ಮದರಸಗಳಲ್ಲಿ ಸಾಮಾಜಿಕ ಜೀವನ ಬೋಧನೆ; ಸಿಟಿಆರ್‌ ಹೇಳಿಕೆ ಬೆನ್ನಲ್ಲೇ ಮುನ್ನೆಲೆಗೆ ಬಂದ ಉತ್ತರ

ಬೆಂಗಳೂರು; ಕರ್ನಾಟಕದ ಮದರಸಗಳಲ್ಲಿ ಇಸ್ಲಾಂ ಧರ್ಮ, ಕುರಾನಿನಲ್ಲಿ ಮತ್ತು ಪೈಗಂಬರ್‌ ಮಾಡಿದ ಬೋಧನೆ ಅನುಸಾರ ವೈಯಕ್ತಿಕ ಹಾಗೂ ಸಾಮಾಜಿಕ ಜೀವನ ನಡೆಸುವ ಬಗ್ಗೆ ಬೋಧಿಸಲಾಗುತ್ತಿದೆ.

‘ಓಲೈಕೆ ರಾಜಕಾರಣದಿಂದಾಗಿ ದೇಶದ ಮದರಸಾಗಳಲ್ಲಿ ತಾಲಿಬಾನಿಗಳು ಸೃಷ್ಟಿಯಾಗುತ್ತಿದ್ದು, ದೇಶದಲ್ಲಿ ಮತ್ತಷ್ಟು ಪಾಕಿಸ್ತಾನಗಳು ಸೃಷ್ಟಿಯಾಗುವ ಸಂಭವವವಿದೆ.,’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಕಲ್ಬುರ್ಗಿಯಲ್ಲಿ ನೀಡಿದ್ದ ಹೇಳಿಕೆ ಬೆನ್ನಲ್ಲೇ ಮದರಸಗಳಲ್ಲಿ ಸಾಮಾಜಿಕ ಜೀವನ ನಡೆಸುವ ಬಗ್ಗೆ ಬೋಧಿಸಲಾಗುತ್ತಿದೆ ಎಂದು ಹಿಂದಿನ ಹಜ್‌ ಮತ್ತು ವಕ್ಫ್‌ ಸಚಿವರಾಗಿದ್ದ ಆನಂದ್‌ ಸಿಂಗ್‌ ಸದನಕ್ಕೆ ನೀಡಿದ್ದ ಲಿಖಿತ ಉತ್ತರ ಮುನ್ನೆಲೆಗೆ ಬಂದಿದೆ.

ಮದರಸಗಳಲ್ಲಿನ ಧಾರ್ಮಿಕ ಶಿಕ್ಷಣದಲ್ಲಿ ಯಾವ ಯಾವ ವಿಷಯಗಳ ಕುರಿತು ಬೋಧನೆ ಮಾಡಲಾಗುತ್ತದೆ, ಮದರಸ ಶಿಕ್ಷಣಕ್ಕೆ ಸರ್ಕಾರ ಯಾವ ಯಾವ ರೀತಿಯ ಸೌಲಭ್ಯವನ್ನು ನೀಡುತ್ತದೆ ಎಂದು ವಿಧಾನಪರಿಷತ್‌ ಸದಸ್ಯ ಎನ್‌ ರವಿಕುಮಾರ್‌ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಅನಂದ್‌ ಸಿಂಗ್‌ ಅವರು 2021ರ ಜನವರಿ 29ರಂದು ಉತ್ತರಿಸಿದ್ದರು.

ಲಿಖಿತ ಉತ್ತರದಲ್ಲೇನಿದೆ?

‘ಮದರಸಗಳಲ್ಲಿ ಇಸ್ಲಾಂ ಧರ್ಮದಂತೆ ದಿನನಿತ್ಯ ಹಾಗೂ ವಿವಿಧ ಹಬ್ಬಗಳಲ್ಲಿ ಸಲ್ಲಿಸುವ ಪ್ರಾರ್ಥನೆ ಮತ್ತು ಇಡೀ ಜೀವನದಲ್ಲಿ ದೇವರು ಕುರಾನಿನಲ್ಲಿ ಮತ್ತು ಪೈಗಂಬರ್‌ ಅವರು ಮಾಡಿದ ಬೋಧನೆ ಅನುಸಾರ ವೈಯಕ್ತಿಕ ಹಾಗೂ ಸಾಮಾಜಿಕ ಜೀವನ ನಡೆಸುವ ಬಗ್ಗೆ ಬೋಧನೆ ನೀಡಲಾಗುತ್ತಿದೆ,’ ಎಂದು ವಕ್ಫ್‌ ಸಚಿವರಾಗಿದ್ದ ಆನಂದ್‌ ಸಿಂಗ್‌ ಅವರು ಉತ್ತರಿಸಿದ್ದರು.

ಇದಲ್ಲದೆ ರಾಜ್ಯದ ಕನ್ನಡ ಭಾಷೆ, ಕಂಪ್ಯೂಟರ್‌ ಶಿಕ್ಷಣವನ್ನು ಸಹ ನೀಡುವುದಲ್ಲದೆ ಶಿಕ್ಷಣಾರ್ಥಿಗಳನ್ನು ಸಾರ್ವಜನಿಕ ಶಿಕ್ಷಣದಲ್ಲೂ ಭಾಗವಹಿಸುವಂತೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಉತ್ತರಿಸಿದ್ದ ಆನಂದ್‌ ಸಿಂಗ್‌, ಮದರಸಾದ ಆಧುನೀಕರಣಕ್ಕಾಗಿ ಸರ್ಕಾರದಿಂದ ಅನುದಾನ ನೀಡಲಾಗುತ್ತಿದೆ ಎಂದು ಮಾಹಿತಿ ಒದಗಿಸಿರುವುದು ಉತ್ತರದಿಂದ ತಿಳಿದು ಬಂದಿದೆ.

ಧಾರ್ಮಿಕ ಶಿಕ್ಷಣವನ್ನು ಉನ್ನತ ಶಿಕ್ಷಣ ಹಾಗೂ ಸರ್ಕಾರದ ನೇಮಕಾತಿಗಾಗಿ ನಡೆಸಲಾಗುವ ಪರೀಕ್ಷೆಗಳಲ್ಲೂ ಪರಿಗಣಿಸಿ ಅಳವಡಿಸಿಕೊಳ್ಳುವಂತೆ ಸಮಾಜದ ಒಂದು ವರ್ಗ ಒತ್ತಡ ತಂದರೆ ಸರ್ಕಾರದ ನಿಲುವೇನು ಎಂದು ರವಿಕುಮಾರ್‌ ಅವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಆನಂದ್‌ಸಿಂಗ್‌ ‘ಇಂತಹ ಯಾವುದೇ ಬೇಡಿಕೆಗಳು ಸರ್ಕಾರದ ಮುಂದೆ ಇರುವುದಿಲ್ಲ,’ ಎಂದು ಹೇಳಿದ್ದರು. ಹಾಗೆಯೇ ಮದರಸಗಳಲ್ಲಿನ ಧಾರ್ಮಿಕ ಶಿಕ್ಷಣವನ್ನು ಎಸ್‌ಎಸ್‌ಎಲ್‌ಸಿಗೆ ತತ್ಸಮಾನ ಎಂದು ಪರಿಗಣಿಸುವ ಪ್ರಸ್ತಾವನೆಯು ಸರ್ಕಾರದ ಮುಂದಿಲ್ಲ ಎಂದೂ ಉತ್ತರಿಸಿದ್ದರು.

the fil favicon

SUPPORT THE FILE

Latest News

Related Posts