ಗಣಿ ಗುತ್ತಿಗೆದಾರರಿಂದ 2,855 ಕೋಟಿ ರು. ರಾಜಧನ ಬಾಕಿ; ವಸೂಲಾತಿಗೆ ಇಲಾಖೆ ಮೀನಮೇಷ

ಬೆಂಗಳೂರು; ಗಣಿ ಮತ್ತು ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಗುತ್ತಿಗೆದಾರರು ಕಳೆದ 5 ವರ್ಷದಲ್ಲಿ 2,855 ಕೋಟಿ ರು. ರಾಜಧನವನ್ನು ಬಾಕಿ ಉಳಿಸಿಕೊಂಡಿರುವುದು ಇದೀಗ ಬಹಿರಂಗವಾಗಿದೆ.

ಕಬ್ಬಿಣ ಅದಿರು ಮತ್ತು ಮ್ಯಾಂಗನೀಸ್‌ ಗಣಿಗಾರಿಕೆಯಲ್ಲಿನ ಅಕ್ರಮಗಳ ವಿರುದ್ಧ ಲೋಕಾಯುಕ್ತರಾಗಿದ್ದ ಸಂತೋಷ್‌ ಹೆಗ್ಡೆ ಅವರು ನೀಡಿದ್ದ ವರದಿ ಆಧರಿಸಿ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿ ಅಧಿಕಾರಕ್ಕೇರಿದ್ದ ಕಾಂಗ್ರೆಸ್‌ ಪಕ್ಷದ ಅಧಿಕಾರವಾಧಿಯಲ್ಲಿಯೂ ರಾಜಧನ ವಸೂಲಾಗಿರಲಿಲ್ಲ. ಕಾಂಗ್ರೆಸ್‌ ಸರ್ಕಾರದಿಂದ ಹಿಡಿದು ಬಿಜೆಪಿ ಸರ್ಕಾರದವರೆಗೆ (2017-18ರಿಂದ 2021ರ ಜುಲೈವರೆಗೆ ) 2,855 ಕೋಟಿ ರು ಬಾಕಿ ಉಳಿಸಿಕೊಂಡಿರುವುದು ವಿಧಾನಪರಿಷತ್‌ಗೆ ಗಣಿ ಸಚಿವ ಹಾಲಪ್ಪ ಆಚಾರ್‌ ಅವರು ಸದನಕ್ಕೆ ಲಿಖಿತ ಉತ್ತರದಿಂದ ಗೊತ್ತಾಗಿದೆ.

ಬೆಂಗಳೂರು ಗ್ರಾಮಾಂತರ ಸೇರಿದಂತೆ 13 ಜಿಲ್ಲೆಗಳಲ್ಲಿ ಗುತ್ತಿಗೆ ಅವಧಿ ಪೂರ್ಣಗೊಂಡಿದ್ದ ಪ್ರದೇಶಗಳಲ್ಲಿ ಮತ್ತು ಗುತ್ತಿಗೆ ಇಲ್ಲದ ಪ್ರದೇಶಗಳಲ್ಲಿ ಕಾನೂನುಬಾಹಿರವಾಗಿ ಕಲ್ಲು ಗಣಿಗಾರಿಕೆ ನಡೆಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಂದ 324 ಕೋಟಿ ವಸೂಲು ಮಾಡಿಲ್ಲ ಎಂಬ ಸಂಗತಿ ಬಹಿರಂಗವಾಗಿತ್ತು. ಇದರ ಬೆನ್ನಲ್ಲೇ ಗಣಿ ಮತ್ತು ಕಲ್ಲು ಗಣಿಗಾರಿಕೆ ನಡೆಸಿರುವ ಗುತ್ತಿಗೆದಾರರಿಂದ 2, 855 ಕೋಟಿ ರು. ರಾಜಧನ ಬಾಕಿ ಬರಬೇಕಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ವಸೂಲು ಮಾಡದಿರುವುದು ಮುನ್ನೆಲೆಗೆ ಬಂದಿದೆ.

ರಾಜಧನವನ್ನು ಬಾಕಿ ಉಳಿಸಿಕೊಂಡಿರುವ ಜಿಲ್ಲೆಗಳ ಪೈಕಿ ಕಲ್ಬುರ್ಗಿ ಜಿಲ್ಲೆ ಮುಂದಿದೆ. ಕಳೆದ 5 ವರ್ಷಗಳಲ್ಲಿ 876 ಕೋಟಿ ರು. ಬಾಕಿ ಇದೆ. ಅದೇ ರೀತಿ ಗಣಿ ಸಚಿವ ಹಾಲಪ್ಪ ಆಚಾರ್‌ ಅವರ ತವರು ಜಿಲ್ಲೆ ಕೊಪ್ಪಳ ಜಿಲ್ಲೆಯಲ್ಲಿ 8.07 ಕೋಟಿ ರು. ಬಾಕಿ ಇರುವುದು ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

ರಾಜಧನ ಬಾಕಿ ಇರುವ ಒಟ್ಟು 2,855 ಕೋಟಿ ರು ಪೈಕಿ 891 ಕೋಟಿ ರು. ಗಣಿ ಗುತ್ತಿಗೆದಾರರಿಂದ ಬಾಕಿ ಇದ್ದರೆ ಕಲ್ಲು ಗಣಿ ಗುತ್ತಿಗೆದಾರರಿಂದಲೇ 1,963 ಕೋಟಿ ರು. ಬಾಕಿ ಇದೆ. ಅದೇ ರೀತಿ 2017-18ರಲ್ಲಿ 2,746.26 ಕೋಟಿ ರು., 2018-19ರಲ್ಲಿ 3,026.43 ಕೋಟಿ, 2019-20ರಲ್ಲಿ 3,629.02 ಕೋಟಿ, 2020-21ರಲ್ಲಿ 3,893.44 ಕೋಟಿ, 2021ರ ಜುಲೈ ಅಂತ್ಯದವರೆಗೆ 1,933.98 ಕೋಟಿ ರು. ರಾಜಧನ ವಸೂಲಿಯಾಗಿದೆ. ಕಳೆದ 5 ವರ್ಷದಲ್ಲಿ ಒಟ್ಟು 15,229.13 ಕೋಟಿ ರು. ರಾಜಧನ ವಸೂಲಾಗಿದೆ.

ಜಿಲ್ಲಾವಾರು ಬಾಕಿ ಇರುವ ರಾಜಧನ ಮೊತ್ತ ವಿವರ

ಬೆಂಗಳೂರು ಗ್ರಾಮೀಣ ಜಿಲ್ಲೆ- 9.40 ಕೋಟಿ

ಬೆಂಗಳೂರು ನಗರ ಜಿಲ್ಲೆ- 431.96 ಕೋಟಿ

ಚಾಮರಾಜನಗರ ಜಿಲ್ಲೆ- 5.81 ಕೋಟಿ

ಚಿಕ್ಕಮಗಳೂರು ಜಿಲ್ಲೆ – 49.39 ಕೋಟಿ

ಚಿಕ್ಕಬಳ್ಳಾಪುರ ಜಿಲ್ಲೆ- 26. 87 ಕೋಟಿ

ದಕ್ಷಿಣ ಕನ್ನಡ- 91. 34 ಕೋಟಿ

ಉಡುಪಿ- 84.69 ಲಕ್ಷ

ಹಾಸನ- 37. 55 ಕೋಟಿ

ಕೋಲಾರ – 161. 11 ಕೋಟಿ

ಮಂಡ್ಯ- 31.23 ಕೋಟಿ

ಮೈಸೂರು- 22. 57 ಕೋಟಿ

ಕೊಡಗು- 4.09 ಕೋಟಿ

ರಾಮನಗರ – 127. 49 ಕೋಟಿ

ಶಿವಮೊಗ್ಗ – 153. 72 ಕೋಟಿ

ತುಮಕೂರು – 104. 89 ಕೋಟಿ

ಬೆಳಗಾವಿ – 114. 69 ಕೋಟಿ

ಬಳ್ಳಾರಿ – 5.72 ಕೋಟಿ

ಬೀದರ್‌ – 33. 58 ಕೋಟಿ

ಬಿಜಾಪುರ – 2.10 ಕೋಟಿ

ಚಿತ್ರದುರ್ಗ – 269. 64 ಕೋಟಿ

ದಾವಣಗೆರೆ – 20. 17 ಕೋಟಿ

ಧಾರವಾಡ- 55. 12 ಕೋಟಿ

ಗದಗ್‌ – 1.31 ಕೋಟಿ

ಹಾವೇರಿ – 5.45 ಕೋಟಿ

ಯಾದಗಿರಿ – 26. 17 ಕೋಟಿ

ಹೊಸಪೇಟೆ- 155. 13 ಕೋಟಿ

ಬಾಗಲಕೋಟೆ – 12. 48 ಕೋಟಿ

ರಾಯಚೂರು – 8.95 ಕೋಟಿ

ಉತ್ತರ ಕನ್ನಡ – 1.61 ಕೋಟಿ

ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು 2018ರ ಮಾರ್ಚ್‌ ಅಂತ್ಯಕ್ಕೆ ಸಲ್ಲಿಸಿದ್ದ ಕಾರ್ಯನಿರ್ವಹಣಾ ಲೆಕ್ಕ ಪರಿಶೋಧನೆ ವರದಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಯಿಂದಾಗಿರುವ 354.26 ಕೋಟಿ ರು. ನಷ್ಟದ ಕುರಿತು ವಿಸ್ತೃತವಾಗಿ ಚರ್ಚಿಸಿತ್ತು.

ವರದಿ ಸಲ್ಲಿಕೆಯಾಗಿ 3 ವರ್ಷಗಳಾಗಿದ್ದರೂ ದಂಡ ವಸೂಲಾತಿಗೆ ಕಠಿಣ ಕ್ರಮಗಳನ್ನು ಕೈಗೊಂಡಿಲ್ಲ. ರಾಜಕೀಯ ಹಿನ್ನೆಲೆ ಮತ್ತು ಪ್ರಭಾವಿಗಳ ಒಡೆತನದಲ್ಲಿರುವ ಕಲ್ಲು ಗಣಿ ಗುತ್ತಿಗೆದಾರರಿಂದ ಬಾಕಿ ಇರುವ 324 ಕೋಟಿ ರು.ಗಳನ್ನು ವಸೂಲು ಮಾಡಲು ಕಠಿಣ ಕ್ರಮ ಕೈಗೊಳ್ಳದಿರುವುದನ್ನು ಸ್ಮರಿಸಬಹುದು.

ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ವಿಜಯಪುರ, ಬೆಳಗಾವಿ, ಚಾಮರಾಜನಗರ, ಹಾಸನ, ಗದಗ್‌ನ ಒಟ್ಟು 8 ಕಚೇರಿಗಳ ವ್ಯಾಪ್ತಿಗೆ ಸಂಬಂಧಿಸಿದಂತೆ 223.25 ಕೋಟಿ ಮತ್ತು ಚಾಮರಾಜನಗರ, ತುಮಕೂರು, ರಾಮನಗರ, ಮೈಸೂರು, ಚಿಕ್ಕಬಳ್ಳಾಪುರ, ಉಡುಪಿ ಸೇರಿದಂತೆ ಒಟ್ಟು 6 ಕಚೇರಿಗಳಿಗೆ ಸಂಬಂಧಿಸಿದಂತೆ 131.01 ಕೋಟಿ ಸೇರಿ ಒಟ್ಟು 354.26 ಕೋಟಿ ರು.ಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ವಸೂಲಾತಿ ಮಾಡಬೇಕಿತ್ತು. ಆದರೆ ಈ ಪೈಕಿ ಕೇವಲ 34.06 ಕೋಟಿ ಮಾತ್ರ ವಸೂಲು ಮಾಡಿರುವುದು ಅನುಪಾಲನಾ ವರದಿಯಿಂದ ಗೊತ್ತಾಗಿದೆ.

SUPPORT THE FILE

Latest News

Related Posts