ಎಂಎಸ್‌ರಾಮಯ್ಯ ಕುಟುಂಬದ ಪಕ್ಕದ ಜಮೀನು ತೋರಿಸಿ 85 ಕೋಟಿ ಚೆಕ್ ಪಡೆದು ವಂಚನೆ

ಬೆಂಗಳೂರು; ಮಾಜಿ ಸಚಿವ ಎಂ ಆರ್‌ ಸೀತಾರಾಂ ಅವರ ತಂದೆ ಖ್ಯಾತ ಉದ್ಯಮಿ ಎಂ ಎಸ್‌ ರಾಮಯ್ಯ ಅವರ ಕುಟುಂಬ ಮಾಲೀಕತ್ವದ  ಜಮೀನಿನ ಚಕ್ಕಬಂದಿ ಪೂರ್ವಕ್ಕೆ ಹೊಂದಿಕೊಂಡಿರುವ ಜಮೀನನ್ನು ತೋರಿಸಿದ್ದ ಯುವರಾಜಸ್ವಾಮಿ, ಮೈಸೂರಿನ ಡಾ ಗುರುರಾಜ್‌ ರವಿ ಎಂಬುವರಿಂದ  85 ಕೋಟಿ ರು. ಬ್ಲಾಂಕ್‌ ಚೆಕ್‌ಗಳನ್ನು ಪಡೆದು ವಂಚಿಸಿದ್ದ ಎಂಬ ಸಂಗತಿ ಇದೀಗ ಬಹಿರಂಗವಾಗಿದೆ.

ನಿವೃತ್ತ ನ್ಯಾಯಮೂರ್ತಿ ಇಂದ್ರಕಲಾ ಅವರನ್ನು ವಂಚಿಸಿದ್ದ ಯುವರಾಜಸ್ವಾಮಿ ವಿರುದ್ಧ ದೂರಿನ ಸರಮಾಲೆಗಳು ಸಲ್ಲಿಕೆಯಾಗುತ್ತಿದ್ದಂತೆ ಈತನಿಂದಲೇ ವಂಚನೆಗೊಳಗಾಗಿದ್ದ ಮೈಸೂರಿನ ಗುರುರಾಜರವಿ ಎಂಬುವರು ದೂರು ಸಲ್ಲಿಸಿದ್ದರು. ಈ ದೂರಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ಪೊಲೀಸರು ದೋಷಾರೋಪಣೆ ಪಟ್ಟಿಯಲ್ಲಿ ಈ ವಿವರವನ್ನು ದಾಖಲಿಸಿದ್ದಾರೆ. ಗುರುರಾಜ್‌ ರವಿ ಅವರ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣೆಯ ದೃಢೀಕೃತ ಪಟ್ಟಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಮೈಸೂರಿನ ಡಾ ಗುರುರಾಜ್‌ ರವಿ ಅವರಿಂದ 85 ಕೋಟಿ ರು.ಮೊತ್ತದ ಬ್ಲಾಂಕ್‌ ಚೆಕ್‌ಗಳನ್ನು ಪಡೆಯಲು ಯುವರಾಜಸ್ವಾಮಿ ಏರ್‌ಪೋರ್ಟ್‌ ರಸ್ತೆಯ ಏರ್‌ಪೋರ್ಟ್‌ ಟೋಲ್‌ ಬಳಿ ಇರುವ ಶೆಟ್ಟಿಗೆರೆ ದೊಡ್ಡ ಜಾಲ ಮುಖ್ಯರಸ್ತೆಯ ಬಳಿ ಇದ್ದ 150 ಎಕರೆ ವಿಸ್ತೀರ್ಣದ ಜಮೀನು ತೋರಿಸಿದ್ದ ಎಂಬ ಸಂಗತಿ ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ. ರೈಲ್ವೇ ಲೇನ್‌ ಮತ್ತು ಏರ್‌ಪೋರ್ಟ್‌ ರಸ್ತೆಗೆ ಹೊಂದಿಕೊಂಡಂತಿರುವ ಈ ಜಮೀನಿನ ಚಕ್ಕಬಂದಿ ಪೂರ್ವಕ್ಕೆ ಎಂ ಎಸ್‌ ರಾಮಯ್ಯ ಅವರ ಕುಟುಂಬದವರಿಗೆ ಸೇರಿದ ಜಮೀನು ಇದೆ. ಅಲ್ಲದೆ ಬೇರೆಯವರ ಜಮೀನು ಇದೆ.

ಗುರುರಾಜ್‌ರವಿ ಹಳ್ಳಕ್ಕೆ ಬಿದ್ದಿದ್ದು ಹೇಗೆ?

ಡಾ ಗುರುರಾಜ್‌ ರವಿ ಅವರಿಗೆ ಪ್ರಲ್ಹಾದ್‌ ಜೋಷಿ ಎಂಬುವರ ಮೂಲಕ ಯುವರಾಜಸ್ವಾಮಿ ಪರಿಚಯವಾಗಿದ್ದ. ಆಗಾಗ್ಗೆ ಗುರುರಾಜ್‌ರವಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದ ಯುವರಾಜಸ್ವಾಮಿ 2018ರ ಕೊನೆಯಲ್ಲಿ ಕರೆ ಮಾಡಿ ಬೆಂಗಳೂರಿನ ಏರ್‌ಪೋರ್ಟ್‌ ಬಳಿ ಒಳ್ಳೆ ಪ್ರಾಪರ್ಟಿ ಇದೆ. ಈ ಜಾಗಕ್ಕೆ ಮೂರು ಜನ ಮಾಲೀಕರಿದ್ದಾರೆ. ಈ ಜಮೀನು ವಿವಾದದಿಂದ ಕೂಡಿರುತ್ತದೆ. ಈ ಜಮೀನು 150 ಕೋಟಿ ಬೆಲೆ ಬಾಳಲಿದೆ ಎಂದು ನಂಬಿಸಿದ್ದ ಯುವರಾಜಸ್ವಾಮಿ ಈ ಜಾಗದ ಮೇಲೆ ಹೂಡಿಕೆ ಮಾಡುವಂತೆ ಕೇಳಿದ್ದ.

ಜಾಗದ ವಿವಾದವನ್ನು ಬಗೆಹರಿಸಿ ಮಾರಾಟ ಮಾಡಿದರೆ ಕೋಟ್ಯಂತರ ರುಪಾಯಿ ಲಾಭ ಮಾಡಿಕೊಳ್ಳಬಹುದು. ಬೆಂಗಳೂರಿಗೆ ಬಂದು ಮಾತನಾಡಿ ಎಂದು ಗುರುರಾಜ್‌ರವಿ ಅವರನ್ನು ಪುಸಲಾಯಿಸಿದ್ದ ಎಂಬ ಸಂಗತಿ ದೋಷಾರೋಪಣೆ ಪಟ್ಟಿಯಲ್ಲಿ ಲಗತ್ತಿಸಿರುವ ಗುರುರಾಜ್‌ ರವಿ ಅವರ ಹೇಳಿಕೆಯಿಂದ ತಿಳಿದು ಬಂದಿದೆ.

ಯುವರಾಜಸ್ವಾಮಿ ಪುಸಲಾಯಿಸಿದ್ದ ಮಾತಿಗೆ ಮರುಳಾಗಿದ್ದ ಗುರುರಾಜ್‌ ರವಿ ಅವರನ್ನು ಏರ್‌ಪೋರ್ಟ್‌ ರಸ್ತೆಗೆ ಕರೆದೊಯದ್ದು ಶೆಟ್ಟಿಗೆರೆ ದೊಡ್ಡಜಾಲ ಮುಖ್ಯರಸ್ತೆಯಲ್ಲಿದ್ದ ಯಾರದ್ದೋ ಜಾಗವನ್ನು ತೋರಿಸಿದ್ದ. ವಿವಾದ ಬಗೆಹರಿಸಲು ಹಣದ ಅವಶ್ಯಕತೆ ಇದೆ ಎಂದು ತಿಳಿಸಿ ತಾನು ಕೂಡ 2-3 ಕೋಟಿ ರು. ಹಣ ಹೂಡಿಕೆ ಮಾಡುವುದಾಗಿ ನಂಬಿಸಿದ್ದ. ಈ ವಿವಾದ ಬಗೆಹರಿಸಲು ಹಣದ ಅವಶ್ಯಕತೆ ಇದೆ ಎಂದು ಹೇಳಿ ಬ್ಯಾಂಕ್‌ ಮೂಲಕವೇ 2019ರ ಜನವರಿಯಿಂದ 2020ರ ಅಕ್ಟೋಬರ್‌ ವರೆಗೆ ಆರ್‌ಟಿಜಿಎಸ್‌ಮೂಲಕ 6.50 ಕೋಟಿ ರು. ಪಡೆದಿದ್ದ ಎಂಬುದು ದೋಷಾರೋಪಣೆ ಪಟ್ಟಿಯಿಂದ ಗೊತ್ತಾಗಿದೆ.

85 ಕೋಟಿ ಮೊತ್ತದ ಬ್ಲಾಂಕ್‌ ಚೆಕ್‌

6.50 ಕೋಟಿ ತನ್ನ ಖಾತೆಗೆ ಜಮಾ ಆಗುತ್ತಿದ್ದಂತೆ ಯುವರಾಜ್‌ಸ್ವಾಮಿ ಗುರುರಾಜ್‌ ರವಿ ಅವರಿಗೆ ಕರೆ ಮಾಡಿ ಜಮೀನು ಕೊಂಡುಕೊಳ್ಳಲು ಗಿರಾಕಿಗಳು ರೆಡಿ ಇದ್ದಾರೆ ಎಂದು ನಂಬಿಸಿದ್ದ. ಇದಕ್ಕಾಗಿ 85 ಕೋಟಿ ರು. ಮೊತ್ತದ ಬ್ಲಾಂಕ್‌ ಡೆಬಿಟ್‌ ಚೆಕ್‌ಗಳನ್ನು ಕೊಡಬೇಕು ಎಂದು ಹೇಳಿದ್ದ. ಈತನ ಮಾತನ್ನು ನಂಬಿದ್ದ ಗುರುರಾಜ್‌ ರವಿ ಅವರು ತಾಜ್‌ ವೆಸ್ಟೆಂಡ್‌ ಹೋಟೆಲ್‌ಗೆ ತೆರಳಿ 25 ಕೋಟಿ ಮೊತ್ತದ 3 ಚೆಕ್‌ ಮತ್ತು 10 ಕೋಟಿ ಮೊತ್ತದ 1 ಚೆಕ್‌ ಸೇರಿ ಒಟ್ಟು 4 ಚೆಕ್‌ಗಳನ್ನು ನೀಡಿದ್ದರು.

ಬೆದರಿಸಿದ್ದ ಯುವರಾಜಸ್ವಾಮಿ

85 ಕೋಟಿ ರು ಮೊತ್ತದ ಬ್ಲಾಂಕ್‌ ಡೆಬಿಟ್‌ ಚೆಕ್‌ಗಳನ್ನು ಪಡೆದಿದ್ದ ಯುವರಾಜಸ್ವಾಮಿ ತನ್ನ ವರಸೆಯನ್ನು ಬದಲಿಸಿದ್ದ. ಜಮೀನು ಮಾಲೀಕರಿಗೆ ಚೆಕ್‌ಗಳನ್ನು ತೋರಿಸಿ ಬರುವುದಾಗಿ ಹೇಳಿ ಹೋಗಿದ್ದ ಯುವರಾಜಸ್ವಾಮಿ ಆ ನಂತರ ಗುರುರಾಜ್‌ರವಿ ಅವರ ಬಳಿ ಬರಲಿಲ್ಲ. ಹೀಗಾಗಿ ಫೋನ್‌ ಮಾಡಿ ಹಣ ಮತ್ತು ಚೆಕ್‌ಗಳನ್ನು ವಾಪಸ್‌ ಕೇಳಿದ್ದರು. ಆದರೆ ಕೊರೊನಾ ಬಂದಿರುವುದರಿಂದ ವ್ಯವಹಾರ ಸ್ಥಗಿತವಾಗಿದೆ. ತಾನು ಯಾರೆಂದು ತನ್ನ ಪವರ್‌ ಏನೆಂದು ನಿನಗೆ ಗೊತ್ತಿಲ್ಲಾ, ನಾನು ಹೇಳಿದಂತೆ ಕೇಳಿಕೊಂಡಿರು, ಇಲ್ಲವಾದರೆ ನನ್ನ ಪ್ರಭಾವದಿಂದ ನಿನ್ನನ್ನು ಜೈಲಿಗೆ ಕಳಿಸುತ್ತೇನೆ ಎಂದು ಬೆದರಿಸಿದ್ದ ಎಂದು ಗುರುರಾಜ್‌ ರವಿ ಅವರು ನೀಡಿದ್ದ ಹೇಳಿಕೆಯಿಂದ ತಿಳಿದು ಬಂದಿದೆ.

ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶರಾದ ಇಂದ್ರಕಲಾ ಅವರನ್ನು ರಾಜ್ಯಪಾಲರನ್ನಾಗಿಸುವ ಆಮಿಷ ಒಡ್ಡಿ ಹಣ ಪಡೆದ ಆರೋಪ ಪ್ರಕರಣವೂ ಸೇರಿದಂತೆ ವಿವಿಧ ರೀತಿಯ ವಂಚನೆ ಪ್ರಕರಣಗಳಲ್ಲಿ ಬಂಧನಕ್ಕೊಗಳಗಾಗಿರುವ ಯುವರಾಜ್‌ ಅಲಿಯಾಸ್‌ ಸ್ವಾಮಿ ಎಂಬಾತ ಒಟ್ಟು 18.32 ಕೋಟಿ ರು. ವಂಚನೆ ಮಾಡಿರುವ ಆರೋಪವೂ ಈತನ ಮೇಲಿದೆ.

ಬಿ ಶ್ರೀರಾಮುಲು ಅವರ ಖಾತೆಗೆ ಯುವರಾಜಸ್ವಾಮಿ ಖಾತೆಯಿಂದ ಒಟ್ಟು 13 ಲಕ್ಷ ರು. ಸಂದಾಯವಾಗಿದ್ದನ್ನು ಸ್ಮರಿಸಬಹುದು. ಯುವರಾಜಸ್ವಾಮಿಯು ಕರ್ನಾಟಕ ಬ್ಯಾಂಕ್‌ನಲ್ಲಿ ಹೊಂದಿದ್ದ ಖಾತೆಯಿಂದ (ಖಾತೆ ಸಂಖ್ಯೆ; 5502000100052301) ಬಿ ಶ್ರೀರಾಮುಲು ಖಾತೆಗೆ (ಖಾತೆ ಸಂಖ್ಯೆ; KARBH19210399488) 2019ರ ಜುಲೈ 29ರಂದು 5 ಲಕ್ಷ ಹಾಗೂ 2019ರ ಆಗಸ್ಟ್‌ 1ರಂದು 13 ಲಕ್ಷ ರು. (ಖಾತೆ ಸಂಖ್ಯೆ ;KARBH19213654613) ಆರ್‌ಟಿಜಿಎಸ್‌ ಮೂಲಕ ಹಣ ವರ್ಗಾವಣೆ ಆಗಿತ್ತು.

ಅಲ್ಲದೆ ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರ ಖಾತೆಯಿಂದ ಯುವರಾಜಸ್ವಾಮಿ ಖಾತೆಗೆ 90 ಲಕ್ಷ ರು.ಗಳು ಸಂದಾಯವಾಗಿತ್ತು. ಜ್ಯೋತಿಷ್ಯ ಹೇಳುವ ಮೂಲಕ ಪರಿಚಯಿಸಿಕೊಂಡು ರಿಯಲ್‌ ಎಸ್ಟೇಟ್‌ ವ್ಯವಹಾರವನ್ನೂ ನಡೆಸುತ್ತಿದ್ದ ಯುವರಾಜಸ್ವಾಮಿ ಅವರಿಂದ ಜಮೀನು ಖರೀದಿ ಮಾಡುವ ಸಂಬಂಧ ಡಿ ಎಸ್‌ ವೀರಯ್ಯ ಅವರು ತಮ್ಮ ಖಾತೆಯಿಂದ 50 ಲಕ್ಷ ರು. ಮೊತ್ತದ ಚೆಕ್‌ನ್ನು ಯುವರಾಜಸ್ವಾಮಿಗೆ ನೀಡಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts