ವಿಜಯೇಂದ್ರ, ಸಿಎಂ ಕಾರ್ಯದರ್ಶಿ ಹೊಸೂರ್‌ ಹೆಸರು ಬಳಸಿ ಕೋಟ್ಯಂತರ ವಸೂಲಿ ಆರೋಪ

ಬೆಂಗಳೂರು; ಅಬಕಾರಿ ಇಲಾಖೆಯಲ್ಲಿ ಅಧಿಕಾರಿ, ನೌಕರರ ವರ್ಗಾವಣೆ, ಮದ್ಯದ ಅಂಗಡಿಗಳ ಪರವಾನಿಗೆ ನವೀಕರಣ, ಹೆಚ್ಚುವರಿಯಾಗಿ 300 ಹುದ್ದೆಗಳ ಸೃಜಿಸಿರುವುದು ಸೇರಿದಂತೆ ಇಲಾಖೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್‌ ಅವರಿಗೆ ದೂರೊಂದು ಸಲ್ಲಿಕೆಯಾಗಿದೆ ಎಂದು ತಿಳಿದು ಬಂದಿದೆ.

ಇಲಾಖೆಯ ಕೆಲ ಅಧಿಕಾರಿ, ನೌಕರರು ದೂರು ಸಲ್ಲಿಸಿದ್ದಾರೆಂದು ಗೊತ್ತಾಗಿದೆ. ಇದೇ ದೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಮತ್ತು ಮುಖ್ಯಮಂತ್ರಿಗಳ ಕಾರ್ಯದರ್ಶಿ ಐಎಫ್‌ಎಸ್‌ ಅಧಿಕಾರಿ ಗಿರೀಶ್‌ ಹೊಸೂರು ಅವರ ಹೆಸರನ್ನೂ ಉಲ್ಲೇಖಿಸಲಾಗಿದೆ. ಈ ದೂರಿನ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ. ಈ ದೂರಿನಲ್ಲಿ ಯಾವೊಬ್ಬ ಅಧಿಕಾರಿ, ನೌಕರನ ಹೆಸರನ್ನು ನಮೂದಿಸಿಲ್ಲ. ಅಬಕಾರಿ ಇಲಾಖೆಯನ್ನು ಉಳಿಸಿ ಎಂದು ದೂರಿನಲ್ಲಿ ಉಲ್ಲೇಖಿಸಿರುವ ಅಧಿಕಾರಿ, ನೌಕರರು, ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಅಭಿಯಾನವನ್ನು ಕೊನೆಗಾಣಿಸಬೇಕು ಎಂದೂ ಮನವಿ ಮಾಡಿಕೊಂಡಿದ್ದಾರೆ.

ಅಬಕಾರಿ ಇನ್ಸ್‌ಪೆಕ್ಟರ್‌ಗಳಿಂದ ಸಚಿವ ಗೋಪಾಲಯ್ಯ ಅವರು ಹಣ ವಸೂಲಿಗಿಳಿದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಬ್ಬರ ನಡುವಿನ ಸಂಭಾಷಣೆಯ ಆಡಿಯೋ ಬಹಿರಂಗವಾಗಿದ್ದು ಮತ್ತು ಸಮಾಜ ಕಲ್ಯಾಣ ಸಚಿವ ಬಿ ಶ್ರೀರಾಮುಲು ಅವರ ಆಪ್ತ ಸಹಾಯಕ ಎಂದು ಹೇಳಲಾಗಿದ್ದ ರಾಜಣ್ಣ ಎಂಬುವರು  ಹಣ ವಸೂಲಿ ಮಾಡಿದ್ದರು ಎಂಬ ಪ್ರಕರಣದಲ್ಲಿ ಖುದ್ದು ವಿಜಯೇಂದ್ರ ಅವರು ಸಿಸಿಬಿ ದೂರು ಸಲ್ಲಿಸಿದ್ದರ ಬೆನ್ನಲ್ಲೇ ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿದೆ ಎನ್ನಲಾಗಿರುವ ಹಣ ಸುಲಿಗೆ ಪ್ರಕರಣ ಸಂಬಂಧ ಸಲ್ಲಿಕೆಯಾಗಿರುವ ದೂರು ಮಹತ್ವ ಪಡೆದುಕೊಂಡಿದೆ.

ಅಬಕಾರಿ ಇಲಾಖೆಯ ಡಿಎಸ್‌ಪಿಯಾಗಿ ಬಡ್ತಿ ಹೊಂದಿರುವ ಮಧುಸೂದನ್‌ರೆಡ್ಡಿ ಎಂಬುವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿಜಯೇಂದ್ರ ಅವರ ಹೆಸರಿನಲ್ಲಿ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ದೂರಲಾಗಿದೆಯಲ್ಲದೆ ಅಬಕಾರಿ ಇಲಾಖೆಯ ಅಧಿಕಾರಿ, ನೌಕರರ ವರ್ಗಾವಣೆಗಳಿಗೆ ಹಣ ಪಡೆದು ಗಿರೀಶ್‌ ಹೊಸೂರ್‌ ಅವರ ಕಚೇರಿ ಮೂಲಕ ಮುಖ್ಯಮಂತ್ರಿಗಳಿಂದ ಅನುಮೋದನೆ ದೊರಕಿಸಿಕೊಡಲಾಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಅಬಕಾರಿ ಇಲಾಖೆಯ ಬೆಂಗಳೂರು ವಿಭಾಗದ ಜಿಲ್ಲಾ ಮಟ್ಟದ ಅಧಿಕಾರಿ ಎಂದು ಹೇಳಲಾಗಿರುವ ಜೆ ಗಿರಿ, ನಾಗೇಶ್‌, ಹೆಚ್ಚುವರಿ ಆಯುಕ್ತರು ಎನ್ನಲಾಗಿರುವ ಶೋಭಾ (ಆಡಳಿತ) ಮತ್ತು ವಿಜಯೇಂದ್ರ ಹೆಸರಿನಲ್ಲಿ ಮಧುಸೂದನ್‌ ರೆಡ್ಡಿ ಎಂಬುವರು ಅಧಿಕಾರಿ, ನೌಕರರ ವರ್ಗಾವಣೆ, ಬಡ್ತಿ ಮತ್ತು ಮದ್ಯದಂಗಡಿಗಳ ಪರವಾನಿಗೆ ನವೀಕರಣದ ಪ್ರಕ್ರಿಯೆಯಲ್ಲಿ ಲಕ್ಷಾಂತರ ರು.ವಸೂಲಿ ಮಾಡಲಾಗುತ್ತಿದೆ ಎಂದು ದೂರಲಾಗಿದೆ.

ಅಲ್ಲದೆ 2008ನೇ ಬ್ಯಾಚ್‌ನ ಅಧಿಕಾರಿಗಳು ಎಂದು ದೂರಿನಲ್ಲಿ ಪ್ರಸ್ತಾಪವಾಗಿರುವ ಶೈಲಜಾ ಕೋಟೆ, ನಾಗರಾಜಪ್ಪ, ನಾಗರಾಜ್‌, ಮೋಸಸ್‌, ಸುಮಿತಾ ಮತ್ತು ಮಾದೇಶ್‌ ಎಂಬ ಅಧಿಕಾರಿಗಳು ಸಹ ವರ್ಗಾವರ್ಗಿ ದಂಧೆಯಲ್ಲಿ ನಿರತರಾಗಿದ್ದಾರೆ ಎಂದೂ ಆರೋಪಿಸಿರುವುದು ದೂರಿನಿಂದ ತಿಳಿದು ಬಂದಿದೆ.

‘ಬೆಂಗಳೂರು ಮತ್ತು ಮೈಸೂರು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಮಟ್ಟದ ಅಧಿಕಾರಿಗಳ ವರ್ಗಾವಣೆಗಾಗಿ 5-10 ಕೋಟಿ ರು. ವಸೂಲಿ ಮಾಡಲಾಗುತ್ತಿದೆ. ಹಣ ಕೊಟ್ಟವರನ್ನು ವರ್ಗಾವಣೆ ಮಾಡಲಾಗುತ್ತಿದೆ. ಮದ್ಯದ ಅಂಗಡಿಗಳ ಪರವಾನಿಗೆ ನವೀಕರಣ ಮತ್ತು ಹೊಸದಾಗಿ ಪರವಾನಿಗೆ ನೀಡಲಾಗುತ್ತಿದೆ. ಜೆ ಗಿರಿ ಎಂಬ ಅಧಿಕಾರಿಯ ಮಾತನ್ನು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್‌ಎನ್ ಪ್ರಸಾದ್‌ ಅವರು ಕೇಳುತ್ತಿದ್ದಾರೆ. ಒಂದೊಂದು ಲಿಕ್ಕರ್‌ ಮಳಿಗೆಯಿಂದ 20,000 ರು.ದಂತೆ ಅಂದಾಜು 20 ಕೋಟಿ ರು.ಗಳನ್ನು ಅಬಕಾರಿ ಸಚಿವರ ಹೆಸರಿನಲ್ಲಿ ಸಂಗ್ರಹಿಸಲಾಗಿದೆ. ಇದರಲ್ಲಿ 10 ಕೋಟಿ ಜೆ ಗಿರಿ ಮತ್ತು ನಾಗೇಶ್‌ ಎಂಬುವರು ಹಂಚಿಕೊಂಡಿದ್ದಾರೆ,’ ಎಂದು ವಿವರಿಸಲಾಗಿದೆ.

ಬೆಳಗಾವಿ ಉಪ ಚುನಾವಣೆಯಲ್ಲಿಯೂ ಒಂದೊಂದು ಜಿಲ್ಲೆಯಿಂದ 5ರಿಂದ 15 ಲಕ್ಷ ರು.ವರೆಗೆ ಸಂಗ್ರಹಿಸಲಾಗಿದೆ. ಆದರೂ ಮದ್ಯದ ಅಂಗಡಿಗಳ ಪರವಾನಿಗೆ ನವೀಕರಣಕ್ಕೆ 20,000 ರು.ದಂತೆ ಹಣಕ್ಕಾಗಿ ಬೇಡಿಕೆ ಒಡ್ಡಿದ್ದಾರೆ. ಇಷ್ಟೊಂದು ಹಣವನ್ನು ನಾವು ಕೊಡುವುದಾದರೂ ಹೇಗೆ,’ ಎಂದು ಪ್ರಶ್ನಿಸಿರುವುದು ದೂರಿನಿಂದ ತಿಳಿದು ಬಂದಿದೆ.

ಜೆ ಗಿರಿ ಮತ್ತು ನಾಗೇಶ್‌ ಎಂಬುವರು ಬೆಂಗಳೂರಿನಲ್ಲಿ ಕಳೆದ 6 ವರ್ಷಗಳಿಂದ ಹೆಚ್ಚುವರಿ ಪ್ರಭಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ದೂರಿರುವ ಕೆಲ ಅಧಿಕಾರಿ, ನೌಕರರು ಈ ಇಬ್ಬರು ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ ಎಂದು ದೂರಿದ್ದಾರೆ.

ಪರವಾನಿಗೆ ಸ್ಥಳಾಂತರಕ್ಕೆ 15 ಲಕ್ಷ, ಪರವಾನಿಗೆ ವರ್ಗಾವಣೆಗೆ 15 ಲಕ್ಷ, ಸಿಎಲ್‌-6 ಮತ್ತು ಸಿಎಲ್‌ 7 ಸನ್ನದು ಮಂಜೂರಾತಿಗೆ 1 ಕೋಟಿ, ಪರವಾನಿಗೆ ನವೀಕರಣಕ್ಕೆ 1 ಲಕ್ಷದಿಂದ 3 ಲಕ್ಷ, ಸಾಂದರ್ಭಿಕ ಪರವಾನಿಗೆ ಮಂಜೂರಾತಿಗೆ 3 ಲಕ್ಷ, ತಿಂಗಳಿಗೆ ಮಳಿಗೆಗಳಿಂದ ತಲಾ 10,000, ಮಹಿಳೆಯರು ಕಾರ್ಯನಿರ್ವಹಿಸುತ್ತಿರುವ ಬಾರ್‌ ರೆಸ್ಟೋರೆಂಟ್‌ಗಳಿಂದ ತಿಂಗಳಿಗೆ 1 ಲಕ್ಷ, ಬಾರ್‌ ರೆಸ್ಟೋರೆಂಟ್‌ಗಳಲ್ಲಿ ಆರ್ಕೇಸ್ಟ್ರಾ ಮತ್ತು ಡಿಸ್ಕೋ ಬಾರ್‌ಗಳಿಂದ ತಿಂಗಳಿಗೆ 1 ಲಕ್ಷ, ಮೊಕದ್ದಮೆ ಹೂಡದಿರಲು ತಲಾ ಮಳಿಗೆಯಿಂದ 25,000 ರು., ಅನಧಿಕೃತ ಲಿಕ್ಕರ್‌ ಶಾಪ್‌, ಮಿಲಿಟರಿ ಹೋಟೆಲ್‌ ಮತ್ತು ಡಾಬಾಗಳಿಂದ ತಿಂಗಳಿಗೆ 10,000 ರು, ಅರಮನೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಅಕ್ರಮವಾಗಿ ಮದ್ಯ ಸರಬರಾಜು ಮಾಡುವ ಆಯೋಜಕರಿಂದ 3 ಲಕ್ಷ ರು.ಸೇರಿದಂತೆ ಇಲಾಖೆಯ ಇನ್ನಿತರೆ ಕಾರ್ಯಗಳಿಗೆ ಲಕ್ಷಾಂತರ ರು.ಗಳನ್ನು ವಸೂಲಿ ಮಾಡಲಾಗುತ್ತಿದೆ ಎಂದು ಪಟ್ಟಿ ಒದಗಿಸಿರುವುದು ದೂರಿನಿಂದ ಗೊತ್ತಾಗಿದೆ.

ಗೋಪಾಲಯ್ಯ ಪ್ರಕರಣ ಹಿನ್ನೆಲೆ

ಅಬಕಾರಿ ಇಲಾಖೆಯ ಅಧಿಕಾರಿಗಳಿಬ್ಬರ ಮಧ್ಯೆ ನಡೆದಿದೆ ಎನ್ನಲಾಗಿರುವ 10 ನಿಮಿಷದ ಸಂಭಾಷಣೆಯ ತುಣುಕಿನಲ್ಲಿ ಕೊಪ್ಪಳ ಜಿಲ್ಲೆಯಿಂದ 5 ಲಕ್ಷ ಸಂಗ್ರಹಿಸಿ ಕೊಡಲು ಸೂಚಿಸಿದ್ದಾರೆ ಎಂಬ ಅಂಶ ಪ್ರಸ್ತಾಪವಾಗಿದೆ. ಅಲ್ಲದೆ ಮಂಜುನಾಥ್‌, ನಾಗರಾಜಪ್ಪ, ರಮೇಶ್‌, ಶಿವಪ್ರಸಾದ್‌ ಸೇರಿದಂತೆ ಹಲವು ಜಿಲ್ಲೆಗಳ ಅಧಿಕಾರಿಗಳ ಹೆಸರು ಪ್ರಸ್ತಾಪವಾಗಿದೆಯಲ್ಲದೆ ಕೊಪ್ಪಳ ಜಿಲ್ಲೆಯ ಇಕ್ಬಾಲ್‌ ಅನ್ಸಾರಿ ಎಂಬುವರ ಹೆಸರು ಪ್ರಸ್ತಾಪವಾಗಿರುವುದು ಚರ್ಚೆಗೆ ಗ್ರಾಸವಾಗಿತ್ತು.

ಸಚಿವರ ಮನೆಯಲ್ಲೇ ನಡೆದಿತ್ತು ಸಭೆ?

ಅಬಕಾರಿ ಸಚಿವ ಕೆ ಗೋಪಾಲಯ್ಯ ಅವರ ಮನೆಯಲ್ಲಿ ಅಬಕಾರಿ ಜಿಲ್ಲಾ ಅಧಿಕಾರಿಗಳು, ಜಂಟಿ ಆಯುಕ್ತರುಗಳ ಸಭೆ ನಡೆದಿತ್ತು ಎಂಬುದು ಮಹಿಳಾ ಅಧಿಕಾರಿಯೊಬ್ಬರ ಆಡಿಯೋ ತುಣುಕಿನಿಂದ ಗೊತ್ತಾಗಿದೆ. ಸಚಿವರ ಮನೆಯಲ್ಲಿ ಸಭೆ ನಡೆಯುವ ಮುನ್ನ ವಿಕಾಸಸೌಧದಲ್ಲಿ ಅಬಕಾರಿ ಇಲಾಖೆಯ ಜಂಟಿ ಆಯುಕ್ತರು, ಅಬಕಾರಿ ನಿರೀಕ್ಷಕರ ಸಭೆ ನಡೆದಿತ್ತು.

ಈ ಸಭೆಯಲ್ಲಿ ಸಚಿವ ಗೋಪಾಲಯ್ಯ ಅವರು ಕೆಲ ಜಿಲ್ಲೆಗಳ ಅಬಕಾರಿ ನಿರೀಕ್ಷಕರ ಕಾರ್ಯವೈಖರಿಯನ್ನು ಮೆಚ್ಚಿ ಪ್ರಶಂಸಿದ್ದರು. ಅದೇ ದಿನ ಸಂಜೆ ಸಚಿವರ ಮನೆಯಲ್ಲಿ ಆಯ್ದ ಜಂಟಿ ಆಯುಕ್ತರು ಮತ್ತು ಅಬಕಾರಿ ನಿರೀಕ್ಷಕರ ಸಭೆ ನಡೆದಿತ್ತು. ಈ ಸಭೆಯಲ್ಲಿ ಮಂಜುನಾಥ್‌, ಕುಮಾರ್‌, ನಾಗರಾಜಪ್ಪ ಎಂಬ ಅಧಿಕಾರಿಗಳು ಹಾಜರಾಗಿದ್ದರು ಎಂಬುದು ಆಡಿಯೋ ತುಣುಕಿನಿಂದ ತಿಳಿದು ಬಂದಿತ್ತು. ಆಡಿಯೋ ಬಹಿರಂಗಪಡಿಸಿದ್ದರು ಎನ್ನಲಾದ ನಾಲ್ವರು ಅಬಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

the fil favicon

SUPPORT THE FILE

Latest News

Related Posts