ಭ್ರಷ್ಟಾಚಾರ; 1,839 ಪ್ರಕರಣಗಳಲ್ಲಿ ಇಲಾಖೆ ವಿಚಾರಣೆಯನ್ನೇ ನಡೆಸದ ಸರ್ಕಾರ

ಬೆಂಗಳೂರು; ಲೋಕಾಯುಕ್ತ ಕಾಯ್ದೆ ಕಲಂ 12(3) ಅಡಿಯಲ್ಲಿ ವರದಿ ಸ್ವೀಕರಿಸಿರುವ ಸಚಿವಾಲಯದ ಬಹುತೇಕ ಇಲಾಖೆಗಳು ಆರೋಪಿತ ಅಧಿಕಾರಿ, ನೌಕರರ ವಿರುದ್ಧ ಇಲಾಖೆ ವಿಚಾರಣೆ ನಡೆಸದಿರುವುದು ಇದೀಗ ಬಹಿರಂಗವಾಗಿದೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಆರೋಪಿತ ಅಧಿಕಾರಿ, ನೌಕರ ಸಿಬ್ಬಂದಿ ವಿರುದ್ಧ ಲೋಕಾಯುಕ್ತರು ಸಲ್ಲಿಸಿರುವ ವಿಚಾರಣೆ ವರದಿಗಳನ್ನಾಧರಿಸಿ ಇಲಾಖೆ ವಿಚಾರಣೆ ನಡೆಸದಿರುವ ಉನ್ನತ ಅಧಿಕಾರಿಗಳ ಭಂಡ ನಿರ್ಲಕ್ಷ್ಯವೂ ಪ್ರದರ್ಶನವಾಗಿದೆ.

ಲೋಕಾಯುಕ್ತ ಕಾಯ್ದೆ ಕಲಂ 12(3) ಅಡಿಯಲ್ಲಿ 2021ರ ಜುಲೈ 1ರಿಂದ ಜುಲೈ 31ರವರೆಗೆ ಒಟ್ಟು 2,193 ಪ್ರಕರಣಗಳಲ್ಲಿ ಇಲಾಖೆ ವಿಚಾರಣೆ ನಡೆಸಬೇಕು ಎಂದು ಲೋಕಾಯುಕ್ತ ಸಂಸ್ಥೆಯು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಈ ಪೈಕಿ ಕೇವಲ 354 ಪ್ರಕರಣಗಳಲ್ಲಷ್ಟೇ ಇಲಾಖೆ ವಿಚಾರಣೆ ನಡೆಸಲು ಕ್ರಮಕೈಗೊಂಡಿರುವ ಸರ್ಕಾರವು 1,839 ಪ್ರಕರಣಗಳಲ್ಲಿ ಇಲಾಖೆ ವಿಚಾರಣೆ ನಡೆಸಲು ಈವರೆವಿಗೂ ಕ್ರಮ ಕೈಗೊಂಡಿಲ್ಲ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್‌ 31ರಂದು ನಡೆದ ಸಭೆಯಲ್ಲಿ ಲೋಕಾಯುಕ್ತ ಪ್ರಕರಣಗಳ ಕುರಿತು ಚರ್ಚೆಯಾಗಿದೆ. ಇಲಾಖೆಗಳಲ್ಲಿ ಬಾಕಿ ಇರುವ ಇಲಾಖೆ ವಿಚಾರಣೆ ಕಡತಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್‌ ಅವರು ಸೂಚನೆ ನೀಡಿದ ಬೆನ್ನಲ್ಲೇ 1,839 ಪ್ರಕರಣಗಳಲ್ಲಿ ಇಲಾಖೆ ವಿಚಾರಣೆಗೆ ಕ್ರಮ ಕೈಗೊಳ್ಳದ ಇಲಾಖೆ ಮುಖ್ಯಸ್ಥರ ಬೇಜವಾಬ್ದಾರಿ ಮುನ್ನೆಲೆಗೆ ಬಂದಿದೆ. ಈ ಸಂಬಂಧ ನಡೆದಿರುವ ಸಭೆ ನಡವಳಿ ಮತ್ತು ಇಲಾಖೆ ವಿಚಾರಣೆ ನಡೆಸದೆ ಇಲಾಖೆಗಳ ಪಟ್ಟಿ ಹಾಗೂ ಪ್ರಕರಣಗಳ ವಿವರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಲೋಕಾಯುಕ್ತರ ಶಿಫಾರಸ್ಸಿನ ಪ್ರಕಾರ ಇಲಾಖೆ ವಿಚಾರಣೆ ನಡೆಸಲು ಕ್ರಮ ಕೈಗೊಳ್ಳದ ಇಲಾಖೆಗಳ ಪಟ್ಟಿಯಲ್ಲಿ ಕಂದಾಯ ಇಲಾಖೆಯು ಅಗ್ರ ಸ್ಥಾನದಲ್ಲಿದೆ. 2021ರ ಜುಲೈ 31ರ ಅಂತ್ಯಕ್ಕೆ ಶಿಫಾರಸ್ಸಾಗಿದ್ದ 569 ಪ್ರಕರಣಗಳ ಪೈಕಿ ಕೇವಲ 69 ಪ್ರಕರಣಗಳಿಗಷ್ಟೇ ಇಲಾಖೆ ವಿಚಾರಣೆಗೆ ಕ್ರಮ ಕೈಗೊಂಡಿರುವ ಕಂದಾಯ ಇಲಾಖೆಯು ಇನ್ನೂ 500 ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳದಿರುವುದು ಇಲಾಖೆ ಒದಗಿಸಿರುವ ಮಾಹಿತಿಯಿಂದ ತಿಳಿದು ಬಂದಿದೆ.

ಅದೇ ರೀತಿ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 120 ಪ್ರಕರಣಗಳ ಪೈಕಿ ಕೇವಲ 8 ಪ್ರಕರಣಗಳಿಲ್ಲಷ್ಟೇ ಇಲಾಖೆ ವಿಚಾರಣೆ ಕೈಗೊಂಡು 112 ಪ್ರಕರಣಗಳಲ್ಲಿ ಒಂದೇ ಒಂದು ಕ್ರಮ ಕೈಗೊಂಡಿಲ್ಲ. ಹಾಗೆಯೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯಲ್ಲಿ 172 ಪ್ರಕರಣಗಳಲ್ಲಿ ಕೇವಲ ಒಂದೇ ಒಂದು ಪ್ರಕರಣದಲ್ಲದಷ್ಟೇ ಕ್ರಮ ಕೈಗೊಂಡು ಇನ್ನು 171 ಪ್ರಕರಣಗಳಿಗೆ ಇಲಾಖೆ ವಿಚಾರಣೆ ನಡೆಸಲು ಮುಂದಾಗದಿರುವುದು ಗೊತ್ತಾಗಿದೆ.

ನಗರಾಭಿವೃದ್ಧಿ ಇಲಾಖೆಯಲ್ಲಿನ 282ರಲ್ಲಿ 279, ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ 113ರಲ್ಲಿ 107, ಸಮಾಜ ಕಲ್ಯಾಣ ಇಲಾಖೆಯ 46ರಲ್ಲಿ 45, ಸಾರಿಗೆ ಇಲಾಖೆಯ 28ರಲ್ಲಿ 27 ಪ್ರಕರಣಗಳಲ್ಲಿ ಇಲಾಖೆ ವಿಚಾರಣೆಯನ್ನೇ ಕೈಗೊಂಡಿಲ್ಲ.

ಇನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (63), ಪಶು ಸಂಗೋಪನೆ (28), ಕೃಷಿ (83), ಸಹಕಾರ ಇಲಾಖೆಯ (14) ಯೋಜನೆ, ಸಾಂಖ್ಯಿಕ (10), ಆಹಾರ ನಾಗರಿಕ ಸರಬರಾಜು (17), ರೇಷ್ಮೆ (11), ಜಲ ಸಂಪನ್ಮೂಲ (82), ಸಣ್ಣ ನೀರಾವರಿ (37), ಅರಣ್ಯ ಪರಿಸರ ಜೀವಿಶಾಸ್ತ್ರ (65) ವಾಣಿಜ್ಯ ಕೈಗಾರಿಕೆ (57) ತೋಟಗಾರಿಕೆ (32) ಇಲಾಖೆಯಲ್ಲಿನ ವಿಚಾರಣೆ ಪ್ರಕರಣಗಳಲ್ಲಿ ಒಂದೇ ಒಂದು ಕ್ರಮವನ್ನೂ ಕೈಗೊಂಡಿಲ್ಲ.

ಹಾಗೆಯೇ ಸಚಿವಾಲಯದ ಇಲಾಖೆಗಳಲ್ಲಿ ಒಟ್ಟು 1,754 ಇಲಾಖೆ ಪ್ರಕರಣಗಳ ಒಪೈಕಿ ನಿಯಮ 11ರ ಅಡಿಯಲ್ಲಿ 866, ನಿಯಮ 12ರಡಿ 100 ಪ್ರಕರಣಗಳಲ್ಲಷ್ಟೇ ದೋಷಾರೋಪಣೆ ಪಟ್ಟಿ ಜಾರಿಮಾಡಲಾಗಿದೆ. ಈ ಸಂಬಂಧ ವಿವರಣೆ ಕೊಟ್ಟಿರುವ 786 ಪ್ರಕರಣಗಳ ಪೈಕಿ 623 ಪ್ರಕರಣಗಳಿಗೆ ವಿಚಾರಣಾಧಿಕಾರಿಗಳನ್ನು ನೇಮಿಸಲಾಗಿದೆ. 2ನೇ ಕಾರಣ ಕೇಳುವ ನೋಟೀಸ್‌ಗೆ ಆರೋಪಿತ ಅಧಿಕಾರಿ ನೌಕರರಿಂದ ವಿವರಣೆ ಪಡೆದ ಒಟ್ಟು 132 ಪ್ರಕರಣಗಳಲ್ಲಿ 65 ಪ್ರಕರಣಗಳಲ್ಲಿ ಮಾತ್ರ ಅಂತಿಮ ಅದೇಶ ಹೊರಡಿಸಿದೆ. ಜೂನ್‌ 2021ರಲ್ಲಿ ಒಟ್ಟು 1,842 ಪ್ರಕರಣಗಳಿದ್ದರೆ ಜುಲೈ 2021ರಲ್ಲಿ 1,754 ಇಲಾಖೆ ವಿಚಾರಣೆ ಪ್ರಕರಣಗಳಿರುವುದು ಇಲಾಖೆ ಒದಗಿಸಿರುವ ಮಾಹಿತಿಯಿಂದ ಗೊತ್ತಾಗಿದೆ.

ಕಲಂ 12(3) ಅನ್ವಯ ಕಳಿಸಿಕೊಡಲಾಗುವ ವರದಿಗಳ ಮೇಲೆ ತೆಗೆದುಕೊಂಡ ಕ್ರಮದ ಬಗ್ಗೆ ಇಲಾಖಾ ಮುಖ್ಯಸ್ಥರು 3 ತಿಂಗಳೊಳಗಾಗಿ ಲೋಕಾಯುಕ್ತಕ್ಕೆ ವರದಿಗಳನ್ನೂ ಸಲ್ಲಿಸುತ್ತಿಲ್ಲ ಎಂದು ಲೋಕಾಯುಕ್ತ ರಿಜಿಸ್ಟ್ರಾರ್‌ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಅಲ್ಲದೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಅವರು ಈ ಸಂಬಂಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts