ಯುವರಾಜಸ್ವಾಮಿ ಬಳಿ ಕತ್ತಿ, ಶ್ರೀರಾಮುಲು, ಪ್ರಮೋದ್‌ ಮಧ್ವರಾಜ್‌ ಬಯೋಡೇಟಾ ಪತ್ತೆ

ಬೆಂಗಳೂರು; ನಿವೃತ್ತ ನ್ಯಾಯಾಧೀಶರು, ಗಣ್ಯ ವ್ಯಕ್ತಿಗಳು ಮತ್ತು ಪ್ರಭಾವಿಗಳಿಗೆ ವಿವಿಧ ರೀತಿಯ ಆಮಿಷವೊಡ್ಡಿ ಅವರಿಂದ ಕೋಟ್ಯಂತರ ರು. ಹಣವನ್ನು ಲಪಟಾಯಿಸಿರುವ ಆರೋಪಕ್ಕೆ ಗುರಿಯಾಗಿ ವಿಚಾರಣೆ ಎದುರಿಸುತ್ತಿರುವ ವಂಚಕ ಯುವರಾಜಸ್ವಾಮಿ ಮನೆಯಲ್ಲಿದ್ದ ವಶಪಡಿಸಿಕೊಂಡಿದ್ದ ದಾಖಲಾತಿಗಳಲ್ಲಿ ಹಿಂದಿನ ಸಚಿವ ಉಮೇಶ್‌ ಕತ್ತಿ, ರಮೇಶ್‌ ಕತ್ತಿ ಸ್ವ ವಿವರಗಳನ್ನೊಳಗೊಂಡ ಪುಸ್ತಕ ಮತ್ತು ಬಿ ಶ್ರೀರಾಮುಲು ಅವರ ಲೆಟರ್‌ ಹೆಡ್‌ ಕೂಡ ಇದ್ದವು!

ಅಷ್ಟು ಮಾತ್ರವಲ್ಲ ಪ್ರಮೋದ್‌ ಮಧ್ವರಾಜ್‌ ಸೇರಿದಂತೆ ಹಲವು ಪ್ರಭಾವಿ ರಾಜಕಾರಣಿಗಳು ಹಿರಿಯ ಐಎಎಸ್‌ ಅಧಿಕಾರಿಗಳು, ಲೋಕಸೇವಾ ಆಯೋಗದ ಅಧ್ಯಕ್ಷರಾಗಿದ್ದ ಶಾಮ್‌ ಭಟ್‌ ಅವರ ವೈಯಕ್ತಿಕ ಮತ್ತು ಸೇವಾ ವಿವರ ಇರುವ ದಾಖಲಾತಿಗಳ ನಕಲು ಪ್ರತಿಗಳೂ ಇದ್ದವು.

ವಂಚಕ ಯುವರಾಸಸ್ವಾಮಿಯಿಂದ ವಶಪಡಿಸಿಕೊಂಡಿದ್ದ ದಾಖಲಾತಿಗಳಲ್ಲಿ ಮುರುಗೇಶ್‌ ನಿರಾಣಿ ಅವರ ಸ್ವ ವಿವರಗಳನ್ನೊಳಗೊಂಡ ಪುಸ್ತಕ ಇತ್ತು ಎಂಬ ಮಾಹಿತಿ ಹೊರಬಿದ್ದ ಬೆನ್ನಲ್ಲೇ ಬಿಜೆಪಿಯ ಮತ್ತೊಬ್ಬ ಮುಖಂಡ ಮತ್ತು ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಉಮೇಶ್‌ ಕತ್ತಿ ಅವರ ಸ್ವ ವಿವರನ್ನೊಳಗೊಂಡ ದಾಖಲಾತಿಗಳು ಇದ್ದವು ಎಂಬ ವಿಚಾರ ಇದೀಗ ಮುನ್ನೆಲೆಗೆ ಬಂದಿದೆ.

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಬಿ ಎಸ್‌ ಇಂದ್ರಕಲಾ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯುವರಾಜಸ್ವಾಮಿ ಮತ್ತು ಆತನ ಪತ್ನಿ ಪ್ರೇಮಾ ಅವರ ಬಳಿ ಇದ್ದ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದ ಸಿಸಿಬಿ ಪೊಲೀಸರು ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯಲ್ಲಿ ಈ ಎಲ್ಲಾ ವಿವರಗಳನ್ನೂ ಉಲ್ಲೇಖಿಸಿರುವುದು ತಿಳಿದು ಬಂದಿದೆ. ದೋಷಾರೋಪಣೆ ಪಟ್ಟಿಯ ದೃಢೀಕೃತ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಉಮೇಶ್‌ ವಿಶ್ವನಾಥ ಕತ್ತಿ ಮತ್ತು ರಮೇಶ್‌ ವಿಶ್ವನಾಥ ಕತ್ತಿ ಅವರ ಬಯೋಡೇಟಾ, ಅವರ ಭಾವಚಿತ್ರದ ಮುಖಪುಟ, ಪ್ರಮೋದ್‌ ಮಧ್ವರಾಜ್‌ ಹೆಸರಿನ ಲೆಟರ್‌ ಹೆಡ್‌ ಇರುವ 2 ಪತ್ರಗಳಲ್ಲಿ ಸಹಿ ಮತ್ತು ಇಂಗ್ಲೀಷ್‌ ಭಾಷೆಯಲ್ಲಿ ಟೈಪಿಂಗ್‌ ಮಾಡಿದ್ದ ಬರವಣಿಗೆಯ ಪ್ರತಿ, 2017-18ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರ್ಸ್‌ ಹುದ್ದೆಗೆ ಸಲ್ಲಿಸಿದ್ದ ಅರ್ಜಿ ಜೆರಾಕ್ಸ್‌ ಪ್ರತಿಗಳೂ ಇದ್ದವು ಎಂದು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೆ ಜಯಕರ್ನಾಟಕ ಸಂಘಟನೆಯ ಲೆಟರ್‌ ಹೆಡ್‌ ಇರುವ ಪತ್ರದಲ್ಲಿ ಗೃಹ ಇಲಾಖೆಯಿಂದ ಮುತ್ತಪ್ಪ ರೈ ಅವರಿಗೆ ಭದ್ರತೆ ಕೋರಿದ್ದ ಇಂಗ್ಲಿಷ್‌ನಲ್ಲಿ ಟೈಪ್‌ ಮಾಡಿರುವ ಮತ್ತು ಸಹಿ ಇರುವ ಚಿತ್ರ ಮತ್ತು ಬಿ ಶ್ರೀರಾಮುಲು ಸಹಿ ಇರುವ ಲೆಟರ್‌ಹೆಡ್‌ ಇರುವ ಪತ್ರದಲ್ಲಿ ಎನ್‌ ಮುತ್ತಪ್ಪ ರೈಗೆ ಗೃಹ ಇಲಾಖೆಯಿಂದ ಭದ್ರತೆ ಕೋರಿ ಇಂಗ್ಲೀಷ್‌ನಲ್ಲಿ ಟೈಪ್‌ ಮಾಡಿದ ಪತ್ರವೂ ಇತ್ತು ಎಂಬುದು ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.

ಹಾಗೆಯೇ ಡಾ ಟಿ ಶ್ಯಾಮ್‌ ಭಟ್‌ ಅವರ ವೈಯಕ್ತಿಕ ಮತ್ತು ಸೇವಾ ವಿವರ ಇರುವ ಇಂಗ್ಲೀಷ್‌ನಲ್ಲಿ ಟೈಪ್‌ ಮಾಡಿರುವ ದಾಖಲಾತಿ ನಕಲು, ಭಾರತೀಯ ಜನತಾಪಾರ್ಟಿ ಹೆಸರಿನ ಲೆಟರ್‌ ಹೆಡ್‌ ಪತ್ರದಲ್ಲಿ ವಸಂತ್‌ ಎಂ ದಳವಾಯಿ ಅವರು ಬೆಳಗಾವಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ಕೋರಿ ಇಂಗ್ಲೀಷ್‌ನಲ್ಲಿ ಟೈಪ್‌ ಮಾಡಿಸಿರುವ ಪತ್ರ ಮತ್ತು ವಸಂತ ಎಂ ದಳವಾಯಿ ಅವರ ರೆಸ್ಯೂಮ್‌ ಕೂಡ ಇತ್ತು ಎಂಬುದು ಗೊತ್ತಾಗಿದೆ.

ಇನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹುದ್ದೆಗೆ ಪ್ರೊ ಡಾ ಇ ಟಿ ಪುಟ್ಟಯ್ಯ ಹೆಸರಿನಲ್ಲಿರುವ ಲೆಟರ್‌ ಹೆಡ್‌ನಲ್ಲಿ ಇಂಗ್ಲೀಷ್‌ನಲ್ಲಿ ಟೈಪ್‌ ಮಾಡಿದ್ದ ಪ್ರತಿ, ಎಂ ಬಿ ಶಿವಪ್ಪ ಹೆಸರಿನಲ್ಲಿದ್ದ ಲೆಟರ್‌ ಹೆಡ್‌ನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷ ಸ್ಥಾನಕ್ಕೆ ಕೋರಿ ಸಲ್ಲಿಸಿದ್ದ ದಾಖಲಾತಿಗಳು ಇದ್ದವು ಎಂಬ ಮಾಹಿತಿ ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.

ಕಲ್ಪವೃಕ್ಷ ಎಂದು ಇಂಗ್ಲೀಷ್‌ ಭಾಷೆಯಲ್ಲಿ ಬರೆದಿದ್ದ ಸ್ಪೈರಲ್‌ ಬೈಂಡಿಂಗ್‌ ಪುಸ್ತಕ ಮತ್ತು ಇದರ ಮುಖಪುಟದಲ್ಲಿ ಮುರುಗೇಶ್‌ ಆರ್‌ ನಿರಾಣಿ ಅವರ ಹೆಸರು ಮತ್ತು ಭಾವಚಿತ್ರವೂ ಇದೆ ಎಂದು ದೋಷಾರೋಪಣೆ ಪಟ್ಟಿಯಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ಒದಗಿಸಿದ್ದರು.

ಅದೇ ರೀತಿ ಮುರುಗೇಶ್‌ ಆರ್‌ ನಿರಾಣಿ ಹೆಸರಿನ ಲೆಟರ್‌ ಹೆಡ್‌ ಇರುವ 11 ಪತ್ರಗಳಲ್ಲಿ ಸಹಿ ಹಾಗೂ ಇಂಗ್ಲೀಷ್‌ ಭಾಷೆಯಲ್ಲಿ ಟೈಪಿಂಗ್‌ ಮತ್ತು ಬರವಣಿಗೆಗಳಿವೆ ಎಂದು ದೋಷಾರೋಪಣೆ ಪಟ್ಟಿಯಲ್ಲಿ ಮಾಹಿತಿ ಒದಗಿಸಿರುವ ಪೊಲೀಸರು ಬರವಣಿಗೆಯಲ್ಲೇನಿತ್ತು , ಲೆಟರ್‌ ಹೆಡ್‌ಗಳಲ್ಲಿ ಯಾರ ಹೆಸರಿದ್ದವು ಎಂಬ ವಿವರಗಳನ್ನು ನಮೂದಿಸಿಲ್ಲ.

ವಂಚಕ ಯುವರಾಜಸ್ವಾಮಿ ಬಂಧನವಾದ ನಂತರ ಮುರುಗೇಶ್‌ ನಿರಾಣಿ ಅವರ ಹೆಸರೂ ತಳಕು ಹಾಕಿಕೊಂಡಿತ್ತು. ನಿರಾಣಿ ಅವರು ನಟಿ ರಾಧಿಕಾ ಕುಮಾರಸ್ವಾಮಿ ಅವರೊಂದಿಗಿದ್ದ ಭಾವಚಿತ್ರಗಳು ಹರಿದಾಡಿದ್ದವು. ರಾಧಿಕಾ ಕುಮಾರಸ್ವಾಮಿ ಅವರನ್ನು ನಿರಾಣಿ ಅವರಿಗೆ ಭೇಟಿ ಮಾಡಿಸಿದ್ದೇ ಯುವರಾಜಸ್ವಾಮಿ ಎಂಬ ಮಾತು ಕೇಳಿ ಬಂದಿತ್ತು. ಆ ಸಂದರ್ಭದಲ್ಲಿ ನಿರಾಣಿ ಅವರು ಈ ಮಾತನ್ನು ಅಲ್ಲಗಳೆದಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts