರಮಗಳ ಜಾಹೀರಾತಿಗೆ 89 ಲಕ್ಷ ರು. ಖರ್ಚು ಮಾಡಿತ್ತು.
ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಹಮ್ಮಿಕೊಂಡಿರುವ ಯೋಜನೆ, ಕಾರ್ಯಕ್ರಮಗಳ ಸಮಗ್ರ ಚಿತ್ರಣವನ್ನು ಬಿಂಬಿಸುವ ನಾಲ್ಕು ಪುಟಗಳ ಪ್ರಾಯೋಜಿತ ಪುರವಣಿಗಾಗಿ 2020ರಲ್ಲಿ ಒಟ್ಟು 1.60 ಕೋಟಿ ರು.ಗಳನ್ನು ವೆಚ್ಚ ಮಾಡಿದೆ. ಈ ಪೈಕಿ ಹೊಸ ದಿಗಂತ ಪತ್ರಿಕೆ ಸಿಂಹಪಾಲು ಪಡೆದಿದ್ದು, ಉಳಿದೆಲ್ಲ ಪತ್ರಿಕೆಗಳಿಗಿಂತ ಅತಿ ಹೆಚ್ಚಿನ ಮೊತ್ತದ ಜಾಹೀರಾತು ನೀಡಿತ್ತು.
ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ನಡೆದಿದ್ದ ನೂತನ ಅನುಭವ ಮಂಟಪ ನಿರ್ಮಾಣ ಮತ್ತು ಇನ್ನಿತರೆ ಪೂಜಾ ಕಾರ್ಯುಕ್ರಮಗಳಲ್ಲಿ ಮುಖ್ಯಮಂತ್ರಿಗಳ ಭಾಷಣವನ್ನು 30 ನಿಮಿಷಗಳ ನೇರ ಪ್ರಸಾರಕ್ಕೆ ಬಿಜೆಪಿ ಸರ್ಕಾರವು ಒಟ್ಟು 42.26 ಲಕ್ಷ ರು. ಖರ್ಚು ಮಾಡಿತ್ತು.
ತಮಿಳುನಾಡಿನ ಪ್ರಸ್ತುತ ರಾಜಕೀಯ ಕುರಿತ ವಿಶ್ಲೇಷಣೆ, ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳು ರಾಜಕೀಯ ಸೇರ್ಪಡೆ ಸೇರಿದಂತೆ ಇನ್ನಿತರೆ ಖಾಸಗಿ ಕಾರ್ಯಕ್ರಮಗಳ ಸಮಾವೇಶಕ್ಕೆ 25 ಲಕ್ಷ ರು.ಗಳನ್ನು ಪ್ರಾಯೋಜಿಸಿತ್ತು.
ಇದಲ್ಲದೆ ಟಿ ವಿ ನೆಟವರ್ಕ್ 2021ರ ಮಾರ್ಚ್‌ನಲ್ಲಿ ನವದೆಹಲಿಯಲ್ಲಿ ಆಯೋಜಿಸಿದ್ದ ಇಂಡಿಯಾ ಬ್ಯುಸಿನೆಸ್ ಲೀಡ್ ಅವಾರ್ಡ್ ಕಾರ್ಯಕ್ರಮಕ್ಕೆ 45.18 ಲಕ್ಷ ರು.ಗಳ ವೆಚ್ಚ ಮಾಡಿತ್ತು. ‘ ಈ ಕಾರ್ಯಕ್ರಮದಲ್ಲಿ ದೇಶದ ಹಲವಾರು ಉದ್ದಿಮೆಗಳ ಮುಖ್ಯಸ್ಥರು, ಕೈಗಾರಿಕೋದ್ಯಮಿಗಳು ಹಾಗೂ ಗಣ್ಯ ವ್ಯಕ್ತಿಗಳು ಭಾಗವಹಿಸಲಿರುವುದರಿಂದ ಈ ಕಾರ್ಯಕ್ರಮವು ರಾಜ್ಯದಲ್ಲಿ ಕೈಗಾರಿಕೆಗಳ ಪೂರಕ ಬೆಳವಣಿಗೆಗೆ ಒಂದು ಉತ್ತಮ ವೇದಿಕೆಯಾಗುವುದು ಎಂದು ಪ್ರಸ್ತಾವನೆ ಸಲ್ಲಿಸಿತ್ತು.
ಹಾಗೆಯೇ ಈ ಕಾರ್ಯಕ್ರಮವು ಕರ್ನಾಟಕ ರಾಜ್ಯದ ಕೈಗಾರಿಕೆಯ ಸ್ನೇಹ ನೀತಿಗಳನ್ನು ಕೈಗಾರಿಕೋದ್ಯಮಿಗಳಿಗೆ ತಿಳಿಸುವ ಮತ್ತು ರಾಜ್ಯದ ಮುಖ್ಯಮಂತ್ರಿಗಳನ್ನು ಬಿಂಬಿಸುವ ಕಾರ್ಯಕ್ರಮವಾಗಿರುವುದರಿಂದ ನವದೆಹಲಿಯಲ್ಲಿ ನಡೆಯುವ ಇಂಡಿಯಾ ಬ್ಯುಸಿನೆಸ್ ಲೀಡ್ ಅವಾರ್ಡ್ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವನ್ನು 45.18 ಲಕ್ಷ ರು. ವೆಚ್ಚದಲ್ಲಿ ಅನುಮೋದಿಸಿತ್ತು. ಇದು ಕೂಡ ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.