ಬೆಂಗಳೂರು; ಅಂದಾಜು 8 ಕೋಟಿ ರು. ಮೌಲ್ಯದ ಸ್ಯಾನಿಟೈಸರ್ ಖರೀದಿ ಆದೇಶ ಪಡೆದಿರುವ ಅಯೋಡಿನ್ ಫಾರ್ಮಾಸ್ಯುಟಿಕಲ್ಸ್ ಪ್ರೈವೈಟ್ ಲಿಮಿಟೆಡ್ ಟೆಂಡರ್‌ನಲ್ಲಿ ಬಿಡ್ ಮಾಡುವಾಗ ಸಲ್ಲಿಸಿದ್ದ ವಾರ್ಷಿಕ ವಹಿವಾಟಿನ ದಾಖಲೆಗಳು ನೈಜವಾಗಿರಲಿಲ್ಲ. ಆದರೂ ಈ ಕಂಪನಿಯು ದರಪಟ್ಟಿಯಲ್ಲಿ ಯಶಸ್ವಿ ಬಿಡ್‌ದಾರರಾಗುವ ಮೂಲಕ ಸ್ಯಾನಿಟೈಸರ್ ಸರಬರಾಜು ಆದೇಶವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂಬ ಅಂಶವನ್ನು ‘ದಿ ಫೈಲ್’ ಇದೀಗ ಹೊರಗೆಡವುತ್ತಿದೆ.
ಅಯೋಡಿನ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯು ಗುಣಮಟ್ಟವಿಲ್ಲದ ಸ್ಯಾನಿಟೈಸರ್ ಪೂರೈಕೆ ಮಾಡಿದೆ ಎಂದು ಔಷಧ ನಿಯಂತ್ರಕರು ವರದಿ ನೀಡಿದ್ದ ಬೆನ್ನಲ್ಲೇ ಈ ಕಂಪನಿಯು ಟೆಂಡರ್ ಪ್ರಾಧಿಕಾರಕ್ಕೆ ನೈಜತನವಿಲ್ಲದ ದಾಖಲೆಗಳನ್ನು ಸಲ್ಲಿಸಿತ್ತು ಎಂಬ ಅಂಶವು ಮುನ್ನೆಲೆಗೆ ಬಂದಿದೆ.
ಟೆಂಡರ್‌ನಲ್ಲಿ ಈ ಕಂಪನಿಯು ಸಲ್ಲಿಸಿದ್ದ ವಾರ್ಷಿಕ ವಹಿವಾಟಿನ ದಾಖಲೆಗಳ ನೈಜತನವನ್ನು ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದ ಅಧಿಕಾರಿಗಳು ಯಾವುದೇ ಪರಿಶೀಲನೆ ನಡೆಸದೆಯೇ ಕರ್ತವ್ಯಲೋಪ ಎಸಗಿರುವ ಆರೋಪಕ್ಕೆ ಗುರಿಯಾಗಿದ್ದಾರೆ. ಆದರೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ ಕೆ ಸುಧಾಕರ್ ಯಾವುದೇ ಕ್ರಮ ವಹಿಸಿಲ್ಲ ಎಂದು ಗೊತ್ತಾಗಿದೆ.
ವಿಶೇಷವೆಂದರೆ ಇದೇ ಕಂಪನಿಯ ಶಾಸನಬದ್ಧ ಲೆಕ್ಕಪರಿಶೋಧಕರು ಒಂದೇ ಆರ್ಥಿಕ ಸಾಲಿಗೆ ಸಂಬಂಧಿಸಿದಂತೆ ದೃಢೀಕರಿಸಿರುವ ದಾಖಲಾತಿಗಳಲ್ಲಿ ನಮೂದಿಸಿರುವ ವಾರ್ಷಿಕ ವಹಿವಾಟಿನ ಮೊತ್ತವು ಏಕರೂಪದಿಂದ ಕೂಡಿಲ್ಲ ಎಂಬುದು ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್’ಗೆ ದಾಖಲೆಗಳು ಲಭ್ಯವಾಗಿವೆ.
ಅಯೋಡಿನ್ ಫಾರ್ಮಾಸ್ಯುಟಿಕಲ್ಸ್ ಪ್ರೈವೈಟ್ ಲಿಮಿಟೆಡ್ 2018-19ನೇ ಸಾಲಿನ ಮಾರ್ಚ್ 2019ರ ಅಂತ್ಯಕ್ಕೆ ಈ ಕಂಪನಿಯ ವಾರ್ಷಿಕ ವಹಿವಾಟು 8,13,869 ರು. ಎಂದು ಶಾಸನಸಬದ್ಧ ಲೆಕ್ಕಪರಿಶೋಧಕರು ದೃಢೀಕರಿಸಿದ್ದರು.
ಇದೇ ಲೆಕ್ಕಪರಿಶೋಧಕರು 2018-19ನೇ ಸಾಲಿಗೆ ವಾರ್ಷಿಕ ವಹಿವಾಟು 1,68,13,869 ರು. ಎಂದು ದೃಢೀಕರಿಸಿರುವುದು ದಾಖಲೆಯಿಂದ ಗೊತ್ತಾಗಿದೆ. ಒಂದೇ ಕಂಪನಿಯು ಒಂದೇ ಆರ್ಥಿಕ ಸಾಲಿಗೆ ಸಂಬಂಧಿಸಿದಂತೆ ಎರಡು ರೀತಿಯ ದಾಖಲೆಗಳನ್ನು ಸಲ್ಲಿಸಿದ್ದರೂ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದ ಅಧಿಕಾರಿಗಳು ಮತ್ತು ಟೆಂಡರ್ ಅನುಮೋದಿಸುವ ಸಕ್ಷಮ ಪ್ರಾಧಿಕಾರವು ಪರಿಶೀಲಿಸಿಲ್ಲ! ಇದು ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಟೆಂಡರ್ ರದ್ದುಗೊಳಿಸಿದ್ದರ ಹಿಂದಿನ ಗುಟ್ಟೇನಿದೆ?
ಅಂದಾಜು 8 ಕೋಟಿ ರು. ಮೊತ್ತದಲ್ಲಿ 1.15 ಲಕ್ಷ ಸ್ಯಾನಿಟೈಸರ್ ಬಾಟಲ್ (500 ಎಂ ಎಲ್) ಖರೀದಿಗೆ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು 2021ರ ಏಪ್ರಿಲ್ 7ರಂದು ಟೆಂಡರ್ ಕರೆದಿತ್ತು. ಟೆಂಡರ್‌ನಲ್ಲಿ ಭಾಗವಹಿಸಲು ಏಪ್ರಿಲ್ 24 ಕಡೆ ದಿನವಾಗಿತ್ತು. ಈ ಟೆಂಡರ್‌ನಲ್ಲಿ ಅಯೋಡಿನ್ ಫಾರ್ಮಾಸ್ಯುಟಿಕಲ್ಸ್ ಕೂಡ ಭಾಗವಹಿಸಿ ವಾರ್ಷಿಕ ವಹಿವಾಟಿನ ದಾಖಲೆಗಳನ್ನು ಲಗತ್ತಿಸಿತ್ತು ಎಂದು ತಿಳಿದು ಬಂದಿದೆ. ಆದರೆ ಟೆಂಡರ್‌ನಲ್ಲಿ ಭಾಗವಹಿಸಲು ನಿಗದಿಪಡಿಸಿದ್ದ ಕೊನೆ ದಿನಾಂಕದಂದೇ ಟೆಂಡರ್ ರದ್ದುಗೊಂಡಿತ್ತು.
ಗುತ್ತಿಗೆ ಮೊತ್ತವು 50 ಲಕ್ಷ ರು. ಮೇಲ್ಪಟ್ಟಿದ್ದರೆ ಕಂಪನಿಯ ವಾರ್ಷಿಕ ವಹಿವಾಟು 10 ಕೋಟಿ ಇರಬೇಕು. ಅಲ್ಲದೆ ಇದೇ ವಹಿವಾಟನ್ನು 3 ವರ್ಷಗಳ ತನಕ ನಿರ್ವಹಿಸಿರಬೇಕು. ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಇದ್ದರೆ ವಾರ್ಷಿಕ 5 ಕೋಟಿ ಮೊತ್ತದಲ್ಲಿ ವಹಿವಾಟು ನಡೆಸಿರಬೇಕು ಎಂಬ ಷರತ್ತು ಪೂರೈಸಲು ಅಯೋಡಿನ್ ಫಾರ್ಮಾಸ್ಯುಟಿಕಲ್ಸ್ ಪ್ರೈವೈಟ್ ಲಿಮಿಟೆಡ್ ವಿಫಲವಾಗಿದ್ದೇ ಟೆಂಡರ್‌ನ್ನು ದಿಢೀರ್ ಎಂದು ರದ್ದುಗೊಳಿಸಲು ಕಾರಣ ಎಂದು ಹೇಳಲಾಗುತ್ತಿದೆ.
ಟೆಂಡರ್ ರದ್ದುಗೊಳಿಸಿದ್ದ ನಿಗಮವು ಏಪ್ರಿಲ್ 24 ಮತ್ತು 26ರಂದು ದರ ಪಟ್ಟಿಯನ್ನು ಆಹ್ವಾನಿಸಿತ್ತು. ಈ ದರಪಟ್ಟಿಯಲ್ಲಿಯೂ ಅಯೋಡಿನ್ ಫಾರ್ಮಾಸ್ಯುಟಿಕಲ್ಸ್ ಪ್ರೈವೈಟ್ ಲಿಮಿಟೆಡ್ ಭಾಗವಹಿಸಿತ್ತು. ‘ದರ ಪಟ್ಟಿಯಲ್ಲಿ ವಾರ್ಷಿಕ ವಹಿವಾಟು ಇಂತಿಷ್ಟೇ ಇರಬೇಕು ಎಂಬ ಬಗ್ಗೆ ಯಾವುದೇ ಷರತ್ತು ವಿಧಿಸಲ್ಲ ಮತ್ತು ದಾಖಲಾತಿಗಳು ಅಷ್ಟಾಗಿ ಬೇಕಾಗಿಲ್ಲ. ಹೀಗಾಗಿಯೇ ನಿಗಮದ ಕೆಲ ಭ್ರಷ್ಟ ಅಧಿಕಾರಿಗಳು ಕಂಪನಿಗೆ ಅನುಕೂಲ ಮಾಡಿಕೊಡಲು ದರಪಟ್ಟಿ ದಾರಿ ಹುಡುಕಿಕೊಟ್ಟಿದ್ದಾರೆ,’ ಎಂದು ಹೆಸರು ಹೇಳಲಿಚ್ಛಿಸದ ನಿಗಮದ ಅಧಿಕಾರಿಯೊಬ್ಬರು ‘ದಿ ಫೈಲ್’ಗೆ ತಿಳಿಸಿದ್ದಾರೆ.
ದರಪಟ್ಟಿಯಲ್ಲಿ ಕನಿಷ್ಠ ದರ ನಮೂದಿಸಿ ಎಲ್ 1 ಆಗಿ ಹೊರಹೊಮ್ಮಿದ್ದ ಅಯೋಡಿನ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯು ಗುಣಮಟ್ಟವಿಲ್ಲದ ಸ್ಯಾನಿಟೈಸರ್‌ನ್ನು ಪೂರೈಸಿದೆ ಎಂದು ಔಷಧ ನಿಯಂತ್ರಕರು 2021ರ ಆಗಸ್ಟ್ 8ರಂದು ವರದಿ ನೀಡಿದ್ದನ್ನು ಸ್ಮರಿಸಬಹುದು.
ಕಳಪೆ ಸ್ಯಾನಿಟೈಸರ್ ಖರೀದಿ; ಔಷಧ ನಿಯಂತ್ರಕರ ಪರೀಕ್ಷೆಯಲ್ಲಿ ಸಾಬೀತಾದರೂ ಲಕ್ಷಾಂತರ ರು ಪಾವತಿ
ಅಯೋಡಿನ್ ಕಂಪನಿಯು ಸರಬರಾಜು ಮಾಡಿದ್ದ ಸ್ಯಾನಿಟೈಸರ್ ಬ್ರಿಲಿಯಂಟ್ ಬ್ಲೂ ಬಣ್ಣದಿಂದ ಕೂಡಿದೆ ಎಂದು ಹೇಳಿತ್ತಾದರೂ ಉಗ್ರಾಣಗಳಿಗೆ ಪೂರೈಸಿದ್ದ ಸ್ಯಾನಿಟೈಸರ್ ಬಿಳಿ ಬಣ್ಣಕ್ಕೆ ತಿರುಗಿತ್ತು ಎಂದು ಹೇಳಲಾಗಿದೆ.
ಈ ಸಂಬಂಧ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿದ್ದ ಔಷಧ ನಿಯಂತ್ರಕರು ಅಯೋಡಿನ್ ಫಾರ್ಮಾಸ್ಯುಟಿಕಲ್ಸ್ ಸರಬರಾಜು ಮಾಡಿದ್ದ ಸ್ಯಾನಿಟೈಸರ್‌ನ ಕೆಲ ಬ್ಯಾಚ್‌ಗಳು ಗುಣಮಟ್ಟದಿಂದ ಕೂಡಿರಲಿಲ್ಲ ಎಂದು 2021ರ ಆಗಸ್ಟ್ 27ರಂದು ವರದಿ ಪ್ರಕಟಿಸಿತ್ತು. ಈ ವರದಿ ನಿಗಮದ ಕೈ ಸೇರುವ ಹೊತ್ತಿಗೆ ರಾಜ್ಯದ ಎಲ್ಲಾ ಉಗ್ರಾಣಗಳಿಗೆ ಸ್ಯಾನಿಟೈಸರ್ ಪೂರೈಕೆಯಾಗಿತ್ತು ಎಂದು ಗೊತ್ತಾಗಿದೆ.