ಮೊಟ್ಟೆ ಖರೀದಿಯಲ್ಲಿ ಕಿಕ್‌ಬ್ಯಾಕ್‌ ; 15 ದಿನದೊಳಗೆ ವರದಿ ನೀಡಲು ಪಿಎಸಿ ಸೂಚನೆ

ಬೆಂಗಳೂರು: ಅಪೌಷ್ಠಿಕತೆಯಿಂದ ಬಳಲುತ್ತಿರುವ ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳ ವ್ಯಾಪ್ತಿಯ ಅಂಗನವಾಡಿಗಳಿಗೆ ಮೊಟ್ಟೆ ಖರೀದಿ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಕೇಳಿ ಬಂದಿದ್ದ ಆರೋಪಗಳ ಕುರಿತು 15 ದಿನದೊಳಗೆ ವರದಿ ನೀಡುವಂತೆ ಆರ್‌ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿರುವ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದೆ.

ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವೆಯಾಗಿದ್ದ ಶಶಿಕಲಾ ಜೊಲ್ಲೆ ಅವರು ಮೊಟ್ಟೆ ಖರೀದಿಯಲ್ಲಿ ಕಿಕ್‌ ಬ್ಯಾಕ್‌ ಪಡೆದಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದರು. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲೂ ಶಶಿಕಲಾ ಜೊಲ್ಲೆ ಅವರು ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಮೊಟ್ಟೆ ಖರೀದಿ ಸಂಬಂಧ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿ ಕೇಳಿರುವುದು ಕುತೂಹಲ ಮೂಡಿಸಿದೆ.

ಬಾಲ ನ್ಯಾಯ ಕಾಯ್ದೆ 2000 ಅನುಷ್ಠಾನಕ್ಕೆ ಸಂಬಂಧಿಸಿದಂತೆ 2021ರ ಆಗಸ್ಟ್‌ 3ರ ಮಂಗಳವಾರದಂದು ನಡೆದಿದ್ದ ಸಭೆಯಲ್ಲಿ ಸಮಿತಿ ಅಧ್ಯಕ್ಷ ರಾಮಲಿಂಗಾರೆಡ್ಡಿ ಅವರು ಮೊಟ್ಟೆ ಖರೀದಿಗೆ ಸಂಬಂಧಿಸಿದಂತೆ ಟೆಂಡರ್‌ ಪ್ರಕ್ರಿಯೆ ಸಂಬಂಧ ಪ್ರಸ್ತಾಪಿಸಿದರು. ಮತ್ತು ಈ ಸಂಬಂಧ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ಅವರು ಮಾಹಿತಿ ನೀಡಿದಾರಾದರೂ ಅವರು ನೀಡಿದ ಉತ್ತರದಿಂದ ಸಮಾಧಾನಗೊಳ್ಳದ ಅಧ್ಯಕ್ಷ ರಾಮಲಿಂಗಾರೆಡ್ಡಿ ಅವರು ಮೊಟ್ಟೆ ಖರೀದಿ ಸಂಬಂಧ ನಡೆದಿರುವ ಎಲ್ಲಾ ಪ್ರಕ್ರಿಯೆಗಳ ಕುರಿತು 15 ದಿನದೊಳಗೆ ವರದಿ ನೀಡಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಭಾಗವಹಿಸಿದ್ದ ಶಾಸಕರೊಬ್ಬರು ‘ದಿ ಫೈಲ್‌’ಗೆ ಈ ವಿಷಯವನ್ನು ಖಚಿತಪಡಿಸಿದ್ದಾರೆ.

ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಅವರ ಮೂಲಕ ಶಶಿಕಲಾ ಜೊಲ್ಲೆ ಅವರನ್ನು ಸಂಪರ್ಕಿಸಿದ್ದ ಕುಟುಕು ಕಾರ್ಯಾಚರಣೆ ತಂಡಕ್ಕೆ ಮೊಟ್ಟೆ ಖರೀದಿ ಸಂಬಂಧ ಪ್ರತಿ ತಿಂಗಳು 1 ಕೋಟಿ ರು. ಹಣಕ್ಕಾಗಿ ಬೇಡಿಕೆ ಇರಿಸಿದ್ದರು ಎಂದು ಖಾಸಗಿ ಸುದ್ದಿವಾಹಿನಿಯು ಸುದ್ದಿ ಪ್ರಸಾರ ಮಾಡಿತ್ತು.

2021ರ ಫೆಬ್ರುವರಿಯಲ್ಲಿ ಕುಟುಕು ಕಾರ್ಯಾಚರಣೆ ನಡೆಸಿತ್ತು ಎಂದು ಹೇಳಿಕೊಂಡಿರುವ ಖಾಸಗಿ ಸುದ್ದಿ ವಾಹಿನಿಯು 6 ತಿಂಗಳ ನಂತರ ಪ್ರಸಾರ ಮಾಡಿರುವುದು ಕೂಡ ಅನುಮಾನಕ್ಕೆ ಆಸ್ಪದ ಮಾಡಿಕೊಟ್ಟಿತ್ತು. ಹೀಗಾಗಿ ಸುದ್ದಿವಾಹಿನಿಯ ವಿಶ್ವಾಸರ್ಹತೆ ಕುರಿತೂ ಪ್ರಶ್ನೆಗಳು ಎದ್ದಿವೆ. ಇದೇ ಅಂಶವನ್ನೇ ಸಚಿವೆ ಶಶಿಕಲಾ ಜೊಲ್ಲೆ ಅವರು ಮುಂದಿರಿಸಿಕೊಂಡು ಅವ್ಯವಹಾರದ ಸುದ್ದಿಯು ಸತ್ಯಕ್ಕೆ ದೂರವಾದದ್ದು ಯಾವುದೇ ಅವ್ಯವಹಾರ ಎಸಗಿಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದ್ದನ್ನು ಸ್ಮರಿಸಬಹುದು.

ಅಂಗನವಾಡಿ ಕೇಂದ್ರದ ಫಲಾನುಭವಿಗಳಿಗೆ ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮದಡಿ ವಿತರಿಸುವ ಆಹಾರ ಪದಾರ್ಥಗಳಿಗೆ ರಾಜ್ಯಮಟ್ಟದಲ್ಲಿ ದರ ನಿಗದಿಪಡಿಸುವ ಸಂಬಂಧ 2021ರ ಜನವರಿ 16ರಂದು ಸಭೆ ನಡೆದಿತ್ತು. ಹೆಸರುಕಾಳು, ಎಣ್ಣೆ, ಹಾಲಿನಪುಡಿ, ಸಕ್ಕರೆ, ಉಪ್ಪು, ಶೇಂಗಾ ಚಿಕ್ಕಿ ಸೇರಿದಂತೆ 35 ಆಹಾರ ಸಾಮಾಗ್ರಿಗಳಿಗೆ ರಾಜ್ಯಮಟ್ಟದ ಸಮಿತಿಯು ದರ ನಿಗದಿಪಡಿಸಿತ್ತು.

ಪಟ್ಟಿಯಲ್ಲಿ ಒಳಗೊಳ್ಳದ ಮೊಟ್ಟೆ, ಹಾಲಿನ ವೆಚ್ಚ

ಅಲ್ಲದೆ ಅಂಗನವಾಡಿ ಕೇಂದ್ರಗಳಿಗೆ ವಿತರಣೆ ಮಾಡುತ್ತಿರುವ ಪೂರಕ ಪೌಷ್ಠಿಕ  ಆಹಾರಕ್ಕೆ ಘಟಕ ವೆಚ್ಚವನ್ನು ನಿಗದಿಪಡಿಸಿತ್ತು. 6 ತಿಂಗಳಿಂದ 6 ವರ್ಷದ ಮಕ್ಕಳಿಗೆ 8.00 ರು., ತೀವ್ರ ಅಪೌಷ್ಠಿಕ ಮಕ್ಕಳು (6 ತಿಂಗಳಿಂದ 6 ವರ್ಷ) 12.00 ರು., ಗರ್ಭಿಣಿ/ಬಾಣಂತಿಯರು 21.00 ರು., 11ರಿಂದ 14 ವರ್ಷದ ಶಾಲೆಯಿಂದ ಹೊರಗುಳಿದ ಪ್ರಾಯಪೂರ್ವ ಬಾಲಕಿಯರಿಗೆ 9.50 ರು. ವೆಚ್ಚವೆಂದು ನಿಗದಿಪಡಿಸಿತ್ತು. ಆದರೆ ಅಂಗನವಾಡಿ ಕೇಂದ್ರಗಳಲ್ಲಿ ನೀಡುವ ಹಾಲು ಮತ್ತು ಮೊಟ್ಟೆಯ ಮೊತ್ತ ಈ ಘಟಕ ವೆಚ್ಚದಲ್ಲಿ ಒಳಗೊಂಡಿರಲಿಲ್ಲ.

ಸೃಷ್ಠಿ ಯೋಜನೆಯಡಿ ಮತ್ತು ಮಾತೃಪೂರ್ಣ ಯೋಜನೆಯಡಿ ಅಂಗನವಾಡಿ ಕೇಂದ್ರಗಳ ಮೂಲಕ ನೀಡಲಾಗುವ ಕೋಳಿ ಮೊಟ್ಟೆಯನ್ನು ಅಂಗವನಾಡಿ ಕಾರ್ಯಕರ್ತೆಯರು ಸ್ಥಳೀಯವಾಗಿ ಖರೀದಿಸಿ ಫಲಾನುಭವಿಗಳಿಗೆ ಒದಗಿಸುತ್ತಾರೆ. ಅಲ್ಲದೆ ಖರೀದಿಸಲಾದ ಮೊಟ್ಟೆಯ ಹಣವನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಬಾಲವಿಕಾಸ ಸಮಿತಿಯ ಜಂಟಿ ಖಾತೆಗೆ ಜಮೆ ಮಾಡುತ್ತಾರೆ.

ಪೂರಕ ಪೌಷ್ಠಿಕ ಆಹಾರದ ಜತೆಯಲ್ಲಿ ಕಲ್ಯಾಣ ಕರ್ನಾಟಕದ 5 ಜಿಲ್ಲೆಗಳಾದ ಬೀದರ್‌, ಕಲ್ಬುರ್ಗಿ, ರಾಯಚೂರು, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ 1,39,743 ಸಾಧಾರಣ ಅಪೌಷ್ಠಿಕ ಮತ್ತು 2,506 ತೀವ್ರ ಅಪೌಷ್ಠಿಕ ಮಕ್ಕಳಿಗೆ ಹಾಲು ಮತ್ತು ಮೊಟ್ಟೆ ನೀಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿಗಳು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಮಾಹಿತಿ ಒದಗಿಸಿದ್ದಾರೆ ಎಂದು ಗೊತ್ತಾಗಿದೆ.

6 ತಿಂಗಳಿಂದ 3 ವರ್ಷದ ತೀವ್ರ ಅಪೌಷ್ಠಿಕ ಮಕ್ಕಳಿಗೆ ಮತ್ತು 5 ಹಿಂದುಳಿದ ಜಿಲ್ಲೆಗಳಾದ ಕಲ್ಬುರ್ಗಿ, ರಾಯಚೂರು, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಯ ಸಾಧಾರಣ ಅಪೌಷ್ಠಿಕ ಮಕ್ಕಳಿಗೆ ವಾರದಲ್ಲಿ 3 ದಿನ ಮೊಟ್ಟೆ ಹಾಗೂ 3 ದಿನ 200 ಎಂ ಎಲ್‌ ಹಾಲನ್ನು ಮೊಟ್ಟೆ ಸ್ವೀಕರಿಸದಿರುವ ಮಕ್ಕಳಿಗೆ ವಾರದಲ್ಲಿ 6 ದಿನ ಹಾಲನ್ನು ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಸಮಿತಿ ಗಮನಕ್ಕೆ ತಂದಿರುವುದು ತಿಳಿದು ಬಂದಿದೆ.

ರಾಜ್ಯದಲ್ಲಿ 65,911 ಅಂಗನವಾಡಿ ಕೇಂದ್ರಗಳಿದ್ದು ಈ ಕೇಂದ್ರಗಳಲ್ಲಿ ಮಕ್ಕಳ ಮತ್ತು ತಾಯಂದಿರ ಅಭಿವೃದ್ಧಿಗಾಗಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಯಡಿ ನೀಡಲಾಗುವ ಒಂದು ಪೂರ್ಣ ಊಟದಲ್ಲಿ ಅನ್ನ, ಸಾಂಬಾರ್‌, ಪಲ್ಯದ ಜತೆಗೆ ಬೇಯಿಸಿದ ಮೊಟ್ಟೆ, ಹಾಲು ಮತ್ತು ಶೇಂಗಾ ಚಿಕ್ಕಿಯನ್ನು ತಿಂಗಳಿಗೆ ಕನಿಷ್ಠ 25 ದಿನಗಳ ಕಾಲ ನೀಡಲಾಗುತ್ತದೆ.

the fil favicon

SUPPORT THE FILE

Latest News

Related Posts