ಬೆಂಗಳೂರು; ಕೈಗಾರಿಕೆ ಉದ್ದೇಶದ ಹೆಸರಿನಲ್ಲಿ ವಿನಾಯಿತಿ ಪರವಾನಿಗೆ ಪಡೆದು ರಾಜ್ಯದ ಕೊಪ್ಪಳ ಜಿಲ್ಲೆಯ ವಿವಿಧ ಸರ್ವೇ ನಂಬರ್‌ಗಳಲ್ಲಿ 109 ಎಕರೆಗೂ ಹೆಚ್ಚು ಜಮೀನು ಖರೀದಿಸಿರುವ ಪ್ರತಿಷ್ಠಿತ ಬಲ್ದೋಟಾ (ಎಂಎಸ್‌ಪಿಎಲ್) ಗಣಿ ಕಂಪನಿ ನಿಗದಿತ ಉದ್ದೇಶಕ್ಕಾಗಿ ಬಳಕೆ ಮಾಡದಿದ್ದರೂ ಜಮೀನನ್ನು ವಶಪಡಿಸಿಕೊಳ್ಳಲು ಬಿಜೆಪಿ ಸರ್ಕಾರವೂ ಎದೆಗಾರಿಕೆ ತೋರಿರಲಿಲ್ಲ!
ಕೈಗಾರಿಕಾ ಉದ್ದೇಶಗಳಿಗಾಗಿ ಕೆಐಎಡಿಬಿ ಮೂಲಕ ಪಡೆದ ಜಮೀನನ್ನು ಬಳಕೆ ಮಾಡದಿದ್ದರೆ, 15 ದಿನಗಳಲ್ಲಿ ನೋಟೀಸ್ ನೀಡಲಾಗುವುದು. ಒಂದು ವೇಳೆ ಅನ್ಯ ಉದ್ದೇಶಕ್ಕಾಗಿ ಬಳಸಿದ್ದರೆ ಹಿಂಪಡೆಯಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಬಲ್ದೋಟಾ ಕಂಪನಿಯು ಜಮೀನು ಬಳಕೆ ಮಾಡದೇ ಇದ್ದರೂ ಯಾವುದೇ ಕ್ರಮ ಕೈಗೊಳ್ಳದಿದ್ದ ಪ್ರಕರಣವೂ ಮುನ್ನೆಲೆಗೆ ಬಂದಿದೆ.
ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ಅಧಿನಿಯಮ 1961ರ ಕಲಂ 109ಕ್ಕೆ ತಿದ್ದುಪಡಿ ತಂದು ದೊಡ್ಡ ದೊಡ್ಡ ಕಂಪನಿಗಳನ್ನು ರಕ್ಷಿಸಲಾಗಿದೆ. ಆದರೀಗ ಕೆಐಎಡಿಬಿ ಮೂಲಕ ಜಮೀನು ಪಡೆದು ಬಳಕೆ ಮಾಡದಿರುವ ಜಮೀನುಗಳನ್ನು ವಾಪಸ್ ಪಡೆಯಲಾಗುವುದು ಎಂದು ಸಚಿವ ನಿರಾಣಿ ನೀಡಿರುವ ಹೇಳಿಕೆ ಅನುಷ್ಠಾನವಾಗುವುದೇ ಎಂಬ ಪ್ರಶ್ನೆಯೂ ಎದುರಾಗಿದೆ.
109ನೇ ಪ್ರಕರಣದ ಅಡಿಯಲ್ಲಿ ವಿನಾಯಿತಿಯನ್ನು ಪಡೆದ ಭೂಮಿಯನ್ನು ಯಾವ ಉದ್ದೇಶಕ್ಕಾಗಿ ಅಂಥ ಭೂಮಿಯನ್ನು ಬಳಸಬಹುದು ಎಂದು ಅನುಮತಿಸಲಾಗಿದೆಯೋ ಆ ಉದ್ದೇಶಕ್ಕಾಗಿ 7 ವರ್ಷಗಳ ಅವಧಿಗಾಗಿ ಬಳಸಿದ ತರುವಾಯ ಆರ್ಥಿಕ ಮುಗ್ಗಟ್ಟನ್ನು ನಿಭಾಯಿಸುವುದಕ್ಕಾಗಿ ಹಿಂದೆ ಅನುಮತಿಸಲಾದ ಅದೇ ಉದ್ದೇಶಕ್ಕಾಗಿ ಇತರ ಕಂಪನಿ ಅಥವಾ ಸಂಸ್ಥೆಗೆ ಮಾರಾಟ ಮಾಡಲು ವಿಧೇಯಕಕ್ಕೆ 2020ರ ಮಾರ್ಚ್‌ನಲ್ಲೇ ಯಾವುದೇ ಚರ್ಚೆ ಇಲ್ಲದೆಯೇ ಅನುಮತಿ ಪಡೆದುಕೊಂಡಿದೆ.
ಬಲ್ದೋಟಾ ಕಂಪನಿ ಕಲಂ 109ನ್ನು ಉಲ್ಲಂಘಿಸಿರುವ ಪ್ರಕರಣವೂ ಮುನ್ನಲೆಗೆ ಬಂದಿದೆ. ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ ಸಮಗ್ರ ದಾಖಲೆಗಳು ‘ದಿ ಫೈಲ್’ ಗೆ ಲಭ್ಯವಾಗಿವೆ.
ಬಲ್ದೋಟಾ ಪ್ರಕರಣದ ವಿವರ
ಅಂದಾಜು 32.72 ಕೋಟಿ ರು. ಮಾರುಕಟ್ಟೆ ಬೆಲೆ ಇದೆ ಎಂದು ಹೇಳಲಾಗಿರುವ 109 ಎಕರೆಯನ್ನು ಎಂಎಸ್‌ಪಿಎಲ್ ಪಾಳುಬಿಟ್ಟಿದ್ದರೂ ಹಿಂದಿನ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ಮತ್ತು ಹಾಲಿ ಬಿಜೆಪಿ ಸರ್ಕಾರವೂ ಯಾವ ಕ್ರಮವನ್ನೂ ಕೈಗೊಂಡಿರಲಿಲ್ಲ. ಕೊಪ್ಪಳ ಜಿಲ್ಲಾಧಿಕಾರಿಗೆ ನೋಟೀಸ್ ನೀಡಿ ಕೈ ತೊಳೆದುಕೊಂಡಿದ್ದ ಈಗಿನ ಬಿಜೆಪಿ ಸರ್ಕಾರ, ನಿಗದಿತ ಉದ್ದೇಶಕ್ಕೆ ಬಳಕೆಯಾಗದ ಜಮೀನನ್ನು ಮುಟ್ಟುಗೋಲು ಹಾಕಿಕೊಳ್ಳಲು ಧೈರ್ಯ ಪ್ರದರ್ಶಿಸದೇ ಭಂಡ ನಿರ್ಲಕ್ಷ್ಯ ವಹಿಸಿತ್ತು.
ಪಡಾ ಬಿಟ್ಟಿದ್ದ ಎಂಎಸ್‌ಪಿಎಲ್
ಪ್ರತಿಷ್ಠಿತ ಗಣಿ ಕಂಪನಿಗಳ ಪಟ್ಟಿಯಲ್ಲಿರುವ ಬಲ್ದೋಟಾ ಕಂಪನಿ (ಎಂಎಸ್‌ಪಿಎಲ್) ಕೂಡ ಕೊಪ್ಪಳ ಜಿಲ್ಲೆಯ ಹಾಲವರ್ತಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕೈಗಾರಿಕೆ ಉದ್ದೇಶಕ್ಕಾಗಿ ವಿನಾಯಿತಿ ಪರವಾನಿಗೆ ಪಡೆದು 109 ಎಕರೆ 64 ಗುಂಟೆ ವಿಸ್ತೀರ್ಣದ ಜಮೀನನ್ನು ಖರೀದಿಸಿತ್ತು. ಆದರೆ ನಿಗದಿತ ಉದ್ದೇಶಕ್ಕಾಗಿ ಬಳಕೆ ಮಾಡದೇ 9 ವರ್ಷಗಳಿಂದಲೂ ಪಡಾ ಬಿಟ್ಟಿತ್ತು.
ಅದೇ ರೀತಿ ಇನ್ನಿತರೆ ಕೈಗಾರಿಕೆ ಉದ್ದೇಶಕ್ಕಾಗಿ ವಿನಾಯಿತಿ ಪರವಾನಿಗೆ ಪಡೆದಿರುವ 110 ಎಕರೆ 24 ಗುಂಟೆ ವಿಸ್ತೀರ್ಣದ ಜಮೀನುಗಳಿಗೆ ಭೂ ಉಪಯೋಗ ಬದಲಾವಣೆ ಮಾಡಿಕೊಂಡಿರುವ ಬಲ್ದೋಟಾ ಕಂಪನಿ, ಆ ನಂತರ ಭೂ ಪರಿವರ್ತನೆ ಮಾಡಿಸಿಕೊಂಡಿರಲಿಲ್ಲ.

ಕೈಗಾರಿಕೆ ಉದ್ದೇಶಕ್ಕಾಗಿ ವಿನಾಯಿತಿ ಪರವಾನಿಗೆ ಪಡೆದ ಜಮೀನುಗಳನ್ನು ಆದೇಶ ಹೊರಡಿಸಿದ ದಿನಾಂಕದಿಂದ 7 ವರ್ಷದೊಳಗಾಗಿ ನಿಗದಿತ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಭೂ ಸುಧಾರಣೆ ನಿಯಮಾವಳಿಗಳು 1974ರ ನಿಯಮ 38-ಡಿ(4) ಅನ್ವಯ 2001ರ ಮೇ 29 ರಂದು ಆದೇಶ ಹೊರಡಿಸಿತ್ತು. ಆದರೆ ಈ ಆದೇಶವನ್ನು ಸರ್ಕಾರವು ಅನುಷ್ಟಾನಗೊಳಿಸಿರಲಿಲ್ಲ.
ಹಾಗೆಯೇ ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 109(2) (1-ಬಿ) ಅನ್ವಯ ವಿನಾಯಿತಿ ಪರವಾನಿಗೆ ಆದೇಶವನ್ನು ರದ್ದುಪಡಿಸಿ ಯಾವುದೇ ಪರಿಹಾರ ಧನ ಪಾವತಿಸದೇ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ. ಕಳೆದ 20 ವರ್ಷಗಳ ಹಿಂದೆಯೇ ಇಂತಹ ಆದೇಶ ಹೊರಡಿಸಿರುವ ಸರ್ಕಾರ ಆದೇಶ ಪಾಲಿಸುವ ನಿಟ್ಟಿನಲ್ಲಿ ಈವರೆವಿಗೂ ಮುಂದಡಿಯಿಟ್ಟಿರಲಿಲ್ಲ.
109 ಎಕರೆ ಪೈಕಿ ಕೊಪ್ಪಳದ ಹಾಲವರ್ತಿ ವಿವಿಧ ಸರ್ವೆ ನಂಬರ್‌ಗಳಲ್ಲಿ ಎಂಎಸ್‌ಪಿಎಲ್ ಹೆಸರಿನಲ್ಲಿ 36 ಎಕರೆ 20 ಗುಂಟೆ, ಕೊಪ್ಪಳ, ಬಸಾಪುರದಲ್ಲಿ 20 ಎಕರೆ 21 ಗುಂಟೆ ಆರ್ ಎಸ್ ಎಂಟರ್‌ಪ್ರೈಸೆಸ್ ಹೆಸರಿನಲ್ಲಿದ್ದರೆ ಆರೀಸ್ ಐರನ್ ಅಂಡ್ ಸ್ಟೀಲ್ ಹೆಸರಿನಲ್ಲಿ ಒಟ್ಟು 53 ಎಕರೆ 23 ಗುಂಟೆ ಜಮೀನಿದೆ. ಈ ಎಲ್ಲಾ ಜಮೀನುಗಳನ್ನು ಕೈಗಾರಿಕೆ ಉದ್ದೇಶಕ್ಕಾಗಿ ವಿನಾಯಿತಿ ಪರವಾನಿಗೆ ಪಡೆದು ಖರೀದಿಸಿತ್ತು.
ಈ ಪ್ರಕರಣ ಕರ್ನಾಟಕ ವಿಧಾನಸಭೆಯ ಅಂದಾಜು ಸಮಿತಿ ಅಂಗಳದಲ್ಲಿದೆ. ಹೀಗಾಗಿಯೇ ಕೊಪ್ಪಳ ಜಿಲ್ಲಾಧಿಕಾರಿ 2020ರ ಜನವರಿ 20ರಂದು ಎಂಎಸ್‌ಪಿಎಲ್‌ಗೆ ನೋಟೀಸ್ ನೀಡಿ ಕೈತೊಳೆದುಕೊಂಡಿದ್ದರು.

ಮುಟ್ಟುಗೋಲು ಹಾಕಿಕೊಳ್ಳಲಿಲ್ಲವೇಕೆ?
‘ನಿಮ್ಮ ಕಂಪನಿಗೆ ಹಾಗೂ ನಿಮ್ಮ ಒಡೆತನದ ಇತರೆ ಕಂಪನಿಗಳಿಗೆ ವಿನಾಯಿತಿ ಪರವಾನಿಗೆ ನೀಡಿ ಸುಮಾರು 9 ವರ್ಷ ಗತಿಸಿದರೂ ನೀವು ವಿನಾಯಿತಿ ಪಡೆದ ಜಮೀನುಗಳನ್ನು ಕೈಗಾರಿಕೆ ಉದ್ದೇಶಕ್ಕಾಗಿ ಬಳಕೆ ಮಾಡದೇ ಪಡಾ ಬಿಟ್ಟಿರುತ್ತೀರಿ. ಆದ್ದರಿಂದ ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 109(2) (1-ಬಿ) ಅನ್ವಯ ವಿನಾಯಿತಿ ಆದೇಶ ರದ್ದುಗೊಳಿಸಿ ಯಾವುದೇ ಪರಿಹಾರ ಧನ ಪಾವತಿಸದೇ ಸರ್ಕಾರಕ್ಕೆ ಏಕೆ ಮುಟ್ಟುಗೋಲು ಹಾಕಿಕೊಳ್ಳಬಾರದು,’ ಎಂದು ನೋಟೀಸ್‌ನಲ್ಲಿ ತಿಳಿಸಿತ್ತು.
ಬಲ್ದೋಟಾ ಏರ್‌ಪೋರ್ಟ್‌ಗೆ ಬಸಾಪುರ ಗ್ರಾಮದ ಸರ್ವೆ ನಂಬರ್ 28 ಸೇರಿದಂತೆ ಒಟ್ಟು 11 ಸರ್ವೆ ನಂಬರ್‌ಗಳಲ್ಲಿ 31 ಎಕರೆ 14 ಗುಂಟೆ ವಿಸ್ತೀರ್ಣ ಜಮೀನು ಖರೀದಿಸಲು ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 109(ಐ) ಅಡಿ ಏರ್‌ಸ್ಟ್ರಿಪ್ ಹಾಗೂ ಇನ್ನಿತರ ಸೌಕರ್ಯಗಳಿಗೆ 2006ರ ಏಪ್ರಿಲ್ 26ರಂದೇ ವಿನಾಯಿತಿ ಪರವಾನಿಗೆ ನೀಡಿ ಸರ್ಕಾರ ಆದೇಶಿಸಿದೆ. ಇದಾದ 3 ವರ್ಷಗಳ ನಂತರ 2009ರ ಫೆ.5ರನ್ವಯ ಕೃಷಿ ವಲಯದಿಂದ ಸಾರಿಗೆ ಸಂಪರ್ಕದ ಉದ್ದೇಶಕ್ಕಾಗಿ ಭೂ ಉಪಯೋಗ ಬದಲಾವಣೆಗೆ ಆದೇಶ ಹೊರಡಿಸಿತ್ತು.
ಆದರೆ ಈ ಜಮೀನುಗಳ ವಿನ್ಯಾಸ ನಕ್ಷೆಗೆ ಬಲ್ದೋಟಾ ಕಂಪನಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅನುಮೋದನೆಯನ್ನು ಪಡೆದುಕೊಂಡಿರಲಿಲ್ಲ. ಹಾಗೆಯೇ 11 ಎಕರೆ 24 ಗುಂಟೆ ವಿಸ್ತೀರ್ಣದ ಜಮೀನಿಗೆ ಸಂಬಂಧಿಸಿದಂತೆ ಭೂ ಮಾಲೀಕರಿಗೆ ಪರಿಹಾರ ಧನ ಪಾವತಿಸಿರಲಿಲ್ಲ.
ಬಹುತೇಕ ಉದ್ದಿಮೆದಾರರು, ಪ್ರತಿಷ್ಠಿತ ಕಂಪನಿಗಳು ನಿಗದಿತ ಉದ್ದೇಶಕ್ಕಾಗಿ ಜಮೀನು ಬಳಕೆ ಮಾಡದೇ ಭೂ ಸುಧಾರಣೆ ಕಾಯ್ದೆಯನ್ನು 10 ವರ್ಷಗಳಿಂದಲೂ ಉಲ್ಲಂಘಿಸುತ್ತಿವೆ. ಇಂತಹ ಕಂಪನಿಗಳಿಗೆ ಯಾವುದೇ ಪರಿಹಾರ ಧನ ನೀಡದೆಯೇ ಭೂ ಸ್ವಾಧೀನಪಡಿಸಿಕೊಳ್ಳಲು ಹಲವು ವರ್ಷಗಳ ಹಿಂದೆಯೇ ಕಾಯ್ದೆ ರೂಪಿಸಲಾಗಿದೆ. ಆದರೆ ಜಿಲ್ಲಾಡಳಿತಗಳು ಕೇವಲ ನೋಟೀಸ್ ಕೊಟ್ಟು ಕೈತೊಳೆದುಕೊಳ್ಳುತ್ತಿವೆ..









