ಯುವರಾಜಸ್ವಾಮಿಯಿಂದ ಶ್ರೀರಾಮುಲು ಖಾತೆಗೆ 18 ಲಕ್ಷ ರು. ವರ್ಗಾವಣೆ

ಬೆಂಗಳೂರು; ಯುವರಾಜಸ್ವಾಮಿಯಿಂದ ಬಿ ಶ್ರೀರಾಮುಲು ಅವರ ಖಾತೆಗೆ 18 ಲಕ್ಷ ರುಪಾಯಿ ವರ್ಗಾವಣೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಎರಡೂವರೆ ಗಂಟೆಯ ಹಿಂದೆ ದಿ ಫೈಲ್‌ ಪ್ರಕಟಿಸಿದ್ದ ವರದಿಯಲ್ಲಿ ಕೆಲವು ಅಸ್ಪಷ್ಟ ಅಂಶಗಳಿದ್ದವು. ಮತ್ತು ಅದು ತಪ್ಪು ಅಭಿಪ್ರಾಯಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಇದ್ದದ್ದರಿಂದ ಹಾಗೂ ಪತ್ರಿಕೋದ್ಯಮದ ಜವಾಬ್ದಾರಿಯಿಂದ ಆ ವರದಿಯನ್ನು ಹಿಂಪಡೆಯಲಾಗಿದೆ.

ಆರ್‌ಟಿಜಿಎಸ್‌ ಮೂಲಕ 18 ಲಕ್ಷ ವರ್ಗಾವಣೆ

ಯುವರಾಜಸ್ವಾಮಿಯು ಕರ್ನಾಟಕ ಬ್ಯಾಂಕ್‌ನಲ್ಲಿ ಹೊಂದಿದ್ದ ಖಾತೆಯಿಂದ (ಖಾತೆ ಸಂಖ್ಯೆ; 5502000100052301) ಬಿ ಶ್ರೀರಾಮುಲು ಖಾತೆಗೆ (ಖಾತೆ ಸಂಖ್ಯೆ; KARBH19210399488) 2019ರ ಜುಲೈ 29ರಂದು 5 ಲಕ್ಷ ಹಾಗೂ 2019ರ ಆಗಸ್ಟ್‌ 1ರಂದು 13 ಲಕ್ಷ ರು. (ಖಾತೆ ಸಂಖ್ಯೆ ;KARBH19213654613) ಆರ್‌ಟಿಜಿಎಸ್‌ ಮೂಲಕ ಹಣ ವರ್ಗಾವಣೆ ಆಗಿರುವುದು ದೋಷಾರೋಪಣೆ ಪಟ್ಟಿಯಲ್ಲಿ ಲಗತ್ತಿಸಿರುವ ಬ್ಯಾಂಕ್‌ನ ವಹಿವಾಟಿನ ದಾಖಲೆಯಿಂದ ತಿಳಿದು ಬಂದಿದೆ.

ನಮ್ಮಿಂದ ಕಾರ್‌ ಒಂದನ್ನು ಯುವರಾಜ್‌ಸ್ವಾಮಿ ಎಂಬುವರು ಈ ಹಿಂದೆ ಖರೀದಿಸಿದ್ದು, ಖರೀದಿದಾರರು ನನ್ನ ಬ್ಯಾಂಕ್‌ ಖಾತೆಗೆ ಈ ಕಾನೂನುಬದ್ಧ ವಹಿವಾಟಿನ ಹಣವನ್ನು ಜಮಾ ಮಾಡಿದ್ದಾರೆ. ಈ ವಹಿವಾಟು ಕಾನೂನುಬದ್ಧವಾಗಿ ನಡೆದಿದ್ದು ಇದನ್ನು ಬಿಟ್ಟರೆ ಯಾವುದೇ ವಹಿವಾಟು ನಮ್ಮ ನಡುವೆ ನಡೆದಿಲ್ಲ

ಬಿ ಶ್ರೀರಾಮುಲು, ಮಾಜಿ ಸಚಿವ

ಯುವರಾಜಸ್ವಾಮಿ ಮನೆ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಹಲವು ದಾಖಲಾತಿ, ವಿವಿಧ ಸಚಿವರ ಹೆಸರಿನಲ್ಲಿದ್ದ ಲೆಟರ್‌ಹೆಡ್‌ಗಳನ್ನು ವಶಪಡಿಸಿಕೊಂಡಿದ್ದರು. ಇದರಲ್ಲಿ ಜಯ ಕರ್ನಾಟಕ ಸಂಘಟನೆಗೆ ಸೇರಿದ್ದ ಲೆಟರ್‌ಹೆಡ್‌ ಕೂಡ ಇತ್ತು.

ಇದೇ ಲೆಟರ್‌ಹೆಡ್‌ನಲ್ಲಿ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈಗೆ ಭದ್ರತೆ ನೀಡುವ ಸಂಬಂಧ ಗೃಹ ಇಲಾಖೆಗೆ ಕೋರಿರುವ ಬಗ್ಗೆ ಲೆಟರ್‌ಹೆಡ್‌ನಲ್ಲಿ ಇಂಗ್ಲೀಷ್‌ನಲ್ಲಿ ಟೈಪ್‌ ಮಾಡಲಾಗಿತ್ತು. ಬಿ ಶ್ರೀರಾಮುಲು ಅವರ ಹೆಸರಿನಲ್ಲಿದ್ದ ಲೆಟರ್‌ ಹೆಡ್‌ನಲ್ಲಿಯೂ ಮುತ್ತಪ್ಪ ರೈಗೆ ಭದ್ರತೆ ನೀಡುವ ಸಂಬಂಧ ವಿಷಯವನ್ನು ಉಲ್ಲೇಖಿಸಲಾಗಿತ್ತು  ಎಂಬುದು ದೃಢೀಕರಿಸಿದ ದೋಷಾರೋಪಣೆ ಪಟ್ಟಿಯಿಂದ ಗೊತ್ತಾಗಿದೆ.

‘ಬಿ ಶ್ರೀರಾಮುಲು ಹೆಸರಿನಲ್ಲಿರುವ ಲೆಟರ್‌ಹೆಡ್‌ ಪತ್ರದಲ್ಲಿ ಎನ್‌ ಮುತ್ತಪ್ಪ ರೈಗೆ ಗೃಹ ಇಲಾಖೆಯಿಂದ ಭದ್ರತೆಯನ್ನು ನೀಡುವ ಸಂಬಂಧ ಇಂಗ್ಲೀಷ್‌ನಲ್ಲಿ ಟೈಪ್‌ ಮಾಡಿರುವ ಪತ್ರ,’ ಎಂದು ದೋಷಾರೋಪಣೆ ಪಟ್ಟಿಯಲ್ಲಿ  ದಾಖಲೆಯನ್ನು ಲಗತ್ತಿಸಲಾಗಿದೆ.

ಇದಲ್ಲದೆ ಯುವರಾಜಸ್ವಾಮಿ ಮನೆಯಲ್ಲಿ ವಶಪಡಿಸಿಕೊಂಡಿದ್ದ ದಾಖಲಾತಿಗಳಲ್ಲಿ ಮುರುಗೇಶ್‌ ನಿರಾಣಿ, ಉಮೇಶ್‌ ಕತ್ತಿ, ಟಿ ಶಾಮ್‌ಭಟ್‌ ಸೇರಿದಂತೆ ಹಲವು ಗಣ್ಯರ ಹೆಸರಿನಲ್ಲಿದ್ದ ಲೆಟರ್‌ಹೆಡ್‌ಗಳು ಮತ್ತು ದಾಖಲೆಗಳಿದ್ದವು ಎಂಬುದನ್ನು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts