‘ಕೆಆರ್ ಮಾರ್ಕೇಟ್‌ನ ಪರಿಶಿಷ್ಟ ಜಾತಿ ಮಹಿಳೆ’; ದಲಿತ ಮಹಿಳಾ ಅರ್ಜಿದಾರಳನ್ನು ಜರಿದ ವಕೀಲ

ಬೆಂಗಳೂರು; 1998ನೇ ಸಾಲಿನ ಕೆಎಎಸ್ ಅಧಿಕಾರಿಗಳ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಹಿರಿಯ ವಕೀಲರು ‘ಕೆ ಆರ್ ಮಾರುಕಟ್ಟೆಯ ಪರಿಶಿಷ್ಟ ಜಾತಿಯ ಮಹಿಳೆ’ ಎಂದು ತೆರೆದ ನ್ಯಾಯಾಲಯದಲ್ಲಿ ದಲಿತ ಮಹಿಳೆಯ ಅರ್ಜಿದಾರಳನ್ನು ಜರಿದಿದ್ದಾರೆ ಎಂದು ಆರೋಪಿಸಲಾಗಿರುವ ಪ್ರಕರಣವನ್ನು ‘ದಿ ಫೈಲ್‌’ ಇದೀಗ ಹೊರಗೆಡವುತ್ತಿದೆ.

ಕೆಪಿಎಸ್‌ಸಿ ಹಿರಿಯ ವಕೀಲರು ಆಡಿದ್ದ ಮಾತುಗಳಿಗೆ ಆಕ್ಷೇಪ ಎತ್ತಿರುವ ದಲಿತ ಮಹಿಳೆ ಅರ್ಜಿದಾರರಾದ ತುಮಕೂರಿನ ಲೀಲಾವತಿ ಅವರು ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಮುಂದೆ ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ. ಮರು ಪರಿಶೀಲನಾ ಅರ್ಜಿ ಮತ್ತು ಅಂತಿಮ ಆದೇಶದ ‘ದೃಢೀಕೃತ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ತೆರೆದ ನ್ಯಾಯಾಲಯದಲ್ಲಿ ಕಳೆದ ಏಳು ವರ್ಷಗಳ ಹಿಂದೆಯೇ ಕೆಪಿಎಸ್‌ಸಿ ಹಿರಿಯ ವಕೀಲ ರಾಜಗೋಪಾಲ್  ‘ಕೆ ಆರ್ ಮಾರುಕಟ್ಟೆಯ ಪರಿಶಿಷ್ಟ ಜಾತಿಯ ಮಹಿಳೆ’ ಎಂದು ಜರಿದಿದ್ದರು ಎಂದು ಪರಿಶೀಲನಾ ಅರ್ಜಿಯಲ್ಲಿ ಲೀಲಾವತಿ ಅವರು ಉಲ್ಲೇಖಿಸಿದ್ದಾರೆ. ಅಲ್ಲದೇ ಕೆಪಿಎಸ್‌ಸಿ ಹಿರಿಯ ವಕೀಲರು ಜರಿದಿದ್ದನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿಯ ವಿಭಾಗೀಯ ಪೀಠವು 2021ರ ಜುಲೈ 14 ರಂದು ನೀಡಿದ್ದ ಅಂತಿಮ ತೀರ್ಪಿನಲ್ಲಿಯೂ ಪ್ರಸ್ತಾಪಿಸಿರುವುದಕ್ಕೂ ಆಕ್ಷೇಪ ಎತ್ತಿದ್ದಾರೆ.

ಈ ಪರಿಶೀಲನಾ ಅರ್ಜಿಯ ವಿಚಾರಣೆಯು ಅಕ್ಟೋಬರ್ 4 ರಂದು ವಿಚಾರಣೆಗೆ ಬಂದಿದ್ದು ಪೀಠವು ನವೆಂಬರ್ 11ಕ್ಕೆ ಮುಂದೂಡಿದೆ ಎಂದು ತಿಳಿದು ಬಂದಿದೆ.

1998ನೇ ಸಾಲಿನ ಕೆಎಎಸ್ ಅಧಿಕಾರಿಗಳ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ 2006ರಿಂದಲೂ ಕೆಎಟಿಯಲ್ಲಿ ವಿಚಾರಣೆ ನಡೆಯುತ್ತಿದೆ. 2015-16ರಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಕೆಪಿಎಸ್‌ಸಿ ಪರ ಹಿರಿಯ ವಕೀಲ ರಾಜಗೋಪಾಲ್‌ ಎಂಬುವರು ಅರ್ಜಿದಾರರಾದ ಲೀಲಾವತಿ ಅವರನ್ನು ಕೆ ಆರ್‌ ಮಾರ್ಕೇಟ್‌ನಿಂದ ಬಂದ ಪರಿಶಿಷ್ಟ ಜಾತಿ ಮಹಿಳೆ ಎಂದು ಜರಿದಿದ್ದರು ಎಂಬ ಅಂಶ ಮರು ಪರಿಶೀಲನಾ ಅರ್ಜಿಯಿಂದ ತಿಳಿದು ಬಂದಿದೆ.

ಕೆಪಿಎಸ್‌ಸಿ ಹಿರಿಯ ವಕೀಲರು ಜರಿದಿದ್ದಕ್ಕೆ ಲೀಲಾವತಿ ಅವರು ಆಕ್ಷೇಪ ಎತ್ತಿದ್ದರಲ್ಲದೆ ರಿಜಿಸ್ಟ್ರಾರ್‌, ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾ ಮತ್ತು ಆಡಳಿತ ಮಂಡಳಿಯ ಅಂದಿನ ಅಧ್ಯಕ್ಷ ನ್ಯಾಯಮೂರ್ತಿ ಭಕ್ತವತ್ಸಲ ಅವರಿಗೂ ದೂರು ಸಲ್ಲಿಸಿದ್ದರು. ಇದಾದ ನಂತರ ವಿಚಾರಣೆಯು ಹಲವು ಬಾರಿ ಮುಂದೂಡಲಾಗಿತ್ತು. ಇದರ ಅಂತಿಮ ತೀರ್ಪು 2021ರ ಜುಲೈ 14ರಂದು ಹೊರಬಿದ್ದಿತ್ತು. ಕೆಪಿಎಸ್‌ಸಿ ಹಿರಿಯ ವಕೀಲರು ಜರಿದಿದ್ದನ್ನು ಅಂತಿಮ ತೀರ್ಪಿನಲ್ಲಿ ಉಲ್ಲೇಖವಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

7 ವರ್ಷಗಳ ಹಿಂದೆ ತೆರೆದ ನ್ಯಾಯಾಲಯದಲ್ಲಿ ಕೆಪಿಎಸ್‌ಸಿ ಹಿರಿಯ ವಕೀಲ ರಾಜಗೋಪಾಲ್‌ ಎಂಬುವರು ಜರಿದಿದ್ದನ್ನು 2021ರ ಜುಲೈ 14ರಂದು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ಪ್ರಕಟಿಸಿದ ಅಂತಿಮ ತೀರ್ಪಿನಲ್ಲಿಯೂ ಪ್ರಸ್ತಾಪಿಸಿರುವುದು ಸಂವಿಧಾನದತ್ತವಾದ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ,’ ಎಂದು ಪರಿಶೀಲನಾ ಅರ್ಜಿಯಲ್ಲಿ ಲೀಲಾವತಿ ಅವರು ಹೇಳಿದ್ದಾರೆ. ಸಂವಿಧಾನದ 14, 15, 15(2), 15(3), 15(4) 16, 12, 18, 21, 46, 335, 141, ಮತ್ತು 144 ಅನುಚ್ಛೇಧವನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿಯು ಉಲ್ಲಂಘಿಸಿದೆ,’ ಎಂದು ಪರಿಶೀಲನಾ ಅರ್ಜಿಯಲ್ಲಿ ವಿವರಿಸಿದ್ದಾರೆ.

ಹಾಗೆಯೇ ‘ಹಂಗಾಮಿ ಅಧ್ಯಕ್ಷರು ತಮ್ಮ ವಿವೇಚನೆಯನ್ನು ಬದಿಗೊತ್ತಿ ಒಬ್ಬ ನ್ಯಾಯಾಂಗ ಸದಸ್ಯರ ಅಧಿಕಾರವನ್ನು ಆಡಳಿತ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ನ್ಯಾಯಾಂಗ ಕ್ರಿಯಾಶೀಲತೆಗೆ ಅನಿವಾರ್ಯ ಸಮಯ ಒದಗಿದೆ. ನನ್ನ ಆತ್ಮ ವಿಶ್ವಾಸವನ್ನು ಕುಗ್ಗಿಸಲಾಗಿದೆಯಲ್ಲದೇ ಮಾನಸಿಕವಾಗಿ ಜರ್ಝರಿತನ್ನಾಗಿಸಿದೆ. ಅದೇ ರೀತಿ ಈ ಮಂಡಳಿಯು ನೈತಿಕ ಮೌಲ್ಯ ರಹಿತವಾಗಿದ್ದು ಮೂಲಭೂತ ಕಾನೂನಿನ ನೀತಿಗಳನ್ನು ಉಲ್ಲಂಘಿಸಿ ನಾಗರಿಕ ಸಮಾಜದ ಮರ್ಯಾದೆಯನ್ನು ಭಂಗ ಮಾಡಿ ದಲಿತ ಮಹಿಳೆಯ ಅಸ್ತಿತ್ವವನ್ನೇ ಅಳಿಸಿ ಹಾಕಿದಂತಾಗಿದೆ,’ ಎಂದು ಪರಿಶೀಲನಾ ಅರ್ಜಿಯಲ್ಲಿ ಪ್ರಸ್ತಾಪಿಸಿದ್ದಾರೆ.

ಈ ಪ್ರಕರಣದಲ್ಲಿ ವಕೀಲ ರಾಜಗೋಪಾಲ್‌ ಮಾಡಿದ್ದ ಹೇಳಿಕೆಯು ಅಕ್ಷ್ಯಮ್ಯವಾಗಿದೆ. ಅದಕ್ಕೆ ಬಾರ್‌ ಕೌನ್ಸಿಲ್‌, ಕೆಪಿಎಸ್‌ಸಿ ಸೇರಿ ಎಲ್ಲರೂ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿತ್ತು. ಈ ವಿಷಯವನ್ನು ಲೀಲಾವತಿ ಅವರು ಬಾರ್‌ ಕೌನ್ಸಿಲ್‌ ಸೇರಿ ಹಲವರಿಗೆ ವಿಷಯ ತಲುಪಿಸಿದ್ದರಿಂದ ಅದು ನಾಲ್ಕು ಗೋಡೆಗಳಾಚೆಗೂ ಬಂದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರು ತೀರ್ಪಿನಲ್ಲಿ ಉಲ್ಲೆಖಿಸಿದ್ದು, ಘಟನೆಗೆ ಸಂಬಂಧಿಸಿದ ವಿಷಯವಾಗಿದೆಯಷ್ಟೆ. ನ್ಯಾಯಾಧೀಶರು ತಮ್ಮ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದಿಲ್ಲ. ಈ ಮಾತನ್ನು ಹೇಳಿದ್ದ ವ್ಯಕ್ತಿಯ ವಿರುದ್ಧ ದೂರನ್ನು ಸಲ್ಲಿಸುವುದಾಗಲಿ ಅಥವಾ ಸಲ್ಲಿಸಿದ್ದ ದೂರಿನ ಬಗ್ಗೆ ಕ್ರಮಕ್ಕೆ ಅರ್ಜಿದಾರರು ಒತ್ತಾಯಿಸುವ ಅವಕಾಶವಿದೆ. ವಕೀಲರು ಕೆಪಿಎಸ್‌ಸಿ ಪ್ರತಿನಿಧಿಸಿರುವುದರಿಂದ ಈ ಹೇಳಿಕೆಯನ್ನು ಕೆಪಿಎಸ್‌ಸಿಯ ಪ್ರತಿನಿಧಿಯಾಗಿ ಮಾಡಿದಂತಾಗಿದೆ. ಈ ಹೇಳಿಕೆಗೆ ಸಂಬಂಧಪಟ್ಟಂತೆ ಕೆಪಿಎಸ್‌ಸಿಯೂ ಜವಾಬ್ದಾರನಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಕೆಪಿಎಸ್‌ಸಿ ಯಾವ ಕ್ರಮ ಕೈಗೊಂಡಿದೆ?

ಬಿ ಟಿ ವೆಂಕಟೇಶ್‌

ಮಾಜಿ ಸ್ಟೇಟ್‌ ಪಬ್ಲಿಕ್‌ ಪ್ರಾಸಿಕ್ಯೂಟರ್‌

1998ನೇ ಸಾಲಿನ ಗ್ರೂಪ್‌ ಎ ಮತ್ತು ಗ್ರೂಪ್‌ ಬಿ ಹುದ್ದೆಗಳ ನೇಮಕಾತಿಯಲ್ಲಿ ಹಲವು ರೀತಿಯ ಅಕ್ರಮಗಳು ನಡೆದಿದ್ದವು. ಮಾಡರೇಷನ್‌ ಸ್ಕೇಲಿಂಗ್‌, ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನ, ಅನುಪಾತದಲ್ಲಿ ವ್ಯತ್ಯಾಸ, ಮೀಸಲಾತಿಯನ್ನು ತಿದ್ದಿರುವುದು ಸೇರಿದಂತೆ ಹಲವು ರೀತಿಯ ಅಕ್ರಮಗಳು ನಡೆದಿದ್ದವು.

ಈ ಸಂಬಂಧ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿಯೂ ಲೀಲಾವತಿ ಅವರು ಅರ್ಜಿದಾರರಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿದ್ದ ಆದೇಶವನ್ನು ರಾಜ್ಯ ಸರ್ಕಾರವು ಸರಿಯಾದ ಕ್ರಮದಲ್ಲಿ ಪಾಲನೆ ಮಾಡಿರಲಿಲ್ಲ. ಹೀಗಾಗಿ ಲೀಲಾವತಿ ಅವರು ಕರ್ನಾಟಕ ಅಡಳಿತ ನ್ಯಾಯಮಂಡಳಿ ಮೆಟ್ಟಿಲೇರಿದ್ದರು.

SUPPORT THE FILE

Latest News

Related Posts