ಪಿಡಬ್ಲ್ಯೂಡಿ; ಕಪ್ಪುಪಟ್ಟಿಗೆ ಸೇರಬೇಕಿದ್ದ ಗುಜರಾತ್ ಕಂಪನಿಗೆ 10,000 ಕೋಟಿ ಮೊತ್ತದ ಗುತ್ತಿಗೆ?

ಬೆಂಗಳೂರು; ನಿಗದಿತ ಕಾಲಾವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸದ ಆರೋಪಕ್ಕೆ ಗುರಿಯಾಗಿರುವ ಗುಜರಾತ್‌ ಮೂಲದ ಸದ್ಬಾವ್‌ ಕಂಪನಿಗೆ ಲೋಕೋಪಯೋಗಿ, ನೀರಾವರಿ, ನಗರಾಭಿವೃದ್ಧಿ, ಬಾಹ್ಯ ಸಂಸ್ಥೆಯ ನೆರವಿನ ಯೋಜನೆಗಳನ್ನೂ ಒಳಗೊಂಡಂತೆ ರಾಜ್ಯ ಬಿಜೆಪಿ ಸರ್ಕಾರವು ಅಂದಾಜು 10,000 ಕೋಟಿ ಮೊತ್ತದ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ನೀಡಿರುವುದು ಇದೀಗ ಬಹಿರಂಗವಾಗಿದೆ.

ನಿರ್ದಿಷ್ಟ ಯೋಜನೆಯನ್ನು ನಿಗದಿತ ಕಾಲಾವಧಿಯೊಳಗೆ ಪೂರ್ಣಗೊಳಿಸದೇ ಇದ್ದರೆ ಅಂತಹ ಕಂಪನಿಯನ್ನು ಅನರ್ಹಗೊಳಿಸಬೇಕಲ್ಲದೆ ಕಪ್ಪು ಪಟ್ಟಿಗೆ ಸೇರಿಸಬೇಕಿತ್ತು. ಕಂಪನಿ ವ್ಯವಹಾರಗಳ ಜತೆ ಗುರುತಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿರುವ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರ ಸಂಬಂಧಿಕರೊಬ್ಬರು ಮತ್ತು ಯೋಜನಾ ನಿರ್ದೇಶಕ ಸುರೇಶ್‌ ಬಾಬು ಎಂಬುವರು ಕಂಪನಿಯ ಹಿತ ಕಾಯ್ದಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಪಾವಗಡ-ತುಮಕೂರು ಹೆದ್ದಾರಿ ಯೋಜನೆಯನ್ನು ಕೈಗೆತ್ತಿಕೊಂಡಿದ್ದ ಸದ್ಬಾವ್‌ ಕಂಪನಿಯು ಅವಧಿ ಮೀರಿದ್ದರೂ ಕಾಮಗಾರಿ ಪೂರ್ಣಗೊಳಿಸಿರಲಿಲ್ಲ. ಹೀಗಾಗಿ ಈ ಕಂಪನಿಗೆ ದಂಡವನ್ನೂ ವಿಧಿಸಲಾಗಿತ್ತು ಎಂದು ಹೇಳಲಾಗಿದೆ. ಆದರೂ ಸಾವಿರಾರು ಕೋಟಿ ಮೊತ್ತದ ಯೋಜನೆಗಳನ್ನು ಈ ಕಂಪನಿಗೆ ನೀಡಿರುವುದು ಅಚ್ಚರಿ ಮೂಡಿಸಿದೆ.

ಗದಗ್‌ ಹೊನ್ನಾಳಿ ಯೋಜನೆ ದೊರೆತಿದ್ಹೇಗೆ?

ಗದಗ್‌ ಮತ್ತು ಹೊನ್ನಾಳಿ ಯೋಜನೆ ಸಂಬಂಧ ಕರೆದಿದ್ದ ಟೆಂಡರ್‌ನಲ್ಲಿ ಸದ್ಭಾವ್‌ ಕಂಪನಿ ಎಲ್‌-1 ಆಗಿರಲಿಲ್ಲ ಎಂದು ಗೊತ್ತಾಗಿದೆ. ಟೆಂಡರ್‌ನಲ್ಲಿ ಬಿಡ್‌ ಮಾಡಿದ್ದ ಕೆ ಎನ್‌ ಹೈವೇಸ್‌ ಕಂಪನಿಯು ಗದಗ್‌ ಹೊನ್ನಾಳಿ ಮತ್ತು ಮೈಸೂರು ಯೋಜನೆಯಲ್ಲಿ ಎಲ್‌-1 ಆಗಿತ್ತು. ಸದ್ಬಾವ್‌ ಕಂಪನಿಯು ಗದಗ್‌ ಹೊನ್ನಾಳಿ ಯೋಜನೆಯಲ್ಲಿ ಎಲ್‌-2 ಆಗಿತ್ತು ಎಂದು ತಿಳಿದು ಬಂದಿದೆ.

ಆದರೂ ಸದ್ಭಾವ್‌ ಕಂಪನಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೆಶಿಪ್‌ನ ಯೋಜನಾ ನಿರ್ದೇಶಕ ಸುರೇಶ್‌ಬಾಬು ಎಂಬುವರು ಕೆ ಎನ್‌ ಹೈವೇಸ್‌ ಕಂಪನಿ ಜತೆ ಸಂಧಾನ ನಡೆಸಿ ಎಲ್‌ 2 ಸ್ಥಾನದಲ್ಲಿದ್ದ ಸದ್ಭಾವ್‌ ಕಂಪನಿಗೆ ಟೆಂಡರ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ಇಲಾಖಾ  ಮೂಲಗಳು ‘ದಿ ಫೈಲ್‌’ಗೆ ತಿಳಿಸಿವೆ.

ಮೈಸೂರು ಯೋಜನೆಯನ್ನು ಕೈಗೆತ್ತಿಕೊಂಡಿದ್ದ ಕೆ ಎನ್‌ ಹೈವೇಸ್‌ ಕಂಪನಿಯು 28 ಕಿ ಮೀ ಅಭಿವೃದ್ಧಿಪಡಿಸಬೇಕಿದ್ದರೂ 36 ಕಿ ಮೀ ಅಭಿವೃದ್ಧಿಪಡಿಸುವ ಮೂಲಕ ನಿಗದಿತ ಗುರಿಗಿಂತಲೂ ಹೆಚ್ಚಿನ ಪ್ರಗತಿ ಸಾಧಿಸಿತ್ತು ಎಂದು ಹೇಳಲಾಗಿದೆ. ಆದರೆ ಗದಗ್‌ ಹೊನ್ನಾಳಿ ಯೋಜನೆ ಕೈಗೆತ್ತಿಕೊಂಡಿರುವ ಸದ್ಭಾವ್‌ ಕಂಪನಿಯು ನಿಗದಿತ ಕಾಲಾವಧಿ ಪೂರ್ಣಗೊಂಡರೂ ನಿರೀಕ್ಷಿತ ಗುರಿ ತಲುಪಿಲ್ಲ ಎಂಬ ಆರೋಪ ಕೇಳಿ ಬಂದಿದೆ. ರಾಜ್ಯದಲ್ಲಿ ಕೈಗೆತ್ತಿಕೊಂಡಿರುವ ಬೇರೊಂದು ಹೆದ್ದಾರಿ ಯೋಜನೆ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದ ಕಾರಣಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ದಂಡವನ್ನೂ ವಿಧಿಸಲಾಗಿದೆ ಎಂದು ಗೊತ್ತಾಗಿದೆ. ಆದರೂ ಇದೇ ಕಂಪನಿಗೆ ಸಾವಿರಾರು ಕೋಟಿ ಮೊತ್ತದ ಯೋಜನೆಗಳ ಗುತ್ತಿಗೆ ನೀಡುತ್ತಿರುವುದು ಅಚ್ಚರಿ ಮೂಡಿಸಿದೆ.

the fil favicon

SUPPORT THE FILE

Latest News

Related Posts