ಐಪಿಎಲ್‌ನಿಂದ ಕೋಟ್ಯಂತರ ಗಳಿಕೆ; ಸರ್ಕಾರದೊಂದಿಗೆ ಆದಾಯ ಹಂಚಿಕೊಳ್ಳದ ಕೆಎಸ್‌ಸಿಎ

ಬೆಂಗಳೂರು; ಐಪಿಎಲ್‌ ನಂತಹ ವಾಣಿಜ್ಯ ಚಟುವಟಿಕೆಗಳನ್ನು ನಡೆಸಿ ನೂರಾರು ಕೋಟಿ ರುಪಾಯಿ ವ್ಯವಹಾರ ಮತ್ತು ಆದಾಯ ಗಳಿಸುತ್ತಿರುವ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ)ಯು ಗುತ್ತಿಗೆ ಷರತ್ತು ಉಲ್ಲಂಘಿಸುತ್ತಿರುವುದು ಬಹಿರಂಗವಾಗಿದೆ. ಬಾಡಿಗೆ ಪಡೆದ ಜಾಗದಲ್ಲಿ ಗಳಿಸುತ್ತಿರುವ ಆದಾಯದಲ್ಲಿ ಬಿಡಿಗಾಸನ್ನೂ ಸರ್ಕಾರಕ್ಕೆ ಕೊಡುತ್ತಿಲ್ಲ. ಐಪಿಎಲ್‌ ಆದಾಯದ ಬಗ್ಗೆ ಲೋಕೋಪಯೋಗಿ ಇಲಾಖೆ ಇದೇ ಮೊದಲ ಬಾರಿಗೆ ತುಟಿ ಬಿಚ್ಚಿದೆ.

ರಾಜ್ಯದಲ್ಲಿರುವ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕ್ಲಬ್‌ಗಳ ಕಾರ್ಯವೈಖರಿ ಮತ್ತು ಚಟುವಟಿಕೆಗಳನ್ನು ಪರಿಶೀಲಿಸಲು ರಚಿಸಿರುವ ವಿಧಾನಪರಿಷತ್‌ ಸದಸ್ಯ ಡಾ ಕೆ ಗೋವಿಂದರಾಜು ಅವರ ಅಧ್ಯಕ್ಷತೆಯ ವಿಶೇಷ ಸದನ ಸಮಿತಿಯು 2021ರ ಜುಲೈ 19ರಂದು ನಡೆದಿದ್ದ ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಕೆ ಎಸ್‌ ಕೃಷ್ಣಾರೆಡ್ಡಿ ಅವರು ಸಮಿತಿಗೆ ಈ ವಿಷಯವನ್ನು ಗಮನಕ್ಕೆ ತಂದಿದ್ದಾರೆ. ಸಭೆಯ ನಡವಳಿ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

‘ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ಗುತ್ತಿಗೆ ಷರತ್ತುಗಳ ಪ್ರಕಾರ ಕ್ರಿಕೆಟ್‌ ಆಟಕ್ಕೆ ಮಾತ್ರ ಅವಕಾಶ ನೀಡಬೇಕು. ಆದರೆ ಅಲ್ಲಿ ಕಮರ್ಷಿಯಲ್‌ ಚಟುವಟಿಕೆಗಳಿಗೆ ಅವಕಾಶವಿಲ್ಲ. ಆದರೆ ಅವರು ಐಪಿಎಲ್‌ನಂತಹ ಕಮರ್ಷಿಯಲ್‌ ಚಟುವಟಿಕೆಯನ್ನು ಅಲ್ಲಿ ನಡೆಸುತ್ತಾರೆ. ಇಲ್ಲಿ ಬಿಡ್‌ ಮಾಡಿ ಕೋಟ್ಯಂತರ ರೂಪಾಹಿಗಳ ವ್ಯವಹಾರಗಳನ್ನು ನಡೆಸಲಾಗುತ್ತಿದೆ. ಆದರೆ ಸರ್ಕಾರಕ್ಕೆ ಬಾಡಿಗೆಯನ್ನು ಕೊಡುವುದಿಲ್ಲ ಮತ್ತು ಆದಾಯದಲ್ಲಿನ ಒಂದು ಭಾಗವನ್ನೂ ಸಹ ಕೊಡುವುದಿಲ್ಲ,’ ಎಂದು ಕೃಷ್ಣಾರೆಡ್ಡಿ ಅವರು ಸಭೆಯಲ್ಲಿ ಮಾಹಿತಿ ಒದಗಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.

ಗಳಿಕೆ ನೂರಾರು ಕೋಟಿ, ಬಾಡಿಗೆ ನೂರು ರುಪಾಯಿ

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವರ್ಷಕ್ಕೆ 100 ನೂರು ರುಪಾಯಿ ಬಾಡಿಗೆ ಆಧಾರದ ಮೇಲೆ ಭೂಮಿಯನ್ನು ಗುತ್ತಿಗೆ ನೀಡಲಾಗಿದೆ. ಆದರೆ ಇದೇ ಜಾಗದಲ್ಲಿ ಕೋಟ್ಯಂತರ ರುಪಾಯಿ ಆದಾಯ ಗಳಿಸುತ್ತಿದೆ. ಅತ್ಯಂತ ಕಡಿಮೆ ದರದಲ್ಲಿ ಗುತ್ತಿಗೆ ಪಡೆದಿರುವ ಜಾಗದಲ್ಲಿ ಆರಂಭದಲ್ಲಿ ಕ್ರೀಡಾ ಉದ್ದೇಶಕ್ಕಾಗಿಯೇ ಬಳಸಲಾಗುತ್ತಿತ್ತು. ಆದರೆ ಈಗ ಅದೇ ಜಾಗದಲ್ಲಿ ಹೋಟೆಲ್‌, ಬಾರ್‌ ಮತ್ತು ರೆಸ್ಟೋರೆಂಟ್‌ನಂತಹ ವಾಣಿಜ್ಯ ಚಟುವಟಿಕೆಗಳನ್ನೂ ನಡೆಸುತ್ತಿದೆ. ಇದು ಕೇವಲ ಬೆಂಗಳೂರು ಮಾತ್ರವಲ್ಲ, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಶಿವಮೊಗ್ಗದಲ್ಲೂ ಇದೇ ರೀತಿ ನಡೆಯುತ್ತಿದೆ ಎಂದು ಕಾರ್ಯದರ್ಶಿ ಕೃಷ್ಣಾರೆಡ್ಡಿ ಅವರು ಸಭೆಗೆ ವಿವರಿಸಿರುವುದು ಗೊತ್ತಾಗಿದೆ.

ಕೋಟ್ಯಂತರ ಆದಾಯದಲ್ಲಿ ಬಿಡಿಗಾಸೂ ಸರ್ಕಾರಕ್ಕಿಲ್ಲ

ರಣಜಿ ಟೆಸ್ಟ್‌ ಪಂದ್ಯಾವಳಿಗಳು ನಡೆಯುವ ಸಂದರ್ಭದಲ್ಲಿ ಸರ್ಕಾರದಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಆದರೆ ಸಂಸ್ಥೆಯು ಬಾಡಿಗೆ ಜಾಗದಲ್ಲಿ ಗಳಿಸುತ್ತಿರುವ ಆದಾಯವನ್ನು ಸರ್ಕಾರಕ್ಕೂ ಕೊಡುತ್ತಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2019ರಲ್ಲಿ 595 ಕೋಟಿ, 2020ರಲ್ಲಿ 535 ಕೋಟಿ ಆದಾಯ ಗಳಿಸಿತ್ತು ಎಂದು ಹೇಳಲಾಗುತ್ತಿದೆ. ಐಪಿಎಲ್ ಸೇರಿದಂತೆ ಇನ್ನಿತರೆ ಪ್ರಾಯೋಜಿತ ಪಂದ್ಯಾವಳಿಗಳು ನಡೆಯುತ್ತಿವೆಯಾದರೂ ಇದರ ಆದಾಯವನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಬೇಕು ಎಂದು ಲೋಕೋಪಯೋಗಿ ಇಲಾಖೆಯು ಪ್ರಸ್ತಾಪಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.

ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ವಿಧಾನಪರಿಷತ್‌ ಸದಸ್ಯೆ ತೇಜಸ್ವಿನಿ ಗೌಡ ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ ಕ್ರೀಡಾ ಚಟುವಟಿಕೆಗಳನ್ನು ನಡೆಸುವುದಕ್ಕೆಂದು ಭೂಮಿಯನ್ನು ತೆಗೆದುಕೊಂಡ ಮೇಲೆ ಅದಕ್ಕೆ ವಿರುದ್ಧವಾಗಿರುವ ಚಟುವಟಿಕೆಗಳನ್ನು ಕೈಗೊಳ್ಳಬಾರದು. ಮನರಂಜನೆಯ ಚಟುವಟಿಕೆಗಳನ್ನು ನಡೆಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಅಲ್ಲಿ ಕಮರ್ಷಿಯಲ್‌ ಚಟುವಟಿಕೆಗಳನ್ನು ನಡೆಸಿ ದುಡ್ಡು ಮಾಡುತ್ತಿದ್ದಾರೆ. ಅವರಿಂದ ಆಸ್ತಿಗಳನ್ನು ಕಿತ್ತುಕೊಳ್ಳುವುದು ನಮ್ಮ ಉದ್ದೇಶವಲ್ಲ. ಸರ್ಕಾರ ಯಾವ ಉದ್ದೇಶಕ್ಕಾಗಿ ಅವರಿಗೆ ಜಾಗವನ್ನು ನೀಡಿದೆ ಆ ಉದ್ದೇಶ ಈಡೇರಬೇಕಿದೆ. ಶೇ.80ರಷ್ಟು ಕಮರ್ಷಿಯಲ್‌ ಉದ್ದೇಶವನ್ನೇ ಮೂಲವಾಗಿಟ್ಟುಕೊಂಡರೆ ಅಂತಹ ಕ್ಲಬ್‌ಗಳನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಬಿಡುವುದಿಲ್ಲ ಎನ್ನುವ ಸಂದೇಶ ನಮ್ಮ ಸಮಿತಿಯಿಂದ ಹೋಗಬೇಕಿದೆ,’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಐಪಿಎಲ್‌ ಎಲ್ಲೆಲ್ಲಿ ನಡೆದಿವೆ?

ಕೋಲ್ಕತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ದೆಹಲಿ ಕ್ಯಾಪಿಟಲ್, ಪಂಜಾಬ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್​ ಕಿಂಗ್ಸ್​, ರಾಜಸ್ಥಾನ್​ ರಾಯಲ್ಸ್​, ಗುಜರಾತ್ ಲಯನ್ಸ್ ಮತ್ತು ರೈಸಿಂಗ್ ಪುಣೆಯಲ್ಲಿ ಐಪಿಎಲ್‌ ಪಂದ್ಯಾವಳಿ ನಡೆದಿವೆ.

7 ವರ್ಷಗಳಲ್ಲಿ 26,300 ಕೋಟಿ ಆದಾಯ ಗಳಿಸಿದ ಐಪಿಎಲ್

ಡಫ್ & ಫೆಲ್ಪ್ಸ್ ವರದಿಯ ಪ್ರಕಾರ 2014 ರಲ್ಲಿ ಐಪಿಎಲ್ ಮೌಲ್ಯಮಾಪನವು ಸುಮಾರು 19,500 ಕೋಟಿ ರೂ. ಇತ್ತು. ಇದು 2020 ರಲ್ಲಿ 45,800 ಕೋಟಿ ರೂ.ಗೆ ಏರಿದೆ. ಆದ್ದರಿಂದ, ಐಪಿಎಲ್ ಮೌಲ್ಯಮಾಪನ ಈ 7 ವರ್ಷಗಳ ಅವಧಿಯಲ್ಲಿ 26,300 ಕೋಟಿ ರೂ ಹೆಚ್ಚಾಗಿದೆ ಎಂದು ಖಾಸಗಿ ಸುದ್ದಿವಾಹಿನಿಯೊಂದು ವರದಿ ಪ್ರಕಟಿಸಿತ್ತು.

ಐಪಿಎಲ್‌ ಹೇಗೆ ಆದಾಯ ಗಳಿಸುತ್ತದೆ?

ವ್ಯಾಪಾರ, ಮನರಂಜನೆ ಮತ್ತು ಕ್ರೀಡೆಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವ ಹಿಂದಿನ ಸೂತ್ರಧಾರ ಆಗಿರುವ ಲಲಿತ್ ಮೋದಿ ಐಪಿಎಲ್ ಅನ್ನು 2008 ರಲ್ಲಿ ಪ್ರಾರಂಭಿಸಿದರು. ಈ ಲೀಗ್ ಮೂಲಕ, ಪ್ರಪಂಚದಾದ್ಯಂತದ ಇರುವ ಅತ್ಯುತ್ತಮ ಕ್ರಿಕೆಟ್ ಆಟಗಾರರನ್ನು ಒಂದೇ ಸ್ಥಳದಲ್ಲಿ ಒಟ್ಟುಗೂಡಿಸಲಾಗಿತ್ತು.

ಖಾಸಗಿ ಕಂಪನಿಗಳಿಗೆ ಕ್ರಿಕೆಟ್ ಫ್ರಾಂಚೈಸಿಗಳನ್ನು ಖರೀದಿಸಲು ಅವಕಾಶ ಕಲ್ಪಿಸುವುದೇ ಐಪಿಎಲ್‌ನ ಪ್ರಮುಖ ವ್ಯವಹಾರ ಯೋಜನೆಯಾಗಿದೆ. ಫ್ರ್ಯಾಂಚೈಸಿಗಳನ್ನು ದೊಡ್ಡ ಬೆಲೆಗೆ ಮಾರಾಟ ಮಾಡಿದ ಸಂದರ್ಭದಲ್ಲಿ ಕಾರ್ಪೊರೇಟ್‌ ಕಂಪನಿಗಳು ಭಾರತೀಯ ಕ್ರಿಕೆಟ್‌ನಲ್ಲಿ ಹೂಡಿಕೆ ಮಾಡಲು ಆಕರ್ಷಿತರಾಗುತ್ತಾರೆ. ಭಾರತ ಸೇರಿದಂತೆ ವಿಶ್ವದ ದೊಡ್ಡ ಕಾರ್ಪೊರೇಟ್ ಕಂಪನಿಗಳು ಐಪಿಎಲ್‌ನಲ್ಲಿ ತಮ್ಮ ಅಧಿಪತ್ಯ ಸ್ಥಾಪಿಸಿವೆ. ಇದಲ್ಲದೆ ದೊಡ್ಡ ದೊಡ್ಡ ಕಂಪನಿಗಳು ಸಹ ಈ ಆಟದ ಪ್ರಾಯೋಜಕತ್ವವನ್ನು ಪಡೆದುಕೊಳ್ಳಲು ಜಿದ್ದಿಗೆ ಬಿದ್ದವರಂತೆ ಹರಾಜಿನಲ್ಲಿ ಕೊಂಡುಕೊಳ್ಳುತ್ತವೆ.

ಹೆಚ್ಚಿನ ಆದಾಯ ಹೇಗೆ ಬರಲಿದೆ?

ಐಪಿಎಲ್‌ನಲ್ಲಿ ಆದಾಯ ವಿತರಣಾ ಮಾದರಿಯೊಂದಿದೆ. ಇದರಲ್ಲಿ ಬಿಸಿಸಿಐ, ಪ್ರಸಾರ ಮತ್ತು ಆನ್‌ಲೈನ್ ಸ್ಟ್ರೀಮರ್‌ಗಳಿಂದ ಭಾರಿ ಮೊತ್ತದ ಆದಾಯವನ್ನು ಪಡೆದುಕೊಳ್ಳುತ್ತಿದೆ. ಇದರಿಂದ ಗಳಿಸಿದ ಆದಾಯದಿಂದ ತಮ್ಮ ಶುಲ್ಕವನ್ನು ಪಡೆದುಕೊಳ್ಳುವ ಬಿಸಿಸಿಐ, ಉಳಿದ ಮೊತ್ತವನ್ನು ಎಲ್ಲಾ ಐಪಿಎಲ್ ತಂಡಗಳಿಗೆ ವಿತರಿಸುತ್ತದೆ. ಅಲ್ಲದೆ ತಂಡಗಳಿಗೆ ಹಂಚುವ ಹಣದ ಮೌಲ್ಯವನ್ನು ಆ ತಂಡದ ಶ್ರೇಣಿಯ ಆಧಾರದ ಮೇಲೆ ವಿಂಗಡಿಸಲಾಗುತ್ತದೆ. ಒಟ್ಟಾರೆಯಾಗಿ ಐಪಿಎಲ್ ಮಂಡಳಿ ತಮ್ಮ ಒಟ್ಟು ಆದಾಯದಲ್ಲಿ ಶೇಕಡಾ 60-70ರಷ್ಟು ಆದಾಯವನ್ನು ಬರಿ ಟೆಲಿವಿಷನ್​ ರೈಟ್ಸ್​ನಿಂದಲೇ ಗಳಿಸುತ್ತದೆ ಎಂದು ಖಾಸಗಿ ಸುದ್ದಿವಾಹಿನಿಯು ವಿವರಿಸಿತ್ತು.

ಬ್ರ್ಯಾಂಡ್‌ ಪ್ರಾಯೋಜಕತ್ವ

ಐಪಿಎಲ್​ ಫ್ರ್ಯಾಂಚೈಸೀಗಳು ಖಾಸಗಿ ಕಂಪನಿಗಳ ಬ್ರಾಂಡ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತವೆ. ಫ್ರ್ಯಾಂಚೈಸೀಗಳೊಂದಿಗೆ ಟೈಅಪ್ ಆದ ಕಂಪನಿಗಳು ತಮ್ಮ ಕಂಪನಿಯ ಬ್ರ್ಯಾಂಡ್ ಮತ್ತು ಲೋಗೊವನ್ನು ತಂಡದ ಕಿಟ್‌ಗಳು ಮತ್ತು ಜರ್ಸಿಗಳಲ್ಲಿ ಮುದ್ರಿಸುತ್ತಾರೆ. ಇಷ್ಟೇ ಅಲ್ಲದೆ ಕ್ರೀಡಾಂಗಣದ ಬೌಂಡರಿ ಲೈನ್​ನಲ್ಲಿ ಹಾಕಲಾಗುವ ಜಾಹೀರಾತುಗಳಿಂದಲೂ ಆದಾಯ ಗಳಿಸುತ್ತವೆ. ಕಂಪನಿಯ ಹೆಸರು ಅಥವಾ ಲಾಂಛನವನ್ನು ಆಟಗಾರನ ಎದೆ ಮತ್ತು ಹಿಂಭಾಗದಲ್ಲಿ ದೊಡ್ಡ ಮತ್ತು ದಪ್ಪ ಅಕ್ಷರಗಳಲ್ಲಿ ಹಾಕುವುದಕ್ಕೂ ದೊಡ್ಡ ಮೊತ್ತದ ಪ್ರಾಯೋಜಕತ್ವದ ಶುಲ್ಕವನ್ನು ಕಂಪನಿಗಳು ಪಾವತಿಸಬೇಕಾಗುತ್ತದೆ.

ಪ್ರಾಯೋಜಕರು ತಂಡದ ಆಟಗಾರರೊಂದಿಗೆ ಕೆಲವು ಈವೆಂಟ್‌ಗಳನ್ನು ಸಹ ಆಯೋಜಿಸಬಹುದು, ಅದರ ಮೂಲಕ ಅವರು ತಮ್ಮ ಬ್ರ್ಯಾಂಡ್ ಅನ್ನು ಪ್ರಚಾರ ಮಾಡುತ್ತಾರೆ. ಐಪಿಎಲ್​ ತನ್ನ ಒಟ್ಟು ಗಳಿಕೆಯ ಶೇಕಡಾ 20-30ರಷ್ಟು ಆದಾಯವನ್ನು ಪ್ರಾಯೋಜಕತ್ವದಿಂದ ಪಡೆಯುತ್ತದೆ ಎಂದು ತಿಳಿದು ಬಂದಿದೆ.

ಟಿಕೆಟ್ ಮಾರಾಟ ಮಾಡುವ ಮೂಲಕ ಐಪಿಎಲ್​ನಲ್ಲಿ ಶೇಕಡಾ 10 ರಷ್ಟು ಆದಾಯವನ್ನು ಟಿಕೆಟ್‌ ಮಾರಾಟದ ಮೂಲಕ ಗಳಿಸಲಾಗುತ್ತದೆ. ಆದರೆ ಟಿಕೆಟ್​ ಅನ್ನು ಯಾವ ಬೆಲೆಗೆ ಮಾರಾಟ ಮಾಡಬೇಕೆಂಬುದನ್ನು ಆಯಾ ತಂಡದ ಮಾಲೀಕರು ನಿರ್ಧರಿಸುತ್ತಾರೆ. ಇದಲ್ಲದೆ ಬಹುಮಾನದ ಹಣದಿಂದಲೂ ಆದಾಯ ಗಳಿಸುತ್ತದೆ. ಅದೇ ರೀತಿ ಐಪಿಎಲ್‌ನಲ್ಲಿ ಬಹುಮಾನವಾಗಿ ಬಹಳ ದೊಡ್ಡ ಪ್ರಮಾಣದ ಹಣವನ್ನು ನೀಡಲಾಗುತ್ತದೆ. ಪಂದ್ಯಾವಳಿಯಲ್ಲಿ ಚಾಂಪಿಯನ್ ಆದ ತಂಡವು ಬಹುಮಾನದ ಮೊತ್ತದಲ್ಲಿ ಹೆಚ್ಚಿನ ಪಾಲನ್ನು ಪಡೆಯುತ್ತದೆ. ಬಹುಮಾನದ ಹಣವನ್ನು ತಂಡದ ಮಾಲೀಕರು ಮತ್ತು ಆಟಗಾರರ ನಡುವೆ ವಿಂಗಡಿಸಲಾಗುತ್ತದೆ.

ಆದಾಯದ ಇತರ ಮಾರ್ಗಗಳೆಲ್ಲಿವೆ?

ಭಾರತದಲ್ಲಿ ಕ್ರೀಡಾ ಸರಕುಗಳ ಮಾರುಕಟ್ಟೆ ವಾರ್ಷಿಕವಾಗಿ ಶೇಕಡಾ 100 ರಷ್ಟು ಬೆಳೆಯುತ್ತಿದೆ. ಅಲ್ಲದೆ ಈ ಮಾರುಕಟ್ಟೆ ಸುಮಾರು 30 ಮಿಲಿಯನ್ ವಹಿವಾಟು ನಡೆಸುತ್ತಿದೆ. ಪ್ರತಿಯೊಂದು ಫ್ರ್ಯಾಂಚೈಸೀಯೂ, ತನ್ನ ತಂಡಕ್ಕೆ ಸಂಬಂಧಿಸಿದ ಟಿ-ಶರ್ಟ್‌ಗಳು, ಕ್ಯಾಪ್‌ಗಳು, ಕೈಗಡಿಯಾರಗಳು ಮತ್ತು ಇತರ ಅನೇಕ ವಸ್ತುಗಳನ್ನು ಒಳಗೊಂಡಿರುವ ಸರಕುಗಳನ್ನು ಮಾರಾಟ ಮಾಡುವುದರ ಮೂಲಕ ಆದಾಯ ಗಳಿಸುತ್ತವೆ ಎಂದು ಹೇಳಲಾಗುತ್ತಿದೆ.

ಇಷ್ಟೇ ಅಲ್ಲದೆ ಪಂದ್ಯ ನಡೆಯುವ ಸಮಯದಲ್ಲಿ, ಆಹಾರದ ಮಳಿಗೆಗಳನ್ನು ತೆರೆಯಲು ಮೂರನೇ ವ್ಯಕ್ತಿಗೆ ಗುತ್ತಿಗೆ ಆಧಾರದ ಮೇಲೆ ನೀಡಲಾಗುತ್ತದೆ. ಗುತ್ತಿಗೆ ಪಡೆದ ಮೂರನೇ ವ್ಯಕ್ತಿ ಅದನ್ನು ಉಪಗುತ್ತಿಗೆಗಳಾಗಿ ನೀಡುತ್ತಾನೆ. ಈ ಉಪಗುತ್ತಿಗೆಯನ್ನು ಪ್ರತಿ ಪಂದ್ಯಕ್ಕೆ ಹಾಕಲಾಗುವ ಸ್ಟಾಲ್‌ಗಳಿಗೆ ಬೆಲೆಯನ್ನು ಇಂತಿಷ್ಟು ಎಂದು ನಿಗದಿ ಮಾಡುವುದರ ಮೂಲಕ ಆದಾಯ ಗಳಿಸಲಾಗುತ್ತದೆ.

ಅಧಿಕೃತ ಪ್ರಸಾರಕ ಸಂಸ್ಥೆಯಾದ ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿಯೊಂದಿಗೆ ಐದು ವರ್ಷಗಳ ಒಪ್ಪಂದ ಮಾಡಿಕೊಂಡಿರುವ ಬಿಸಿಸಿಐ ₹ 16,347 ಕೋಟಿ (ವಾರ್ಷಿಕ ₹ 3269.4ಕೋಟಿ) ಪಡೆಯುತ್ತದೆ. ಆದರೆ 60 ಪಂದ್ಯಗಳಿಗೆ ಈ ಲೆಕ್ಕಾಚಾರ ಇದೆ. ಅಂದರೆ ಪ್ರತಿಯೊಂದು ಪಂದ್ಯಕ್ಕೂ ಅಂದಾಜು ₹54.5 ಕೋಟಿ ನೀಡಲಿದೆ. ಆದರೆ ಈಗ ನಡೆದಿರುವ ಪಂದ್ಯಗಳಿಗೆ ₹ 1580 ಕೋಟಿ ಲಭಿಸಲಿದೆ. ₹1,690 ಕೋಟಿ ಕೈಬಿಟ್ಟು ಹೋಗಲಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿತ್ತು.

ಟೈಟಲ್‌ ಪ್ರಾಯೋಜಕತ್ವ ಹಕ್ಕು ಪಡೆದಿರುವ ವಿವೊ ₹440 ಕೋಟಿಯನ್ನು ಪ್ರತಿ ಆವೃತ್ತಿಗೆ ನೀಡುತ್ತದೆ. ಈಗ ಈ ಮೊತ್ತದಲ್ಲಿ ಅರ್ಧದಷ್ಟು ಮಾತ್ರ ದಕ್ಕಲಿದೆ. ಸಹಪ್ರಾಯೋಜಕತ್ವ ವಹಿಸಿರುವ ಅನ್‌ಅಕಾಡೆಮಿ, ಡ್ರೀಮ್‌ ಇಲೆವನ್, ಸಿರೆಡ್, ಅಪ್‌ಸ್ಟಾಕ್ಸ್ ಮತ್ತು ಟಾಟಾ ಮೋಟರ್ಸ್‌ ಕಂಪೆನಿಗಳು ಅಂದಾಜು ₹ 120 ಕೋಟಿ ನೀಡುತ್ತವೆ. ಈಗ ಅದರಲ್ಲೂ ಅರ್ಧ ಭಾಗವಷ್ಟೇ ಲಭಿಸಬಹುದು.

‘2,200 ಕೋಟಿ ರೂಪಾಯಿ ನಷ್ಟವೆನ್ನುವುದು ಅಂದಾಜು ಲೆಕ್ಕಾಚಾರವಷ್ಟೇ. ಆದರೆ ಅದಕ್ಕಿಂತಲೂ ಹೆಚ್ಚು ಮೊತ್ತದ ನಷ್ಟವನ್ನೇ ಭರಿಸಬೇಕಾಗುತ್ತದೆ. ಮಂಡಳಿಯು ಬೇರೆ ಬೇರೆ ಖರ್ಚುಗಳಿಗೆ ಹಣ ನೀಡಬೇಕಾಗುತ್ತದೆ. ಫ್ರ್ಯಾಂಚೈಸ್‌ಗಳು ತಮ್ಮ ಆಟಗಾರರೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ವೇತನವನ್ನು ನೀಡುತ್ತವೆ‘ ಎಂದು ಅಧಿಕಾರಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts