ಆನ್‌ಲೈನ್‌ ಜೂಜಾಟ ನಿಷೇಧ ಮಸೂದೆ; 5 ವರ್ಷ ಜೈಲು, 5 ಲಕ್ಷ ದಂಡ

ಬೆಂಗಳೂರು; ಆನ್‌ಲೈನ್‌ ಜೂಜಾಟ ಮತ್ತು ಆನ್‌ಲೈನ್‌ ಸ್ಕಿಲ್‌ ಗೇಮ್‌ಗಳನ್ನು ಪ್ರಚುರಪಡಿಸುವುದು, ಉತ್ತೇಜಿಸುವುದು, ಪ್ರವರ್ತಕರಾಗುವುದು ಮತ್ತು ಕಾರ್ಯಾಚರಣೆ ನಡೆಸುವುದು ಹಾಗೂ ಈ ಸಂಬಂಧ ಜಾಹೀರಾತು ನೀಡುವುದು, ಆನ್‌ಲೈನ್‌ ಜೂಜಿನಲ್ಲಿ ಭಾಗವಹಿಸುವುದು ಮತ್ತು ನೋಂದಣಿಯನ್ನು ನಿಷೇಧಿಸಲು ಒಳಾಡಳಿತ ಇಲಾಖೆಯು ರೂಪಿಸಿರುವ ಮಸೂದೆಯು ಇದೀಗ ಅಂತಿಮ ಹಂತಕ್ಕೆ ಬಂದಿದೆ.

ಆನ್‌ಲೈನ್‌ ಜೂಜು ನಿಯಂತ್ರಣಕ್ಕೆ ನಿಯಮಗಳನ್ನು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿ ದಾವಣಗೆರೆಯ ಡಿ.ಆರ್‌. ಶಾರದಾ ಎಂಬುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ವಿಭಾಗೀಯ ಪೀಠವು ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ ಚಾಟಿ ಬೀಸುತ್ತಿರುವ ಬೆನ್ನಲ್ಲೇ ಒಳಾಡಳಿತ ಇಲಾಖೆಯು ಸಿದ್ಧಪಡಿಸಿರುವ ಮಸೂದೆಯು ಅಂತಿಮ ಹಂತದಲ್ಲಿದೆ. ಇಲಾಖೆಯು ಸಿದ್ಧಪಡಿಸಿರುವ ಕರಡು ಮಸೂದೆ ಮತ್ತು ಸಚಿವ ಸಂಪುಟ ಟಿಪ್ಪಣಿ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

‘ಅನ್‌ಲೈನ್‌ ಆಟವು ಜೂಜಿನ ತಾಣವಾಗಿದ್ದು ಸರ್ಕಾರದ ಪರವಾನಿಗೆ ಪಡೆಯದೇ ಚೀನಿ ಆಪ್‌ಗಳನ್ನು ಬಳಸಲಾಗುತ್ತಿದ್ದು ಈ ಚಟಕ್ಕೆ ಬಿದ್ದು ಸಾಕಷ್ಟು ಸಂಸಾರಗಳೇ ಬೀದಿಗೆ ಬರುವಂತಾಗುತ್ತಿದೆ. ಇಂದು ದೊಡ್ಡವರು, ಮಕ್ಕಳು ಎನ್ನದೇ ಎಲ್ಲರೂ ಈ ಚಟಕ್ಕೆ ಬಿದ್ದು ಲಕ್ಷಾಂತರ ರು.ಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಮತ್ತಷ್ಟು ಜನ ಈ ಜೂಜಿಗೆ ಆಕರ್ಷಿತರಾಗಿ ಹಣ ಕಳೆದುಕೊಂಡು ಬೀದಿಗೆ ಬೀಳಬಾರದು ಎಂಬ ಕಾರಣಕ್ಕೆ ಇದೀಗ ಆನ್‌ಲೈನ್‌ ಜೂಜಿನ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವ ಹಿನ್ನೆಲೆಯಲ್ಲಿ ಆನ್‌ಲೈನ್‌ ಜೂಜಾಟ, ಆನ್‌ಲೈನ್‌ ಸ್ಕಿಲ್‌ ಗೇಮ್‌ ನಿಷೇಧಿಸುವ ಮಸೂದೆ ಜಾರಿಗೊಳಿಸಬೇಕಾಗಿರುವುದು ಅವಶ್ಯಕವಾಗಿರುತ್ತದೆ. ರಾಜ್ಯದಲ್ಲಿ ಈ ಕಾಯ್ದೆಯನ್ನು ಜಾರಿಗೆ ತರುವುದರಿಂದ ಆನ್‌ಲೈನ್‌ ಜೂಜಾಟದಲ್ಲಿ ಸಾಕಷ್ಟು ಮಂದಿ ಹಣ ಕಳೆದುಕೊಳ್ಳುವುದನ್ನು ನಿಯಂತ್ರಿಸಬಹುದು.,’ ಎಂದು ಒಳಾಡಳಿತ ಇಲಾಖೆಯು ಸಮರ್ಥಿಸಿಕೊಂಡಿರುವುದು ಸಚಿವ ಸಂಪುಟದ ಟಿಪ್ಪಣಿ ಪ್ರತಿಯಿಂದ ತಿಳಿದು ಬಂದಿದೆ.

ಅದೇ ರೀತಿ ‘ಆನ್‌ಲೈನ್‌ ಗೇಮ್‌ಗಳನ್ನು ಆಡಲು ಬಯಸುವ ವ್ಯಕ್ತಿಯು ಪರವಾನಿಗೆ ಪಡೆದ ಸಂಸ್ಥೆಗೆ ಶುಲ್ಕವನ್ನು ಪಾವತಿಸಬೇಕಾಗಿರುವುದರಿಂದ ಸರ್ಕಾರಕ್ಕೆ ತೆರಿಗೆ ಪಾವತಿಯಾದಂತಾಗುತ್ತದೆ. ಇದರಿಂದ ಬೆಟ್ಟಿಂಗ್ ದಂಧೆಗಳಿಗೆ ಕಡಿವಾಣ ಹಾಕಿದಂತಾಗುತ್ತದೆ,’ ಎಂದೂ ಒಳಾಡಳಿತ ಇಲಾಖೆಯು ಸಮರ್ಥಿಸಿಕೊಂಡಿದೆ.

ಕರಡು ಮಸೂದೆಯಲ್ಲೇನಿದೆ?

ಆನ್‌ಲೈನ್ ಜೂಜಾಟ ಆಡುವವರಿಗೆ ಒಂದು ವರ್ಷಕ್ಕಿಂತ ಕಡಿಮೆ ಇಲ್ಲದ ಹಾಗೂ 3 ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ, 50,000ಕ್ಕಿಂತ ಕಡಿಮೆ ಇಲ್ಲದ ಹಾಗೂ 2 ಲಕ್ಷ ರು.ವರೆಗೆ ದಂಡ ವಿಧಿಸಬಹುದು ಎಂಬ ನಿಯಮಗಳನ್ನು ಅಳವಡಿಸಲು ಮುಂದಾಗಿರುವುದು ಮಸೂದೆಯಿಂದ ತಿಳಿದು ಬಂದಿದೆ.

ಅಲ್ಲದೆ ಸೆಕ್ಷನ್‌ 4ರ ಪ್ರಕಾರ ಅಪರಾಧ ಎಸಗಿದ್ದಲ್ಲಿ 2 ವರ್ಷಕ್ಕಿಂತ ಕಡಿಮೆ ಇಲ್ಲದ ಹಾಗೂ 5 ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ, 1 ಲಕ್ಷ ರು.ಗಳಿಗಿಂತ ಕಡಿಮೆ ಇಲ್ಲದ ಹಾಗೂ 5 ಲಕ್ಷ ರು.ಗಳವರೆಗೆ ದಂಡ ವಿಧಿಸಲು ನಿಯಮ ರೂಪಿಸಿದೆ. ಅಲ್ಲದೆ ಪರವಾನಿಗೆ ಇಲ್ಲದೆ ಸ್ಕಿಲ್‌ ಗೇಮ್‌ ನಡೆಸಿದ್ದಲ್ಲಿ ಒಂದು ತಿಂಗಳಿಗಿಂತ ಕಡಿಮೆ ಇಲ್ಲದ ಹಾಗೂ ಒಂದು ವರ್ಷದವರೆಗೆ ವಿಸ್ತರಿಸಿಬಹುದಾದ ಜೈಲು ಶಿಕ್ಷೆ ಮತ್ತು 25,000 ರು.ಗಳಿಗಿಂತ ಕಡಿಮೆ ಇಲ್ಲದ 50 ಸಾವಿರದವರೆಗೆ ದಂಡ ವಿಧಿಸಲು ನಿಯಮ ರೂಪಿಸಿರುವುದು ಕರಡು ಮಸೂದೆಯಿಂದ ಗೊತ್ತಾಗಿದೆ.

ಅದೇ ರೀತಿ ಕರ್ನಾಟಕ ರಾಜ್ಯ ಆನ್‌ಲೈನ್‌ ಜೂಜಾಟ ಮತ್ತು ಆನ್‌ಲೈನ್‌ ಸ್ಕಿಲ್‌ ಗೇಮ್‌ ನಿಷೇಧ ಮಸೂದೆ 2020 ಅಡಿಯಲ್ಲಿ ಅಪರಾಧ ಎಸಗುವುದು ಜಾಮೀನು ರಹಿತ ಅಪರಾಧ ಎಂದು ಹೇಳಲಾಗಿದೆ. ಅಲ್ಲದೆ ಪ್ರಥಮ ದರ್ಜೆ ಮೆಟ್ರೋಪಾಲಿಟಿನ್‌ ಮ್ಯಾಜಿಸ್ಟ್ರೇಟ್‌ ವ್ಯಾಪ್ತಿಗೆ ತರಲಿದೆ.

ಮಸೂದೆಯ 3ನೇ ಅಧ್ಯಾಯದಲ್ಲಿ ಅಪರಾಧ ಮತ್ತು ಶಿಕ್ಷೆ ಕುರಿತು ವಿವರಿಸಲಾಗಿದೆಯಲ್ಲದೆ ಆನ್‌ಲೈನ್‌ ಜೂಜಾಟ ಮತ್ತು ಆನ್‌ಲೈನ್‌ ಸ್ಕಿಲ್‌ ಗೇಮ್‌ ನಡೆಸುವ ಕಂಪನಿಗಳನ್ನೂ ಮಸೂದೆ ವ್ಯಾಪ್ತಿಗೆ ತರಲಾಗಿದೆ. ಕಂಪನಿಯ ನಿರ್ದೇಶಕ, ಪಾಲುದಾರ, ವ್ಯವಸ್ಥಾಪಕ, ಕಾರ್ಯದರ್ಶಿ ಅಥವಾ ಕಂಪನಿಯ ಯಾವುದೇ ಅಧಿಕಾರಿಯನ್ನೂ ಶಿಕ್ಷಿಸಲು ಅವಕಾಶ ಕಲ್ಪಿಸಿದೆ. ಹಾಗೆಯೇ ಅವರು ಹೊಂದಿರುವ ಆಸ್ತಿಯನ್ನು ಮುಟ್ಟುಗೋಲು ಅಥವಾ ಜಫ್ತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿರುವುದು ತಿಳಿದು ಬಂದಿದೆ.

ಆನ್‌ಲೈನ್ ಕಾರ್ಡ್‌ ಆಟಗಳಾದ ರಮ್ಮಿ, ಪೋಕರ್, ಬ್ಲ್ಯಾಕ್‌ ಜ್ಯಾಕ್‌ಗಳಲ್ಲಿ ಆಟ ಆರಂಭಿಸುವ ಮುನ್ನವೇ ಆಟಗಾರರು ನಿಗದಿತ ಮೊತ್ತದ ಠೇವಣಿ ಇಡಬೇಕು. ಆಟ ಮುಂದುವರಿದಂತೆ, ಆಟಗಾರರು ಜೂಜಿಗಾಗಿ ಮತ್ತಷ್ಟು ಹಣವನ್ನು ಹೂಡುತ್ತಾ ಹೋಗಬೇಕು. ಹೀಗೆ ಜೂಜಿಗೆ ಇಡಬಹುದಾದ ಮೊತ್ತದ ಮೇಲೆ ಗರಿಷ್ಠ ಮಿತಿ ಇಲ್ಲ. ಅಲ್ಲದೆ ಸ್ಮಾರ್ಟ್‌ಫೋನ್‌ಗಳಲ್ಲಿ ಇವನ್ನು ಆಡಬಹುದಾದ ಕಾರಣ, ಎಲ್ಲೋ ಕೂತು ಜೂಜಾಡಬಹುದು. ಅತ್ಯಲ್ಪ ಅವಧಿಯಲ್ಲಿ ಹಣ ಗಳಿಸುವ ಆಸೆಗೆ ಬಿದ್ದ ಸಾಮಾನ್ಯರೂ ಇದರಲ್ಲಿ ಹಣ ಹೂಡಿಕೆ ಮಾಡಿ, ನಷ್ಟ ಮಾಡಿಕೊಂಡಿರುವ ಪ್ರಕರಣಗಳು ಸಂಖ್ಯೆ ಸಾಕಷ್ಟಿವೆ.

ಆನ್‌ಲೈನ್‌ ಜೂಜಾಟಗಳ ಪೈಕಿ ರಮ್ಮಿ, ಜಂಗಲ್‌ ರಮ್ಮಿಯಂತಹ ಜೂಜಾಟಗಳನ್ನು ಪರಿಚಯಿಸಿದ್ದ ಕಂಪನಿಗಳು ಭಾರೀ ಹಣ ಗಳಿಸಬಹುದು ಎಂದು ಜಾಹೀರಾತು ನೀಡಿ ಯುವಜನರನ್ನು ಜೂಜಾಟಕ್ಕೆ ಆಕರ್ಷಿಸಿದ್ದವು. ಜೂಜಾಟ ಮೂಲಕ ಹಣ ಗಳಿಸುವ ಆಸೆಯಿಂದಾಗಿ ಯುವ ಜನಾಂಗವು ಇಂತಹ ಆಟಗಳ ಮೂಲಕ ಲಕ್ಷಾಂತರ ರು.ಗಳನ್ನು ಕಳೆದುಕೊಂಡು ಬೀದಿಪಾಲಾಗುತ್ತಿದ್ದಾರೆ.

‘ನಾಲ್ಕು ತಿಂಗಳಾದರೂ ಈ ವಿಚಾರದಲ್ಲಿ ಸರ್ಕಾರದ ನಿಲುವು ಸ್ಪಷ್ಟಪಡಿಸುವುದಕ್ಕೆ ಪೂರಕವಾಗಿ ಸಂಪುಟ ಸಭೆಯ ನಿರ್ಣಯ ಮತ್ತು ಆಕ್ಷೇಪಣೆ ಸಲ್ಲಿಸಿರಲಿಲ್ಲ. ರಾಜ್ಯ ಸರ್ಕಾರದ ಕೋರಿಕೆಯಂತೆ ಹಲವು ಬಾರಿ ವಿಚಾರಣೆ ಮುಂದೂಡಲಾಗಿತ್ತು. ಜೂನ್‌ನಲ್ಲಿ ನಡೆದ ವಿಚಾರಣೆ ವೇಳೆಯೂ ಸರ್ಕಾರ, ತನ್ನ ನಿಲುವು ಸ್ಪಷ್ಟಪಡಿಸಿರಲಿಲ್ಲ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಇನ್ನು ನಮಗೆ ಬೇರೆ ಯಾವುದೇ ದಾರಿಗಳಿಲ್ಲ. ಯಾವ ಕಾರಣಕ್ಕಾಗಿ ನ್ಯಾಯಾಲಯದ ಆದೇಶವನ್ನು ಪಾಲಿಸಿರಲಿಲ್ಲ ಎಂಬುದರ ಕುರಿತು ಒಂದು ವಾರದೊಳಗೆ ಮುಖ್ಯ ಕಾರ್ಯದರ್ಶಿ ಪ್ರಮಾಣಪತ್ರ ಸಲ್ಲಿಸಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ನೇತೃತ್ವದ ವಿಭಾಗೀಯ ಪೀಠವು ತಾಕೀತು ಮಾಡಿದ್ದನ್ನು ಸ್ಮರಿಸಬಹುದು.

2020ರ ನವೆಂಬರ್‌ನಲ್ಲಿ ಸಾರ್ವಜನಿಕ ಹಿತಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ನಾಲ್ಕು ತಿಂಗಳಾದರೂ ಈ ಸಂಬಂಧ ಸಂಪುಟ ಸಭೆಯ ನಿರ್ಣಯ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಿರಲಿಲ್ಲ. ಮತ್ತೆ ಎರಡು ವಾರಗಳ ಕಾಲ ವಿಚಾರಣೆ ಮುಂದೂಡುವಂತೆ ಸರ್ಕಾರದ ಪರ ವಕೀಲರು ಮನವಿ ಮಾಡಿದ್ದರು.

ಆನ್‌ಲೈನ್ ಜೂಜು ಅದೃಷ್ಟದ ಆಟವೇ ಅಥವಾ ಕೌಶಲ ಒಳಗೊಂಡಿರುತ್ತದೆಯೇ ಎಂಬುದರ ಮೇಲ್ವಿಚಾರಣೆ ನಡೆಸಲು ಯಾವುದೇ ಕಾರ್ಯವಿಧಾನ ಇಲ್ಲ. ನಿಯಮ ರೂಪಿಸುವ ಬಗ್ಗೆ ರಾಜ್ಯ ಸರ್ಕಾರವೂ ತಲೆಕೆಡಿಸಿಕೊಂಡಿರಲಿಲ್ಲ. ಆನ್‌ಲೈನ್ ಜೂಜು ರದ್ದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್​ಗೆ ಆನ್‌ಲೈನ್ ಗೇಮ್ಸ್ ಒಕ್ಕೂಟ, ಆನ್‌ಲೈನ್ ಗ್ಯಾಂಬ್ಲಿಂಗ್ ನಿಯಂತ್ರಿಸಲು ಸಮ್ಮತಿಯಿದ್ದು, ಆದರೆ ಸರ್ಕಾರ ಸ್ಕಿಲ್ ಗೇಮ್ ನಿರ್ಬಂಧಿಸಬಾರದು ಎಂದು ಮನವಿ ಮಾಡಿತ್ತು.

ತಮಿಳುನಾಡಿನಲ್ಲಿ 5,000 ರೂ. ದಂಡ, 6 ತಿಂಗಳ ಸೆರೆವಾಸ ಹಾಗೂ ಆನ್‌ಲೈನ್ ಜೂಜು ಆಯೋಜಿಸುವಂತರಿಗೆ 10,000 ರೂ. ದಂಡ, ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು ಎಂಬ ನಿಯಮಗಳನ್ನು ನೂತನ ಮಸೂದೆಯಲ್ಲಿ ಅಳವಡಿಸಿತ್ತು. ಅದೇ ರೀತಿ ಆಂಧ್ರ ಪ್ರದೇಶದಲ್ಲಿ ಅಪರಾಧಿಗಳಿಗೆ 5 ಸಾವಿರ ದಂಡ ಮತ್ತು ಒಂದು ವರ್ಷದ ಜೈಲು ಶಿಕ್ಷೆಯನ್ನು ನಿಗಧಿಪಡಿಸಲಾಗಿದ್ದು, ಅಪರಾಧ ಮರುಕಳಿಸಿದರೆ ಅಂಥವರಿಗೆ 10 ಸಾವಿರ ದಂಡ ಮತ್ತು ಎರಡು ವರ್ಷಗಳ ಜೈಲು ಶಿಕ್ಷೆ ನೀಡುವ ಬಗ್ಗೆ ತೀರ್ಮಾನಿಸಲಾಗಿದೆ. ಜಾಮೀನು ರಹಿತ ಶಿಕ್ಷೆ ವಿಧಿಸಿದೆ.

the fil favicon

SUPPORT THE FILE

Latest News

Related Posts