ಕೋವಿಡ್‌ ಸಾವು ಪರಿಹಾರ;ಅತ್ಯಲ್ಪ ಅವಧಿಯಲ್ಲೇ 2 ಆದೇಶ ಹೊರಡಿಸಿ ರಾಗಬದಲಾಯಿಸಿದ ಸರ್ಕಾರ

ಬೆಂಗಳೂರು; ಕೋವಿಡ್‌ ಸೋಂಕಿನಿಂದ ಮೃತರಾದ ಬಡತನ ರೇಖೆಗಿಂತ ಕೆಳಗಿರುವವರಿಗೆ ಒಂದು ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿ ಹೊರಡಿಸಿದ್ದ ಆದೇಶವನ್ನು ಹಿಂಪಡೆಯುವ ಆದೇಶ ಹೊರಡಿಸಿದ ಕೆಲವೇ ಗಂಟೆಗಳಲ್ಲಿ ಆ ಆದೇಶವನ್ನೂ ಹಿಂಪಡೆದು ಪರಿಷ್ಕೃತವಾದ ಮತ್ತೊಂದು ಆದೇಶವನ್ನು ಹೊರಡಿಸಿದೆ.

ಕೋವಿಡ್‌ನಿಂದ ಮೃತ ವ್ಯಕ್ತಿಗಳ ಕುಟುಂಬದ ವಾರಸುದಾರರಿಗೆ ಪರಿಹಾರ ನೀಡುವ ಸಂಬಂಧ ಕಂದಾಯ ಇಲಾಖೆಯು (ವಿಪತ್ತು ನಿರ್ವಹಣೆ) ಸೆ.28ರ ಒಂದೇ ದಿನದಲ್ಲಿ ಎರಡೆರಡು ಆದೇಶಗಳನ್ನು ಹೊರಡಿಸಿದೆ. 1 ಲಕ್ಷ ರು.ಪರಿಹಾರ ಆದೇಶವನ್ನು ಹಿಂಪಡೆದುಕೊಳ್ಳುವ ಸಂಬಂಧ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ರಶ್ಮಿ ಎಂ ಎಸ್‌ ಅವರು ಹೊರಡಿಸಿದ್ದರು.

ಈ ಅದೇಶ ಹೊರಬೀಳುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುವ ಸಾಧ್ಯತೆಗಳಿದ್ದರಿಂದಾಗಿ  ರಶ್ಮಿ ಎಂ ಎಸ್‌ ಅವರು ಹೊರಡಿಸಿದ್ದ ಆದೇಶವನ್ನು ದಿಢೀರ್‌ ಹಿಂಪಡೆದು ಕಂದಾಯ ಇಲಾಖೆಯ (ವಿಪತ್ತು ನಿರ್ವಹಣೆ) ಸರ್ಕಾರದ ಉಪ ಕಾರ್ಯದರ್ಶಿ ಕೆ ಸಿ ಕುಮಾರ್‌ ಅವರು ಮತ್ತೊಂದು ಆದೇಶವನ್ನು ಹೊರಡಿಸಿದ್ದಾರೆ.

ಪರಿಷ್ಕೃತ ಆದೇಶದಲ್ಲೇನಿದೆ?

ರಾಜ್ಯ ಸರ್ಕಾರದಿಂದ ಸಂಧ್ಯಾ ಸುರಕ್ಷಾ ಯೋಜನೆಯ ಲೆಕ್ಕ ಶೀರ್ಷಿಕೆಯಡಿ 1 ಲಕ್ಷ ರು.ಗಳನ್ನು ನೇರ ನಗದು ವರ್ಗಾವಣೆ ಮತ್ತು ಕೇಂಧ್ರ ಸರ್ಕಾರದ ಮಾರ್ಗಸೂಚಿಗಳಂತೆ ರಾಜ್ಯ ವಿಪತ್ತು ಪರಿಹಾರ ನಿಧಿಯಡಿ ಪ್ರತಿಯೊಬ್ಬ ಮೃತರ ವಾರಸುದಾರರಿಗೆ ತಲಾ 50 ಸಾವಿರ ರು.ಗಳನ್ನು ನೇರ ನಗದು ವರ್ಗಾವಣೆ ವ್ಯವಸ್ಥೆ ಮೂಲಕ ಪಾವತಿಸಬೇಕು ಎಂದು ಕೆ ಸಿ ಕುಮಾರ್‌ ಅವರು ಆದೇಶ ಹೊರಡಿಸಿದ್ದಾರೆ.

