ಬೆಂಗಳೂರು; ಕಪ್ಪು ಶಿಲೀಂಧ್ರ ಸೋಂಕಿತರಿಗೆ ಅಗತ್ಯ ಔಷಧ ಎಂದು ಹೇಳಲಾಗಿದ್ದ ಆಂಪೋಟೆರಿಸಿನ್ ಬಿ ಮುಕ್ತ ಮಾರುಕಟ್ಟೆಯಲ್ಲಿ ಕೊರತೆ ಇತ್ತು ಎಂಬ ಕಾರಣವನ್ನು ಮುಂದೊಡ್ಡಿರುವ ಆರೋಗ್ಯ ಇಲಾಖೆಯು ಖರೀದಿ ಪ್ರಕ್ರಿಯೆಯಲ್ಲಿ ಯಾವುದೇ ನಷ್ಟವಾಗಿಲ್ಲ ಎಂದು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಮುಂದೆ ಬಿಂಬಿಸಿದೆ.
ಕಪ್ಪು ಶಿಲೀಂಧ್ರ ರೋಗದ ಚಿಕಿತ್ಸೆಯ ಬಗ್ಗೆ ಮಾಡಿದ್ದ ಖರ್ಚು ಮತ್ತು ದರ ಹೊಂದಾಣಿಕೆ ಮಾಡಿಕೊಳ್ಳದ ಮೈಲಾನ್ ಫಾರ್ಮಾಸ್ಯುಟಿಕಲ್ಸ್‌ಗೆ ಖರೀದಿ ಆದೇಶದ ಕುರಿತು ಆರೋಗ್ಯ ಇಲಾಖೆಯು ನೀಡಿರುವ ಉತ್ತರವು ಅಕ್ರಮವನ್ನು ಸಕ್ರಮ ಮಾಡಿಕೊಳ್ಳಲು ಹೊರಟಿದೆ ಎಂಬ ಅನುಮಾನಗಳನ್ನು ಬಲಪಡಿಸಿದೆ.
‘ರಾಜ್ಯದಲ್ಲಿ ಕಪ್ಪು ಶಿಲೀಂಧ್ರ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು ಮುಕ್ತ ಮಾರುಕಟ್ಟೆಯಲ್ಲಿ ಔಷಧದ ಲಭ್ಯತೆ ತೀವ್ರ ಕೊರತೆ ಇದ್ದ ಕಾರಣ ಕಪ್ಪು ಶಿಲಿಂಧ್ರ ಸೋಂಕಿತರ ಚಿಕಿತ್ಸೆಗಾಗಿ ಅತೀ ಅವಶ್ಯವಿದ್ದ ಆಂಪೋಟೆರಿಸಿನ್ ಲಿಪೋಸೋಮಲ್ ಔಷಧ ಸರಬರಾಜು ಮಾಡುವ ಅಗತ್ಯವಿದ್ದ ಕಾರಣ ತುರ್ತು ಪರಿಸ್ಥಿತಿಯಲ್ಲಿ ಮೈಲಾನ್ ಫಾರ್ಮಾಸ್ಯುಟಿಕಲ್ಸ್‌ನಿಂದ 4(ಜಿ)ಅಡಿಯಲ್ಲಿ ಖರೀದಿ ಮಾಡಲಾಗಿದೆ,’ ಎಂದು ವಿವರಣೆ ನೀಡಿದೆ.

ನಷ್ಟವಾಗಿರುವುದು ಹೇಗೆ?
ಕಪ್ಪು ಶಿಲೀಂಧ್ರ ಸೋಂಕಿತರ ಚಿಕಿತ್ಸೆಗೆ ಅತ್ಯವಶ್ಯಕವಾಗಿರುವ ಆಂಪೋಟೆರಿಸಿನ್ ಚುಚ್ಚುಮದ್ದು ಖರೀದಿ ಸಂಬಂಧ ನಾಲ್ವರು ಬಿಡ್‌ದಾರರ ಪೈಕಿ ಇಬ್ಬರನ್ನು ಆಯ್ಕೆ ಮಾಡಲಾಗಿತ್ತು. ಮೊದಲ ಬಿಡ್‌ದಾರ (ಎಲ್ 1) ಭಾರತ್ ಸೀರಮ್ಸ್ ವ್ಯಾಕ್ಸಿನ್ಸ್ ಲಿಮಿಟೆಡ್ ಪ್ರತಿ ವೈಯಲ್‌ಗೆ 5,787.60ರು. ನಮೂದಿಸಿತ್ತು. ಮೈಲಾನ್ ಫಾರ್ಮಾಸ್ಯುಟಿಕಲ್ಸ್ ಪ್ರತಿ ವೈಯಲ್‌ಗೆ 6,247.50 ರು. ದರ ನಮೂದಿಸಿತ್ತು.
2021ರ ಮೇ 27ರಂದು ದರ ಸಂದಾನ ಸಭೆ ನಡೆದಿತ್ತು. ಇದರಲ್ಲಿ ಎಲ್ 1 ಬಿಡ್‌ದಾರ ಭಾರತ್ ಸಿರಮ್ಸ್ ವಾಕ್ಸಿನ್ಸ್ ಲಿಮಿಟೆಡ್ 5,787.60 ರು. ದರದಲ್ಲಿಯೇ 50,000 ವಯಲ್‌ಗಳನ್ನು 28.93 ಕೋಟಿ ರು.ನಲ್ಲಿ ಸರಬರಾಜು ಮಾಡಲು ಒಪ್ಪಿಕೊಂಡಿತ್ತು. ಭಾರತ್ ಸಿರಮ್ಸ್ ವ್ಯಾಕ್ಸಿನ್ ಲಿಮಿಟೆಡ್ ಕಂಪನಿ ದರದಲ್ಲಿಯೇ 25,000 ವಯಲ್‌ಗಳನ್ನು ಪೂರೈಸಬೇಕು ಎಂದು ಮೈಲಾನ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯನ್ನು ಕೇಳಿಕೊಂಡಿತ್ತು.

ಆದರೆ ದರಕ್ಕೆ ಹೊಂದಾಣಿಕೆ ಮಾಡಲು ಎರಡನೇ ಬಿಡ್‌ದಾರ ಮೈಲಾನ್ ಫಾರ್ಮಾಸ್ಯುಟಿಕಲ್ಸ್ ನಿರಾಕರಿಸಿತ್ತು. ನಾಲ್ವರ ಪೈಕಿ ಇನ್ನೂ ಇಬ್ಬರು ಬಿಡ್‌ದಾರರು ಇದ್ದರೂ ಅವರನ್ನು ಆಹ್ವಾನಿಸದೆಯೇ ಮೈಲಾನ್ ಫಾರ್ಮಾಸ್ಯುಟಿಕಲ್ಸ್ ನಮೂದಿಸಿದ್ದ 460 ರು. ಹೆಚ್ಚುವರಿ ದರದಲ್ಲಿಯೇ (ತಲಾ ವಯಲ್‌ವೊಂದಕ್ಕೆ) 25,000 ವಯಲ್‌ಗಳನ್ನು 4(ಜಿ) ಅಡಿಯಲ್ಲಿ ಖರೀದಿಸಿತ್ತು. ಇದರಿಂದ ಅಂದಾಜು 1.14 ಕೋಟಿ ರು. ನಷ್ಟವಾಗಿತ್ತು ಎಂಬುದು ಮೇಲ್ನೋಟಕ್ಕೆ ಕಂಡು ಬಂದಿತ್ತು.
ನಿಯಮಗಳ ಪ್ರಕಾರ ಎಲ್ 1 ದರದಲ್ಲಿಯೇ ಖರೀದಿಸಬೇಕಿತ್ತು. ಎಲ್ 1 ಬಿಡ್‌ದಾರನ ದರಕ್ಕೆ ಹೊಂದಾಣಿಕೆ ಮಾಡಲು ನಿರಾಕರಿಸಿದ ಮೈಲಾನ್ ಕಂಪನಿಗೆ ವಯಲ್‌ವೊಂದಕ್ಕೆ 460 ರು. ಹೆಚ್ಚುವರಿ ದರದಲ್ಲಿಯೇ ಖರೀದಿ ಆದೇಶ ನೀಡಿರುವುದರ ಹಿಂದೆ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರ ಅತ್ಯಾಸಕ್ತಿಯೇ ಕಾರಣ ಎಂದು ಹೇಳಲಾಗಿದೆ.
ಕೊರೊನಾ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಚನೆಯಾಗಿರುವ ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ್‌ನಾರಾಯಣ್ ಅವರು ಸಹ ಸುಧಾಕರ್ ಅವರ ಅತ್ಯಾಸಕ್ತಿಯನ್ನು ಪ್ರೋತ್ಸಾಹಿಸಿದ್ದಾರೆ. ಮೈಲಾನ್ ಕಂಪನಿ ನಮೂದಿಸಿದ್ದ 460 ರು. ಹೆಚ್ಚುವರಿ ದರದಲ್ಲಿಯೇ 25,000 ವಯಲ್‌ಗಳನ್ನು ಖರೀದಿಸಲು 2021ರ ಜೂನ್ 2ರಂದು ಆರ್ಥಿಕ ಇಲಾಖೆ ನೀಡಿದ್ದ 4(ಜಿ) ವಿನಾಯಿತಿಗೆ ಡಾ ಸಿ ಎನ್ ಅಶ್ವಥ್‌ನಾರಾಯಣ್ ಅಧ್ಯಕ್ಷರಾಗಿದ್ದ ಕಾರ್ಯಪಡೆ ಸಮಿತಿಯು 2021ರ ಜೂನ್ 7ರಂದು ನಡೆದಿದ್ದ ಸಭೆಯಲ್ಲಿ ಘಟನೋತ್ತರ ಅನುಮೋದನೆ ನೀಡಿದ್ದನ್ನು ಸ್ಮರಿಸಬಹುದು.









