ಅನ್ನಭಾಗ್ಯ ಹಣಪಾವತಿಯಲ್ಲಿ ವಿಳಂಬ; ಛತ್ತೀಸ್‌ಗಡ್‌ ಆಹಾರ ನಿಗಮಕ್ಕೆ 5.25 ಕೋಟಿ ಬಡ್ಡಿ ಪಾವತಿ

ಬೆಂಗಳೂರು; ಅನ್ನಭಾಗ್ಯ ಯೋಜನೆಯಡಿಯಲ್ಲಿ ಛತ್ತೀಸ್‌ಗಡ ರಾಜ್ಯ ಆಹಾರ ನಿಗಮದಿಂದ ಅಕ್ಕಿ ಖರೀದಿಸಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಹಣವು ಲಭ್ಯತೆಯಿದ್ದರೂ ಛತ್ತೀಸ್‌ಗಡ ರಾಜ್ಯ ಆಹಾರ ನಿಗಮಕ್ಕೆ ತಡವಾಗಿ ಹಣ ಪಾವತಿ ಮಾಡಿದ್ದರಿಂದಾಗಿ 5.25 ಕೋಟಿಯಷ್ಟು ಬಡ್ಡಿ ಪಾವತಿ ಮಾಡಿದ್ದ ಪ್ರಕರಣವನ್ನು ಪ್ರಧಾನ ಮಹಾಲೇಖಪಾಲರು ಮತ್ತು ಮಹಾಲೆಕ್ಕಪರಿಶೋಧಕರ ವರದಿಯು ಬಹಿರಂಗಗೊಳಿಸಿದೆ.

ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಅಕ್ಕಿ, ಗೋಧಿ ಮುಂತಾದವುಗಳ ಖರೀದಿಗೆ ಇಂಡಿಯನ್‌ ಬ್ಯಾಂಕ್‌ನಿಂದ 650 ಕೋಟಿ ರು. ಓಪನ್‌ ಕ್ಯಾಷ್‌ ಕ್ರೆಡಿಟ್‌ ಸೌಲಭ್ಯ ಮತ್ತು ನಿಧಿಗಳ ಲಭ್ಯವಿದ್ದರೂ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು 232 ದಿನಗಳ ನಂತರ ವಿಳಂಬವಾಗಿ ಹಣ ಪಾವತಿ ಮಾಡಿತ್ತು. ಸಕಾಲದಲ್ಲಿ ಛತ್ತೀಸ್‌ಗಢ ರಾಜ್ಯ ಆಹಾರ ನಿಗಮಕ್ಕೆ ಹಣ ಪಾವತಿ ಮಾಡಿದ್ದರೆ 5.25 ಕೋಟಿ ಬಡ್ಡಿಯನ್ನು ತಪ್ಪಿಸಬಹುದಾಗಿತ್ತು ಎಂದು ಸಿಎಜಿ ವರದಿಯು ವಿವರಿಸಿದೆ.

ವಿಳಂಬವಾಗಿ ಹಣ ಪಾವತಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿರಲಿಲ್ಲ ಮತ್ತು ನಷ್ಟಕ್ಕೆ ಕಾರಣರಾದವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರು ಕ್ರಮ ಕೈಗೊಂಡಿಲ್ಲ. ಈ ಕುರಿತು ಪರಿಶೀಲನೆ ಕೈಗೊಂಡಿದ್ದ ಸಿಎಜಿಗೆ ವ್ಯವಸ್ಥಾಪಕ ನಿರ್ದೇಶಕರು ಯಾವುದೇ ಉತ್ತರ ನೀಡದೇ ಮೌನ ವಹಿಸಿದ್ದರು ಎಂಬ ಸಂಗತಿ ಸಿಎಜಿ ವರದಿಯಿಂದ ತಿಳಿದು ಬಂದಿದೆ.

ಅದೇ ರೀತಿ ‘ನಿಗಮವು ಮಂಡಳಿಯ ನಿರ್ದೇಶನದಂತೆ ಪಾವತಿಯ ವಿಳಂಬಕ್ಕೆ ಕಾರಣಗಳನ್ನು ಪತ್ತೆ ಮಾಡಲು ತನಿಖೆ ನಡೆಸಬೇಕು ಮತ್ತು ಅಂತಹ ತನಿಖೆಯ ಆಧಾರದ ಮೇಲೆ ನಷ್ಟಕ್ಕೆ ಕಾರಣರಾದವರ ಮೇಲೆ ಶಿಸ್ತುಕ್ರಮ ಜರುಗಿಸಬೇಕು. ಅಂತಹ ಘಟನೆಗಳು ಪುನರಾವರ್ತನೆಯಾಗದಂತೆ ಒಪ್ಪಂದಗಳ ನಿಯಮ ಮತ್ತು ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಾತ್ರಿಪಡಿಸಿಕೊಳ್ಳಬೇಕು,’ ಎಂದು ಸಿಎಜಿ ವರದಿಯು ಶಿಫಾರಸ್ಸು ಮಾಡಲಾಗಿದೆ.

ಪ್ರಕರಣದ ವಿವರ

ಕಡು ಬಡವರಿಗೆ ಮತ್ತು ಬಡತನ ರೇಖೆ (ಬಿಪಿಎಲ್‌)ಗಿಂತ ಕೆಳಗಿರುವ ಕುಟುಂಬಗಳಿಗೆ ಕಡಿಮೆ ದರದಲ್ಲಿ ಆಹಾರ ಧಾನ್ಯಗಳನ್ನು ವಿತರಿಸಲು 2013ರ ಜುಲೈನಲ್ಲಿ ಅನ್ನ ಭಾಗ್ಯ ಯೋಜನೆಯನ್ನು ಆರಂಭಿಸಿತ್ತು. ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಅವಶ್ಯವಿದ್ದ ಹೆಚ್ಚುವರಿ ಅಕ್ಕಿಯನ್ನುಇ ಛತ್ತೀಸ್‌ಗಡ ರಾಜ್ಯ ಆಹಾರ ನಿಗಮದಿಂದ 1,50,000 ಮೆಟ್ರಿಕ್‌ ಟನ್‌ಗಳಷ್ಟು ಅಕ್ಕಿಯನ್ನು ಮೂರು ಹಂತಗಳಲ್ಲಿ ಖರೀದಿಸಲು ನಿರ್ಧರಿಸಿತ್ತು. ಇದಕ್ಕಾಗಿ ಒಡಂಬಡಿಕೆಯನ್ನೂ ಮಾಡಿಕೊಂಡಿತ್ತು.

ಒಡಂಬಡಿಕೆಯ ಪ್ರಕಾರ ಪ್ರತಿ ಕ್ವಿಂಟಾಲ್‌ಗೆ 2,290 ಮತ್ತು ರೈಲು ಸಾಗಾಣಿಕೆ ಶುಲ್ಕ, ಛತ್ತೀಸ್‌ಘಡ ರೈಲು ನಿಲ್ದಾಣದವರೆಗೆ ನಿರ್ವಹಣೆ, ಸಾಗಾಣಿಕೆ ವೆಚ್ಚವೂ ಸೇರಿದಂತೆ ಉಭಯ ರಾಜ್ಯಗಳ ನಿಗಮದ ಜತೆ ಒಡಂಬಡಿಕೆಯಲ್ಲಿ ವಿವರಿಸಲಾಗಿತ್ತು. ಒಂದು ವೇಳೆ ಒಡಂಬಡಿಕೆಯ ಷರತ್ತುಗಳನ್ನು ಅನುಷ್ಠಾನಗೊಳಿಸುವುದರಲ್ಲಿ ಬಿಕ್ಕಟ್ಟು, ವಿವಾದವೇನಾದರೂ ಉದ್ಭವಿಸಿದಲ್ಲಿ ಮಧ್ಯಸ್ಥಿಕೆದಾರ ನಿರ್ಧಾರವೇ ಅಂತಿಮ ಹಾಗೂ ಎರಡೂ ನಿಗಮಗಳೂ ಇದಕ್ಕೆ ಬದ್ಧರಾಗಬೇಕು ಎಂದು ಷರತ್ತು ವಿಧಿಸಲಾಗಿತ್ತು.

ಅದರಂತೆ ಸಾರ್ವಜನಿಕ ವಿತರಣಾ ವ್ಯವಸ್ಥೆ ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಆಹಾರ ಧಾನ್ಯಗಳ ಖರೀದಿಗಾಗಿ ಹಿಂದಿನ ಕಾಂಗ್ರೆಸ್‌ ಸರ್ಕಾರವು ಜೂನ್‌ 2013 ಮತ್ತು ಮೇ 2014ರ ಮಧ್ಯೆ 1,915.76 ಕೋಟಿ ರು.ಗಳನ್ನು ಬಿಡುಗಡೆ ಮಾಡಿತ್ತು. ಜುಲೈ 2013 ಮತ್ತು ಡಿಸೆಂಬರ್‌ 2013 ಮಧ್ಯೆ ರಾಜ್ಯ ಆಹಾರ ನಿಗಮವು 15,36,389 ಕ್ವಿಂಟಾಲ್‌ ಅಕ್ಕಿಯನ್ನು ಕರ್ನಾಟಕ ರಾಜ್ಯ ಆಹಾರ ನಾಗರಿಕ ಸರಬರಾಜು ನಿಗಮಕ್ಕೆ ಸರಬರಾಜು ಮಾಡಿತ್ತು. ಅಲ್ಲದೆ 377.68 ಕೋಟಿ ರು.ಗಳಿಗೆ ಎದುರಗಿ 317 ಕೋಟಿ ರು.ಗಳನ್ನು ವಿಳಂಬವಾಗಿ ಮತ್ತು ಉಳಿದ 60.68 ಕೋಟಿ ರು.ಗಳನ್ನು ಮೂರು ಕಂತುಗಳಲ್ಲಿ ಪಾವತಿಸಿತ್ತು ಎಂಬುದು ಸಿಎಜಿ ವರದಿಯಿಂದ ತಿಳಿದು ಬಂದಿದೆ.

2014ರ ಫೆಬ್ರುವರಿಯಲ್ಲಿ ಎರಡನೆಯ ಕಂತನ್ನು ಪಾವತಿಸಿದ 8 ತಿಂಗಳ ವಿಳಂಬದ ಬಳಿಕ ಮೂರನೆಯ ಹಾಗೂ ಕೊನೆಯ ಕಂತು 45.68 ಕೋಟಿ ರು.ಗಳನ್ನು ಪಾವತಿಸಿತ್ತು. ವಿಳಂಬವಾಗಿ ಪಾವತಿ ಮಾಡಿದ್ದರಿಂದ ಅಕ್ಕಿಯ ಬೆಲೆಯನ್ನು ಮುಂಗಡವಾಗಿ ಪಾವತಿಸಬೇಕೆಂಬ ಒಡಂಬಡಿಕೆಯ ಷರತ್ತನ್ನು ಉಲ್ಲಂಘಿಸಿತ್ತು. ಹೀಗಾಗಿ ವಿಳಂಬವಾಗಿ ಪಾವತಿಸಿದ್ದ ಮೊತ್ತಕ್ಕೆ ಛತ್ತೀಸ್‌ಘಡ ರಾಜ್ಯ ಆಹಾರ ನಿಗಮವು ಶೇ.11ರಂತೆ 6.16 ಕೋಟಿ ರುಗಳಷ್ಟು ಬಡ್ಡಿ ಮತ್ತು ನಿರ್ವಹಣಾ ವೆಚ್ಚದ ಬಾಕಿ 6.22 ಲಕ್ಷ ರು.ಗಳ ಬೇಡಿಕೆ ಸಲ್ಲಿಸಿತ್ತು ಎಂದು ಸಿಎಜಿ ವರದಿಯಿಂದ ಗೊತ್ತಾಗಿದೆ.

ಉಭಯ ರಾಜ್ಯಗಳ ನಿಗಮದ ನಡುವಿನ ವ್ಯಾಜ್ಯ ಬಗೆಹರಿಸಲು ಮಧ್ಯಸ್ಥಿಕೆದಾರನ್ನಾಗಿ ನೇಮಕವಾಗಿದ್ದ ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ಆದೇಶವನ್ನು ಸ್ವೀಕರಿಸಿದ ಒಂದು ವಾರದೊಳಗೆ 5.24 ಕೋಟಿಗಳಷ್ಟು ಬಡ್ಡಿ ಬೇಡಿಕೆಯ ಅಂತಿಮ ಕಂತನ್ನು ಪಾವತಿಸಲು ಆದೇಶ ನೀಡಿದರು. ಅದರಂತೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು 2018ರ ಜುಲೈ 31ರಂದು 5.25 ಕೋಟಿಯನ್ನು ಛತ್ತೀಸ್‌ಘಡ ರಾಜ್ಯ ಆಹಾರ ನಿಗಮಕ್ಕೆ ಪಾವತಿಸಿತ್ತು.

ಇನ್ನು ಅನ್ನ ಭಾಗ್ಯ ಯೋಜನೆಯಡಿ ಅಕ್ಕಿ ಖರೀದಿಗೆ ಕರ್ನಾಟಕ ಸರ್ಕಾರವು ಬಿಡುಗಡೆ ಮಾಡಿದ್ದ 1,915.76 ಕೋಟಿಯಲ್ಲಿ ನಿಗಮವು 2013ರ ಡಿಸೆಂಬರ್‌ನಲ್ಲಿ 895 ಕೋಟಿ ರು.ಗಳನ್ನು ಸ್ವೀಕರಿಸಿತ್ತು.

ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಅಕ್ಕಿ, ಗೋಧಿ ಮುಂತಾದವುಗಳ ಖರೀದಿಗೆ ಇಂಡಿಯನ್‌ ಬ್ಯಾಂಕ್‌ನಿಂದ 650 ಕೋಟಿಗಳ ಓಪನ್‌ ಕ್ಯಾಷ್‌ ಕ್ರೆಡಿಟ್‌ ಸೌಲಭ್ಯ ಮತ್ತು ನಿಧಿಗಳ ಲಭ್ಯತೆ ಇದ್ದರೂ ಛತ್ತೀಸ್‌ಗಡ ರಾಜ್ಯ ಅಹಾರ ನಿಗಮಕ್ಕೆ ಹಣ ಪಾವತಿಸಲು 232 ದಿನಗಳ ಕಾಲ ವಿಳಂಬ ಮಾಡಿತ್ತು ಎಂಬುದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

the fil favicon

SUPPORT THE FILE

Latest News

Related Posts