ಅಲ್ಲದೆ ಬಿಪಿಎಲ್‌ ಹೊರತುಪಡಿಸಿದ (ಎಪಿಎಲ್‌ ಮತ್ತು ಇತರೆ) ಕುಟುಂಬದಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಮರಣ ಸಂಭವಿಸಿದಲ್ಲಿ ಅಂತಹ ಕುಟುಂಬಕ್ಕೆ ಎಸ್‌ಡಿಆರ್‌ಎಫ್‌ ಅಡಿ ಮೃತ ಸಂಖ್ಯೆಗೆ ಅನುಗುಣವಾಗಿ ತಲಾ 50 ಸಾವಿರ ರು.ಗಳನ್ನು ಪಾವತಿಸಬೇಕು ಎಂದೂ ಪರಿಷ್ಕೃತ ಆದೇಶದಲ್ಲಿ ಹೇಳಲಾಗಿದೆ.

ಕೋವಿಡ್‌ ವೈರಾಣು ಸೋಂಕಿನಿಂದಾಗಿ ಮೃತಪಟ್ಟ ವ್ಯಕ್ತಿಗಳ ವಾರಸುದಾರರಿಗೆ 50,000 ರು.ಗಳ ಪರಿಹಾರ ನೀಡಲು ಕೇಂದ್ರ ಸರ್ಕಾರದ ಸೂಚನೆ ಬಂದ ಹಿನ್ನೆಲೆಯಲ್ಲಿ 1 ಲಕ್ಷ ಪರಿಹಾರ ನೀಡುವ ಸಂಬಂಧ ರಾಜ್ಯ ಸರ್ಕಾರ 2021ರ ಸೆ.23ರಂದು ಹೊರಡಿಸಿದ್ದ ಆದೇಶವನ್ನೇ ಹಿಂಪಡೆದುಕೊಂಡಿದೆ. ಈ ಸಂಬಂಧ 2021ರ ಸೆ.28ರಂದು ಪರಿಷ್ಕೃತ ಆದೇಶ ಹೊರಡಿಸಿದೆ.

ಕೋವಿಡ್‌ ಸೋಂಕಿನಿಂದ ದುಡಿಯುವ ಸದಸ್ಯರನ್ನು ಕಳೆದುಕೊಂಡಂತಹ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಆಸರೆ ನೀಡುವ ನಿಟ್ಟಿನಲ್ಲಿ 1 ಲಕ್ಷ ಪರಿಹಾರ ಘೋಷಿಸಲಾಗಿತ್ತು. ಅರ್ಹ ಸಂತ್ರಸ್ತ ಕುಟುಂಬದ ಕಾನೂನುಬದ್ಧ ವಾರಸುದಾರರಿಗೆ 1 ಲಕ್ಷ ರು.ಗಳನ್ನುಪಾವತಿಸಲು ಆದೇಶಿಸಿತ್ತು.

‘ಕೇಂದ್ರ ಗೃಹ ಸಚಿವಾಲಯದ 2021 ಸೆ.25ರ ನಿರ್ದೇಶನದಂತೆ ಕೋವಿಡ್‌-19 ವೈರಾಣು ಸೋಂಕಿನಿಂದಾಗಿ ಮೃತಪಟ್ಟ ವ್ಯಕ್ತಿಯ ಕಾನೂನು ಬದ್ಧ ವಾರಸುದಾರರಿಗೆ 50,000 ರು. ಪರಿಹಾರ ನೀಡಲು ರಾಜ್ಯ ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಬೇಕಾಗಿರುವುದರಿಂದ ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್‌ ಕುಟುಂಬದ ವ್ಯಕ್ತಿಯ ವಾರಸುದಾರರಿಗೆ ಜಿಲ್ಲಾ ವಿಪತ್ತು ಪರಿಹಾರ ನಿಧಿಯಿಂದ ಚೆಕ್ ಮೂಲಕ ಪಾವತಿಸಲು ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಿ ಸೆ.23ರಂದು ಹೊರಡಿಸಲಾಗಿದ್ದ ಆದೇಶವನ್ನು ಯಥಾವತ್ತಾಗಿ ಹಿಂಪಡೆಯಲಾಗಿದೆ,’ ಎಂದು ಸೆ.28ರಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಿತ್ತು.

ಕೋವಿಡ್‌ ಸಾವು; ಒಂದು ಲಕ್ಷ ಪರಿಹಾರ ಘೋಷಿಸಿದ್ದ ಆದೇಶ ಹಿಂಪಡೆದ ಸರ್ಕಾರ

ಕೋವಿಡ್‌ನಿಂದ ಮೃತ ಹೊಂದಿದ ಬಿಪಿಎಲ್‌ ಕುಟುಂಬದ ದುಡಿಯುವ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ವಿತರಣೆ ಕುರಿತಂತೆ ರಾಜ್ಯದಲ್ಲಿ ಒಟ್ಟು 7,711 ಅರ್ಜಿಗಳು ಸಲ್ಲಿಕೆಯಾಗಿವೆ. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಅಂದರೆ 950 ಅರ್ಜಿಗಳು ಸಲ್ಲಿಕೆಯಾಗಿವೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 445, ಧಾರವಾಡ ಜಿಲ್ಲೆಯಲ್ಲಿ 434, ಹಾಸನ ಜಿಲ್ಲೆಯಲ್ಲಿ 443, ಕೊಪ್ಪಳದಲ್ಲಿ 633, ಮೈಸೂರು ಜಿಲ್ಲೆಯಲ್ಲಿ 783 ಅರ್ಜಿಗಳು ಸಲ್ಲಿಕೆಯಾಗಿವೆ.

ಕೋವಿಡ್‌ ಸೋಂಕು ದೃಢವಾದ ಒಂದು ತಿಂಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಗಳು ಕೂಡ ₹50,000 ಪರಿಹಾರ ಧನ ಪಡೆಯಲು ಅರ್ಹತೆ ಹೊಂದಿರುತ್ತವೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಮೃತರು ಕೋವಿಡ್‌ ಬಾಧಿತರು ಎಂದು ಸಾಬೀತಾಗಿರಬೇಕು. ಆಗ ಅವರ ಕುಟುಂಬ ಕೂಡಾ ಪರಿಹಾರ ಧನ ಪಡೆಯಲು ಅರ್ಹವಾಗಿರುತ್ತದೆ ಎಂದು ಕೋರ್ಟ್ ಹೇಳಿತ್ತು.

ಈ ಕುರಿತು ಹೆಚ್ಚುವರಿ ಪ್ರಮಾಣಪತ್ರ ಸಲ್ಲಿಸಿರುವ ಗೃಹ ಸಚಿವಾಲಯ, ಈ ನಿಟ್ಟಿನಲ್ಲಿ ಅಗತ್ಯ ನಿರ್ದೇಶನ ನೀಡುವಂತೆ ನ್ಯಾಯಾಲಯವನ್ನು ಕೇಳಿಕೊಂಡಿತ್ತು.ಕೋವಿಡ್–19ನಿಂದ ಮೃತಪಟ್ಟವರ ಮರಣ ಪತ್ರದಲ್ಲಿ ‘ಕೋವಿಡ್‌ ಕಾರಣದಿಂದ ಆತ್ಮಹತ್ಯೆ’ ಎಂಬ ಅಂಶವನ್ನು ನಮೂದು ಮಾಡದೇ ಇರುವ ಕುರಿತು ಪುನರ್‌ವಿಮರ್ಶೆ ಮಾಡಬೇಕು. ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ಧನ ನೀಡಲು ‘ಆತ್ಮಹತ್ಯೆ’ ಎಂಬುದರ ಉಲ್ಲೇಖ ಅತಿಮುಖ್ಯ ಎಂದು ಸೆ.13ರಂದು ಕೇಂದ್ರ ಸರ್ಕಾರಕ್ಕೆ ಕೋರ್ಟ್ ಹೇಳಿತ್ತು. ಕೋರ್ಟ್‌ ಎತ್ತಿರುವ ಕಳಕಳಿ ಕುರಿತು ಪುನರ್‌ವಿಮರ್ಶೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದ್ದನ್ನು ಸ್ಮರಿಸಬಹುದು.

ಕೋವಿಡ್‌ನಿಂದ ಬಳಲುತ್ತಿರುವ ವೇಳೆಯೇ, ವಿಷ ಪದಾರ್ಥ ಸೇವನೆ, ಆತ್ಮಹತ್ಯೆ, ಕೊಲೆ ಅಥವಾ ಆತ್ಮಹತ್ಯೆಯಿಂದ ಸಂಭವಿಸಿದ ಸಾವುಗಳನ್ನು ಕೋವಿಡ್‌ನಿಂದ ಸಂಭವಿಸಿದ ಸಾವುಗಳು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಐಸಿಎಂಆರ್‌ ಇದಕ್ಕೂ ಮೊದಲು ಜಂಟಿಯಾಗಿ ಮಾರ್ಗಸೂಚಿ ಹೊರಡಿಸಿತ್ತು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೆ.11ರಂದು ಹೊರಡಿಸಿರುವ ಮಾರ್ಗಸೂಚಿ ಅನ್ವಯ ಕೋವಿಡ್‌–19 ಸಾಂಕ್ರಾಮಿಕದಿಂದ ಮೃತಪಟ್ಟವರ ಕುಟುಂಬಕ್ಕೆ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಪರಿಹಾರ ಮೊತ್ತವನ್ನು ಭರಿಸಬೇಕು. ಜೂನ್‌ 30ರಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ಅನುಗುಣವಾಗಿ ಮಾರ್ಗಸೂಚಿ ರೂಪಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts