ಅದಾನಿ ಕಂಪನಿಯಿಂದ ಅಕ್ರಮ ಹಣ ಸ್ವೀಕಾರ; ಬೇಲೇಕೇರಿಯ 24 ಅಧಿಕಾರಿಗಳು ದೋಷಮುಕ್ತ

ಬೆಂಗಳೂರು; ಬೇಲೆಕೇರಿ ಬಂದರಿನ ಮೂಲಕ ಕಬ್ಬಿಣ ಅದಿರನ್ನು ವಿದೇಶಕ್ಕೆ ರಫ್ತು ಮಾಡುತ್ತಿದ್ದ ಸಂಸ್ಥೆಗಳಲ್ಲಿ ಒಂದಾದ ಅಹಮದಾಬಾದ್ ಮೂಲದ ಅದಾನಿ ಎಂಟರ್ ಪ್ರೈಸಸ್ ಸಂಸ್ಥೆಯಿಂದ ಅಕ್ರಮವಾಗಿ ಹಣ ಪಡೆದಿದ್ದರು ಎಂಬ ಆರೋಪಕ್ಕೆ ಗುರಿಯಾಗಿದ್ದ ಕ್ಯಾಪ್ಟನ್‌ ಆರ್‌ ಮೋಹನ್‌ ಸೇರಿದಂತೆ 24 ಅಧಿಕಾರಿಗಳನ್ನು ಬಿಜೆಪಿ ಸರ್ಕಾರವು ದೋಷಮುಕ್ತಗೊಳಿಸಿದೆ.

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಿಂದ ಬಿಡುಗಡೆಗೊಳ್ಳುವ 18 ದಿನದ ಮೊದಲೇ ಅಂದರೆ 2021ರ ಜುಲೈ 8ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 24 ಅಧಿಕಾರಿಗಳನ್ನು ದೋಷಮುಕ್ತಗೊಳಿಸಿ ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಅಕ್ರಮ ಗಣಿಗಾರಿಕೆ ಮತ್ತು ಅಕ್ರಮವಾಗಿ ಅದಿರು ಸಾಗಾಣಿಕೆ ಕುರಿತು ಹಿಂದಿನ ಲೋಕಾಯುಕ್ತ ಸಂತೋಷ್‌ ಹೆಗ್ಡೆ ಅವರು ಸರ್ಕಾರಕ್ಕೆ ನೀಡಿದ್ದ ತನಿಖಾ ವರದಿಯನ್ನು ಬಿಜೆಪಿ ಸರ್ಕಾರವೂ ಕಸದ ಬುಟ್ಟಿಗೆ ತಳ್ಳಿದಂತಾಗಿದೆ. ದೋಷಮುಕ್ತಗೊಳಿಸುವ ಆದೇಶ ಹೊರಡಿಸುವ ಮುನ್ನ ಲೋಕಾಯುಕ್ತ ವಿಶೇಷ ತನಿಖಾ ತಂಡದ ಅಭಿಪ್ರಾಯ ಕೋರಿದ್ದ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಗೆ ಎಸ್‌ಐಟಿಯು 24 ಅಧಿಕಾರಿ ನೌಕರರ ವಿರುದ್ಧ ಯಾವುದೇ ಪ್ರಕರಣಗಳು ಬಾಕಿ ಇರುವುದಿಲ್ಲ ಎಂದು ನೀಡಿದ್ದ ಮಾಹಿತಿಯನ್ನೇ ಮುಂದಿರಿಸಿಕೊಂಡು ಅವರನ್ನು ದೋಷಮುಕ್ತಗೊಳಿಸಿರುವುದು ಆದೇಶದಿಂದ ತಿಳಿದು ಬಂದಿದೆ.

ಲೋಕಾಯುಕ್ತರು ನೀಡಿದ್ದ ವರದಿ ಆಧರಿಸಿ ಆರೋಪಿತ ಅಧಿಕಾರಿ, ನೌಕರರ ವಿರುದ್ಧ ದುರ್ನಡತೆಗಾಗಿ ಜಂಟಿ ಇಲಾಖೆ ವಿಚಾರಣೆ ನಡೆಸಿದ್ದ ಧಾರವಾಡದ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಂ ಎನ್‌ ಗದಗ್‌ ಮತ್ತು ಪಿಡಬ್ಲ್ಯೂಡಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್‌ ಎಸ್‌ ವಿರಕ್ತ ಮಠ ಅವರ ಜಂಟಿ ವಿಚಾರಣೆ ತಂಡದ ಶಿಫಾರಸ್ಸಿನ ಮೇರೆಗೆ 24 ಅಧಿಕಾರಿ, ನೌಕರರನ್ನು ದೋಷಮುಕ್ತಗೊಳಿಸಿರುವುದು ತಿಳಿದು ಬಂದಿದೆ.

ಆರೋಪ ಸಾಬೀತಾಗಲಿಲ್ಲವೇ?

‘ಬೇಲೇಕೇರಿ ಬಂದರಿನಲ್ಲಿ ಕಬ್ಬಿಣದ ಅದರಿನ್ನು ಅನಧಿಕೃತವಾಗಿ ರಫ್ತು ಮಾಡಲು ಅವಕಾಶ ಕಲ್ಪಿಸಲು ಬಂದರು ಬಳಕೆದಾರ ಸಂಸ್ಥೆಯಾದ ಅಹ್ಮದಾಬಾದ್‌ನ ಅದಾನಿ ಎಂಟರ್‌ಪ್ರೈಸೆಸ್‌ನಿಂದ ಅಕ್ರಮ ಹಣ ಪಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಈ ಕೆಳಕಂಡ ಅಧಿಕಾರಿ ನೌಕರರ ಮೇಲೆ ನಡೆಸಿದ ಜಂಟಿ ಇಲಾಖಾ ವಿಚಾರಣೆಯಲ್ಲಿ ಆರೋಪಗಳು ಸಾಬೀತಾಗಿರುವುದಿಲ್ಲವೆಂದು ವಿಚಾರಣಾ ವರದಿಯಲ್ಲಿ ನಿರ್ಣಯಕ್ಕೆ ಬಂದಿರುವ ಹಿನ್ನೆಲೆಯಲ್ಲಿ ವಿಚಾರಣಾ ವರದಿಯನ್ನು ಅಂಗೀಕರಿಸಿ ನಿರ್ದೇಶಕ ಕ್ಯಾಪ್ಟನ್‌ ಆರ್‌ ಮೋಹನ್‌ ಸೇರಿದಂತೆ 24 ಮಂದಿ ಅಧಿಕಾರಿ, ನೌಕರರನ್ನು ದೋಷಮುಕ್ತಗೊಳಿಸಿ ಆದೇಶಿಸಿದೆ,’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಹೆಚ್‌ ಕೆ ಶಾಂತರಾಜು ಅವರು 2021ರ ಜುಲೈ 8ರಂದು ಆದೇಶ ಹೊರಡಿಸಿದ್ದಾರೆ.

ಅದಾನಿ ಎಂಟರ್‌ಪ್ರೈಸೆಸ್‌ನಿಂದ ಅಕ್ರಮವಾಗಿ ಹಣ ಪಡೆದಿರುವ ಪ್ರಕರಣದಲ್ಲಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ನಿರ್ದೇಶಕ ಕ್ಯಾಪ್ಟನ್‌ ಆರ್‌ ಮೋಹನ್‌ ಒಳಗೊಂಡಂತೆ ಇತರೆ ಅಧಿಕಾರಿ/ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕರ್ನಾಟಕ ಸಿವಿಲ್‌ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು 1957ರ ನಿಯಮ 13ರ ಅನ್ವಯ ಜಂಟಿ ಇಲಾಖೆ ವಿಚಾರಣೆ ನಡೆಸಲಾಗಿತ್ತು.

ದಂಡನೆ ವಿಧಿಸಲು ಆದೇಶಿಸಿ ಕಡೆಗೆ ದೋಷಮುಕ್ತಗೊಳಿಸಿದ್ದೇಕೆ?

ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರು ಸಲ್ಲಿಸಿದ್ದ ವರದಿಯಲ್ಲಿ ಬೇಲೇಕೇರಿ ಬಂದರಿನಲ್ಲಿ ಕಬ್ಬಿಣದ ಅದಿರು ಅಕ್ರಮ ಸಾಗಾಣಿಕೆಯಲ್ಲಿ ನಿರ್ದೇಶಕ ಕ್ಯಾಪ್ಟನ್‌ ಆರ್‌ ಮೋಹನ್‌ ಸೇರಿದಂತೆ ಇತರೆ ಅಧಿಕಾರಿ, ಸಿಬ್ಬಂದಿ ಭಾಗಿಯಾಗಿ ಅವ್ಯವಹಾರ ನಡೆಸುವ ಮೂಲಕ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ್ದರು ಎಂಬ ಆರೋಪಿಸಲಾಗಿತ್ತು.

ಈ ಅಧಿಕಾರಿ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಪಿಡಬ್ಲ್ಯುಡಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯನ್ನು ಶಿಸ್ತು ಪ್ರಾಧಿಕಾರಿಯನ್ನಾಗಿ ನೇಮಿಸಿತ್ತು. ಅಲ್ಲದೆ ನಿವೃತ್ತ ನಿರ್ದೇಶಕ ಕ್ಯಾಪ್ಟನ್‌ ಆರ್‌ ಮೋಹನ್‌ ಅವರಿಗೆ ದಂಡನೆ ವಿಧಿಸಲು ಉದ್ದೇಶಿಸಿದ್ದಲ್ಲಿ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯು ಅನುಮೋದನೆಯೊಡನೆ ಯಾವುದೇ ದಂಡನೆ ವಿಧಿಸಬಹುದು ಎಂದು ಹೇಳಿತ್ತು. ಆದರೆ ಅದೇ ಇಲಾಖೆಯು ಜಂಟಿ ಇಲಾಖೆ ವಿಚಾರಣೆ ವರದಿ ಆಧರಿಸಿ ಆರೋಪಿತ ಎಲ್ಲಾ ಅಧಿಕಾರಿ, ನೌಕರರನ್ನು ದೋಷಮುಕ್ತಗೊಳಿಸಿರುವುದು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ದೋಷಮುಕ್ತಗೊಂಡ ಅಧಿಕಾರಿ ನೌಕರರ ಪಟ್ಟಿ

ಕ್ಯಾಪ್ಟನ್‌ ಆರ್‌ ಮೋಹನ್‌ (ನಿರ್ದೇಶಕರು)
ಕ್ಯಾಪ್ಟನ್‌ ಸಿ ಸ್ವಾಮಿ (ಬಂದರು ಅಧಿಕಾರಿ)
ಟಿ ಎಸ್‌ ರಾಠೋಡ್‌ (ಕಾರ್ಯನಿರ್ವಾಹಕ ಇಂಜಿನಿಯರ್‌)
ಯಜ್ಞಕುಮಾರ್‌ (ಜಲ ಮೋಜಣಿದಾರರು)
ಮಹೇಶ್‌ ಜೆ ಬಿಲಿಯೆ (ಉಪ ಬಂದರು ಸಂರಕ್ಷಣಾಧಿಕಾರಿ)
ಟಿ ಆರ್‌ ನಾಯ್ಕ (ನಿವೃತ್ತ ಬಂದರು ಸಂರಕ್ಷಣಾಧಿಕಾರಿ)
ಯೋಗೇಶ್‌ ಎ ಶೆಟ್ಟಿ (ಉಪ ಬಂದರು ಸಂರಕ್ಷಣಾಧಿಕಾರಿ)
ಡಿ ಸಿ ಪರುಳೇಕರ ( ಉಪ ಬಂದರು ಸಂರಕ್ಷಣಾಧಿಕಾರಿ)
ಗೌಸ್‌ ಅಲಿ (ಸಹಾಯಕ ಬಂದರು ಸಂರಕ್ಷಣಾಧಿಕಾರಿ)
ಸಾಯಿನಾಥ ವಿ ಥಾಮಸೆ (ಸಹಾಯಕ ಬಂದರು ಸಂರಕ್ಷಣಾಧಿಕಾರಿ)
ರಾಮಚಂದ್ರನಾಯಕ, ಸಹಾಯಕ ದೀಪಪಾಲಕ
ಎಂ ಯು ಆಚಾರಿ, ಲಾಸ್ಕರ
ಎನ್‌ ಎಂ ಗಾಂವಕರ , ಲಾಸ್ಕರ
ಎಂ ಆರ್‌ ಹರಿಕಂತ್ರ, ನಾವಿಕ
ಜೆ ಅವರಸೇಕರ, ನಾವಿಕ
ರಾಜು ಕೆ ಕುಂದರ, ಲಾಸ್ಕರ
ಆರ್‌ ಎಂ ನಾಯ್ಕ, ಲಾಸ್ಕರ
ಕೆ ವಿ ನಾಯ್ಕ ಲಾಸ್ಕರ
ಪಿ ಎಸ್‌ ನಾಯ್ಕ ಲಾಸ್ಕರ
ಗಣು ಎನ್‌ ಅಗೇರ, ನಾವಿಕ
ಸಾಯಿನಾಥ್‌ ಕೇರಕರ, ಸಾರಂಗ-3
ಮಹೇಶ್‌ ಎಲ್‌ ಹರಿಕಂತ್ರ ಸಾರಂಗ-3

ಈ ಎಲ್ಲಾ ಅಧಿಕಾರಿಗಳು ಅದಾನಿ ಎಂಟರ್‌ಪ್ರೈಸೆಸ್‌ನಿಂದ ಅಕ್ರಮ ಹಣ ಪಡೆದಿದ್ದರು ಎಂದು ಹಿಂದಿನ ಲೋಕಾಯುಕ್ತರು ತನಿಖೆಯಲ್ಲಿ ಸಾಬೀತುಪಡಿಸಿದ್ದರು. ಆದರೆ ಜಂಟಿ ಇಲಾಖೆ ವಿಚಾರಣೆಯಲ್ಲಿ ಈ ಯಾವ ಆರೋಪಗಳೂ ಸಾಬೀತಾಗಿರಲಿಲ್ಲ. ಆರೋಪಿತ ಅಧಿಕಾರಿ, ನೌಕರರು ನೀಡಿದ್ದ ರಕ್ಷಣಾತ್ಮಕ ಹೇಳಿಕೆ, ಪ್ರಶ್ನಾವಳಿ ವಿವರಣೆ ಮತ್ತು ಮೌಖಿಕ ಪ್ರತಿ ವಾದಗಳನ್ನಾಧರಿಸಿ ಜಂಟಿ ಇಲಾಖೆ ವಿಚಾರಣಾಧಿಕಾರಿಗಳು ಅಧಿಕಾರಿ ನೌಕರರ ವಿರುದ್ಧ ಆರೋಪಗಳು ರುಜುವಾತಾಗಿಲ್ಲ ಎಂದು ವರದಿ ಸಲ್ಲಿಸಿದ್ದರು.

ಕರ್ನಾಟಕ ಸೇರಿದಂತೆ ದೇಶದ ಯಾವುದೇ ಭಾಗದಲ್ಲಿ ತಾವು ಸ್ವಂತದ ಕಬ್ಬಿಣದ ಅದಿರು ಕಂಪೆನಿ ಹೊಂದಿಲ್ಲ ಅಥವಾ ಅದಿರು ಕಂಪೆನಿ ಸಂಚಾಲನೆ ನಡೆಸುತ್ತಿಲ್ಲ ಎಂದು ಅದಾನಿ ಎಂಟರ್‌ ಪ್ರೈಸಸ್ ಸ್ಪಷ್ಟನೆ ನೀಡಿದ್ದನ್ನು ಸ್ಮರಿಸಬಹುದು.

ಕರ್ನಾಟಕದ ಬೇಲೇಕೇರಿ ಬಂದರಿನಲ್ಲಿ ಮುಟ್ಟುಗೋಲು ಹಾಕಿದ್ದ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅದಾನಿ ಕಂಪನಿಯನ್ನು ಆರೋಪಿಯನ್ನಾಗಿಸಿ ಸಿಇಸಿ ಸುಪ್ರೀಂಕೋರ್ಟೀಗೆ ವರದಿ ಸಲ್ಲಿಸಿತ್ತು.

ಧಾರವಾಡ ಮೂಲದ ಎನ್‌ಜಿಒ ಸಮಾಜ ಪರಿವರ್ತನಾ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಕರ್ನಾಟಕದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ತನಿಖೆಗೆ ಸುಪ್ರೀಂ ಕೋರ್ಟು ಕೇಂದ್ರೀಯ ಉನ್ನತಾಧಿಕಾರ ಸಮಿತಿ (ಸಿಇಸಿ) ರಚಿಸಿತ್ತು. ಈ ಸಮಿತಿ ತನ್ನ ವರದಿಯಲ್ಲಿ ಸಿಬಿಐ ತನಿಖೆಗೆ ಶಿಫಾರಸು ಮಾಡಿತ್ತು. ಈ ಶಿಫಾರಸಿನಲ್ಲಿ ಅದಾನಿ ಎಂಟರ್‌ಪ್ರೈಸೆಸ್ ಸಹಿತ ಅಕ್ರಮವಾಗಿ ಅದಿರು ಸಾಗಾಟ ಮಾಡಿರುವ ಒಟ್ಟು ನಾಲ್ಕು ಕಂಪೆನಿಗಳ ಮೇಲೆ ತನಿಖೆಗೆ ಸೂಚಿಸಲಾಗಿತ್ತು.

ಒಟ್ಟು 850,000 ಮಟ್ರಿಕ್ ಟನ್ ನಷ್ಟು ಕಬ್ಬಿಣ ಅದಿರು ಅಕ್ರಮವಾಗಿ ರಫ್ತಾಗಿದೆ ಎಂಬ ಆರೋಪವನ್ನು ಅದಾನಿ ಸೇರಿದಂತೆ ನಾಲ್ಕು ಕಂಪನಿಗಳ ಮೇಲೆ ಹೊರಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts