ಲಸಿಕೆ ವೆಚ್ಚ; ಸುಪ್ರೀಂ ನಿರ್ದೇಶಿಸುವ ಮುನ್ನವೇ ಖರ್ಚಿನ ವಿವರ ಮಂದಿಟ್ಟಿದ್ದ ‘ದಿ ಫೈಲ್‌’

ಬೆಂಗಳೂರು; ಲಸಿಕೆ ಅಭಿಯಾನಕ್ಕೆ ಬಜೆಟ್‌ನಲ್ಲಿ ಮೀಸಲಿರಿಸಿದ್ದ ಒಟ್ಟು 35,000 ಕೋಟಿ ರು. ಪೈಕಿ ಲಸಿಕೆ ಖರೀದಿಗಾಗಿ ಎಷ್ಟು ಖರ್ಚು ಮಾಡಿದೆ ಎಂಬ ವಿವರಗಳನ್ನು ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್, ಎಲ್ ನಾಗೇಶ್ವರ ರಾವ್ ಮತ್ತು ಎಸ್ ರವೀಂದ್ರ ಭಟ್ ಅವರನ್ನು ಒಳಗೊಂಡ ನ್ಯಾಯಪೀಠವು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.

ಸುಪ್ರಿಂ ಕೋರ್ಟ್‌ ಈ ನಿರ್ದೇಶನ ನೀಡುವ ಮುನ್ನವೇ ಅಂದರೆ 2021ರ ಮೇ 11ರಂದೇ ‘ದಿ ಫೈಲ್‌’ ಲಸಿಕೆ ಅಭಿಯಾನಕ್ಕೆ ಬಜೆಟ್‌ನಲ್ಲಿ ಮೀಸಲಿರಿಸಿದ್ದ ಒಟ್ಟು 35,000 ಕೋಟಿ ರು. ಪೈಕಿ ಕೇವಲ ಶೇ. 8.5ರಷ್ಟನ್ನು ಮಾತ್ರ ಕೇಂದ್ರ ಸರ್ಕಾರವು ಬಳಕೆ ಮಾಡಿತ್ತು ಎಂಬ ಮಾಹಿತಿಯನ್ನು ಹೊರಗೆಡವಿತ್ತು.

2021-22ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು 35,000 ಕೋಟಿ ರೂ.ಗಳನ್ನು ಲಸಿಕೆ ಅಭಿಯಾನಕ್ಕೆ (7 4.7 ಶತಕೋಟಿ) ನಿಗದಿಪಡಿಸಿತ್ತು. ಆದರೀಗ ಕೇವಲ 2,993 ಕೋಟಿ ರು. ಮಾತ್ರ ಖರ್ಚು ಮಾಡಿ 32,000 ಕೋಟಿ ಬಾಕಿ ಉಳಿಸಿಕೊಂಡಿದೆ ಎಂದು ‘ದಿ ಫೈಲ್‌’ ವರದಿ ಮಾಡಿದ್ದನ್ನು ಸ್ಮರಿಸಬಹುದು.

ದೇಶದಲ್ಲಿನ ಕೋವಿಡ್ ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತಾದ ವರದಿಯನ್ನು ಪರಿಗಣಿಸಿ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌ನ ಪೀಠವು ದೇಶಾದ್ಯಂತ ಒಂದು ಡೋಸ್ ಹಾಗೂ ಎರಡು ಡೋಸ್ ಲಸಿಕೆಗಳನ್ನು ಇದುವರೆಗೂ ನೀಡಲಾಗಿರುವ ಶೇಕಡಾವಾರು ಅಂಕಿ ಅಂಶವನ್ನು ನೀಡಬೇಕು. ಇದು ಗ್ರಾಮೀಣ ಮತ್ತು ನಗರ ಜನಸಂಖ್ಯೆಯ ವಿವರಗಳನ್ನು ಒಳಗೊಂಡಿರಬೇಕು ಎಂದೂ ಸೂಚಿಸಿದೆ.

ಅಲ್ಲದೆ, ಕೋವ್ಯಾಕ್ಸಿನ್, ಕೋವಿಶೀಲ್ಡ್ ಮತ್ತು ಸ್ಪುಟ್ನಿಕ್ ಸೇರಿದಂತೆ ಇದುವರೆಗೂ ಖರೀದಿಸಲಾದ ಎಲ್ಲ ಕೋವಿಡ್ 19 ಲಸಿಕೆಗಳ ಸಂಪೂರ್ಣ ವಿವರಗಳನ್ನು ನೀಡುವಂತೆ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಈ ದಾಖಲೆಗಳು ಸ್ಪಷ್ಟವಾಗಿರಬೇಕು. ಎ) ಎಲ್ಲ ಮೂರು ಲಸಿಕೆಗಳ ಖರೀದಿಗೆ ಸಂಬಂಧಿಸಿದಂತೆ ಸರ್ಕಾರದ ಆದೇಶಗಳ ದಿನಾಂಗಳು ಬಿ) ಪ್ರತಿ ದಿನಾಂಕಗಳಲ್ಲಿ ಆರ್ಡರ್ ಮಾಡಲಾದ ಲಸಿಕೆಗಳ ಪ್ರಮಾಣ ಸಿ) ಪೂರೈಕೆಯ ