ಬೆಂಗಳೂರು; ಕಳೆದ 2 ತಿಂಗಳ ಹಿಂದೆ ‘ದಿ ಫೈಲ್’ ಹೊರಗೆಡವಿದ್ದ ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ (RAT) ಕಿಟ್ ಪರಿಕರಗಳ ಖರೀದಿಯಲ್ಲಿ 14.75 ಕೋಟಿ ರು. ಹೆಚ್ಚುವರಿ ಹೊರೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಶಾಸನಬದ್ಧವಾಗಿ ರಚನೆಯಾಗಿರುವ ಸಾರ್ವಜನಿಕ ಲೆಕ್ಕಪತ್ರ ಸಮಿತಿಯನ್ನೇ ದಿಕ್ಕು ತಪ್ಪಿಸಲು ಯತ್ನಿಸಿದೆ.
ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ (RAT) ಕಿಟ್ ಖರೀದಿ ಸೇರಿದಂತೆ ಇನ್ನಿತರೆ ಅಕ್ರಮಗಳ ಕುರಿತು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಕೇಳಿದ್ದ ಪ್ರಶ್ನೆಗಳಿಗೆ ವರದಿ ನೀಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಮಂಜಸವಾದ ಉತ್ತರವನ್ನು ನೀಡುವಲ್ಲಿ ವಿಫಲವಾಗಿದೆ. ವಿಶೇಷವಾಗಿ ವೈದ್ಯಕೀಯ ಉಪಕರಣಗಳ ಖರೀದಿ ಸಂಬಂಧ ಸಮಿತಿಯ ಸದಸ್ಯರನ್ನು ಕತ್ತಲಲ್ಲಿರಿಸುವ ಉದ್ದೇಶದಿಂದಾಗಿಯೇ ವಾಸ್ತವ ಸಂಗತಿಗಳನ್ನು ಮರೆಮಾಚಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
‘ಕೋವಿಡ್ ಎರಡನೇ ಅಲೆಯು ತೀಕ್ಷ್ಣವಾಗಿದ್ದು ಪರೀಕ್ಷೆಗಳನ್ನು ಅಧಿಕಗೊಳಿಸಲು ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ಕಿಟ್‌ಗಳ ಅಗತ್ಯತೆ ತುರ್ತಾಗಿ ಇದ್ದದ್ದರಿಂದ ಹಾಗೂ ಎಲ್-1 ದರವು ಕೇರಳ ಮತ್ತು ಗೋವಾ ರಾಜ್ಯಗಳು ಹಾಗೂ ಜೆಮ್ ಪೋರ್ಟಲ್ ದರಕ್ಕಿಂತ ಕಡಿಮೆ ಇದ್ದುದ್ದರಿಂದ ಎಲ್-1 ದರವನ್ನು ಅಂಗೀಕರಿಸಲಾಗಿದೆ. ದರ ಅಂಗೀಕಾರ ಪ್ರಾಧಿಕಾರ ಸಮಿತಿ ಸಭೆಯಲ್ಲಿ ನಿರ್ಧರಿಸಿದ ಕಾರಣ ಎಲ್-1 ಸಂಸ್ಥೆಗೆ ಸರಬರಾಜು ಆದೇಶ ನೀಡಲಾಯಿತು,’ ಎಂದು ಸಮಜಾಯಿಷಿ ನೀಡಲು ಯತ್ನಿಸಿದ್ದಾರೆ.
ಹಾಗೆಯೇ 2021ರಲ್ಲಿ ಕೆಎಸ್‌ಎಂಎಸ್‌ಸಿಎಲ್ ಸಂಸ್ಥೆಯಿಂದ ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ (RAT) ಕಿಟ್ ಖರೀದಿಸಲು 3 ಬಾರಿ ಜೆಮ್ ಪೋರ್ಟಲ್‌ನಲ್ಲಿ ಹಾಗೂ 2 ಬಾರಿ ದರಪಟ್ಟಿಅಹ್ವಾನಿಸಿರುವುದನ್ನು ವರದಿಯಲ್ಲಿ ಉಲ್ಲೇಖಿಸಿರುವ ಅಧಿಕಾರಿಗಳು 2021ರ ಏಪ್ರಿಲ್ 6ರಂದು ಜೆಮ್ ಪೋರ್ಟಲ್‌ನಲ್ಲಿ ಭಾಗವಹಿಸಿದ್ದ ಕಂಪನಿಗಳು ನಮೂದಿಸಿದ್ದ ದರದ ಕುರಿತು ವರದಿಯಲ್ಲಿ ಪ್ರಸ್ತಾಪಿಸಿಲ್ಲ. ಅಧಿಕಾರಿಗಳ ಈ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕಿಟ್ ಖರೀದಿಯ ವಾಸ್ತವ
ಮೊದಲ ಬಾರಿ ಆಹ್ವಾನಿಸಿದ್ದ ದರಪಟ್ಟಿಯಲ್ಲಿ ಭಾಗವಹಿಸಿದ್ದ ಇದೇ ಟ್ರಿವಿಟ್ರಾನ್ ಕಂಪನಿಯು ಕಿಟ್‌ವೊಂದಕ್ಕೆ 34.60 ರು. ನಮೂದಿಸಿ ಟ್ರಿವಿಟ್ರಾನ್ ಎಲ್ 2 ಆಗಿತ್ತು. ಎರಡನೇ ಬಾರ ಆಹ್ವಾನಿಸಿದ್ದ ದರಪಟ್ಟಿಯಲ್ಲಿಯೂ ಭಾಗವಹಿಸಿದ್ದ ಇದೇ ಕಂಪನಿಯು ಕಿಟ್‌ವೊಂದಕ್ಕೆ 83.77 ರು.ಗಳನ್ನು ನಮೂದಿಸಿ ಎಲ್ 2 ಅಗಿತ್ತು. ಮೊದಲ ದರಪಟ್ಟಿಯಲ್ಲಿ ಟ್ರಿವಿಟ್ರಾನ್ ಕಂಪನಿ ನಮೂದಿಸಿದ್ದ ದರದ ಪ್ರಕಾರ 10.38 ಕೋಟಿ ರು. ವೆಚ್ಚದಲ್ಲಿ ಕಿಟ್‌ಗಳನ್ನು ಖರೀದಿಸಬಹುದಾಗಿತ್ತು.
ಆದರೆ ನಿಗಮದ ಅಧಿಕಾರಿಗಳ ವಿಳಂಬ ದ್ರೋಹದಿಂದಾಗಿ ಇದೇ ಕಂಪನಿ ಮಾಡಿದ್ದ ದರ ಹೆಚ್ಚಳವನ್ನು ಒಪ್ಪಿಕೊಂಡಿರುವ ಪರಿಣಾಮ 25.13 ಕೋಟಿ ರು.ವೆಚ್ಚ ಮಾಡಿದಂತಾಗಿದೆ. ಒಟ್ಟು 14.75 ಕೋಟಿಯಷ್ಟು ಹೆಚ್ಚುವರಿ ಹೊರೆ ಬಿದ್ದಂತಾಗಿದೆ.
ಕಿಟ್ ಖರೀದಿ ಅಕ್ರಮ; ಹೆಚ್ಚುವರಿ ಹೊರೆಯಾಗಿದ್ದು 10 ಕೋಟಿಯಲ್ಲ, 14.75 ಕೋಟಿ
ವಿಳಂಬ ದ್ರೋಹ-ಕಮಿಷನ್ ವ್ಯವಹಾರ ಹೀಗೆ ನಡೆದಿತ್ತು
30 ಲಕ್ಷ ಪರೀಕ್ಷೆ ನಡೆಸಲು ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ (RAT) ಕಿಟ್ ಖರೀದಿಗಾಗಿ 2021ರ ಏಪ್ರಿಲ್ 6ರಂದು ಮೊದಲು ದರ ಪಟ್ಟಿ ಆಹ್ವಾನಿಸಿತ್ತು. ಆ ಸಂದರ್ಭದಲ್ಲಿ ಒಟ್ಟು 4 ಕಂಪನಿಗಳು ಭಾಗವಹಿಸಿದ್ದವು. ಸುದರ್ಶನ್ ಫಾರ್ಮಾ ತಲಾ ಟೆಸ್ಟ್‌ಗೆ 33.85 ರು. ನಮೂದಿಸಿತ್ತು. ಹಾಗೆಯೇ ಟ್ರಿವಿಟ್ರಾನ್ ಹೆಲ್ತ್ ಕೇರ್ ಪ್ರೈವೈಟ್ ಲಿಮಿಟೆಡ್ 34.60 ರು., ಓಸ್ಕರ್ 35.60 ರು., ಪಿ ಭೋಗಿಲಾಲ್ ಪ್ರೈವೈಟ್ ಲಿಮಿಟೆಡ್ 35.80 ರು ನಮೂದಿಸಿತ್ತು. ಇದರಲ್ಲಿ 33.85 ರು. ನಮೂದಿಸಿದ್ದ ಸುದರ್ಶನ್ ಫಾರ್ಮಾ ಕಂಪನಿಯು ಎಲ್-1 ಕಂಪನಿಯಾಗಿತ್ತು. ಎಲ್ 1 ಆಗಿ ಹೊರಹೊಮ್ಮಿದ್ದ ಕಂಪನಿಗೆ ಖರೀದಿ ಆದೇಶ ನೀಡಿದ್ದರೆ 10.15 ಕೋಟಿ ರು.ನಲ್ಲಿ 30 ಲಕ್ಷ ಟೆಸ್ಟ್‌ಗಳನ್ನು ನಡೆಸಬಹುದಿತ್ತು. ಆದರೆ ವೈದ್ಯಕೀಯ ಸರಬರಾಜು ನಿಗಮದ ಅಧಿಕಾರಿಗಳು ಈ ದರಪಟ್ಟಿಯನ್ನು ಅಂತಿಮಗೊಳಿಸಿರಲಿಲ್ಲ.
ಬದಲಿಗೆ 19 ದಿನಗಳ ಅಂತರದಲ್ಲೇ 2021ರ ಏಪ್ರಿಲ್ 25 ರಂದು 2ನೇ ಬಾರಿ ದರಪಟ್ಟಿ ಆಹ್ವಾನಿಸಲಾಗಿತ್ತು. ಎರಡನೇ ಬಾರಿ ಕರೆದಿದ್ದ ದರಪಟ್ಟಿಯಲ್ಲಿಯೂ 4 ಕಂಪನಿಗಳು ಭಾಗವಹಿಸಿದ್ದವು. ಆದರೆ ಈ ಹೊತ್ತಿಗೆ ಕಂಪನಿಗಳು ದುಪ್ಪಟ್ಟು ದರವನ್ನು ನಮೂದಿಸಿದ್ದವು. ಪಿ ಭೋಗಿಲಾಲ್ ಪ್ರೈವೈಟ್ ಲಿಮಿಟೆಡ್ ಟೆಸ್ಟ್‌ವೊಂದಕ್ಕೆ 81.64 ರು. ನಮೂದಿಸಿದ್ದರೆ ಟ್ರಿವಿಟ್ರಾನ್ ಹೆಲ್ತ್ ಕೇರ್ ಪ್ರೈವೈಟ್ ಲಿಮಿಟೆಡ್ 83.77 ರು., ಮೆರಿಲ್ ಕಂಪನಿಯು 89.06 ರು., ಸಿಪ್ಲಾ ಕಂಪನಿಯು 134.4 ರು. ನಮೂದಿಸಿತ್ತು. ಈ ಪೈಕಿ ಭೋಗಿಲಾಲ್ ಪ್ರೈವೈಟ್ ಲಿಮಿಟೆಡ್ ಕಂಪನಿಯು 81.64 ರು. ನಮೂದಿಸಿ ಎಲ್ 1 ಆಗಿ ಹೊರಹೊಮ್ಮಿತ್ತು.
ವಿಶೇಷವೆಂದರೆ ಮೊದಲ ಬಾರಿ ಕರೆದಿದ್ದ ದರಪಟ್ಟಿಯಲ್ಲಿ 35.84 ರು ನಮೂದಿಸಿದ್ದ ಭೋಗಿಲಾಲ್ ಕಂಪನಿಯು ಎಲ್- 4 ಆಗಿದ್ದರೆ 34.60 ರು. ನಮೂದಿಸಿದ್ದ ಟ್ರಿವಿಟ್ರಾನ್ ಕಂಪನಿಯು ಎಲ್ 2 ಆಗಿತ್ತು. 2ನೇ ಬಾರಿ ಕರೆದಿದ್ದ ದರಪಟ್ಟಿಯಲ್ಲಿಯೂ ಈ ಎರಡೂ ಕಂಪನಿಗಳು ಭಾಗವಹಿಸಿದ್ದವು. ಮೊದಲ ದರಪಟ್ಟಿಯಲ್ಲಿ ಎಲ್ 4 ಆಗಿದ್ದ ಭೋಗಿಲಾಲ್ ಕಂಪನಿಯು 2ನೇ ದರಪಟ್ಟಿಯಲ್ಲಿ 81.64 ರು. ನಮೂದಿಸಿ ಎಲ್ 1 ಆಗಿತ್ತು. ಟ್ರಿವಿಟ್ರಾನ್ ಕಂಪನಿಯು 83.77 ರು. ನಮೂದಿಸಿ ಎಲ್ 2 ಆಗಿತ್ತು.
ಮೊದಲ ಬಾರಿ ಕರೆದಿದ್ದ ದರಪಟ್ಟಿಯಲ್ಲಿ ಎಲ್ 1 ಆಗಿದ್ದ ಕಂಪನಿಯನ್ನು ಅಂತಿಮಗೊಳಿಸಿ ಖರೀದಿ ಆದೇಶ ನೀಡಿದಿದ್ದರೆ 30 ಲಕ್ಷ ಟೆಸ್ಟ್‌ಗಳಿಗೆ 10.15 ಕೋಟಿ ರು.ವೆಚ್ಚವಾಗುತ್ತಿತ್ತು. ಅದರೆ ಅಧಿಕಾರಿಗಳು ಈ ಸಂಬಂಧ ಯಾವುದೇ ನಿರ್ಧಾರವನ್ನು ಕೈಗೊಳ್ಳಲಿಲ್ಲ. ಬದಲಿಗೆ 2ನೇ ಬಾರಿಗೆ ದರಪಟ್ಟಿಯನ್ನು ಆಹ್ವಾನಿಸಿತು. 2ನೇ ದರಪಟ್ಟಿಯಲ್ಲಿ ನಮೂದಾಗಿದ್ದ ಕಡಿಮೆ ದರ 81.64 ರು. ಪ್ರಕಾರ 30 ಲಕ್ಷ ಟೆಸ್ಟ್‌ಗಳಿಗೆ 24.49 ಕೋಟಿ ರು.ಆಗಲಿದೆ. ಮೊದಲ ಮತ್ತು ಎರಡನೇ ದರಪಟ್ಟಿಯಲ್ಲಿ ನಮೂದಿಸಿರುವ ಕಡಿಮೆ ದರದ ಪ್ರಕಾರ 14.33 ಕೋಟಿ ವ್ಯತ್ಯಾಸ ಕಂಡು ಬಂದಿತ್ತು.
ಈ ಮಧ್ಯೆ ಅಧಿಕಾರಿಗಳು 2021ರ ಮೇ 4ರಂದು ಮತ್ತೊಂದು ಸಭೆ ನಡೆಸಿದ್ದರು. ಈ ಸಭೆಯಲ್ಲಿಯೂ ಎರಡನೇ ದರಪಟ್ಟಿಯನ್ನು ಅಂತಿಮಗೊಳಿಸಲಿಲ್ಲ. ಬದಲಿಗೆ ಉತ್ತರ ಪ್ರದೇಶದಲ್ಲಿರುವ ದರದೊಂದಿಗೆ ಹೋಲಿಕೆ ಮಾಡಿದರು. ಉತ್ತರ ಪ್ರದೇಶದಲ್ಲಿ ಒಂದು ಟೆಸ್ಟ್‌ಗೆ 69.00 ರು. ನಿಗದಿಪಡಿಸಿರುವುದನ್ನು ಸಭೆಯಲ್ಲಿ ಚರ್ಚಿಸಿದ್ದಾರೆ. ಒಂದು ವೇಳೆ 69 ರು.ಗೆ ಕಂಪನಿಯನ್ನು ಒಪ್ಪಿಸಿದ್ದಲ್ಲಿ 30 ಲಕ್ಷ ಟೆಸ್ಟ್‌ಗಳಿಗೆ 20.70 ಕೋಟಿ ರು.ಗಳಾಗಲಿತ್ತು.
ಮೊದಲ ದರಪಟ್ಟಿಯಲ್ಲಿ ನಮೂದಿಸಿದ್ದ (33.85 ರು.) ದರದೊಂದಿಗೆ ಉತ್ತರಪ್ರದೇಶದ ದರ ಹೋಲಿಸಿದರೆ 30 ಲಕ್ಷ ಟೆಸ್ಟ್‌ಗಳಿಗೆ ಕಿಟ್‌ಗಳ ಖರೀದಿ ಮೊತ್ತದಲ್ಲಿ 10.54 ಕೋಟಿ ರು. ವ್ಯತ್ಯಾಸವಿರವುದು ಕಂಡು ಬಂದಿದೆ. ಅದೇ ರೀತಿ 2ನೇ ಬಾರಿ ದರಪಟ್ಟಿಯಲ್ಲಿ ನಮೂದಿಸಿದ್ದ ದರ (81.64 ರು.) ಪ್ರಕಾರ 3.79 ಕೋಟಿ ವ್ಯತ್ಯಾಸವಿತ್ತು.
ಕೋವಿಡ್ ಮೊದಲ ಅಲೆ ಸಂದರ್ಭದಲ್ಲೂ ಪಿಪಿಇ ಕಿಟ್, ಸ್ಯಾನಿಟೈಸರ್, ವೆಂಟಿಲೇಟರ್ ಸೇರಿದಂತೆ ಇನ್ನಿತರೆ ವೈದ್ಯಕೀಯ ಉಪಕರಣಗಳ ಖರೀದಿಯಲ್ಲೂ ಅಕ್ರಮಗಳು ನಡೆದಿತ್ತು. ಆದರೆ ಆರೋಗ್ಯ ಇಲಾಖೆ ಸಚಿವರಾಗಿದ್ದ ಬಿ ಶ್ರೀರಾಮುಲು, ಡಾ ಕೆ ಸುಧಾಕರ್ ಮತ್ತು ಉಪ ಮುಖ್ಯಮಂತ್ರಿಯಾಗಿದ್ದ ಡಾ ಸಿ ಎನ್ ಅಶ್ವಥ್‌ನಾರಾಯಣ್ ಅವರು ಆರೋಪಗಳನ್ನು ಅಲ್ಲಗಳೆದಿದ್ದರು.
ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಹಿಂದಿನ ಅಧ್ಯಕ್ಷರಾಗಿದ್ದ ಎಚ್ ಕೆ ಪಾಟೀಲ್ ಅವರು ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿ ಖರೀದಿಸಿದ್ದ ವೈದ್ಯಕೀಯ ಉಪಕರಣಗಳ ಖರೀದಿ ಪ್ರಕ್ರಿಯೆ ಕುರಿತು ಕೇಳಿದ್ದ ಮಾಹಿತಿಗೂ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಿರಲಿಲ್ಲ ಎಂಬುದನ್ನು ಸ್ಮರಿಸಬಹುದು.