ಆರ್‌ಎಸ್‌ಎಸ್‌ ಒಡನಾಟದ ಬಗ್ಗೆ ಬಾಯ್ಬಿಟ್ಟ ಯುವರಾಜ್‌; ಹೇಳಿಕೆಯಲ್ಲಿದೆ ಹೆಸರುಗಳ ಪಟ್ಟಿ

ಬೆಂಗಳೂರು; ರಾಜಕೀಯ ಹುದ್ದೆ ಮತ್ತು ಸರಕಾರಿ ಕೆಲಸ ಕೊಡಿಸುವುದಾಗಿ ನಿವೃತ್ತ ನ್ಯಾಯಮೂರ್ತಿ ಇಂದ್ರಕಲಾ ಅವರಿಂದ ಹಿಡಿದು ಹಲವರ ಬಳಿ ಕೋಟ್ಯಂತರ ಹಣ ಪಡೆದು ವಂಚಿಸಿರುವ ಆರೋಪಕ್ಕೆ ಗುರಿಯಾಗಿರುವ ಯುವರಾಜಸ್ವಾಮಿ, ಆರ್‌ಎಸ್‌ಎಸ್‌ ಶಾಖೆಯಲ್ಲಿ ಪ್ರತಿ ಭಾನುವಾರ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದ ಎಂಬುದು ಆತನ ಹೇಳಿಕೆಯಲ್ಲಿ ದಾಖಲಾಗಿದೆ.

2021ರ ಜನವರಿ 3ರಂದು ನೀಡಿರುವ ಸ್ವ ಇಚ್ಛಾ ಹೇಳಿಕೆಯಲ್ಲಿ ತನ್ನ ಪೂರ್ವಾಪರವನ್ನು ಬಿಚ್ಚಿಟ್ಟಿದ್ದಾನೆ. ಆರ್‌ಎಸ್‌ಎಸ್‌ಗೂ ಯುವರಾಜ್‌ಸ್ವಾಮಿಗೂ ಸಂಬಂಧವಿಲ್ಲ ಎಂದು ಸಂಘಟನೆಯ ಹಿರಿಯ ಮುಖಂಡ ಮಾ ವೆಂಕಟರಾಮು ಸ್ಪಷ್ಟಪಡಿಸಿದ್ದರ ಬೆನ್ನಲ್ಲೇ ಸ್ವತಹ ಯುವರಾಜಸ್ವಾಮಿಯೇ ಆರ್‌ಎಸ್‌ಎಸ್‌ ಶಾಖೆಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೆ ಎಂದು ಸ್ವ ಇಚ್ಛಾ ಹೇಳಿಕೆ ನೀಡಿರುವುದು ಇದೀಗ ಬಹಿರಂಗವಾಗಿದೆ.

‘1989-1990ನೇ ಇಸವಿಯಿಂದ ನಾನು ಚಿತ್ರದುರ್ಗದಲ್ಲಿದ್ದ ಆರ್‌ಎಸ್‌ಎಸ್‌ ಶಾಖೆಯಲ್ಲಿ ಪ್ರತಿ ಭಾನುವಾರ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೆನು. ಅದೇ ಕಾರಣದಿಂದ ನನಗೆ ಬಿಜೆಪಿ ಪಕ್ಷದೊಂದಿಗೆ ನನ್ನ ಒಡನಾಟ ಹೆಚ್ಚಾಯಿತು. ಚಿತ್ರದುರ್ಗ ಆರ್‌ಎಸ್‌ಎಸ್‌ ಶಾಖೆಯ ಮುಖ್ಯಸ್ಥರಾಗಿದ್ದ ಚಂದ್ರಪ್ಪ ಹಾಗೂ ವೀರಪ್ಪಗೌಡ ಎಂಬುವರು ನನ್ನನ್ನು ಬೆಂಗಳೂರಿನಿಂದ ಬಂದಿದ್ದ ಅನಂತ್‌ಕುಮಾರ್‌ರವರಿಗೆ ಭೇಟಿ ಮಾಡಿಸಿ ನನ್ನನ್ನು ಜ್ಯೋತಿಷಿ ಎಂದು ಪರಿಚಯಿಸಿದರು,’ ಎಂದು ಹೇಳಿಕೆ ನೀಡಿರುವುದು ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.

