ರಾಜಕೀಯ ಸಂಪರ್ಕದಲ್ಲಿದ್ದವರಿಗಷ್ಟೇ ಆದೇಶ; ಆಡಿಯೋದಲ್ಲಿ ಅಂಜುಂ, ಜಾವೇದ್‌ ಹೆಸರು ಪ್ರಸ್ತಾಪ

ಬೆಂಗಳೂರು; ರಾಜಕೀಯ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದ ಸರಬರಾಜುದಾರರಿಗಷ್ಟೇ ಪಿಪಿಇ ಕಿಟ್‌ ಸೇರಿದಂತೆ ವೈದ್ಯಕೀಯ ಸಲಕರಣೆಗಳ ಆದೇಶ ದೊರಕಿದೆ ಎಂಬ ಮಾಹಿತಿಯನ್ನು ‘ದಿ ಫೈಲ್‌’ ಇದೀಗ ಹೊರಗೆಡವುತ್ತಿದೆ.

ಕೋವಿಡ್‌ ಮೊದಲ ಮತ್ತು ಎರಡನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇ,ಲಾಖೆಯು ಅಹ್ವಾನಿಸಿದ್ದ ದರಪಟ್ಟಿ ಅಂತಿಮಗೊಳ್ಳುವ ಮುನ್ನವೇ ಅಧಿಕಾರಿಗಳು ಮತ್ತು ಸರಬರಾಜುದಾರರ ಮಧ್ಯೆ ‘ವ್ಯವಹಾರ’ ನಡೆಯುತ್ತಿತ್ತು ಎಂಬ ಆರೋಪವನ್ನು ಪುಷ್ಠೀಕರಿಸುವಂತಹ ಆಡಿಯೋ ಇದೀಗ ಬಹಿರಂಗವಾಗಿದೆ.

ಪಿಪಿಇ ಕಿಟ್‌ಗಳನ್ನು ಪೂರೈಕೆ ಮಾಡುವ ಸರಬರಾಜುದಾರರ ಮಧ್ಯೆ ನಡೆದಿದೆ ಎನ್ನಲಾಗಿರುವ ಸರಿಸುಮಾರು ಒಂದು ಗಂಟೆ ಅವಧಿಯ ಸಂಭಾಷಣೆಯಲ್ಲಿ ಹಿರಿಯ ಐಎಎಸ್‌ ಅಧಿಕಾರಿ ಅಂಜುಂ ಪರ್ವೆಜ್‌, ಜಾವೇದ್‌ ಅಖ್ತರ್‌, ಮಹಿಳಾ ಐಎಎಸ್‌ ಅಧಿಕಾರಿ ಬಗ್ಗೆ ಕೀಳು ಭಾಷೆಯಲ್ಲಿ ನಿಂದಿಸಿ ನಡೆಸಿರುವ ಸಂಭಾಷಣೆಯೂ ಆಡಿಯೋದಲ್ಲಿರುವುದು ತಿಳಿದು ಬಂದಿದೆ.

ಕಿಟ್‌ ಸೇರಿದಂತೆ ವೈದ್ಯಕೀಯ ಸಲಕರಣೆಗಳ ದರಪಟ್ಟಿ ಆಹ್ವಾನಿಸಿದ ನಂತರ ಸರಬರಾಜುದಾರರು ಸಿಂಡಿಕೇಟ್‌ ಮಾದರಿಯಲ್ಲಿ ಒಗ್ಗೂಡಿ ತಾವೇ ನಿರ್ಧರಿಸಿದ ದರಕ್ಕೆ ಕಿಟ್‌ಗಳನ್ನು ಖರೀದಿಸುವ ಅನಿವಾರ್ಯತೆಯನ್ನು ಹೇಗೆ ಸೃಷ್ಟಿಸಿದ್ದರು ಮತ್ತು ಸೃಷ್ಟಿಸುತ್ತಿದ್ದಾರೆ ಎಂಬ ಅಂಶವನ್ನೂ ಲಭ್ಯವಿರುವ ಆಡಿಯೋ ಬಹಿರಂಗಗೊಳಿಸಿದೆ. ಪಿಪಿಇ ಕಿಟ್‌ ಖರೀದಿಗೆ ನಿಗಮವು ಆಹ್ವಾನಿಸಿದ್ದ ದರ ಪಟ್ಟಿ ಸಂಬಂಧ ಸರಬರಾಜುದಾರರ ಕಾನ್ಫರೆನ್ಸ್‌ ಕಾಲ್‌ನಲ್ಲಿ ಸಂಭಾಷಿಸಿದ್ದಾರೆ ಎನ್ನಲಾಗಿದೆ. ಆದರೆ ಆಡಿಯೋದಲ್ಲಿರುವ ಧ್ವನಿ ಯಾರದ್ದು ಎಂಬ ಬಗ್ಗೆ ತಿಳಿದು ಬಂದಿಲ್ಲ.

ಪಿಪಿಇ ಕಿಟ್‌ ಖರೀದಿ ಪ್ರಕರಣ

12 ಲಕ್ಷ ಪಿಪಿಇ ಕಿಟ್‌ ಖರೀದಿ ಸಂಬಂಧ ಬಿಡ್‌ದಾರರು ಹೆಚ್ಚಿನ ದರ ನಮೂದಿಸಿದ್ದರಿಂದ ದರ ಸಂಧಾನ ಸಭೆಯಲ್ಲಿ ಸರ್ಕಾರವೇ ದರವನ್ನು ಮರುನಿಗದಿಗೊಳಿಸಿತ್ತು. ಆದರೆ ಈ ದರವನ್ನು ಬಹುತೇಕ ಬಿಡ್‌ದಾರರು ಒಪ್ಪಿಕೊಂಡಿರಲಿಲ್ಲ. ಆದರೆ ಯುಕ್ಬಾ ಫ್ಯಾಷನ್ಸ್‌ ಕಂಪನಿಯು ಸರ್ಕಾರ ಮರುನಿಗದಿಗೊಳಿಸಿದ್ದ ದರಕ್ಕಿಂತಲೂ 3 ರು. ಕಡಿಮೆ ದರದಲ್ಲಿ ಕಿಟ್‌ಗಳನ್ನು ಸರಬರಾಜು ಮಾಡಲು ಮುಂದೆ ಬಂದಿತ್ತು. ಆದರೆ ನಿಗಮವು ಈ ಕಂಪನಿಗೆ ಖರೀದಿ ಆದೇಶ ನೀಡದೆಯೇ ಯುಕ್ಬಾ ಫ್ಯಾಷನ್ಸ್‌ ಕಂಪನಿ ನಮೂದಿಸಿದ್ದ ದರಕ್ಕಿಂತಲೂ 33 ರು ದರ ಹೆಚ್ಚಳಗೊಳಿಸಿ ನಮೂದಿಸಿದ್ದ ಎಚ್‌ ಎನ್‌ ಝಡ್‌ ಕಂಪನಿಗೇ 400 ರು ದರದಲ್ಲಿ ಖರೀದಿ ಆದೇಶ ನೀಡಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು.

ಮೊದಲ ದರ ಸಂಧಾನ ಸಭೆ ವಿಫಲ

ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು 2021ರ ಜೂನ್ 14ರಂದು ಜೂಮ್‌ ಸಭೆ ನಡೆಸುವ ಮೂಲಕ ಮೊದಲ ದರ ಸಂಧಾನ ಪ್ರಕ್ರಿಯೆಗೆ ಬಿಡ್‌ದಾರರನ್ನು ಆಹ್ವಾನಿಸಿತ್ತು. ಇದೇ ಸಭೆಯಲ್ಲಿ ನಿಗಮವು ಕಿಟ್‌ವೊಂದಕ್ಕೆ 370 ರು. ನಂತೆ ದರವನ್ನು ಮರು ನಿಗದಿಗೊಳಿಸಿತ್ತು. ಇದೇ ದರಕ್ಕೆ ಹೊಂದಾಣಿಕೆ ಮಾಡಿದ ಕಂಪನಿಗೆ ಖರೀದಿ ಆದೇಶ ನೀಡುವುದಾಗಿ ನಿಗಮವು ಸಭೆಯಲ್ಲಿ ಹೇಳಿತ್ತು. ಆದರೆ ಯಾವ ಬಿಡ್‌ದಾರರು ಸರ್ಕಾರ ನಿಗದಿಪಡಿಸಿದ್ದ ದರವನ್ನು ಒಪ್ಪಿರಲಿಲ್ಲ.

ಮೊದಲ ದರ ಸಂಧಾನ ಸಭೆ ವಿಫಲವಾಗಿದ್ದರೂ ಮರು ನಿಗದಿಪಡಿಸಿದ್ದ ದರಕ್ಕೆ ಸರ್ಕಾರವು ಬದ್ಧವಾಗಿತ್ತು. ಆದರೆ ಬಿಡ್‌ದಾರರು ಒಪ್ಪದ ಕಾರಣ ನಿಗಮವು 2021ರ ಜೂನ್‌ 21ರಂದು 2ನೇ ಬಾರಿಗೆ ದರ ಸಂಧಾನ ಸಭೆ ನಡೆಸಿತ್ತು. 370 ರು. ದರಕ್ಕೆ ಹೊಂದಾಣಿಕೆ ಮಾಡಿ ಕಿಟ್‌ಗಳನ್ನು ಸರಬರಾಜು ಮಾಡುವ ಸಂಬಂಧ ಎಲ್ಲಾ ಬಿಡ್‌ದಾರರಿಗೂ ಈ ಮೇಲ್‌ ಮೂಲಕ ಸಂದೇಶವನ್ನೂ ರವಾನಿಸಿತ್ತು ಎಂದು ಗೊತ್ತಾಗಿದೆ.

ಮೊದಲ ದರಪಟ್ಟಿಯಲ್ಲಿ ಎಲ್‌ 1 ಆಗಿದ್ದ ಎಚ್‌ ಎನ್‌ ಝಡ್‌ ಕಂಪನಿ 470 ರು. ನಮೂದಿಸಿತ್ತು. ವಿಶೇಷ ಎಂದರೆ ಮೊದಲ ಬಿಡ್‌ನಲ್ಲಿ ಎಲ್‌ 1 ಆಗಿದ್ದ ಎಚ್‌ ಎನ್‌ ಝಡ್‌ ಕಂಪನಿಯು ಕೇವಲ 25 ರು.ಗಳನ್ನು ಕಡಿಮೆಗೊಳಿಸಿತ್ತು. ಆದರೆ ಇದೇ ದರ ಸಂಧಾನ ಸಭೆಯಲ್ಲಿ ಭಾಗವಹಿಸಿದ್ದ ಯುಕ್ಬಾ ಫ್ಯಾಷನ್ಸ್‌ 367 ರು.ದರದಲ್ಲಿ ಕಿಟ್‌ಗಳನ್ನು ಸರಬರಾಜು ಮಾಡಲು ಮುಂದೆ ಬಂದಿತ್ತು. ಅಂದರೆ ಸರ್ಕಾರ ಮರು ನಿಗದಿಪಡಿಸಿದ್ದ ದರಕ್ಕಿಂತಲೂ (370) 3 ರು.ಗಳನ್ನು ಕಡಿಮೆಗೊಳಿಸಿತ್ತು. ಮೂರನೇ ದರ ಸಂಧಾನ ಸಭೆ ಹೊತ್ತಿಗೆ ಎಚ್‌ ಎನ್‌ ಝಡ್‌ ಕಂಪನಿಯು 70 ರು. ಕಡಿಮೆಗೊಳಿಸಿ 400 ರು. ದರ ನಮೂದಿಸಿತ್ತು.

ಸರ್ಕಾರ ಮರುನಿಗದಿಗೊಳಿಸಿದ್ದ ದರಕ್ಕಿಂತಲೂ 3 ರು ಕಡಿಮೆ ದರದಲ್ಲಿ ಸರಬರಾಜು ಮಾಡಲು ಆದೇಶ ನೀಡಿದ್ದರೆ 12 ಲಕ್ಷ ಕಿಟ್‌ಗಳಿಗೆ 44.04 ಕೋಟಿ ರು. ಮಾತ್ರ ವೆಚ್ಚವಾಗುತ್ತಿತ್ತು. ಆದರೆ 400 ರು. ದರಕ್ಕೆ ಆದೇಶ ನೀಡಿರುವುದರಿಂದ ಅಂದಾಜು 48 ಕೋಟಿ ರು.ವೆಚ್ಚವಾದಂತಾಗಿದೆ. ಇದರ ಪ್ರಕಾರ 4 ಕೋಟಿ ರು.ಹೆಚ್ಚುವರಿಯಾಗಿ ವೆಚ್ಚ ಮಾಡಿದಂತಾಗಿದೆ.

ದರ ನಿಗದಿಯಾಗಿದ್ದು ಹೀಗೆ

ಎಚ್‌ಎನ್‌ ಝಡ್‌ ಕಂಪನಿಗೇ ಖರೀದಿ ಆದೇಶ ನೀಡಿರುವುದರ ಹಿಂದೆ ಅಧಿಕಾರಿಗಳು ಮತ್ತು ಸರಬರಾಜುದಾರರ ಮಧ್ಯೆ ಕಮಿಷನ್‌ ವ್ಯವಹಾರ ನಡೆದಿದೆ ಎಂಬ ಅನುಮಾನಗಳನ್ನು ಸರಬರಾಜುದಾರರ ಮಧ್ಯೆ ನಡೆದಿದೆ ಎನ್ನಲಾಗಿರುವ ಸಂಭಾಷಣೆಯು ಬಲಪಡಿಸಿದೆ. ದರ ಸಂಧಾನ ಸಭೆ ನಡೆಯುವ ಮುನ್ನ 410 ರು.ದರವನ್ನೇ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಒಪ್ಪಿದ್ದರು ಎಂಬ ಸಂಗತಿಯನ್ನು ಸರಬರಾಜುದಾರರೊಬ್ಬರು ಹೊರಗೆಡವಿದ್ದಾರೆ.

ಅಲ್ಲದೆ ಇದೇ ಸಂಭಾಷಣೆಯಲ್ಲಿ ಹಿರಿಯ ಐಎಎಸ್‌ ಅಧಿಕಾರಿ ಹಾಗೂ ಕೋವಿಡ್‌ ಉಪಕರಣಗಳ ಖರೀದಿ ಸಮಿತಿ ಅಧ್ಯಕ್ಷ ಅಂಜುಂ ಪರ್ವೆಜ್‌ ಅವರ ಹೆಸರು ಮತ್ತು ಜಾವೇದ್‌ ಅಖ್ತರ್‌ ಅವರ ಹೆಸರೂ ಪ್ರಸ್ತಾಪವಾಗಿರುವುದು ಸಂಭಾಷಣೆಯಿಂದ ತಿಳಿದು ಬಂದಿದೆ. ಇಂಗ್ಲೀಷ್‌ನಲ್ಲಿರುವ ಸಂಭಾಷಣೆಯನ್ನು ಕನ್ನಡಕ್ಕೆ ತರ್ಜುಮೆಗೊಳಿಸಲಾಗಿದೆ.

ಸಂಭಾಷಣೆಯ ಆಯ್ದ ಭಾಗ

ಪಿ 1; ಏನು ತೊಂದರೆ ಇಲ್ಲಾ ಅದನ್ನು ನನಗೆ ಬಿಟ್ಟು ಬಿಡಿ, ಮಿಸ್ಟರ್‌ ಕಮಲ್‌ ಜೈನ್‌ ನಮ್ಮ ಗ್ರೂಪ್‌ನಲ್ಲಿದ್ದಾರೆ. ಎಲ್‌ 1, ಎಲ್‌ 2, ಎಲ್‌ 3, ಎಲ್‌ 5 ನಮ್ಮ ಗೂಪ್ರೇ ಏನೂ ಚಿಂತಿಸಬೇಡಿ.

ಎಲ್‌ 4 ಬಾಲಾಜಿ ಇಲ್ಲಿದ್ದಾರೆ. ಎಲ್‌ 7 ಮಿಸ್ಟರ್‌ ವೆಂಕಟೇಶ್‌ ಇಲ್ಲಿದ್ದಾರೆ.

ಪಿ 2; ನಾವೀಗ ಶುರು ಮಾಡೋಣ ಮಿಸ್ಟರ್‌ ವೆಂಕಟೇಶ್‌, ಮಿಸ್ಟರ್‌ ಕಮಲ್‌ ಜೈನ್‌ ಮತ್ತು ಪ್ರೇಮ್‌ ಕಾಮತ್‌. ನಾನು ಗೌರ್ಮೆಂಟ್‌ ಇಂಡಸ್ಟ್ರಿಯವನು. ಅಲ್ಲಾ ನಾನು ಕರ್ನಾಟಕ ಸರ್ಕಾರಕ್ಕೆ ಹೋದ ವರ್ಷ ಪಿಪಿಇ ಕಿಟ್‌ ಸಪ್ಲೈ ಮಾಡಿ ಗೌರ್ಮೆಂಟ್‌ ಇಂಡಸ್ಟ್ರಿ ಒಳಗೆ ಬಂದವು. ನಾವು ಹೋದ ವರ್ಷ 2 ಲಕ್ಷ ಕಿಟ್‌ ಸಪ್ಲೈ ಮಾಡಿದ್ದೆವು. ನಾನು ರಾಜಕೀಯ ವ್ಯಕ್ತಿಗಳಿಗೆ ಸಂಪರ್ಕದಲ್ಲಿ ಇದ್ದಿದ್ದಕ್ಕೆ ಆ ಆರ್ಡರ್‌ ಸಿಕ್ಕಿತ್ತು ಈ ಸಲ ನಾನು ಎಲ್‌ 1 ,ಎಲ್‌ 2, ಎಲ್‌ 3 ಈಗ ನಿಮಗ ಆ ಝೂಮ್‌ ಮೀಟಿಂಗ್‌ನಲ್ಲಿ ಏನಾಯಿತು ಎಂದು ನನಗೆ ಗೊತ್ತಿದೆ.

ಪಿ 1; ಯಾ…ಯಾ… ಎಕ್ಸಾಟ್ಲೀ

ಹೌದು

ಅದು ಅನ್ಯಾಯ

ಹೌದು ಅದು ಸರಿಯಲ್ಲ

ನಾನು ನನ್ನ ಕಂಪನಿಗಳ ಬಗ್ಗೆ ಮಾಹಿತಿ ನೀಡಬೇಕಿತ್ತು ನಾವು ತಯಾರಿಕೆ ವೈದ್ಯಕೀಯ ಮತ್ತು ಗೌರ್ನಮೆಂಟ್‌ ನ ಆವು ಈ ಇಂಡಸ್ಟ್ರೀಲಿ ಕಳೆದ 7 ವರ್ಷಗಳಿಂದ ಇದ್ದೇವೆ. ನಾವು ಮಧ್ಯ ಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕಕ್ಕೆ ಎನ್‌ 95 ಮಾಸ್ಕ್‌, ಪಿಪಿಇ ಕಿಟ್‌ ಸಪ್ಲೈ ಮಾಡಿದ್ದೆವು. ಈಗ ಪಾಯಿಂಟ್‌ ಏನಂದರೆ ಇಂದು ಒಂದು ಈಮೈಲ್‌ ಬಂದಿದೆ.

ಪಿ 2; ಕರೆಕ್ಟ್‌

ಪಿ 1; ನಾವೆಲ್ಲಾ ಒಂದಾಗಿ ಇದರ ಬಗ್ಗೆ ಡಿಸ್ಕಸ್‌ ಮಾಡಿ ನಿರ್ಧರಿಸಬೇಕು. ನಾನು ನೀವು ಅಂದು ಹೇಳಿದ್ದೆಲ್ಲಾ ಕೇಳಿಸಿಕೊಂಡೆ.

ಪಿ 2; ಆಗ ಒಬ್ಬ ಫೇವರಿಟ್‌ ಮನುಷ್ಯ ಇದ್ದ. ಈಗ ಈ ಹೆಣ್ಣು ತುಂಬಾ ವಿಚಿತ್ರ ತಲೆಕೆಟ್ಟಿದೆ. ಸೆಕ್ರೆಟರಿಗೂ ತಲೆಕೆಟ್ಟಿದೆ. ಹಾಗೂ ಜಿಎಸ್‌ಟಿಯಲ್ಲಿ ಇನ್ನೊಂದು ತಲೆಕೆಟ್ಟ ಕ್ಯಾರಕ್ಟರ್ ಇದೆ. ನಾವು 3 ತಲೆಕೆಟ್ಟ ಜನರ ಜತೆ ಡೀಲ್‌ ಮಾಡ್ತಿದ್ದೇವೆ.

ಪಿ 2; ಅದಕ್ಕೆ ಇದು ಸ್ವಲ್ಪ ಟ್ರಿಕ್ಕಿ. ನಾನು ಪ್ರಿನ್ಸಿಪಲ್‌ ಸೆಕ್ರೆಟರಿಯನ್ನು ಭೇಟಿಯಾದೆ. ಆದರೂ ಸಹ ಇವರೆಲ್ಲಾ ತಲೆಕೆಟ್ಟವರು ಎಂದು ಹೇಳಿದರು. ಅವರು ಕೊನೆಯಲ್ಲಿ 410 ಮಾತ್ರ ಕೊಡಲು ಸಾಧ್ಯ ಎಂದು ಹೇಳಿದರು.

ಪಿ 1; ನಾವೆಲ್ಲಾ ಒಂದಾಗಿ ಇದ್ದು ಇದನ್ನು ಅಕ್ಸೆಪ್ಟ್‌ ಮಾಡಬಾರದು

ಪಿ 2; ನಾವು ಅಕ್ಸೆಪ್ಟ್‌ ಮಾಡಲೇಬಾರದು ನಾವೆಲ್ಲಾ ಒಂದಾಗಿ ಇದ್ದು ಅವರನ್ನು ಫೋರ್ಸ್‌ ಮಾಡಿ ಐಎಸ್‌ಕ್ಯೂ ಕೊಟ್ಟು ಎಲ್‌ 1 ನ್ನು ಅವೈಯ್ಡ್‌ ಮಾಡೋದ್ರಲ್ಲಿ ಏನಿದೆ ಪಾಯಿಂಟ್‌. ಹೌದು ಅವರು ಲಾ ಟ್ರಿಕ್‌ ಮಾಡಲು ತಯಾರಿದ್ಧಾರೆ. ಮನಸ್ಸಿಗೆ ಬಂದಂತೆ ಮಾಡಲು, ಯಾಕಂದ್ರೆ ನಾವು ಒಬ್ಬರಿಗೊಬ್ಬರು ಕನೆಕ್ಟ್‌ ಆಗಿಲ್ಲ ಅದಕ್ಕೆ ನಾವೆಲ್ಲಾ ಒಂದಾಗಿ ಇರಬೇಕು ನಾವು ಒಂದಾಗಿ ಇದ್ದ ತಕ್ಷಣ ಅವರ ಪಾಲಿ ಹೋದಂತೆ ಅದಕ್ಕೆ ನಾವು ಒಂದಾಗಿ ಇರಬೇಕು ಡಾಕ್ಯುಮೆಂಟ್‌ ಇಲ್ಲ.

ಪಿ 1; ನಾನು ನಿಮ್ಮ ಜೊತೆ ಇದ್ದೇನೆ ಆದರೆ ಎಲ್ಲರೂ ಒಂದಾಗಿ ಇರಬೇಕು.

ಪಿ 2; ಕೇಲಿ ನನ್ನ ಕನೆಕ್ಷನ್‌ ಮೇಲಿಂದ ಕೆಳಗಿನವರೆಗೂ ಇದೆ ನಾನು ಮೇಲಿನಿಂದ ಕೆಳಗಿನವರೆಗೂ ಕೆಲಸ ಮಾಡ್ತಾ ಇದ್ದೇನೆ, ಮಿನಿಸ್ಟರ್‌ ಇಂದ ಕೆಳಗಿನವರೆಗೂ..ಆದರೆ ಈ ಹೆಣ್ಣನ್ನು ಅವರು ಮ್ಯಾನೇಜ್‌ ಮಾಡಲು ಆಗುತ್ತಿಲ್ಲ. ಇವಳು ಸಂಪೂರ್ಣ ತಲೆಕೆಟ್ಟವಳು

ಪಿ 1; ಯಾ..ಸಾರಿ ನಿಮ್ಮನ್ನು ಇಂಟರಪ್ಟ್‌ ಮಾಡ್ತಿದ್ದೇನೆ. ನಾನು ಇಂದು ಒಂದು ಸಣ್ಣ ಡಿಸ್ಕಷನ್‌ ಇದೆ. ನಾನು ಕೆಡಿಎಲ್‌ಡಬ್ಲ್ಯೂಎಸ್‌ನಲ್ಲಿ ಕೆಲಸ ಮಾಡ್ತೇನೆ ನಾನೂ ಸಹ ಬಹಳ ಸಪ್ಲೈ ಮಾಡಿದ್ದೇನೆ. ಈ ಹೆಣ್ಣಿನ ಸಣ್ಣ ಮಾತುಕತೆಯಲ್ಲಿಲ ನನಗೆ ಅರ್ಥ ಆಯಿತು. ನಾನಷ್ಟೇ ಅಲ್ಲ, ನರಟ್ಟಿ, ಪ್ರವೀಣ್‌ ಎಲ್ಲರಿಗೂ ಇದು ಅರ್ಥ ಆಯಿತು ಇವಳು ಮೈಂಡ್‌ ಗೇಮ್‌ ಆಡುತ್ತಿದ್ದಾಳೆ. ಯಾವುದೇ ಕಂಪನಿ 420 ಅಥವಾ 410 ಅಂತ ಹಾಕಿದ್ರೆ ನಾವೆಲ್ಲಾ ಹೋದಂಗೆ ಆರ್ಥ

ಪಿ 1; ನಾನು ಹೇಳ್ತೇನೆ ಯಾವುದಾದ್ರೂ ಕಂಪನಿ 410 ಅಂತಾ ಮೈಲ್‌ ಹಾಕಿದ್ರೆ ಇವಳು ಎಲ್ಲಾ 12 ಲಕ್ಷ ಕೊಟ್ಟು ಹೇಗೆ ಯಾರಾದ್ರೂ ಅಷ್ಟು ಸಪ್ಲೈ ಮಾಡಲು ಸಾಧ್ಯವೇ

ಪಿ 2; ಇದು ಎಲಿಗೆಂಟ್‌ ನನ್ನ ಪ್ರಕಾರ ಮತ್ತು ಅವಳ ಬಾಸ್‌ ಅಂಜುಂ ಪರ್ವೆಜ್‌

ಪಿ 1′ ಯೆಸ್‌ ಯೆಸ್‌ ಯೆಸ್‌ ಯೆಸ್‌

ಪಿ 2; ಅವಳ ಬಾಸ್‌ ಸಾಧಾರಣ ಪ್ರೊಕ್ಯೂರ್‌ಮೆಂಟ್‌ ಜಾವೇದ್‌ ಅಖ್ತರ್‌ ಅವಳ ಬಾಸ್‌ ನಾನು ಅಂಜುಂ ಪರ್ವೆಜ್‌ಗೆ ತುಂಬಾ ಹತ್ತಿರ ಆಗಿದ್ದೇನೆ. ಅವರು ನಕ್ಕುಬಿಟ್ಟು ಹೇಳಿದರು. ಆ ಹೆಣ್ಣು ತಪ್ಪು ಮಾಡುತ್ತಿದ್ದಾಳೆ ಇದು ಎಲಿಗೆಂಟ್‌ ಆದರೆ ಆವರಿಗೆ ಆಕೆಯನ್ನು ಕಾಂಟ್ಯಾಕ್ಟ್‌ ಮಾಡಲು ಆಗುತ್ತಿಲ್ಲ.

ಅವಳು ಅಂಜುಂ ಪರ್ವೇಜ್‌ಗೆ ಹೇಳಿದಳು. ನಾನು 400 ರು.ಗೆ ಮುಗಿಸುತ್ತೇನೆ ಎಂದು ನಂತರ ಇಂದು ಮಧ್ಯಾಹ್ನ ನಾನು ಅಂಜುಂ ಪರ್ವೆಜ್‌ ಗೆ ಭೇಟಿಯಾದೆ. ಅವರು ಡಿಸ್ಕಷನ್‌ ನಂತರ ನನಗೆ ಕಾಲ್‌ ಮಾಡಿ ಹೇಳಿದರು. ಅವಳು ಈಗ 410ಕ್ಕೆ ತಯಾರಿದ್ದಾಳೆ ಎಂದು

ಪಿ 1; 410 ಪ್ಲಸ್‌ ಜಿಎಸ್‌ಟಿ ಆರ್‌

ಪಿ 2; ಅವಳು 401ಕ್ಕೆ ಫಿಕ್ಸ್‌ ಆಗಿದ್ದಾಳೆ

ಪಿ 2; ಇಲ್ಲಾ ಇನ್‌ಕ್ಲೂಡಿಂಗ್‌ ಜಿಎಸ್‌ಟಿ ನಾವು 7 ಜನ ಇದೇ ಆಟದಲ್ಲಿ ಇದ್ದರೆ ಅವಳನ್ನು ಸೋಲಿಸಬಹುದು.

ಪಿ 1; ನಾವೆಲ್ಲಾ ಒಂದಾಗಿ ಡಿಸೈಡ್‌ ಮಾಡಿ ಇರಬೇಕು

ಪಿ 2; ನಾವು ಅವರನ್ನು ಸುಲಭವಾಗಿ ಕೋರ್ಟ್‌ಗೆ ಎಳೆಯಬಹುದು ಆಧರೆ ಅದರ ಬಗ್ಗೆ ಯೋಚನೆ ಮಾಡಬಾರದು, ನಾವೆಲ್ಲಾ ಒಟ್ಟಾಗಿ ಇದ್ದು ಹಣ ಹೇಗೆ ಮಾಡಬೇಕೆಂದು ಯೋಚಿಸಬೇಕು. ನೀವು ಯಾವ ಪ್ರೈಸ್‌ ಯೋಚಿಸುತ್ತಿದ್ದಿರೋ ನಾವೆಲ್ಲಾ ಅದಕ್ಕೆ ಸ್ಟ್ರಿಕ್ಟ್‌ ಆಗೋಣ

ಪಿ 2; 5 ರು. ಜಾಸ್ತಿ ಇರಬೇಕು

ಪಿ 1 ; ನಾನು ಹೇಳ್ತೀನಿ ನಾವು ಆ ಪ್ರೈಸ್‌ಗೆ ಸ್ಟ್ರಿಕ್ಟ್‌ ಆಗೋಣ

ಪಿ 2; ಈ ಜನ ನಮ್ಮನ್ನು ಹಗುರವಾಗಿ ತೆಗೆದುಕೊಳ್ಳಲು ಬಿಡಬಾರದು

ಪಿ 3; ಓ ಕೆ

ಪಿ 2; ಈ ಹೆಣ್ಣಿಗೆ ತಲೆ ಕೆಟ್ಟಿದೆ

ಪಿ 3; ಯಾ

ಪಿ 2; ನಾವು 7 ಜನ ಈ ಹೆಣ್ಣನ್ನು ಮ್ಯಾನೇಜ್‌ ಮಾಡೋದು ಹೇಗೆ ಎಂದು ಅರ್ಥ ಮಾಡಿಕೊಳ್ಳೋಣ (ನಗು)

ಪಿ 3 ; ನಾವು 7 ಜನರಲ್ಲಿ ಯಾರು ಸೈಕಿಯಾಸ್ಟ್ರಿಟ್‌ ಇದ್ದಾರೆ?

ಪಿ 2; ಈ ಹೆಣ್ಣು ಅದನ್ನೆಲ್ಲಾ ಮೀರಿದ್ದು

ಪಿ 3; (ನಗು) ಓ ಕೆ

ಪಿ 2; ನಾನು ಎಲ್‌ 1, ಎಲ್‌ 2, ಎಲ್‌ 3 ರೆಪ್ರೆಸೆಂಟ್‌ ಮಾಡ್ತಿದ್ದೇನೆ. ನೀವು ಎಲ್‌ 5 ಬಾಲಾಜಿ, ಎಲ್‌ 4, ಎಲ್‌ 7 ವೆಂಕಟೇಶ್‌ ಕೂಡ ಇದ್ದಾರೆ.

ಪಿ 3; ಯಾ

ಪಿ 2; ಈಗ ನಾವು ಏನು ಮಾಡಬೇಕು? ಇದು ಒಳ್ಳೆಯ ಅವಕಾಶ ಇದೆ. ನಮ್ಮ ಮುಂದೆ ಯಾರೋ ನಮ್ಮ ಜತೆ ಆಟ ಆಡ್ತಿದ್ದಾರೆ. ಯಾಕಂದ್ರೆ ನಾವೆಲ್ಲಾ ಒಗ್ಗಟ್ಟಾಗಿ ಇಲ್ಲಾ.

ಪಿ 1; ನಾವು ಒಂದಾಗಿ ಇದ್ದೇವೆ, ಯಾರು ಹೇಳಿದ್ದು ನಾವು ಒಂದಾಗಿ ಇಲ್ಲಾ ಅಂತಾ ಇಲ್ಲದಿದ್ದರೆ ಈ ಕಾಲ್‌ ಆಗ್ತಿತ್ತಾ

ಪಿ 2;ಇಲ್ಲಾ ಇಲ್ಲಾ ಈ ಕಾಲ್‌ ಮುಂದೆ ನಾವು ಒಂದಾಗಿ ಇದ್ದಿಲ್ಲ

ಪಿ 2 ; ಸಂತೋಷ್‌ಗೆ ಧನ್ಯವಾದ ನಮ್ಮನ್ನು ಒಂದಾಗಿಸಿದ್ದಕ್ಎಕ ನಾನು ಬಾಲಾಜಿ, ವೆಂಕಟೇಶ್‌ ಮುಖ ನೋಡಿಲ್ಲ ಆದರೆ ನಾವೆಲ್ಲಾ ಒಂದಾಗಿ ಇದ್ದೇವೆ ಅಂತಾ ಅನ್ನಿಸುತ್ತೆ.

ಪಿ 1; ಯೆಸ್‌

ಪಿ 2; ಆದರೆ ಒಬ್ಬ ಮನುಷ್ಯ ಇಲ್ಲಿಲ್ಲ. ಆದರೆ ಸಂತೋಷ ಹೇಳ್ತಾರೆ ಆದರೂ ಸಹ ನಮ್ಮ ಜೊತೆ ಇದ್ದಾರೆ. ನಾವು 7 ಜನ ಒಟ್ಟಾಗಿ ಇರೋಣ ಈ ದೊಡ್ಡ ವಿಷಯ ಅಂದ್ರೆ ಜಾವೇದ್‌ ಅಖ್ತರ್‌ ಸೆಕ್ರೆಟರಿ ಈ ಹೆಣ್ಣು ಮತ್ತು ಶ್ರೀಕಾಂತ್‌ ತಲೆ ಕೆಟ್ಟ ಜನ 3 ತಲೆ ಕೆಟ್ಟ ಜನ ಹಾಗೂ 7 ವ್ಯಾಪಾರಿಗಳು (ನಗು) ನಾವೆಲ್ಲಾ ಒಂದಾಗಿ ಇದ್ದರೆ ನಾವು ಈ 3 ತಲೆ ಕೆಟ್ಟವರನ್ನು ಸೋಲಿಸಬಹುದು ಈ ಕಮಲ್‌ ಜೈನ್‌ ರವರೇ ನೀವು ಏನು ಹೇಳುತ್ತಿದ್ದೀರಿ ಇದೆಲ್ಲದರ ಬಗ್ಗೆ

ಪಿ 2; ನೀವು ನಮ್ಮ ಜೊತೆ ಇದ್ದೀರ ಅಥವಾ ಒಬ್ಬರೇ ಇರಲು ಇಷ್ಟ ಪಡುತ್ತೀರ

ಪಿ 3; ನಾನು ಯಾವಾಗಲೂ ತಂಡದ ವ್ಯಕ್ತಿ. ಆದರೆ ಈಗ ಆಗಲೇ ತಡ ಆಗಿದೆ ತುಂಬಾ

ಪಿ 1; ಈ ಒಂದು ಪ್ರಾಜೆಕ್ಟ್‌ ಬಗ್ಗೆ ಹೇಳುವುದಾದರೆ ಯಾರಿಗಾದರೂ ಈ ಗ್ರೂಪ್‌ಲ್ಲಿ ಈ ಪ್ರಾಜೆಕ್ಟ್‌ ಓಕೆ ಆಗಿದ್ದರೆ ಕಡಿಮೆ ಪ್ರೈಸ್‌ಗೆ ಮಾಡಲು ಓಕೆ. ಆದರೆ ಇದು ಅವರಿಗೆ ಒಂದೇ ಪ್ರಾಜೆಕ್ಟ್‌ ಆದಾಗ. ಆದರೆ ನಾನು ಅನುಭವದ ಮಾತು ಹೇಳ್ತೇನೆ.ಹೇಗೆ ಯಾರೋ ಕಡಿಮೆ ಪ್ರೈಸ್‌ಗೆ 2 ಕೋಟಿ ಪ್ರಾಜೆಕ್ಟ್‌ ಪೇಮೆಂಟ್‌ ಇನ್ನೂ ಬಂದಿಲ್ಲ. ತುಂಬಾ ತೊಂದರೆ ಅನುಭವಿಸಿದರು. ಒಂದು ಒಂದೂವರೆ ವರ್ಷದಿಂದ ಅಂತಾ ಪ್ರಾಜೆಕ್ಟ್‌ ಮಾಡಿಯೂ ಉಪಯೋಗ ಏನು 3 ಕೋಟಿ ಮೇಲೆ ಇಂಟ್ರೆಸ್ಟ್‌ 1 ಕೋಟಿಗಿಂತ ಜಾಸ್ತಿ ಇದೆ. ನಾನು ಅಂತಾ ಪ್ರಾಜೆಕ್ಟ್‌ ಮಾಡಲು ಇಷ್ಟ ಇಲ್ಲ

ಪಿ 2; ಏನಾದ್ರೂ ಆಗಬಹುದು ನಮಗೆ ಗೊತ್ತಿಲ್ಲ ಈ ಹೆಣ್ಣಿಗೆ ತಲೆ ಕೆಟ್ಟಿದೆ

ಪಿ 1; ನನ್ನ ಉಪದೇಶ ಏನಂದರೆ ನೀವೆಲ್ಲಾ ಮೀಟ್‌ ಆಗಿ ಪ್ರೈಸ್‌ ಬಗ್ಗೆ ಕಾಂಪ್ರೋಮೈಸ್‌ ಆಗೋದು ಬೇಡ. 10ರಿಂದ 15 ರು. ಡಿಸ್ಕೌಂಟ್‌ ಒಳ್ಳೇದು

ಪಿ 2; ನನಗನ್ನಿಸುತ್ತದೆ 480 ಒಳ್ಳೆಯ ಪ್ರೈಸ್‌

ಪಿ 1; ಹೌದು 480 ಕೆಳಗೆ ಹೋಗೋದು ಬೇಡ ನನಗದು ಸರಿ ಅನ್ನಿಸುತ್ತೆ

ಪಿ 2; ಹೌದು 480ನೇ ಕಡಿಮೆ ಯಾಕಂದ್ರೆ ತುಂಬಾ ನೋವಾಗುತ್ತೆ

ಪಿ 1; ನಾವು 483 ಹೇಳೋಣ ಯಾಕಂದ್ರೆ ಅವಳು ಬಾರ್ಗಿಂಗ್‌ ಮಾಡ್ತಾಳೆ

ಪಿ 2; 483ಗೆ ಶುರು ಮಾಡಿ 480ಕ್ಕೆ ಮುಗಿಸೋಣ

ಪಿ 1; ಹೌದು 480ಗೆ ಮುಗಿಸೋಣ ನಾವೆಲ್ಲಾ ಒಂದಾಗಿ ಇರೋಣ

ಸರ್ಕಾರ ಮರುನಿಗದಿಗೊಳಿಸಿದ್ದ ದರಕ್ಕಿಂತಲೂ 3 ರು ಕಡಿಮೆ ದರದಲ್ಲಿ ಸರಬರಾಜು ಮಾಡಲು ಮುಂದೆ ಬಂದಿದ್ದ ಕಂಪನಿಗೆ ಆದೇಶ ನೀಡಿದ್ದರೆ 12 ಲಕ್ಷ ಕಿಟ್‌ಗಳಿಗೆ 44.04 ಕೋಟಿ ರು. ಮಾತ್ರ ವೆಚ್ಚವಾಗುತ್ತಿತ್ತು. ಆದರೆ 400 ರು. ದರಕ್ಕೆ ಆದೇಶ ನೀಡಿರುವುದರಿಂದ ಅಂದಾಜು 48 ಕೋಟಿ ರು.ವೆಚ್ಚವಾದಂತಾಗಿದೆ. ಇದರ ಪ್ರಕಾರ 4 ಕೋಟಿ ರು.ಹೆಚ್ಚುವರಿಯಾಗಿ ವೆಚ್ಚ ಮಾಡಿದಂತಾಗಿದೆ.

the fil favicon

SUPPORT THE FILE

Latest News

Related Posts