ದುಪ್ಪಟ್ಟು ದರದಲ್ಲಿ ಪಿಪಿಇ ಕಿಟ್‌ ಖರೀದಿ; ಬೊಕ್ಕಸಕ್ಕೆ 4 ಕೋಟಿ ನಷ್ಟ

ಬೆಂಗಳೂರು; ಕೋವಿಡ್‌ ಮೊದಲ ಅಲೆಯಲ್ಲಿ ಪಿಪಿಇ ಕಿಟ್‌ ಖರೀದಿ ಸಂಬಂಧ ನಡೆದಿದ್ದ ಅಕ್ರಮ ಪ್ರಕರಣಗಳ ಕುರಿತು ಲೋಕಾಯುಕ್ತ ಸಂಸ್ಥೆಯಲ್ಲಿ ವಿಚಾರಣೆ ನಡೆಯುತ್ತಿರುವ ಹೊತ್ತಿನಲ್ಲೇ ಕೋವಿಡ್‌ 2ನೇ ಅಲೆಯಲ್ಲಿಯೂ ಪಿಪಿಇ ಕಿಟ್‌ ಖರೀದಿಯಲ್ಲಿ ಅಕ್ರಮಗಳಿಗೆ ಕಡಿವಾಣ ಬಿದ್ದಿಲ್ಲ.

ಆರಂಭದಲ್ಲಿ ನೆಪ ಮಾತ್ರಕ್ಕೆ ದರ ಸಂಧಾನ ಸಭೆ ನಡೆಸಿರುವ ಅಧಿಕಾರಿಗಳು ಕಡಿಮೆ ದರ ನಮೂದಿಸಿದ್ದ ಉತ್ಪಾದಕ ಕಂಪನಿಗಳನ್ನು ಖರೀದಿ ಪ್ರಕ್ರಿಯೆಯಿಂದಲೇ ಹೊರಗಿಟ್ಟು ದುಬಾರಿ ದರ ನಮೂದಿಸಿರುವ ಕಂಪನಿಯಿಂದಲೇ ಕಿಟ್‌ಗಳನ್ನು ಖರೀದಿಸಿರುವುದು ಬಹಿರಂಗವಾಗಿದೆ. ನಿಗಮದ ಅಧಿಕಾರಿಗಳ ಈ ನಡೆಯಿಂದ ಬೊಕ್ಕಸಕ್ಕೆ ಅಂದಾಜು 4.00 ಕೋಟಿ ರು. ನಷ್ಟವಾಗಿದೆ. ಈ ನಷ್ಟಕ್ಕೆ ನಿಗಮದ ನಿರ್ದೇಶಕರಾದ ಓಂ ಪ್ರಕಾಶ್‌ ಪಾಟೀಲ್, ನರಹಟ್ಟಿ ಮತ್ತು ಪಿಪಿಇ ಕಿಟ್‌ ಖರೀದಿ ಸಮಿತಿ ಸದಸ್ಯ ಪ್ರವೀಣ್‌ ಕಾರಣರು ಎಂದು ತಿಳಿದು ಬಂದಿದೆ.

ಆದರೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಐಎಎಸ್‌ ಅಧಿಕಾರಿ ಲತಾಕುಮಾರಿ ಮತ್ತು ಮತ್ತು ಹಿಂದಿನ ಸಚಿವ ಡಾ ಕೆ ಸುಧಾಕರ್‌ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ಗೆ ದಾಖಲೆಗಳು ಲಭ್ಯವಾಗಿವೆ.

ಪ್ರಕರಣದ ವಿವರ

ಕೋವಿಡ್‌ 2ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಕಾರ್ಯಕರ್ತರಿಗೆ ವಿತರಿಸಲೆಂದು 12 ಲಕ್ಷ ಪಿಪಿಇ ಕಿಟ್‌ಗಳನ್ನು ಖರೀದಿಸಲು 2021ರ ಏಪ್ರಿಲ್‌ 26ರಂದು ದರ ಪಟ್ಟಿ ಆಹ್ವಾನಿಸಿತ್ತು. ಇದರಲ್ಲಿ ಭಾಗವಹಿಸಿದ್ದ ಬಿಡ್‌ದಾರರ ಪೈಕಿ ನಿಗಮವು ಒಟ್ಟು 7 ಬಿಡ್‌ದಾರರನ್ನು ಆಯ್ಕೆಪಟ್ಟಿ ತಯಾರಿಸಿತ್ತು. ಈ ಪೈಕಿ ಕಿಟ್‌ವೊಂದಕ್ಕೆ 495 ರು. ನಿಗದಿಪಡಿಸಿದ್ದ ಎಚ್‌ ಎನ್‌ ಝಡ್‌ ಅಪರೇಲ್ಸ್‌ ಕಂಪನಿ ಎಲ್‌ 1 ಸ್ಥಾನ ಪಡೆದಿತ್ತು.

ಮೊದಲ ದರ ಸಂಧಾನ ಸಭೆ ವಿಫಲ

ಈ ದರ ದುಬಾರಿ ಎಂದಿದ್ದ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು 2021ರ ಜೂನ್ 14ರಂದು ಜೂಮ್‌ ಸಭೆ ನಡೆಸುವ ಮೂಲಕ ಮೊದಲ ದರ ಸಂಧಾನ ಪ್ರಕ್ರಿಯೆಗೆ ಬಿಡ್‌ದಾರರನ್ನು ಆಹ್ವಾನಿಸಿತ್ತು. ಇದೇ ಸಭೆಯಲ್ಲಿ ನಿಗಮವು ಕಿಟ್‌ವೊಂದಕ್ಕೆ 370 ರು. ನಂತೆ ದರವನ್ನು ಮರು ನಿಗದಿಗೊಳಿಸಿತ್ತು. ಇದೇ ದರಕ್ಕೆ ಹೊಂದಾಣಿಕೆ ಮಾಡಿದ ಕಂಪನಿಗೆ ಖರೀದಿ ಆದೇಶ ನೀಡುವುದಾಗಿ ನಿಗಮವು ಸಭೆಯಲ್ಲಿ ಹೇಳಿತ್ತು. ಆದರೆ ಯಾವ ಬಿಡ್‌ದಾರರು ಸರ್ಕಾರ ನಿಗದಿಪಡಿಸಿದ್ದ ದರವನ್ನು ಒಪ್ಪಿರಲಿಲ್ಲ.

ಮೊದಲ ದರ ಸಂಧಾನ ಸಭೆ ವಿಫಲವಾಗಿದ್ದರೂ ಮರು ನಿಗದಿಪಡಿಸಿದ್ದ ದರಕ್ಕೆ ಸರ್ಕಾರವು ಬದ್ಧವಾಗಿತ್ತು. ಆದರೆ ಬಿಡ್‌ದಾರರು ಒಪ್ಪದ ಕಾರಣ ನಿಗಮವು 2021ರ ಜೂನ್‌ 21ರಂದು 2ನೇ ಬಾರಿಗೆ ದರ ಸಂಧಾನ ಸಭೆ ನಡೆಸಿತ್ತು. 370 ರು. ದರಕ್ಕೆ ಹೊಂದಾಣಿಕೆ ಮಾಡಿ ಕಿಟ್‌ಗಳನ್ನು ಸರಬರಾಜು ಮಾಡುವ ಸಂಬಂಧ ಎಲ್ಲಾ ಬಿಡ್‌ದಾರರಿಗೂ ಈ ಮೇಲ್‌ ಮೂಲಕ ಸಂದೇಶವನ್ನೂ ರವಾನಿಸಿತ್ತು ಎಂದು ಗೊತ್ತಾಗಿದೆ.

ಮೊದಲ ದರಪಟ್ಟಿಯಲ್ಲಿ ಎಲ್‌ 1 ಆಗಿದ್ದ ಎಚ್‌ ಎನ್‌ ಝಡ್‌ ಕಂಪನಿ 470 ರು. ನಮೂದಿಸಿತ್ತು. ವಿಶೇಷ ಎಂದರೆ ಮೊದಲ ಬಿಡ್‌ನಲ್ಲಿ ಎಲ್‌ 1 ಆಗಿದ್ದ ಎಚ್‌ ಎನ್‌ ಝಡ್‌ ಕಂಪನಿಯು ಕೇವಲ 25 ರು.ಗಳನ್ನು ಕಡಿಮೆಗೊಳಿಸಿತ್ತು. ಆದರೆ ಇದೇ ದರ ಸಂಧಾನ ಸಭೆಯಲ್ಲಿ ಭಾಗವಹಿಸಿದ್ದ ಯುಕ್ಬಾ ಫ್ಯಾಷನ್ಸ್‌ 367 ರು.ದರದಲ್ಲಿ ಕಿಟ್‌ಗಳನ್ನು ಸರಬರಾಜು ಮಾಡಲು ಮುಂದೆ ಬಂದಿತ್ತು.

ಅಂದರೆ ಸರ್ಕಾರ ಮರು ನಿಗದಿಪಡಿಸಿದ್ದ ದರಕ್ಕಿಂತಲೂ (370) 3 ರು.ಗಳನ್ನು ಕಡಿಮೆಗೊಳಿಸಿತ್ತು. ಆಂತರಿಕ ಸಂಧಾನ ಸಭೆ ಹೊತ್ತಿಗೆ ಎಚ್‌ ಎನ್‌ ಝಡ್‌ ಕಂಪನಿಯು 70 ರು. ಕಡಿಮೆಗೊಳಿಸಿ 400 ರು. ದರ ನಮೂದಿಸಿತ್ತು. ಆದರೆ ಈ ಮಾಹಿತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ಬಂದಿಲ್ಲ ಎಂದು ತಿಳಿದು ಬಂದಿದೆ.

ಕಡಿಮೆ ದರದಲ್ಲಿ ಕಿಟ್‌ಗಳನ್ನು ಸರಬರಾಜು ಮಾಡಲು ಕಂಪನಿ ಮುಂದೆ ಬಂದಿದ್ದರೂ ಈ ಮಾಹಿತಿಯನ್ನು ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತಂದಿಲ್ಲ ಮಾತ್ರವಲ್ಲದೆ ಕಡತದಲ್ಲಿಯೂ ಈ ಮಾಹಿತಿಯನ್ನು ಉಲ್ಲೇಖಿಸದೆಯೇ ಭ್ರಷ್ಟ ಅಧಿಕಾರಿಗಳ ಗುಂಪು ವ್ಯವಸ್ಥಾಪಕ ನಿರ್ದೇಶಕರನ್ನು ದಿಕ್ಕು ತಪ್ಪಿಸಿ ದುಪ್ಪಟ್ಟು ದರಕ್ಕೆ ಖರೀದಿ ಆದೇಶ ನೀಡಲಾಗಿದೆ ಎಂದು ನಿಗಮದ ವಿಶ್ವಸನೀಯ ಮೂಲಗಳು ಖಚಿತಪಡಿಸಿವೆ.

ಹೆಚ್ಚಿನ ದರಕ್ಕೆ ಖರೀದಿ ಆದೇಶ ನೀಡಿದ್ದೇಕೆ?

ಸರ್ಕಾರ ಮರುನಿಗದಿಗೊಳಿಸಿದ್ದ ದರಕ್ಕಿಂತಲೂ 3 ರು. ಕಡಿಮೆ ದರದಲ್ಲಿ ಕಿಟ್‌ಗಳನ್ನು ಸರಬರಾಜು ಮಾಡಲು ಮುಂದೆ ಬಂದಿದ್ದ ಯುಕ್ಬಾ ಫ್ಯಾಷನ್ಸ್‌ ಕಂಪನಿಯನ್ನು ನಿಗಮದ ಅಧಿಕಾರಿಗಳು ಪರಿಗಣಿಸಲಿಲ್ಲ. ಯುಕ್ಬಾ ಫ್ಯಾಷನ್ಸ್‌ ಕಂಪನಿ ನಮೂದಿಸಿದ್ದ ದರಕ್ಕಿಂತಲೂ 33 ರು. ದರ ಹೆಚ್ಚಳ ನಮೂದಿಸಿದ್ದ ಎಚ್‌ಎನ್‌ ಝಡ್‌ ಕಂಪನಿಗೇ ಖರೀದಿ ಆದೇಶ ನೀಡಿರುವುದರ ಹಿಂದೆ ಅಧಿಕಾರಿಗಳು ಮತ್ತು ಸರಬರಾಜುದಾರರ ಮಧ್ಯೆ ಕಮಿಷನ್‌ ವ್ಯವಹಾರ ನಡೆದಿದೆ ಎಂಬ ಅನುಮಾನಗಳು ವ್ಯಕ್ತವಾಗಿವೆ.

ಸರ್ಕಾರ ಮರುನಿಗದಿಗೊಳಿಸಿದ್ದ ದರಕ್ಕಿಂತಲೂ 3 ರು ಕಡಿಮೆ ದರದಲ್ಲಿ ಸರಬರಾಜು ಮಾಡಲು ಆದೇಶ ನೀಡಿದ್ದರೆ 12 ಲಕ್ಷ ಕಿಟ್‌ಗಳಿಗೆ 44.04 ಕೋಟಿ ರು. ಮಾತ್ರ ವೆಚ್ಚವಾಗುತ್ತಿತ್ತು. ಆದರೆ 400 ರು. ದರಕ್ಕೆ ಆದೇಶ ನೀಡಿರುವುದರಿಂದ ಅಂದಾಜು 48 ಕೋಟಿ ರು.ವೆಚ್ಚವಾದಂತಾಗಿದೆ. ಇದರ ಪ್ರಕಾರ 4 ಕೋಟಿ ರು.ಹೆಚ್ಚುವರಿಯಾಗಿ ವೆಚ್ಚ ಮಾಡಿದಂತಾಗಿದೆ.

the fil favicon

SUPPORT THE FILE

Latest News

Related Posts