ಸ್ಕಿಲ್‌ ಗೇಮ್‌ ಪಟ್ಟಿಯಲ್ಲಿ ಕುದುರೆ ಓಟ!; ಆರ್ಥಿಕ ಇಲಾಖೆ ಅಭಿಪ್ರಾಯ ಒಪ್ಪುವುರೇ ಬೊಮ್ಮಾಯಿ?

ಬೆಂಗಳೂರು; ಕುದುರೆ ರೇಸ್‌ಗೆ ಆನ್‌ಲೈನ್‌ನಲ್ಲಿ ಬೆಟ್ಟಿಂಗ್‌ ನಡೆಸುವುದರ ಕುರಿತು ಹೈಕೋರ್ಟ್‌ ಹಿಂದೊಮ್ಮೆ ಆಕ್ಷೇಪ ವ್ಯಕ್ತಪಡಿಸಿದ್ದರೂ ಆನ್‌ಲೈನ್‌ ಜೂಜಾಟ ಮತ್ತು ಆನ್‌ಲೈನ್‌ ಸ್ಕಿಲ್‌ ಗೇಮ್‌ಗಳನ್ನು ನಿಷೇಧಿಸುವ ಮಸೂದೆ-2020ನಲ್ಲಿ ಕುದುರೆ ಓಟ (ಹಾರ್ಸ್‌ ರೇಸಿಂಗ್‌)ವನ್ನು ನೈಪುಣ್ಯತೆ/ಕೌಶಲ್ಯ ಆಟದ ಪಟ್ಟಿಯಲ್ಲಿ ಸೇರ್ಪಡೆಗೊಳಿಸಬೇಕು ಎಂದು ಆರ್ಥಿಕ ಇಲಾಖೆಯು ಆಡಳಿತ ಇಲಾಖೆಯಾದ ಒಳಾಡಳಿತ ಇಲಾಖೆಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಆನ್‌ಲೈನ್‌ ಜೂಜಾಟ ಮತ್ತು ಅನ್‌ಲೈನ್‌ ಸ್ಕಿಲ್‌ ಗೇಮ್‌ಗಳನ್ನು ನಿಷೇಧಿಸುವ ಸಂಬಂಧ ಸಿಐಡಿಯ ಆರ್ಥಿಕ ಅಪರಾಧಗಳ ಘಟಕವು ಸಲ್ಲಿಸಿರುವ ಪ್ರಸ್ತಾವನೆ ಕುರಿತಂತೆ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್‌ಎನ್‌ ಪ್ರಸಾದ್‌ ಅವರು ಕುದುರೆ ಓಟವನ್ನು ಸ್ಕಿಲ್‌ ಗೇಮ್‌ ಪಟ್ಟಿಯಲ್ಲಿ ಸೇರ್ಪಡೆಗೊಳಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರು 2021ರ ಜೂನ್‌ 30ರಂದು ಒಳಾಡಳಿತ ಇಲಾಖೆಗೆ ಲಿಖಿತ ಅಭಿಪ್ರಾಯ (FD 478 EXP-11/2020-EXP11 HD454 SST 2020) ನೀಡಿದ್ದಾರೆ.

ಚೆಸ್‌, ಸುಡುಕು, ಕ್ವಿಜ್‌, ಬಿನರಿ ಆಪ್ಷನ್ಷ್‌, ಬ್ರಿಡ್ಜ್‌, ಪೋಕರ್‌, ನ್ಯಾಪ್‌, ಸ್ಪೇಡ್ಸ್‌, ಸಾಲಿಟೇರ್‌, ವರ್ಚುವಲ್‌ ಗಾಲ್ಫ್‌, ವರ್ಚುವಲ್‌ ರೇಸಿಂಗ್‌ ಗೇಮ್ಸ್‌, ವರ್ಚುವಲ್‌ ಹಾರ್ಸ್‌ ರೇಸಿಂಗ್‌, ವರ್ಚುವಲ್‌ ಕಾರ್‌ ರೇಸಿಂಗ್‌, ಸೇರಿದಂತೆ ಸ್ಕಿಲ್‌ ಗೇಮ್‌ಗಳ ಪಟ್ಟಿಯಲ್ಲಿ ಮಸೂದೆಯ ಷೆಡ್ಯುಲ್‌-ಎ ನಲ್ಲಿ ಒಟ್ಟು 21 ಆಟಗಳನ್ನು ಸೇರ್ಪಡಗೊಳಿಸಿರುವುದು ಕರಡು ಮಸೂದೆಯಿಂದ ತಿಳಿದು ಬಂದಿದೆ.

ಸ್ಕಿಲ್‌ ಗೇಮ್‌ಗಳ ಪಟ್ಟಿಯಲ್ಲಿ ವರ್ಚುವಲ್‌ ಹಾರ್ಸ್‌ ರೇಸಿಂಗ್‌ ಎಂಬ ಪದ ಬಳಸಿದೆಯಾದರೂ ಆರ್ಥಿಕ ಇಲಾಖೆಯು ಒಳಾಡಳಿತ ಇಲಾಖೆಗೆ ನೀಡಿರುವ ಅಭಿಪ್ರಾಯದಲ್ಲಿ ಕುದುರೆ ಓಟ (ಹಾರ್ಸ್‌ ರೇಸಿಂಗ್‌) ಎಂದು ಹೆಸರಿಸಿದೆ. ಒಂದು ವೇಳೆ ಕುದುರೆ ಓಟವನ್ನು ಸ್ಕಿಲ್‌ ಗೇಮ್‌ಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದರೂ ಕುದುರೆ ಬೆಟ್ಟಿಂಗ್‌ ಮೇಲೆ ಹಣ ಹೂಡುವವರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿವೆ.

ಮೈದಾನದಲ್ಲಿ ಆಯೋಜಿಸುವ ಕುದುರೆ ರೇಸ್‌ ಮತ್ತು ವರ್ಚುವಲ್‌ ಕುದುರೆ ರೇಸ್‌ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಕುದುರೆ ಓಟವು ನೈಪುಣ್ಯತೆ ಅಥವಾ ಕೌಶಲ್ಯದ ಆಟವಾಗಿದ್ದರೆ ಈ ಆಟದ ಮೇಲೆ ಪಣ (ಬೆಟ್ಟಿಂಗ್‌) ಹೂಡುವುದು ಕೂಡ ಜೀವನಕ್ಕೆ ಹಾನಿಕಾರಕ. ಹೀಗಾಗಿ ಕುದುರೆ ರೇಸ್‌ ಮತ್ತು ವರ್ಚುವಲ್‌ ಕುದುರೆ ರೇಸ್‌ಗಳಲ್ಲಿ ಯಾವುದನ್ನು ಕೌಶಲ ಆಟ ಎಂದು ಸರ್ಕಾರವೇ ಸ್ಪಷ್ಟಪಡಿಸಬೇಕು. ಒಂದೊಮ್ಮೆ ಮೈದಾನದಲ್ಲಿ ಏರ್ಪಡಿಸುವ ಕುದುರೆ ಓಟವನ್ನು ಕೌಶಲ್ಯ ಆಟ ಎಂದು ಪರಿಗಣಿಸಿ ಮಸೂದೆಯಲ್ಲಿ ಸೇರ್ಪಡೆಗೊಳಿಸಿದ್ದೇ ಆದಲ್ಲಿ ಬೆಟ್ಟಿಂಗ್‌ ಅಪರಾಧವಲ್ಲ ಎಂಬ ನಿಲುವನ್ನು ತಳೆಯಬೇಕಾಗುತ್ತದೆ. ಇದು ಬೆಟ್ಟಿಂಗ್‌ ಮೇಲೆ ಇನ್ನಷ್ಟು ಹೂಡುವವರ ಸಂಖ್ಯೆ ಹೆಚ್ಚುತ್ತದೆಯಲ್ಲದೆ ಸಾವಿರಾರು ಕುಟುಂಬಗಳು ಬೀದಿಗೆ ಬರಲಿದೆ.

 

ಆದರ್ಶ ಐಯ್ಯರ್‌, ಜನಾಧಿಕಾರ ಸಂಘರ್ಷ ಪರಿಷತ್‌

 

ಕುದುರೆ ರೇಸ್ ಆನ್ ಲೈನ್ ಬೆಟ್ಟಿಂಗ್’ಗೆ ನೀಡಲಾಗಿದ್ದ ಅನುಮತಿಯನ್ನು 2020ರಲ್ಲಿ ರಾಜ್ಯ ಸರ್ಕಾರವು ಹಿಂಪಡೆದಿತ್ತು. ಬೆಂಗಳೂರು ಟರ್ಫ್ ಕ್ಲಬ್’ಗೆ ಆನ್’ಲೈನ್ ಬೆಟ್ಟಿಂಗ್’ಗೆ ಸರ್ಕಾರ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಬೆಂಗಳೂರಿನ ಶಾಂತಿ ನಗರದ ನಿವಾಸಿಯಾದ ಸಿ.ಗೋಪಾಲ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆಯಲ್ಲಿ ಹೈಕೋರ್ಟ್‌ಗೆ ರಾಜ್ಯ ಸರ್ಕಾರವು ಮಾಹಿತಿ ನೀಡಿದ್ದನ್ನು ಸ್ಮರಿಸಬಹುದು.

ಕುದುರೆ ರೇಸ್ ಗೆ ಆನ್ ಲೈನ್ ಬೆಟ್ಟಿಂಗ್ ಗೆ ಅನುಮತಿ ಹೇಗೆ ಕೊಟ್ಟಿರಿ? ಸರ್ಕಾರ ಅನುಮತಿ ಅಸಂಬದ್ಧವಾಗಿದೆ ಎಂದು ಹೇಳಿತ್ತು. ಅಲ್ಲದೆ, ಡಿ.16 ರಿಂದ ಆನ್ ಲೈನ್ ಬೆಟ್ಟಿಂಗ್ ಗೆ ಅವಕಾಶ ನೀಡಲು ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದ್ದು, ಈ ಕುರಿತು ಸ್ಪಷ್ಟ ತೀರ್ಮಾನ ಕೈಗೊಳ್ಳುವಂತೆ ನಿರ್ದೇಶನ ನೀಡಿತ್ತು.

ಕುದುರೆ ಓಟವು ಕೌಶಲ್ಯ ಆಟ ಎಂದಿದ್ದ ಸುಪ್ರೀಂ ಕೋರ್ಟ್‌

1996ರಲ್ಲಿ ರಲ್ಲಿ ಸರ್ವೋಚ್ಚ ನ್ಯಾಯಾಲಯವು ಕೆಆರ್ ಲಕ್ಷ್ಮಣನ್ ವಿರುದ್ಧ ತಮಿಳುನಾಡು ರಾಜ್ಯದ ಪ್ರಕರಣದಲ್ಲಿ ನೈಪುಣ್ಯತೆ ಹೊಂದಿರುವ ಆಟವೆಂದರೆ, ಅದರಲ್ಲಿ ಆಕಸ್ಮಿಕತೆಯ ಒಂದು ಅಂಶವಿದ್ದರೂ ಸಹ, ಬಹುಮುಖ್ಯವಾಗಿ ಆಟಗಾರನ ಉಚ್ಚ ಜ್ಞಾನ, ತರಬೇತಿ, ಲಕ್ಷ್ಯ, ಅನುಭವ ಹಾಗೂ ಚತುರತೆಯ ಮೇಲೆ ಆ ಆಟದ ಯಶಸ್ಸು ಅವಲಂಬಿತವಾಗಿದ್ದ ಪಕ್ಷದಲ್ಲಿ ಆ ಆಟವು ನೈಪುಣ್ಯತೆಯ ಆಟ ಎಂದು ತೀರ್ಪನ್ನು ನೀಡಿದೆ.

“ಕುದುರೆ ಓಟದ ಆಟವು ತರಬೇತಿಯ ಮೂಲಕ ಪಡೆದುಕೊಂಡ ವಿಶೇಷ ಸಾಮರ್ಥ್ಯದ ಅವಲಂಬಿಸಿರುವುದು ಎಂಬ ತೀರ್ಮಾನಕ್ಕೆ ಬರಲು ನಮಗೆ ಯಾವುದೇ ಸಂದೇಹವಿಲ್ಲ. ತರಬೇತಿಯ ಮೂಲಕ ಪಡೆದಿರುವ ಕುದುರೆಯ ವೇಗ ಹಾಗೂ ದೈಹಿಕ ಬಲವೇ ಈ ಆಟಕ್ಕೆ ಗಮನಾರ್ಹ. ಜಾಕಿಗಳು ಕುದುರೆ ಸವಾರಿಯ ಕಲೆಯಲ್ಲಿ ಪ್ರವೀಣರು. ಎರಡು ಬಿರುಸಿನ ವೇಗದ ಕುದುರೆಗಳ ಮಧ್ಯೆ ಉತ್ತಮ ತರಬೇತು ಗೊಂಡ ಒಬ್ಬ ಜಾಕಿ ಗೆಲ್ಲಬಹುದು.” ಎಂದು ನ್ಯಾಯಾಲಯವು ತೀರ್ಪು ನೀಡಿತ್ತು.

ಹೀಗೆ ತೀರ್ಪು ನೀಡಿದ್ದ ಸರ್ವೋಚ್ಚ ನ್ಯಾಯಾಲಯವು ಕುದುರೆ ಓಟದ ಮೇಲೆ ಪಣವಿಡುವುದು ಸಹ ಜೂಜಲ್ಲ ಎಂದು ತೀರ್ಮಾನಿಸಿತ್ತು. ಕುದುರೆಯ ಆಟದ ಮೇಲೆ ಪಣವಿಟ್ಟಿರುವ ವ್ಯಕ್ತಿಗಳು ಈ ಆಟವನ್ನು ವೀಕ್ಷಿಸುತ್ತಿದ್ದು ತಮ್ಮ ಆಟದ ಪರಿಣಿತಿಯ ಜ್ಞಾನದಿಂದ ಪಣದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಆ ವ್ಯಕ್ತಿಗಳನ್ನು ಸರ್ವೋಚ್ಚ ನ್ಯಾಯಾಲಯವು ಈ ಪಂದ್ಯದಲ್ಲಿ ಮುಕ್ಕಾಲು ಮೂರುಪಾಲು ಭಾಗಿಗಳು ಎಂದು ಪರಿಗಣಿಸಿದ್ದನ್ನು ಸ್ಮರಿಸಬಹುದು.

ಅನ್‌ಲೈನ್‌ ಆಟವು ಜೂಜಿನ ತಾಣವಾಗಿದ್ದು ಸರ್ಕಾರದ ಪರವಾನಿಗೆ ಪಡೆಯದೇ ಚೀನಿ ಆಪ್‌ಗಳನ್ನು ಬಳಸಲಾಗುತ್ತಿದ್ದು ಈ ಚಟಕ್ಕೆ ಬಿದ್ದು ಸಾಕಷ್ಟು ಸಂಸಾರಗಳೇ ಬೀದಿಗೆ ಬರುವಂತಾಗುತ್ತಿದೆ. ಇಂದು ದೊಡ್ಡವರು, ಮಕ್ಕಳು ಎನ್ನದೇ ಎಲ್ಲರೂ ಈ ಚಟಕ್ಕೆ ಬಿದ್ದು ಲಕ್ಷಾಂತರ ರು.ಗಳನ್ನು ಕಳೆದುಕೊಳ್ಳುತ್ತಿದ್ದಾರೆ.

ಮತ್ತಷ್ಟು ಜನ ಈ ಜೂಜಿಗೆ ಆಕರ್ಷಿತರಾಗಿ ಹಣ ಕಳೆದುಕೊಂಡು ಬೀದಿಗೆ ಬೀಳಬಾರದು ಎಂಬ ಕಾರಣಕ್ಕೆ ಇದೀಗ ಆನ್‌ಲೈನ್‌ ಜೂಜಿನ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವ ಹಿನ್ನೆಲೆಯಲ್ಲಿ ಆನ್‌ಲೈನ್‌ ಜೂಜಾಟ, ಆನ್‌ಲೈನ್‌ ಸ್ಕಿಲ್‌ ಗೇಮ್‌ ನಿಷೇಧಿಸುವ ಮಸೂದೆ ಜಾರಿಗೊಳಿಸಬೇಕಾಗಿರುವುದು ಅವಶ್ಯಕವಾಗಿರುತ್ತದೆ. ರಾಜ್ಯದಲ್ಲಿ ಈ ಕಾಯ್ದೆಯನ್ನು ಜಾರಿಗೆ ತರುವುದರಿಂದ ಆನ್‌ಲೈನ್‌ ಜೂಜಾಟದಲ್ಲಿ ಸಾಕಷ್ಟು ಮಂದಿ ಹಣ ಕಳೆದುಕೊಳ್ಳುವುದನ್ನು ನಿಯಂತ್ರಿಸಬಹುದು.,’ ಎಂದು ಒಳಾಡಳಿತ ಇಲಾಖೆಯು ಮಸೂದೆಯನ್ನು ಸಮರ್ಥಿಸಿಕೊಂಡಿದೆ.

ಆನ್‌ಲೈನ್ ಜೂಜಾಟ ಆಡುವವರಿಗೆ ಒಂದು ವರ್ಷಕ್ಕಿಂತ ಕಡಿಮೆ ಇಲ್ಲದ ಹಾಗೂ 3 ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ, 50,000ಕ್ಕಿಂತ ಕಡಿಮೆ ಇಲ್ಲದ ಹಾಗೂ 2 ಲಕ್ಷ ರು.ವರೆಗೆ ದಂಡ ವಿಧಿಸಬಹುದು ಎಂಬ ನಿಯಮಗಳನ್ನು ಅಳವಡಿಸಲು ಮುಂದಾಗಿರುವುದು ಮಸೂದೆಯಿಂದ ತಿಳಿದು ಬಂದಿದೆ.

ಅಲ್ಲದೆ ಸೆಕ್ಷನ್‌ 4ರ ಪ್ರಕಾರ ಅಪರಾಧ ಎಸಗಿದ್ದಲ್ಲಿ 2 ವರ್ಷಕ್ಕಿಂತ ಕಡಿಮೆ ಇಲ್ಲದ ಹಾಗೂ 5 ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ, 1 ಲಕ್ಷ ರು.ಗಳಿಗಿಂತ ಕಡಿಮೆ ಇಲ್ಲದ ಹಾಗೂ 5 ಲಕ್ಷ ರು.ಗಳವರೆಗೆ ದಂಡ ವಿಧಿಸಲು ನಿಯಮ ರೂಪಿಸಿದೆ. ಅಲ್ಲದೆ ಪರವಾನಿಗೆ ಇಲ್ಲದೆ ಸ್ಕಿಲ್‌ ಗೇಮ್‌ ನಡೆಸಿದ್ದಲ್ಲಿ ಒಂದು ತಿಂಗಳಿಗಿಂತ ಕಡಿಮೆ ಇಲ್ಲದ ಹಾಗೂ ಒಂದು ವರ್ಷದವರೆಗೆ ವಿಸ್ತರಿಸಿಬಹುದಾದ ಜೈಲು ಶಿಕ್ಷೆ ಮತ್ತು 25,000 ರು.ಗಳಿಗಿಂತ ಕಡಿಮೆ ಇಲ್ಲದ 50 ಸಾವಿರದವರೆಗೆ ದಂಡ ವಿಧಿಸಲು ನಿಯಮ ರೂಪಿಸಿರುವುದು ಕರಡು ಮಸೂದೆಯಿಂದ ಗೊತ್ತಾಗಿದೆ.

the fil favicon

SUPPORT THE FILE

Latest News

Related Posts