1990ರಲ್ಲಿ ಚಿತ್ರದುರ್ಗದಲ್ಲಿ ನಡೆದಿದ್ದ ಬಿಜೆಪಿ ರ್ಯಾಲಿ ಸಂದರ್ಭದಲ್ಲಿ ಎಲ್‌ ಕೆ ಅಡ್ವಾಣಿ, ಪ್ರಮೋದ್‌ ಮಹಾಜನ್‌, ಬಂಗಾರು ಲಕ್ಷ್ಮಣ್‌ ಭಾಗವಹಿಸಿದ್ದರು. ಅನಂತಕುಮಾರ್‌ ಮೂಲಕ ಪ್ರಮೋದ್‌ ಮಹಾಜನ್‌ ಪರಿಚಯವಾಗಿದ್ದರು. ಈ ಗಣ್ಯ ವ್ಯಕ್ತಿಗಳಿಗೆ ಜ್ಯೋತಿಷ್ಯ ಹೇಳುವ ಮೂಲಕ ಬಿಜೆಪಿ ಮುಖಂಡರಿಗೆ ಹತ್ತಿರವಾದೆ ಎಂದು ಹೇಳಿಕೆಯಲ್ಲಿ ವಿವರಿಸಿದ್ದಾನೆ.

ಕೇವಲ ಪ್ರಮೋದ್‌ ಮಹಾಜನ್‌ ಮಾತ್ರವಲ್ಲ, ಗೋಪಿನಾಥ್‌ ಮುಂಡೆ ಸೇರಿದಂತೆ ಬಿಜೆಪಿ ಪಕ್ಷದ ರಾಷ್ಟ್ರೀಯ ಮುಖಂಡರು, ಕಾಂಗ್ರೆಸ್‌ ಮುಖಂಡರ ಪೈಕಿ ಧರಂಸಿಂಗ್‌, ಬಂಗಾರಪ್ಪ, ವೀರಭದ್ರಪ್ಪ ಅವರು ಜ್ಯೋತಿಷ್ಯ ಹೇಳುವಂತೆ ಮನೆಗೆ ಕರೆಸಿಕೊಳ್ಳುತ್ತಿದ್ದರು ಎಂಬುದನ್ನು ಹೇಳಿಕೆಯಲ್ಲಿ ದಾಖಲಿಸಿರುವುದು ಗೊತ್ತಾಗಿದೆ.

ಜ್ಯೋತಿಷ್ಯ ಹೇಳುವುದರ ಜತೆಗೇ ಪರಿಚಯ ಇರುವ ವ್ಯಕ್ತಿಗಳಿಗೆ ಹಣ ಕೊಡುವುದು ಹಾಗೂ ಹಣ ವಾಪಸ್‌ ಪಡೆಯುವ ಚಟುವಟಿಕೆ ನಡೆಸುತ್ತಿರುವ ಮಾಹಿತಿಯೂ ಹೇಳಿಕೆಯಲ್ಲಿದೆ. ಬಾಂಬೆ, ದೆಹಲಿಯಲ್ಲಿಯೂ ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡುತ್ತಿರುವ ಬಗ್ಗೆ ಹೇಳಿಕೆಯಲ್ಲಿ ತಿಳಿಸಿರುವ ಯುವರಾಜಸ್ವಾಮಿ ಈ ಎರಡೂ ನಗರಗಳಲ್ಲಿ ಯಾವುದೇ ಸ್ವತ್ತನ್ನು ರಿಜಿಸ್ಟರ್‌ ಮಾಡಿಸಿಕೊಳ್ಳದೆ ಕೇವಲ ಮಾರುವ ಮತ್ತು ಹಾಗೂ ಕೊಳ್ಳುವ ವ್ಯಕ್ತಿಗಳೊಂದಿಗೆ ಸಂಪರ್ಕವನ್ನಿಟ್ಟುಕೊಂಡು ಕೈ ಬದಲಾವಣೆ ಮಾಡಿ ಕಮಿಷನ್‌ ಹಣವನ್ನು ಮಾತ್ರ ಬ್ಯಾಂಕ್‌ ಖಾತೆಗೆ ಹಾಕಿಕೊಳ್ಳುತ್ತಿದ್ದರ ಬಗ್ಗೆ ವಿವರಣೆಯೂ ಹೇಳಿಕೆಯಲ್ಲಿದೆ.

‘ಮುಂಬೈಗೆ ಹೋದಾಗ ಗೋಪಿನಾಥ್‌ ಮುಂಡೆ ಅವರ ಮನೆ ಹಾಗೂ ಅವರು ವ್ಯವಸ್ಥೆ ಮಾಡಿದ್ದ ಮನೆ, ಹೋಟೆಲ್‌ನಲ್ಲಿ ಉಳಿದುಕೊಳ್ಳುತ್ತಿದ್ದೆ. ದೆಹಲಿಯಲ್ಲಿಯೂ ಸಹ ಗೋಪಿನಾಥ್‌ ಮುಂಡೆ ಅವರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದೆ,’ ಎಂದು ಹೇಳಿಕೆ ನೀಡಿರುವುದು ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.

ಸೇವಾಲಾಲ್‌ ಸಂಗನ ಬಸವ ಸ್ವಾಮೀಜಿ ಹೆಸರಿನಲ್ಲಿ ಡಾ ಕೆ ಆರ್‌ ಮೋಹನ್‌, ಡಾ ಜಿತೇಂದ್ರ, ನೀರಜ್‌ಕುಮಾರ್‌, ರಘುನಾಥ್‌, ಪರಮೇಶ್ವರ್‌, ಮನ್ಸೂರ್‌ ಆಲಿ, ಆಕಾಶ್‌ ತನ್ಮಯ್‌ ಮಂಡಲ್‌, ಚಕ್ರವರ್ತಿ, ನಿಸ್ಸದಾರ್‌ ಯೂಸೆಫ್‌, ಸುನೀಲ್‌ಕುಮಾರ್‌ ಸಿಂಗ್‌, ಅಜಿತೇಶ್‌ ಮಂಡಲ್, ಸುರೇಶ್‌, ಎಂ ಟಿ ಪ್ರಸಾದ್‌ರಾವ್‌, ನಾಯರ್‌, ಸಂಜೀವ್‌ ಮದನ್‌, ಶ್ರೀನಿವಾಸ್‌, ಸಂಜಯ್‌ ಜೈನ್‌, ಪಾಂಡೆ ಅವರೊಂದಿಗೆ ಸೇರಿಕೊಂಡು ಹಳೆ ಮದ್ರಾಸ್‌ ರಸ್ತೆ, ಕೆ ಆರ್‌ ಪುರಂ ಮೇಡಹಳ್ಳಿಯಲ್ಲಿ ಸೇವಾಲಾಲ್‌ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ನಡೆಸುತ್ತಿರುವಂತಗೆ ಕಟ್ಟಡ ಬಾಡಿಗೆ ತೆಗೆದುಕೊಂಡಿದ್ದರ ಬಗ್ಗೆಯೂ ವಿವರಣೆ ಒದಗಿಸಿರುವುದು ಗೊತ್ತಾಗಿದೆ.

2002-03ನೇ ಸಾಲಿನಲ್ಲೇ ಬಿಡಿಎಸ್‌ ಸೀಟ್‌ ಕೊಡಿಸುವುದಾಗಿ ಹೇಳಿ ಹಲವು ಜನರಿಂದ ಲಕ್ಷಾಂತರ ರುಪಾಯಿ ಹಣವನ್ನು ಪಡೆದುಕೊಂಡು ನಂತರ ಯಾವುದೇ ಸೀಟನ್ನೂ ಕೊಡಿಸದೆಯೇ ಹಣವನ್ನೂ ವಾಪಸ್‌ ನೀಡಿರಲಿಲ್ಲ. ಈ ಬಗ್ಗೆ ಬೆಂಗಳೂರು ನಗರದ ಉಪ್ಪಾರ ಪೇಟೆ ಪೊಲೀಸ್‌ ಠಾಣೆಯಲ್ಲಿ 8 ಪ್ರಕರಣಗಳು ದಾಖಲಾಗಿವೆ.

ಅದೇ ರೀತಿ 2017ರಲ್ಲಿ ಟಿ ರೋಹಿತ್‌ ಎಂಬುವರ ತಮ್ಮ ಪ್ರೀತಮ್‌ ಎಂಬುವರಿಗೆ ಎಂ ಎಸ್‌ ರಾಮಯ್ಯ ಕಾಲೇಜಿನಲ್ಲಿ ಮೆಡಿಕಲ್‌ ಸೀಟ್‌ ಕೊಡಿಸುವುದಾಗಿ ಹೇಳಿ ಅವರಿಮದ 1,85,00,000 ರು. ಹಣ ಪಡೆದುಕೊಂಡಿದ್ದ.

ಈ ಹಣದಲ್ಲಿ 75,00,000 ರು.ಗಳನ್ನು ಕಾಲೇಜಿಗೆ ಪಾವತಿಸಿ ಉಳಿದ 1,05,00,000 ರು.ಗಳನ್ನು ಸ್ವಂತಕ್ಕೆ ಬಳಸಿಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿರುವುದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts