ನಾಗರಿಕರ ಪರದಾಟ; ಕರ್ನಾಟಕದ ಖಾಸಗಿ ಆಸ್ಪತ್ರೆಗಳಲ್ಲಿ 22.19 ಲಕ್ಷ ಲಸಿಕೆ ದಾಸ್ತಾನು

ಬೆಂಗಳೂರು; ರಾಜ್ಯದ ಹಲವು ಜಿಲ್ಲಾ ಕೇಂದ್ರಗಳಲ್ಲಿ ಕೋವಿಡ್‌ ಲಸಿಕೆಗಳ ಕೊರತೆ ಉದ್ಭವಿಸಿದೆ ಎಂದು ಹೇಳಲಾಗುತ್ತಿರುವ ಬೆನ್ನಲ್ಲೇ ರಾಜ್ಯದ ಕಾರ್ಪೋರೇಟ್‌ ಮತ್ತು ಸಣ್ಣ, ಮಧ್ಯಮ ಪ್ರಮಾಣದ ಖಾಸಗಿ ಆಸ್ಪತ್ರೆಗಳು 22.19 ಲಕ್ಷ ಪ್ರಮಾಣ ಲಸಿಕೆ ದಾಸ್ತಾನು ಮಾಡಿಟ್ಟುಕೊಂಡಿವೆ! ದೇಶದ 37 ರಾಜ್ಯಗಳಲ್ಲಿರುವ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 1.56 ಕೋಟಿ ಲಸಿಕೆ ದಾಸ್ತಾನಿದೆ.

ರಾಜ್ಯದಲ್ಲಿ ಕೋವಿಡ್‌ ಲಸಿಕೆಯೇ ಇಲ್ಲ ಎಂಬಂತಹ ಪರಿಸ್ಥಿತಿ ಒಮ್ಮೆಯೂ ನಿರ್ಮಾಣವಾಗಿಲ್ಲ. ರಾಜ್ಯದಲ್ಲಿ ಲಸಿಕೆ ಕೊರತೆಯಿಲ್ಲ’ ಎಂದು ಆರೋಗ್ಯ ಸಚಿವ ಡಾ ಕೆ.ಸುಧಾಕರ್‌ ಹೇಳಿಕೆ ನೀಡಿದ ಬೆನ್ನಲ್ಲೇ ಖಾಸಗಿ ಆಸ್ಪತ್ರೆಗಳಲ್ಲಿ 22.19 ಲಕ್ಷ ಲಸಿಕೆಗಳ ದಾಸ್ತಾನು ಇರುವ ವಿಚಾರವು ಮುನ್ನೆಲೆಗೆ ಬಂದಿದೆ. ಲಸಿಕೆ ದಾಸ್ತಾನು ಮಾಡಿಟ್ಟುಕೊಂಡಿರುವ ದೇಶದ ರಾಜ್ಯಗಳ ಖಾಸಗಿ ಆಸ್ಪತ್ರೆಗಳ ಪೈಕಿ ಕರ್ನಾಟಕದ ಖಾಸಗಿ ಆಸ್ಪತ್ರೆಗಳು 2ನೇ ಸ್ಥಾನದಲ್ಲಿವೆ. ಬಿಹಾರ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್‌, ಪುದುಚೇರಿ, ತ್ರಿಪುರದ ಖಾಸಗಿ ಆಸ್ಪತ್ರೆಗಳು ಲಸಿಕೆಯನ್ನು ದಾಸ್ತಾನು ಮಾಡಿಟ್ಟುಕೊಂಡಿಲ್ಲ.

ದೇಶದ 37 ರಾಜ್ಯಗಳಲ್ಲಿ ಕೋವಿಡ್‌ ಲಸಿಕೆ ವಿತರಣೆ ಮತ್ತು ಲಭ್ಯತೆ ಕುರಿತು ಒಕ್ಕೂಟ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಲಸಿಕೆಗಳ ದಾಸ್ತಾನು ಕುರಿತಂತೆ ಸದ್ಯದ ಸ್ಥಿತಿ ಕುರಿತು ಅಂಕಿ ಅಂಶಗಳನ್ನು ಒದಗಿಸಿದೆ. 37 ರಾಜ್ಯಗಳ ಪೈಕಿ ಕರ್ನಾಟಕದ ಖಾಸಗಿ ಆಸ್ಪತ್ರೆಗಳಲ್ಲಿ 22,19,640 ಕೋವಿಡ್‌ ಲಸಿಕೆಗಳು ದಾಸ್ತಾನು ಇದೆ ಎಂಬ ವಿವರಗಳನ್ನು ನಮೂದಿಸಿದೆ. ಆದರೆ ಆಸ್ಪತ್ರೆವಾರು ಲಸಿಕೆಗಳ ವಿವರಗಳನ್ನು ಒದಗಿಸಿಲ್ಲ.

ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲೀಗ 17,81,420 ಕೋವಿಶೀಲ್ಡ್‌ ಮತ್ತು 4,38,220 ಕೋವಾಕ್ಸಿನ್‌ ಸೇರಿದಂತೆ ಒಟ್ಟಾರೆ 22,19,640 ಲಸಿಕೆಗಳಿವೆ ಎಂಬುದು ಪ್ರಮಾಣಪತ್ರದಿಂದ ತಿಳಿದು ಬಂದಿದೆ.

ಮಹಾರಾಷ್ಟ್ರದಲ್ಲಿರುವ ಖಾಸಗಿ ಆಸ್ಪತ್ರೆಗಳಲ್ಲಿ 41,99,760 ದಾಸ್ತಾನಿದೆ. ಈ ಪೈಕಿ 36,71,760 ಕೋವಿಶೀಲ್ಡ್‌ ಲಸಿಕೆ ಇದ್ದರೆ 5,28,000 ಕೊವಾಕ್ಸಿನ್‌ ಲಸಿಕೆ ಇದೆ. ಮಹಾರಾಷ್ಟ್ರ ಪಶ್ಚಿಮ ಬಂಗಾಳದಲ್ಲಿ 19,21,320, ಉತ್ತರ ಪ್ರದೇಶದಲ್ಲಿ 4,83,220, ಗುಜರಾತ್‌ನಲ್ಲಿ 4,26,000, ದೆಹಲಿಯಲ್ಲಿ 18,09,980, ತೆಲಂಗಾಣದಲ್ಲಿ 15,41,020 ಲಸಿಕೆ ದಾಸ್ತಾನಿದೆ ಎಂದು ಒಕ್ಕೂಟ ಸರ್ಕಾರವು ಸಲ್ಲಿಸಿರುವ ಪ್ರಮಾಣಪತ್ರದಿಂದ ಗೊತ್ತಾಗಿದೆ.

ಆಂಧ್ರ ಪ್ರದೇಶದಲ್ಲಿನ ಖಾಸಗಿ ಆಸ್ಪತ್ರೆಗಳಲ್ಲಿ 1,36,860, ಅರುಣಾಚಲ ಪ್ರದೇಶದಲ್ಲಿ 50,000, ಅಸ್ಸಾಂನಲ್ಲಿ 73,600, ಛತ್ತೀಸ್‌ಗಡ್‌ದಲ್ಲಿ 44,480, ಗೋವಾದಲ್ಲಿ 40,100, ಹರ್ಯಾಣದಲ್ಲಿ 8,93,250, ಹಿಮಾಚಲಪ್ರದೇಶದಲ್ಲಿ 8,000, ಜಮ್ಮು ಕಾಶ್ಮೀರದಲ್ಲಿ 5,700, ಜಾರ್ಖಂಡ್‌ನಲ್ಲಿ 46,120, ಕೇರಳದಲ್ಲಿ 3,99,940, ಮಧ್ಯ ಪ್ರದೇಶದಲ್ಲಿ 40,000, ಮಿಜೋರಾಂ 12,000, ಒಡಿಶಾದಲ್ಲಿ 35,500, ಪಂಜಾಬ್‌ನಲ್ಲಿ 2,75,440, ರಾಜಸ್ಥಾನದಲ್ಲಿ 1,48,220, ಸಿಕ್ಕೀಂನಲ್ಲಿ 24,000, ತಮಿಳುನಾಡಿನಲ್ಲಿ 6,63,810, ಉತ್ತರ ಪ್ರದೇಶದಲ್ಲಿ 4,83,220, ಉತ್ತರಾಖಂಡ್‌ನ ಖಾಸಗಿ ಆಸ್ಪತ್ರೆಗಳಲ್ಲಿ 1,13,200 ಕೋವಿಡ್‌ ಲಸಿಕೆಗಳಿವೆ.

ಒಟ್ಟು ಉತ್ಪಾದನೆಯಾಗಿರುವ ಲಸಿಕೆಗಳ ಪೈಕಿ ಶೇ.50ರಷ್ಟು ಪ್ರಮಾಣದಲ್ಲಿ ಬೆಂಗಳೂರು ನಗರ ಸೇರಿದಂತೆ ದೇಶದ ಮಹಾನಗರಗಳಲ್ಲಿರುವ ಕಾರ್ಪೋರೇಟ್‌ ಆಸ್ಪತ್ರೆಗಳು ಖರೀದಿಸಿದ್ದು ಆಕ್ಷೇಪಕ್ಕೆ ಕಾರಣವಾಗಿತ್ತು. ವಿಶೇಷವೆಂದರೆ ಕರ್ನಾಟಕದಲ್ಲಿ ಕೋವಿಡ್‌ 3ನೇ ಅಲೆಯನ್ನು ತಡೆಗಟ್ಟಲು ರಚಿಸಿರುವ ತಜ್ಞರ ಸಮಿತಿ ಅಧ್ಯಕ್ಷರಾಗಿರುವ ಡಾ ದೇವಿಶೆಟ್ಟಿ ಅವರು ನಡೆಸುವ ನಾರಾಯಣ ಹೃದಯಾಲಯವು 2.02 ಲಕ್ಷ ಡೋಸ್‌ಗಳನ್ನು ಮೇ ತಿಂಗಳಲ್ಲಿ ಖರೀದಿಸಿತ್ತು. ಶಿವಮೊಗ್ಗ ನಗರದಲ್ಲಿನ ಖಾಸಗಿ ಆಸ್ಪತ್ರೆಯೊಂದು 6,000 ಕೋವಿಶೀಲ್ಡ್‌ ಡೋಸ್‌ಗಳನ್ನು ಖರೀದಿಸಿ ದಾಸ್ತಾನು ಮಾಡಿದ್ದನ್ನು ಸ್ಮರಿಸಬಹುದು.

ಕೋವಿಡ್‌ ಲಸಿಕೆಗಳನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಲು ಉತ್ಪಾದಕ ಕಂಪನಿಗಳಿಗೆ ಅವಕಾಶ ಮಾಡಿಕೊಟ್ಟ ಮರುಗಳಿಗೆಯಲ್ಲಿಯೇ ಫೋರ್ಟಿಸ್‌ ಸೇರಿದಂತೆ ಕಾರ್ಪೋರೇಟ್‌ ಆಸ್ಪತ್ರೆಗಳು ಶೇ.50ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಗಳನ್ನು ಖರೀದಿಸಿ ದಾಸ್ತಾನು ಮಾಡಿಟ್ಟುಕೊಂಡಿದ್ದವು.

ಮೇ ತಿಂಗಳಿನಲ್ಲಿ ಕೋವಿಡ್‌–19 ಲಸಿಕೆ ನೀಡುವಲ್ಲಿನ ಕಳಪೆ ಸಾಧನೆಗೆ ರಾಜ್ಯಗಳೇ ಕಾರಣ ಎಂಬುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಹೇಳಿದ್ದನ್ನು ಸ್ಮರಿಸಬಹುದು. ಮೇ ತಿಂಗಳ ಅಂತ್ಯಕ್ಕೆ ರಾಜ್ಯಗಳ ಬಳಿ ಲಸಿಕೆಯ 1.6 ಕೋಟಿ ಡೋಸ್‌ಗಳಿದ್ದವು’ ಎಂದೂ ಸಚಿವಾಲಯ ಹೇಳಿತ್ತು. ಆ ಮೂಲಕ, ಅಗತ್ಯ ಪ್ರಮಾಣದ ಡೋಸ್‌ಗಳಷ್ಟು ಲಸಿಕೆ ಇದ್ದರೂ, ರಾಜ್ಯಗಳು ನೀಡುವಲ್ಲಿ ವಿಫಲವಾಗಿವೆ ಎಂದು ಸೂಚ್ಯವಾಗಿ ಸಚಿವಾಲಯ ರಾಜ್ಯಗಳನ್ನೇ ದೂಷಿಸಿತ್ತು.

ಮೇ 1ರಿಂದ 31ರ ವರೆಗಿನ ಅವಧಿಯಲ್ಲಿ ಒಟ್ಟು 7.9 ಕೋಟಿ ಡೋಸ್‌ಗಳಷ್ಟು ಲಸಿಕೆ ಲಭ್ಯ ಇತ್ತು. ಈ ಪೈಕಿ 6.1 ಕೋಟಿ ಡೋಸ್‌ಗಳಷ್ಟು ಲಸಿಕೆಯನ್ನು ಹಾಕಲಾಗಿದೆ. ಇನ್ನೂ ಅಂದಾಜು 1.6 ಕೋಟಿ ಡೋಸ್‌ಗಳಷ್ಟು ಲಸಿಕೆ ಬಳಕೆಯಾಗದೇ ಉಳಿದಿತ್ತು’ ಎಂದು ಸಚಿವಾಲಯ ತಿಳಿಸಿತ್ತು.

ಒಕ್ಕೂಟ ಸರ್ಕಾರವು ಜೂನ್‌ ತಿಂಗಳಿಗಾಗಿ 12 ಕೋಟಿ ಡೋಸ್‌ಗಳನ್ನು ಒದಗಿಸುವುದಾಗಿ ಭರವಸೆ ನೀಡಿತ್ತು. ಆದರೆ, ಮೇ ತಿಂಗಳಲ್ಲಿ ಲಭ್ಯವಿದ್ದ 7.9 ಕೋಟಿ ಡೋಸ್‌ಗಳ ಪೈಕಿ ಅಂದಾಜು 5.8 ಕೋಟಿ ಡೋಸ್‌ಗಳಷ್ಟು ಲಸಿಕೆಯನ್ನು ಹಾಕಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸಚಿವಾಲಯ ಈ ಅಂಕಿ–ಅಂಶಗಳನ್ನು ಬಿಡುಗಡೆ ಮಾಡಿದ್ದನ್ನು ಸ್ಮರಿಸಬಹುದು.

ಭಾರತದ ಎರಡು ಕಂಪನಿಗಳು ತಮ್ಮ ಉತ್ಪಾದನೆಯ ಸಾಮರ್ಥ್ಯಕ್ಕಿಂತಲೂ ಶೇಕಡ 30ರಷ್ಟು ಕಡಿಮೆ ಲಸಿಕೆಗಳನ್ನು ಈ ವರ್ಷದ ಮೊದಲ ಐದು ತಿಂಗಳಲ್ಲಿ ಪೂರೈಸಿವೆ ಎಂದು ವರದಿಯಾಗಿತ್ತು. ಆಗಸ್ಟ್‌ನಿಂದ ಡಿಸೆಂಬರ್‌ ತಿಂಗಳಲ್ಲಿ ದೊರೆಯುವ ಲಸಿಕೆಯ ಪ್ರಮಾಣ ನಿರೀಕ್ಷೆಯಷ್ಟು ದೊರೆಯವುದಿಲ್ಲ ಎಂದು ತಿಳಿಸಿದೆ.

ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ಮತ್ತು ಭಾರತ್‌ ಬಯೋಟೆಕ್‌ನಿಂದ ಡಿಸೆಂಬರ್‌ ವೇಳೆಗೆ 216 ಕೋಟಿ ಡೋಸ್‌ ದೊರೆಯುವ ನಿರೀಕ್ಷೆ ಇತ್ತು. ಆದರೀಗ 135 ಕೋಟಿ ಡೋಸ್‌ಗಳು ಲಭ್ಯವಾಗಬಹುದು ಎಂದು ತಿಳಿಸಿತ್ತು. ಜನವರಿ ಮತ್ತು ಮೇ ತಿಂಗಳಲ್ಲಿ ಈ ಎರಡು ಕಂಪನಿಗಳು 22.07 ಕೋಟಿ ಡೋಸ್‌ಗಳನ್ನು ಕೇಂದ್ರ ಸರ್ಕಾರಕ್ಕೆ ಪೂರೈಸಿದ್ದವು. ಜತೆಗೆ, 4.19 ಕೋಟಿ ಡೋಸ್‌ಗಳನ್ನು ನೇರವಾಗಿ ರಾಜ್ಯಗಳಿಗೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ವಿತರಿಸಲಾಗಿತ್ತು. ಆದರೆ, ಈ ಪ್ರಮಾಣವು ಉತ್ಪಾದನೆಯ ಬಗ್ಗೆ ಘೋಷಿಸಿಕೊಂಡಿದ್ದಕ್ಕಿಂತಲೂ ಅತಿ ಕಡಿಮೆ ಎಂದು ಪ್ರಮಾಣಪತ್ರದಲ್ಲಿ ವಿವರಣೆ ನೀಡಿದೆ.

‘ಎಸ್‌ಐಐ ಉತ್ಪಾದನೆಯನ್ನು ಹೆಚ್ಚಿಸಲಿದ್ದು, ಪ್ರತಿ ತಿಂಗಳು 5 ಕೋಟಿ ಡೋಸ್‌ಗಳಿಂದ 6.5 ಕೋಟಿ ಡೋಸ್‌ ತಯಾರಿಸಲಿದೆ. ಅದೇ ರೀತಿ, ಭಾರತ್ ಬಯೋಟೆಕ್‌ ಸಹ ಪ್ರತಿ ತಿಂಗಳು 90 ಲಕ್ಷದಿಂದ 2 ಕೋಟಿಗೆ ಹೆಚ್ಚಿಸಲಿದೆ. 2021ರ ಜುಲೈ ವೇಳೆಗೆ 5.5 ಕೋಟಿ ಡೋಸ್‌ ಉತ್ಪಾದಿಸಲಿದೆ’ ಎಂದು ಕೇರಳ ಹೈಕೋರ್ಟ್‌ಗೆ ಕಳೆದ ತಿಂಗಳು ಆರೋಗ್ಯ ಸಚಿವಾಲಯ ಪ್ರಮಾಣ ಪತ್ರ ಸಲ್ಲಿಸಿತ್ತು.

ಕೋವಿಡ್‌ ಲಸಿಕೆಗಳ ಖರೀದಿ ಸಂಬಂಧ ಕೇಂದ್ರ ಸರ್ಕಾರವು ಪ್ರತ್ಯೇಕ ದರ ನಿಗದಿಪಡಿಸಿದ್ದರಿಂದ ಕರ್ನಾಟಕ ಸರ್ಕಾರದ ಬೊಕ್ಕಸದ ಮೇಲೆ ಈವರೆವಿಗೆ ಅಂದಾಜು 55.78 ಕೋಟಿ ರು. ಹೊರೆಬಿದ್ದಿತ್ತು. ರಾಜ್ಯಕ್ಕೆ 2021ರ ಜೂನ್‌ 2ರವರೆಗೆ ರಾಜ್ಯ ಸರ್ಕಾರವು ಖರೀದಿಸಿರುವ ಒಟ್ಟು 30.71 ಲಕ್ಷ ಡೋಸ್‌ (ಕೋವಿಶೀಲ್ಡ್‌ ಮತ್ತು ಕೊವಾಕ್ಸಿನ್‌) ಗಳಿಗೆ 101.84 ಕೋಟಿ ರು. ವೆಚ್ಚವಾಗಲಿದೆ. ಈ ಪೈಕಿ 87 ಕೋಟಿ ರು.ಗಳನ್ನು ಸಿರಮ್‌ ಇನ್ಸಿಟಿಟ್ಯೂಟ್‌ ಮತ್ತು ಭಾರತ್‌ ಬಯೋಟೆಕ್‌ ಕಂಪನಿಗೆ ಈಗಾಗಲೇ ಪಾವತಿ ಮಾಡಿತ್ತು.

ಒಂದೊಮ್ಮೆ ಲಸಿಕೆಗಳನ್ನು ಕೇಂದ್ರ ಸರ್ಕಾರವೇ 150 ರು. ದರದಲ್ಲಿಯೇ ಖರೀದಿಸಿ ರಾಜ್ಯಗಳಿಗೆ ಹಂಚಿಕೆ ಮಾಡಿದ್ದರೆ ರಾಜ್ಯ ಸರ್ಕಾರದ ಮೇಲೆ 55.78 ಕೋಟಿ ಹೊರೆ ಬೀಳುತ್ತಿರಲಿಲ್ಲ. ಜೂನ್‌ 2ರವರೆಗೆ ರಾಜ್ಯ ಸರ್ಕಾರವು ಕಂಪನಿಗಳಿಂದ ನೇರವಾಗಿ 30.71 ಲಕ್ಷ ಡೋಸ್‌ಗಳನ್ನು ಖರೀದಿಗೆ ಆದೇಶ ನೀಡಿದೆ. 150 ರು. ದರದಲ್ಲಿ ಕೇಂದ್ರ ಸರ್ಕಾರವೇ 30.71 ಲಕ್ಷ ಡೋಸ್‌ಗಳನ್ನು ಖರೀದಿಸಿದಿದ್ದರೆ ಕೇವಲ 46.06 ಕೋಟಿ ರು. ಮಾತ್ರ ಖರ್ಚಾಗುತ್ತಿತ್ತು. ಆದರೆ ಕೇಂದ್ರದ ಲಸಿಕೆ ಖರೀದಿ ನೀತಿಯಿಂದಾಗಿ ರಾಜ್ಯ ಸರ್ಕಾರವು ಕೋವಿಶೀಲ್ಡ್‌ಗೆ 300 ರು. ಮತ್ತು ಕೊವಾಕ್ಸಿನ್‌ಗೆ 400 ರು. ದರದಲ್ಲಿ ಖರೀದಿಸಿರುವುದರಿಂದ ರಾಜ್ಯ ಸರ್ಕಾರವೊಂದರ ಮೇಲೆ ಈವರೆಗೆ 55.78 ಕೋಟಿ ರು. ಹೊರೆ ಬಿದ್ದಿರುವುದು ನಿಚ್ಚಳವಾಗಿ ಕಂಡು ಬಂದಿತ್ತು.

ರಾಜ್ಯ ಸರ್ಕಾರವು ಮೇ 20ರ ಪೂರ್ವದಲ್ಲಿಯೇ ಕೋವಿಶೀಲ್ಡ್‌ ಮತ್ತು ಕೊವಾಕ್ಸಿನ್‌ ಸೇರಿ ಸರಿಸುಮಾರು 8.94 ಲಕ್ಷ ಲಸಿಕೆಗಳನ್ನು ಖರೀದಿಸಿತ್ತು. ಕೇಂದ್ರ ಸರ್ಕಾರವು ಈ ಮೊದಲು ಮೊದಲ ಡೋಸ್‌ಗಳನ್ನು ಸರಬರಾಜು ಮಾಡಿತ್ತಾದರೂ ಎರಡನೇ ಡೋಸ್‌ನ್ನು ರಾಜ್ಯಕ್ಕೆ ನೀಡದ ಕಾರಣ ಕೇಂದ್ರ ಸರ್ಕಾರದ ಗೌರವದ ವರ್ಚಸ್ಸು ಕಾಪಾಡಲು ಹೋಗಿ ರಾಜ್ಯ ಸರ್ಕಾರವು ಅಂದಾಜು 28 ಕೋಟಿ ರು. ಹೊರೆಯನ್ನು ಮೈಮೇಲೆ ಎಳೆದುಕೊಂಡಿದ್ದನ್ನು ಸ್ಮರಿಸಬಹುದು.

ಮೇ 20ಕ್ಕಿಂತ ಪೂರ್ವದಲ್ಲಿ ರಾಜ್ಯ ಸರ್ಕಾರವು 22.50 ಕೋಟಿ ರು. ವೆಚ್ಚದಲ್ಲಿ ಕೋವಿಶೀಲ್ಡ್‌ ಮತ್ತು 6 ಕೋಟಿ ಕೋಟಿ ವೆಚ್ಚದಲ್ಲಿ ಕೊವಾಕ್ಸಿನ್‌ ಲಸಿಕೆಯನ್ನು ಖರೀದಿಸಿತ್ತು. ಮೇ 20ರ ಪೂರ್ವದಲ್ಲಿ ರಾಜ್ಯಕ್ಕೆ 7.50 ಲಕ್ಷ ಕೋವಿಶೀಲ್ಡ್‌ ಮತ್ತು 1,44,170 ಕೊವಾಕ್ಸಿನ್‌ ಲಸಿಕೆಯನ್ನು ಖರೀದಿಸಿತ್ತು.

8.94 ಲಕ್ಷ ಲಸಿಕೆಗಳನ್ನು ರಾಜ್ಯ ಸರ್ಕಾರವು ಬಳಸಲು ಮುಂದಾಗಿತ್ತು. ಆದರೆ 45 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರವು 2ನೇ ಡೋಸ್‌ನ್ನು ಸರಬರಾಜು ಮಾಡಿರಲಿಲ್ಲ. ಹೀಗಾಗಿ 8.94 ಲಕ್ಷ ಲಸಿಕೆಗಳನ್ನು 45 ವರ್ಷ ಮೇಲ್ಪಟ್ಟವರಿಗೆ 2ನೇ ಡೋಸ್‌ಗೆ ಬಳಸಿಕೊಂಡಿತು. ಇದನ್ನು ರಾಜ್ಯ ಸರ್ಕಾರವು ಮುಚ್ಚಿಟ್ಟಿತ್ತು.

SUPPORT THE FILE

Latest News

Related Posts