ಷರತ್ತು ಉಲ್ಲಂಘಿಸಿದ್ದರೂ ಲಾಕ್‌ಡೌನ್‌ನಲ್ಲೇ 22 ಎಕರೆ ಶೈಕ್ಷಣಿಕ ಉದ್ದೇಶಕ್ಕೆ ಮಾರ್ಪಾಡು

ಬೆಂಗಳೂರು; ಬಡ ವಿಧವೆಯರಿಗೆ ಉಚಿತ ಮನೆ, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಉಚಿತ ವೈದ್ಯಕೀಯ ಕೇಂದ್ರ, ಅನಾಥಶ್ರಮ ಸೇರಿದಂತೆ ಇನ್ನಿತರೆ ಉದ್ದೇಶಗಳಿಗೆ 22.23 ಎಕರೆ ವಿಸ್ತೀರ್ಣದ ಜಮೀನು ಮಂಜೂರು ಮಾಡಿಸಿಕೊಂಡು ಖಾಸಗಿ ಶಾಲೆಗಳನ್ನು ನಡೆಸುವ ಮೂಲಕ ಮಂಜೂರಾತಿ ಷರತ್ತನ್ನು ಉಲ್ಲಂಘಿಸಿದ್ದ ಶ್ರೀ ಮಾತಾ ಅಮೃತಾನಂದಮಯಿ ಮಠದ ವಿರುದ್ಧ ಕ್ರಮ ಕೈಗೊಳ್ಳಬೇಕಿದ್ದ ಬಿಜೆಪಿ ಸರ್ಕಾರವು ಶೈಕ್ಷಣಿಕ ಉದ್ದೇಶಕ್ಕೆ ಮಾರ್ಪಾಡು ಮಾಡಿ ಆದೇಶ ಹೊರಡಿಸಿರುವುದು ವಿವಾದಕ್ಕೆ ದಾರಿಮಾಡಿಕೊಟ್ಟಿದೆ.

ಮಂಜೂರು ಮಾಡಿದ್ದ ಉದ್ದೇಶಕ್ಕೆ ಜಮೀನನ್ನು ಉಪಯೋಗಿಸದೇ ಇರುವ ಸಂಬಂಧ ಮಾತಾ ಅಮೃತಾನಂದಮಯಿ ಮತ್ತು ಕ್ರಮಕೈಗೊಳ್ಳದ ರಾಜ್ಯ ಸರ್ಕಾರದ ವಿರುದ್ಧ ಕವಿತಾ ಮತ್ತಿತರರು ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ಬಾಕಿ ಇದೆ. ಈ ಕುರಿತು ಅಂತಿಮ ಆದೇಶ ಪ್ರಕಟಿಸಿಲ್ಲ. ಆದರೂ ರಾಜ್ಯ ಸರ್ಕಾರವು ಲಾಕ್‌ಡೌನ್‌ ಅವಧಿಯಲ್ಲಿಯೇ ಮೂಲ ಉದ್ದೇಶವನ್ನು ಶೈಕ್ಷಣಿಕ ಉದ್ದೇಶಕ್ಕೆ ಮಾರ್ಪಡಿಸಿತ್ತು. ಈ ಸಂಬಂಧ 2021ರ ಏಪ್ರಿಲ್‌ 29ರಂದು ಆದೇಶ ಹೊರಡಿಸಿರುವುದು ಇದೀಗ ಬಹಿರಂಗವಾಗಿದೆ. ಈ ಅವಧಿಯಲ್ಲಿ ಬಿ ಎಸ್‌ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದರು.

2021ರ ಆಗಸ್ಟ್‌ 19ರಂದು ನಡೆದಿದ್ದ ಸಚಿವ ಸಂಪುಟ ಸಭೆಯ ಕಾರ್ಯಸೂಚಿಯಲ್ಲಿ ಮಂಡಿಸಲಾಗಿತ್ತಾದರೂ ಈ ಸಂಬಂಧ ಯಾವುದೇ ನಿರ್ಧಾರ ಹೊರಬಿದ್ದಿಲ್ಲ. ‘ಶ್ರೀ ಮಾತಾ ಅಮೃತಾನಂದಮಯಿ ಮಠಕ್ಕೆ ಮಂಜೂರು ಮಾಡಿರುವ ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ಪೂರ್ವ ತಾಲೂಕು ವರ್ತೂರು ಹೋಬಳಿಯ ಕಸವನಹಳ್ಳಿ ಗ್ರಾಮದ ಸರ್ವೆ ನಂಬರ್‌ 26 ಮತ್ತು 27ರಲ್ಲಿನ ಒಟ್ಟು 22.23 ಎಕರೆ ಜಮೀನಿನ ಉಪಯೋಗದ ಉದ್ಧೇಶಗಳನ್ನು ಮಾರ್ಪಡಿಸಿ ಹೊರಡಿಸಿರುವ 2021ರ ಏಪ್ರಿಲ್‌ 29ರಂದು ಸರ್ಕಾರದ ಆದೇಶವನ್ನು ಮರುಪರಿಶೀಲಿಸುವ ವಿಷಯವನ್ನು ಸಚಿವ ಸಂಪುಟದ ಮುಂದೆ ಮಂಡಿಸಲಾಗಿತ್ತು. ಸದ್ಯ ಈ ಪ್ರಕರಣದ ಕಡತವು ಮುಖ್ಯಮಂತ್ರಿ ಕಚೇರಿ ಅಂಗಳದಲ್ಲಿದೆ ಎಂದು ತಿಳಿದು ಬಂದಿದೆ.

ಪ್ರಕರಣದ ಹಿನ್ನೆಲೆ

ಬಡ ವಿಧವೆಯರಿಗೆ 2000 ಉಚಿತ ಮನೆ ನಿರ್ಮಾಣ, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಆಶ್ರಮ, ಬೃಹ್ಮ ಸ್ಥಾನ ದೇವಸ್ಥಾನ, ಶಾಲೆ, ಅನಾಥಶ್ರಮ, ಉಚಿತ ವೈದ್ಯಕೀಯ ಕೇಂದ್ರ ಸ್ಥಾಪಿಸುವ ಉದ್ದೇಶಕ್ಕೆ ಕೆಲ ಷರತ್ತುಗಳನ್ನು ವಿಧಿಸಿ ಬೆಂಗಳೂರು ಪೂರ್ವ ತಾಲೂಕಿನ ವರ್ತೂರು ಹೋಬಳಿಯ ಕಸವನಹಳ್ಳಿ ಗ್ರಾಮದ ಸರ್ವೆ ನಂಬರ್‌ 26 ಮತ್ತು 27ರಲ್ಲಿ ಒಟ್ಟು 22.23 ಎಕರೆ ಜಮೀನನ್ನು 2000ರ ಸೆ.20ರಂದು ಮಾತಾ ಅಮೃತಾನಂದಮಯಿ ಮಠಕ್ಕೆ ಮಂಜೂರು ಮಾಡಲಾಗಿತ್ತು.

ಆದರೆ ಮಠವು ಜಮೀನು ಮಂಜೂರಾತಿ ಉದ್ದೇಶವನ್ನೇ ಗಾಳಿಗೆ ತೂರಿತ್ತು. ಮಂಜೂರು ಮಾಡಿದ್ದ ಉದ್ದೇಶಕ್ಕೆ ಜಮೀನನ್ನು ಉಪಯೋಗಿಸದೆಯೇ ಖಾಸಗಿ ಶಾಲೆಗಳನ್ನು ನಡೆಸುವ ಮೂಲಕ ಮಂಜೂರಾತಿ ಷರತ್ತನ್ನು ಉಲ್ಲಂಘಿಸಿತ್ತು. ಈ ಸಂಬಂಧ ಕವಿತಾ ಮತ್ತಿತರರು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿಯನ್ನು ದಾಖಲಿಸಿದ್ದರು. (24350/2019) ಸದ್ಯ ಈ ವಿಚಾರಣೆಯು ಹೈಕೋರ್ಟ್‌ನಲ್ಲಿ ಬಾಕಿ ಇದೆ.

ಮಂಜೂರಾತಿ ಷರತ್ತನ್ನು ಉಲ್ಲಂಘಿಸಿದ್ದರೂ ಬೆಂಗಳೂರು ನಗರ ಜಿಲ್ಲಾಧಿಕಾರಿಯು ಜಮೀನನ್ನು ವಶಕ್ಕೆ ಪಡೆದಿರಲಿಲ್ಲ ಮತ್ತು ಮಂಜೂರಾತಿ ಆದೇಶವನ್ನು ರದ್ದುಗೊಳಿಸಿರಲಿಲ್ಲ. ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕೆ ಮಾರ್ಪಡಿಸಿ ಆದೇಶ ಹೊರಡಿಸಬೇಕು ಎಂದು ಮಠವು 2020ರ ಆಗಸ್ಟ್‌ 27ರಂದು ಮಾಡಿದ್ದ ಮನವಿಯನ್ನು ಪುರಸ್ಕರಿಸಿದ್ದರು.

‘ಮಾತಾ ಅಮೃತಾನಂದಮಯಿ ಮಠಕ್ಕೆ (ಸರ್ಕಾರದ ಆದೇಶ ಸಂಖ್ಯೆ ಆರ್‌ ಡಿ 163 ಎಲ್‌ಜೆಬಿ 2000 ದಿನಾಂಕ 20-09-2000) ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮಗಳಿಗೆ ಒಳಪಡಿಸಿ ಕೆಲವು ಷರತ್ತುಗಳಿಗೊಳಪಟ್ಟು ಸರ್ಕಾರವು ಮಂಜೂರು ಮಾಡಿರುವುದರಿಂದ ಮಂಜೂರಾತಿ ಆದೇಶವನ್ನು ಮಾರ್ಪಡಿಸುವ ಬಗ್ಗೆ ಸರ್ಕಾರದ ಹಂತದಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತದೆ,’ ಎಂದು ಜಿಲ್ಲಾಧಿಕಾರಿ ಸರ್ಕಾರಕ್ಕೆ ವರದಿ ಮಾಡಿದ್ದರು.

ಅದರಂತೆ ಕಂದಾಯ ಇಲಾಖೆಯು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 27 ರ ಅನ್ವಯ 22.23 ಎಕರೆ ವಿಸ್ತೀರ್ಣದ ಜಮೀನಿನ ಉಪಯೋಗದ ಉದ್ಧೇಶಗಳನ್ನು ಹೈಕೋರ್ಟ್‌ನಲ್ಲಿರುವ ರಿಟ್‌ ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟು ಶೈಕ್ಷಣಿಕ ಉದ್ದೇಶಕ್ಕಾಗಿ ಎಂದು ಮಾರ್ಪಾಡು ಮಾಡಿದೆ.

ರಾಷ್ಟ್ರೋತ್ಥಾನ ಪರಿಷತ್‌ ಮತ್ತು ಜನಸೇವಾ ವಿಶ್ವಸ್ಥ ಕಲ್ಯಾಣ ಮಂಡಳಿಗೆ ಬೇಕಾಬಿಟ್ಟಿಯಾಗಿ ಜಮೀನು ಮಂಜೂರು ಮಾಡಿದ್ದನ್ನು ಸಿಎಜಿ ಆಕ್ಷೇಪಿಸಿತ್ತು. ಆದರೆ ಈ ಜಮೀನುಗಳನ್ನು ವಶಕ್ಕೆ ಪಡೆದುಕೊಳ್ಳದ ಸರ್ಕಾರ ಕಳೆದ 42 ವರ್ಷಗಳಿಂದಲೂ ಶೈಕ್ಷಣಿಕ ಉದ್ದೇಶವನ್ನು ಸಾಕಾರಗೊಳಿಸಿದ್ದ ಇಸ್ಲಾಮಿಕ್‌ ಮಿಷನ್‌ ಆಫ್‌ ಇಂಡಿಯಾದ ಜಮೀನನ್ನು ವಶಪಡಿಸಿಕೊಂಡಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts