Monday | October 5, 2026 |

ವೇತನ ಹಗರಣಕ್ಕೆ ಸಕ್ರಮದ ರಕ್ಷಾಕವಚ; ವರದಿ ಬರುವ ಮುನ್ನವೇ ನಿಲುವು ಬದಲಿಸಿದ್ದೇಕೆ?

ಬೆಂಗಳೂರು; ವಿಧಾನ ಪರಿಷತ್‌ ಸಚಿವಾಲಯದಲ್ಲಿ ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ಕಾಯ್ದೆಗಿಂತಲೂ ಹೆಚ್ಚುವರಿ ವೇತನ ನೀಡುತ್ತಿದ್ದ ಪ್ರಕರಣವನ್ನು ಹೊರಗೆಡವಿ ತಕರಾರು ತೆಗೆದಿದ್ದ ಆರ್ಥಿಕ ಇಲಾಖೆ ಇದೀಗ ಅದೇ ಪ್ರಕರಣವನ್ನು ಸದ್ದಿಲ್ಲದೆ ಮುಕ್ತಾಯಗೊಳಿಸಿದೆ. ಅಲ್ಲದೆ 3 ತಿಂಗಳ ಹಿಂದೆ ಬರೆದಿದ್ದ ಪತ್ರಕ್ಕೆ ಬದ್ಧವಾಗದೇ ಮತ್ತು ಆ ಪತ್ರವನ್ನು ಬದಿಗಿರಿಸಿ ವೇತನ ಹೆಚ್ಚಳಗೊಳಿಸಲು ನಿರ್ದೇಶನ ನೀಡಿದೆ.

ಹೊರಗುತ್ತಿಗೆ ನೌಕರರ ಅಕ್ರಮ ನೇಮಕಾತಿ ಹಾಗೂ ಹೆಚ್ಚುವರಿ ವೇತನ ಪಾವತಿ ಕುರಿತಂತೆ ಸಮಗ್ರ ವರದಿ ಸಲ್ಲಿಸುವಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಾರ್ಯದರ್ಶಿಗೆ ಪತ್ರ ಬರೆದಿರುವ ಬೆನ್ನಲ್ಲೇ ಆರ್ಥಿಕ ಇಲಾಖೆಯ ಈ ಕ್ರಮ ಸಂಶಯಕ್ಕೆ ಆಸ್ಪದ ನೀಡಿದೆ.

ನಿಯಮಬಾಹಿರವಾಗಿ ಹೆಚ್ಚುವರಿ ವೇತನ ನೀಡಲಾಗುತ್ತಿದೆ ಎಂದು ಪ್ರಕರಣವನ್ನು ಹೊರಗೆಡವಿದ 3 ತಿಂಗಳ ಅಂತರದಲ್ಲಿ ವೇತನ ಹೆಚ್ಚಳಕ್ಕೆ ಸಮ್ಮತಿ ನೀಡಿರುವ ಆರ್ಥಿಕ ಇಲಾಖೆಯ ಈ ಕ್ರಮ ಅಕ್ರಮವನ್ನು ಸಕ್ರಮ ಮಾಡಿದಂತಾಗಿದೆ.

ವಿಧಾನಪರಿಷತ್‌ನ ಸಚಿವಾಲಯದಲ್ಲಿ ಜ್ಯೂನಿಯರ್‌ ಪ್ರೋಗ್ರಾಮರ್‌, ಜ್ಯೂನಿಯರ್‌ ಕನ್ಸೋಲ್‌ ಆಪರೇಟರ್‌, ಕಂಪ್ಯೂಟರ್‌ ಆಪರೇಟರ್ಸ್‌, ಡಿಟಿಪಿ ಆಪರೇಟರ್ಸ್‌ಗಳನ್ನು ಹೊರಗುತ್ತಿಗೆ ಅಡಿಯಲ್ಲಿ ನೇಮಕ ಮಾಡಲಾಗಿತ್ತು. ಈ ನೌಕರರಿಗೆ ಪರಿಷತ್‌ ಸಚಿವಾಲಯವು ಕನಿಷ್ಠ ವೇತನ ಕಾಯ್ದೆಗಿಂತಲೂ ಹೆಚ್ಚುವರಿಯಾಗಿ ಕಳೆದ ಎರಡೂವರೆ ವರ್ಷಗಳಿಂದ 48,42,564 ರು.ಗಳನ್ನು ಪಾವತಿಸಿತ್ತು. ಈ ಸಂಬಂಧ ತಕರಾರು ತೆಗೆದಿದ್ದ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ 2021ರ ಏಪ್ರಿಲ್‌ 9ರಂದು ಪರಿಷತ್‌ ಸಚಿವಾಲಯದ ಕಾರ್ಯದರ್ಶಿಗೆ ಪತ್ರ ಬರೆದು ಆಕ್ಷೇಪಿಸಿದ್ದರು.

ಆದರೀಗ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಏಪ್ರಿಲ್‌ನಲ್ಲಿ ಬರೆದಿದ್ದ ಪತ್ರಕ್ಕೆ ಬದ್ಧರಾಗಿಲ್ಲ. ನಿಯಮಬಾಹಿರವಾಗಿ ನೀಡುತ್ತಿದ್ದ ವೇತನವನ್ನೇ ಅಧಿಕೃತಗೊಳಿಸಿ ವಿಧಾನಪರಿಷತ್‌ನ ಸಚಿವಾಲಯದ ಕಾರ್ಯದರ್ಶಿಗೆ 2021ರ ಜುಲೈ 30ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

‘ವಿಧಾನಪರಿಷತ್ತಿನ ಸಚಿವಾಲಯದಲ್ಲಿನ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ 05 ಜನ ಶೀಘ್ರಲಿಪಿಗಾರರಿಗೆ 30,350 ರಂತೆ 02 ಜ್ಯೂನಿಯರ್‌ ಪ್ರೋಗ್ರಾಮರ್‌ಗಳಿಗೆ 42,065ರು.ನಂತೆ ಹಾಗೂ 03-ಜ್ಯೂನಿಯರ್‌ ಕನ್ಸೋಲ್‌ ಆಪರೇಟರ್‌ಗಳಿಗೆ 38,266 ರು.ನಂತೆ ವೇತನ ನಿಗದಿಪಡಿಸಲು ಆರ್ಥಿಕ ಇಲಾಖೆಯು ಸಹಮತಿಸಿದೆ,’ ಎಂದು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್‌ಎನ್‌ ಪ್ರಸಾದ್‌ ಅವರು ವಿಧಾನ ಪರಿಷತ್‌ ಸಚಿವಾಲಯದ ಕಾರ್ಯದರ್ಶಿಗೆ 2021ರ ಜುಲೈ 30ರಂದು ಪತ್ರ ಬರೆದಿದ್ದಾರೆ.

ಅಲ್ಲದೆ ಪರಿಷ್ಕೃತ ವೇತನ ಪಾವತಿಗೆ ಅವಶ್ಯವಿರುವ ಹೆಚ್ಚುವರಿ ಅನುದಾನವನ್ನು (ಆದೇಶ ಸಂಖ್ಯೆ ಎಫ್‌ಡಿ 48 ಬಿಆರ್‌ಎಸ್‌ 2021 28-07-2021ರಲ್ಲಿ ) ಒದಗಿಸಿದ್ದು ಈ ಆದೇಶದಂತೆ ಅಗತ್ಯ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿರುವುದು ಪತ್ರದಿಂದ ತಿಳಿದು ಬಂದಿದೆ.

ಪ್ರಕರಣದ ಹಿನ್ನೆಲೆ

ಜ್ಯೂನಿಯರ್‌ ಪ್ರೋಗ್ರಾಮರ್‌, ಜ್ಯೂನಿಯರ್‌ ಕನ್ಸೋಲ್‌ ಆಪರೇಟರ್‌, ಕಂಪ್ಯೂಟರ್‌ ಆಪರೇಟರ್ಸ್‌, ಡಿಟಿಪಿ ಆಪರೇಟರ್ಸ್‌ಗಳನ್ನು ಹೊರಗುತ್ತಿಗೆ ಅಡಿಯಲ್ಲಿ ನೇಮಕ ಮಾಡಿರುವ ಪರಿಷತ್‌ ಸಚಿವಾಲಯವು ಕನಿಷ್ಠ ವೇತನ ಕಾಯ್ದೆಗಿಂತಲೂ ಹೆಚ್ಚುವರಿಯಾಗಿ ಕಳೆದ ಎರಡೂವರೆ ವರ್ಷಗಳಿಂದ 48,42,564 ರು.ಗಳನ್ನು ಪಾವತಿಸಲಾಗಿತ್ತು. ಈ ಸಂಬಂಧ ತಕರಾರು ತೆಗೆದಿದ್ದ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು 2021ರ ಏಪ್ರಿಲ್‌ 9ರಂದು ಪರಿಷತ್‌ ಸಚಿವಾಲಯದ ಕಾರ್ಯದರ್ಶಿಗೆ ಪತ್ರವನ್ನೂ ಬರೆದಿದ್ದರು.

‘ಆರ್ಥಿಕ ಇಲಾಖೆಯ ಅನುಮತಿ ಪಡೆಯದೇ ಹಾಗೂ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ವ್ಯತಿರಿಕ್ತವಾಗಿ ಕಿಯೋನಿಕ್ಸ್‌ನಿಂದ ಕರಾರು ಒಪ್ಪಂದ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿರುವುದು ನಿಯಮಬಾಹಿರವಾಗಿರುತ್ತದೆ. ಆದ್ದರಿಂದ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿದ್ದಂತೆ ಹುದ್ದೆಗಳ ವೇತನ ಶ್ರೇಣಿಯ ಕನಿಷ್ಠ ವೇತನ ಕಾಯ್ದೆ ಪ್ರಕಾರ ನಿಗದಿಗೊಳಿಸಬೇಕು,’ ಎಂದು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಪರಿಷತ್‌ನ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದರು.

ಹೆಚ್ಚುವರಿ ಪಾವತಿಸಿದ್ದೆಷ್ಟು?

ಜ್ಯೂನಿಯರ್‌ ಪ್ರೋಗ್ರಾಮರ್‌ ಹುದ್ದೆಗೆ ಕನಿಷ್ಠ ವೇತನ ಕಾಯ್ದೆಯಡಿ ಆರ್ಥಿಕ ಇಲಾಖೆಯು 22,800 ರು. ನಿಗದಿಪಡಿಸಿದೆ. ಆದರೆ ವಿಧಾನಪರಿಷತ್ತಿನ ಸಚಿವಾಲಯವು ನೀಡುತ್ತಿರುವುದು 42,065 ರು. . ಅಂದರೆ ಹೆಚ್ಚುವರಿಯಾಗಿ 19,265 ರು. ಪ್ರತಿ ತಿಂಗಳೂ ಪಾವತಿಯಾಗುತ್ತಿದೆ. ಕಳೆದ ಎರಡೂವರೆ ವರ್ಷಗಳಿಂದ ಹೆಚ್ಚುವರಿಯಾಗಿ ಜ್ಯೂನಿಯರ್‌ ಪ್ರೋಗ್ರಾಮರ್‌ ಹುದ್ದೆಗೆ 5,58,685 ರು. ಪಾವತಿಯಾಗಿದೆ. ಅದರಂತೆ ಇಬ್ಬರು ಜ್ಯೂನಿಯರ್‌ ಪ್ರೋಗ್ರಾಮರ್‌ಗಳಿಗೆ ಒಟ್ಟು 11,17,370 ರು. ಹೆಚ್ಚುವರಿಯಾಗಿ ಪಾವತಿಯಾದಂತಾಗಿತ್ತು.

ಅದೇ ರೀತಿ ಜ್ಯೂನಿಯರ್‌ ಕನ್ಸೋಲ್‌ ಆಪರೇಟರ್‌ ಹುದ್ದೆಗೆ 20,000 ರು. ಕನಿಷ್ಠ ವೇತನ ನಿಗದಿಪಡಿಸಿದ್ದರೆ ವಿಧಾನಪರಿಷತ್ತಿನ ಸಚಿವಾಲಯವು 38,266 ರು. ನೀಡುತ್ತಿದೆ. ಹೆಚ್ಚುವರಿ 18,266 ರು. ನಂತೆ ಹೆಚ್ಚುವರಿಯಾಗಿ 5,29,714 ರು. ಪಾವತಿಸಲಾಗಿದೆ. ಅದರಂತೆ ಮೂವರು ಜ್ಯೂನಿಯರ್‌ ಕನ್ಸೋಲ್‌ ಆಪರೇಟರ್‌ ಹುದ್ದೆಗಳಿಗೆ ಒಟ್ಟು 15,89,142 ರು. ಪಾವತಿಸಿತ್ತು.

ಹಾಗೆಯೇ ಡೇಟಾ ಎಂಟ್ರಿ ಆಪರೇಟರ್‌ ಹುದ್ದೆಗೆ 13,284 ರು. ನೀಡಬೇಕಿದ್ದರೆ ವಿಧಾನಪರಿಷತ್ತಿನ ಸಚಿವಾಲಯವು 18,414.25 ರು.ಗಳನ್ನು ಹೆಚ್ಚುವರಿ ನೀಡಿ ಒಟ್ಟು 31,699 ರು. ನಂತೆ ಒಬ್ಬರಿಗೆ 5,34, 013 ರು ಪಾವತಿಯಾಗಿದೆ. ನೀಡುತ್ತಿದೆ. ಅದರಂತೆ ನಾಲ್ವರು ಡೇಟಾ ಎಂಟ್ರಿ ಆಪರೇಟರ್‌ಗಳಿಗೆ ಹೆಚ್ಚುವರಿಯಾಗಿ 21,36,052 ರು. ರು. ಪಾವತಿಸಿರುವುನ್ನು ಆರ್ಥಿಕ ಇಲಾಖೆ ಹೊರಗೆಡವಿತ್ತು.

‘ವಿಧಾನ ಪರಿಷತ್‌ನ ಲೆಕ್ಕ ಶೀರ್ಷಿಕೆ (2011-02-103-2-01-034)ಯಂತೆ ಕರ್ನಾಟಕ ವಿಧಾನ ಪರಿಷತ್‌ನ ಸಚಿವಾಲಯದಲ್ಲಿ ಶೀಘ್ರಲಿಪಿಗಾರರ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ಪಡೆದಿದ್ದು ವೇತನವನ್ನು 30,350 ರು.ಗಳಿಗೆ ನಿಗದಿಗೊಳಸಲಾಗಿದೆ. ಇದು ಕನಿಷ್ಠ ವೇತನ ಕಾಯ್ದೆ ಮೀರಿದ್ದರಿಂದ ಪರಿಷ್ಕರಿಸಿ 22,000 ರು.ಗಳಿಗೆ ನಿಗದಿಪಡಿಸಿ 2021-22ನೇ ಸಾಲಿನ ಅಯವ್ಯಯದಲ್ಲಿ ಅನುದಾನ ನಿಗದಿಪಡಿಸಲಾಗಿದೆ. ಆದ್ದರಿಂದ ಶೀಘ್ರಲಿಪಿಗಾರರ ವೇತನವನ್ನೂ ಮರು ನಿಗದಿಪಡಿಸಬೇಕು,’ ಎಂದು ಆರ್ಥಿಕ ಇಲಾಖೆಯು ಆಡಳಿತ ಇಲಾಖೆಗೆ ನಿರ್ದೇಶಿಸಿತ್ತು.

ಜ್ಯೂನಿಯರ್‌ ಪ್ರೋಗ್ರಾಮರ್‌, ಜ್ಯೂನಿಯರ್‌ ಕನ್ಸೋಲ್‌ ಆಪರೇಟರ್‌ ಹುದ್ದೆಗಳ ಭರ್ತಿಗೆ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಶೇ.50ರಷ್ಟನ್ನು ಪದನ್ನೋತಿಯಿಂದ ಶೇ.50ರಷ್ಟು ನೇರ ನೇಮಕಾತಿಯಿಂದ ಭರ್ತಿಗೆ ಅವಕಾಶ ಕಲ್ಪಿಸಲಾಗಿದೆ. ಎರಡೂ ಇಲ್ಲದ ಪಕ್ಷದಲ್ಲಿ ನಿಯೋಜನೆ ಮೇಲೆ ಸದರಿ ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಆರ್ಥಿಕ ಇಲಾಖೆಯ ಅನುಮತಿ ಪಡೆಯದೇ ಹಾಗೂ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ವ್ಯತಿರಿಕ್ತವಾಗಿ ಕಿಯೋನಿಕ್ಸ್‌ನಿಂದ ಕರಾರು ಒಪ್ಪಂದ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ನಿಯಮಬಾಹಿರವಾಗಿ ಭರ್ತಿ ಮಾಡಿತ್ತು.

ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿದ್ದಂತೆ ಹುದ್ದೆಗಳ ವೇತನ ಶ್ರೇಣಿಯ ಕನಿಷ್ಠ ವೇತನ ಕಾಯ್ದೆ ಪ್ರಕಾರ ಜ್ಯೂನಿಯರ್‌ ಪ್ರೋಗ್ರಾಮರ್‌ ಹುದ್ದೆಗೆ 22,800 ರು., ಜ್ಯೂನಿಯರ್‌ ಕನ್ಸೋಲ್‌ ಆಪರೇಟರ್‌ ಹುದ್ದೆಗೆ 20,000 ರು., ಮತ್ತು ಕನಿಷ್ಠ ವೇತನ ಕಾಯ್ದೆ ಪ್ರಕಾರ ಡಾಡಾ ಎಂಟ್ರಿ ಆಪರೇಟರ್‌, ಸ್ವಚ್ಛತಾ ಕಾರ್ಮಿಕರಾದ ಸಫಾಯಿ ಕರ್ಮಚಾರಿಗಳಿಗೆ ಆಯವ್ಯಯದಲ್ಲಿ ಅನುದಾನ ನಿಗದಿಪಡಿಸಲಾಗಿದೆ. ಈ ಹುದ್ದೆಗಳ ಭರ್ತಿಗೆ ಆಡಳಿತ ಇಲಾಖೆಯು ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಕ್ರಮ ವಹಿಸಬೇಕು ಎಂದು ಆರ್ಥಿಕ ಇಲಾಖೆಯು ಸೂಚಿಸಿತ್ತು.

ಡೇಟಾ ಎಂಟ್ರಿ ಆಪರೇಟರ್‌ ಹುದ್ದೆಗಳಿಗೆ ಸತೀಶ್‌ ಸಿ, ಶೃತಿ ಎಸ್‌, ಪ್ರತೀಕ್‌ ಶೆಟ್ಟಿ, ಸುಶಾಂತ್‌ ನಾಯಕ್‌, ಜ್ಯೂನಿಯರ್‌ ಪ್ರೋಗ್ರಾಮರ್‌ ಹುದ್ದೆಗೆ ಸುಹಾಸ್‌ ಎಂ, ಜ್ಯೂನಿಯರ್‌ ಕನ್ಸೋಲ್‌ ಆಪರೇಟರ್‌ ಹುದ್ದೆಗಳಿಗೆ ಯೋಗೇಶ್ವರಿ ಬಿ, ಪುಷ್ಪಾ ಎಚ್‌ ಎಂ, ಯೋಗಿತಾ ಪಿ ಆರ್‌, ಜ್ಯೂನಿಯರ್‌ ಆಪರೇಟರ್‌ ಕನ್ಸಲ್ಟೆಂಟ್‌ ಹುದ್ದೆಗೆ ಎಂ ನಿಖಿಲ್‌ ಅವರನ್ನು ಕಿಯೋನಿಕ್ಸ್‌ ಮೂಲಕ ನೇಮಿಸಲಾಗಿತ್ತು.

ಕಿಯೋನಿಕ್ಸ್‌ ಮೂಲಕ ಹೊರಗುತ್ತಿಗೆ ಅಡಿಯಲ್ಲಿ ನೇಮಕ ಮಾಡಿಕೊಂಡಿರುವ ನೌಕರರಿಗೆ ಹೆಚ್ಚುವರಿ ವೇತನ ಪಾವತಿಸಿರುವ ಪರಿಷತ್‌ ಸಚಿವಾಲಯವು ಆರ್ಥಿಕ ಇಲಾಖೆಯ ಅನುಮತಿಯನ್ನೇ ಪಡೆಯದೇ ನಿಯಮಬಾಹಿರವಾಗಿ ನೇಮಕ ಮಾಡಿದೆ ಎಂದು ‘ದಿ ಫೈಲ್‌’ 2021ರ ಜೂನ್‌ 18ರಂದು ಪ್ರಕಟಿಸಿದ್ದ ವರದಿ ಆಧರಿಸಿ ರಮೇಶ್‌ಬಾಬು ಅವರು 2021ರ ಜುಲೈ 6ರಂದು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಪತ್ರ ಬರೆಯುವ ಮೂಲಕ ಪ್ರಕರಣವನ್ನು ವಿಸ್ತರಿಸಿದ್ದರು.

‘ಆರ್ಥಿಕ ಇಲಾಖೆಯ ಅನುಮತಿ ಪಡೆಯದೆ ಮಾಡಿರುವ ನೇಮಕಾತಿ ಅಕ್ರಮವಾಗಿದ್ದು, ಈ ಸಂಬಂಧ ಪರಿಷತ್ತಿನ ಸಚಿವಾಲಯ ಮತ್ತು ಆರ್ಥಿಕ ಇಲಾಖೆಯೊಂದಿಗೆ ನಡೆದಿರುವ ಪತ್ರ ವ್ಯವಹಾರಗಳನ್ನು ಪಾರದರ್ಶಕತೆ ದೃಷ್ಟಿಯಿಂದ ವಿಧಾನಪರಿಷತ್ತಿನ ಅಧಿವೇಶನದಲ್ಲಿ ಬಹಿರಂಗಗೊಳಿಸಬೇಕು. ನಿಯಮಾವಳಿಗಳನ್ನು ಮೀರಿ ಹೆಚ್ಚುವರಿ ವೇತನ ಪಾವತಿ ಮಾಡಿರುವ ಸಚಿವಾಲಯದ ಅಧಿಕಾರಿಗಳನ್ನು ಅಮಾನತಿನಲ್ಲಿಡಬೇಕು. ಪ್ರಕರಣ ಕುರಿತು ವಿಧಾನಪರಿಷತ್‌ನ 5 ಸದಸ್ಯರನ್ನೊಳಗೊಂಡ ಸಮಿತಿ ರಚಿಸಿ ತನಿಖೆಗೆ ಒಳಪಡಿಸಬೇಕು,’ ಎಂದು ಪತ್ರದಲ್ಲಿ ಒತ್ತಾಯಿಸಿದ್ದನ್ನು ಸ್ಮರಿಸಬಹುದು.

Hot this week

120 ಎಕರೆ ಅರಣ್ಯ ಪ್ರದೇಶದಲ್ಲಿ ಇಂಡಸ್ಟ್ರಿಯಲ್ ಪಾರ್ಕ್‌; ಕಂದಾಯ ಇಲಾಖೆ ನಡೆಸಿರುವ ಸಭೆಯ ಮಾಹಿತಿಯೇ ಅರಣ್ಯ ಇಲಾಖೆ ಬಳಿ ಇಲ್ಲ!

ಬೆಂಗಳೂರು; ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಪ್ಲಾಂಟೇಷನ್‌ನ ಸರ್ವೆ...

21 ಪ್ಯಾಕೇಜ್‌ ಟೆಂಡರ್ ನಲ್ಲಿ ಭ್ರಷ್ಟಾಚಾರ ಆರೋಪ; ಅಂಜುಂ ಪರ್ವೇಝ್ ಸಮಿತಿ ವರದಿ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು; ಹಸಿ ತ್ಯಾಜ್ಯ, ಒಣ ತಾಜ್ಯ, ನೈರ್ಮಲ್ಯ ತ್ಯಾಜ್ಯ, ರಸ್ತೆ ಗುಡಿಸುವಿಕೆ,...

ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಮನವಿ; ಸ್ಪಷ್ಟ ಅಭಿಪ್ರಾಯ ಸಲ್ಲಿಸಲು ಡಿಜಿಐಜಿಪಿಗೆ ನಿರ್ದೇಶನ

ಬೆಂಗಳೂರು;   ಎಡಿಜಿಪಿ ಚಂದ್ರಶೇಖರ್ ಅವರ ವಿರುದ್ಧದ ಪ್ರಕರಣದಲ್ಲಿ ಸಿಐಡಿ ವಿಶೇಷ ವಿಚಾರಣೆ...

ಗೋವಿಂದರಾವ್ ವರದಿ ಶಿಫಾರಸ್ಸಿನಂತೆ ನಿಗದಿಯಾಗದ ಅನುದಾನ; ಕೃಷಿ ಇಲಾಖೆಯನ್ನೇ ನಿರ್ಲಕ್ಷ್ಯಿಸಿತೇ ಸರ್ಕಾರ?

ಬೆಂಗಳೂರು; ಪ್ರಾದೇಶಿಕ ಅಸಮತೋಲನ ನಿವಾರಣೆ ಕುರಿತು ಆರ್ಥಿಕ ತಜ್ಞ ಪ್ರೊ ಎಂ...

ಅನ್ನಭಾಗ್ಯ; ಫಲಾನುಭವಿಗಳ ಅರ್ಹತೆ, ಅನರ್ಹತೆ ಪರಿಶೀಲಿಸಲು ಸಿಎಜಿಗೆ ದತ್ತಾಂಶಗಳನ್ನೇ ಒದಗಿಸದ ಸರ್ಕಾರ

ಬೆಂಗಳೂರು; ಅನ್ನಭಾಗ್ಯ ಯೋಜನೆಯ ದತ್ತಾಂಶ ಆಧಾರಿತ ಲೆಕ್ಕಪರಿಶೋಧನೆಗೆ, ಬಿಪಿಎಲ್ ಮತ್ತು ಆದ್ಯತಾ...
Please Scan to make Your Contribution

Topics

120 ಎಕರೆ ಅರಣ್ಯ ಪ್ರದೇಶದಲ್ಲಿ ಇಂಡಸ್ಟ್ರಿಯಲ್ ಪಾರ್ಕ್‌; ಕಂದಾಯ ಇಲಾಖೆ ನಡೆಸಿರುವ ಸಭೆಯ ಮಾಹಿತಿಯೇ ಅರಣ್ಯ ಇಲಾಖೆ ಬಳಿ ಇಲ್ಲ!

ಬೆಂಗಳೂರು; ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಪ್ಲಾಂಟೇಷನ್‌ನ ಸರ್ವೆ...

21 ಪ್ಯಾಕೇಜ್‌ ಟೆಂಡರ್ ನಲ್ಲಿ ಭ್ರಷ್ಟಾಚಾರ ಆರೋಪ; ಅಂಜುಂ ಪರ್ವೇಝ್ ಸಮಿತಿ ವರದಿ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು; ಹಸಿ ತ್ಯಾಜ್ಯ, ಒಣ ತಾಜ್ಯ, ನೈರ್ಮಲ್ಯ ತ್ಯಾಜ್ಯ, ರಸ್ತೆ ಗುಡಿಸುವಿಕೆ,...

ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಮನವಿ; ಸ್ಪಷ್ಟ ಅಭಿಪ್ರಾಯ ಸಲ್ಲಿಸಲು ಡಿಜಿಐಜಿಪಿಗೆ ನಿರ್ದೇಶನ

ಬೆಂಗಳೂರು;   ಎಡಿಜಿಪಿ ಚಂದ್ರಶೇಖರ್ ಅವರ ವಿರುದ್ಧದ ಪ್ರಕರಣದಲ್ಲಿ ಸಿಐಡಿ ವಿಶೇಷ ವಿಚಾರಣೆ...

ಗೋವಿಂದರಾವ್ ವರದಿ ಶಿಫಾರಸ್ಸಿನಂತೆ ನಿಗದಿಯಾಗದ ಅನುದಾನ; ಕೃಷಿ ಇಲಾಖೆಯನ್ನೇ ನಿರ್ಲಕ್ಷ್ಯಿಸಿತೇ ಸರ್ಕಾರ?

ಬೆಂಗಳೂರು; ಪ್ರಾದೇಶಿಕ ಅಸಮತೋಲನ ನಿವಾರಣೆ ಕುರಿತು ಆರ್ಥಿಕ ತಜ್ಞ ಪ್ರೊ ಎಂ...

ಅನ್ನಭಾಗ್ಯ; ಫಲಾನುಭವಿಗಳ ಅರ್ಹತೆ, ಅನರ್ಹತೆ ಪರಿಶೀಲಿಸಲು ಸಿಎಜಿಗೆ ದತ್ತಾಂಶಗಳನ್ನೇ ಒದಗಿಸದ ಸರ್ಕಾರ

ಬೆಂಗಳೂರು; ಅನ್ನಭಾಗ್ಯ ಯೋಜನೆಯ ದತ್ತಾಂಶ ಆಧಾರಿತ ಲೆಕ್ಕಪರಿಶೋಧನೆಗೆ, ಬಿಪಿಎಲ್ ಮತ್ತು ಆದ್ಯತಾ...

100 ಎಕರೆ ಜಮೀನು ಮಾರಾಟ; ಕೋರಮಂಡಲ್ ಷುಗರ್ಸ್‌ ಲಿಮಿಟೆಡ್‌ ಕೋರಿಕೆಗೆ ಮನ್ನಣೆ, ಪರಭಾರೆ ನಿರ್ಬಂಧ ಸಡಿಲಿಸುವುದೇ ಸರ್ಕಾರ?

ಬೆಂಗಳೂರು; ಜಮೀನು ಮಂಜೂರು ಮಾಡಿದ ದಿನಾಂಕದಿಂದ 30 ವರ್ಷಗಳವರೆಗೆ ಮಾರಾಟ ಮಾಡಬಾರದು...

ವಿಮಾ ಕಂಪನಿಯಿಂದ ಹಣ ಬಂದಿದೆ, ಆದರೆ ರೈತರ ಖಾತೆಗಳಿಗೆ ಜಮೆಯೇ ಆಗಿಲ್ಲ; ಬರಗಾಲದ ನಡುವೆಯೇ ರೈತರಿಗೆ ಮತ್ತೊಂದು ಬರೆ

ಬೆಂಗಳೂರು;  ರಾಜ್ಯದಾದ್ಯಂತ ತೀವ್ರ ಬರಗಾಲ ಎದುರಾಗಿರುವ ನಡುವೆಯೇ  2025-26ನೇ ಮುಂಗಾರು ಹಂಗಾಮಿನ...

Related Articles

Popular Categories

error: Content is protected !!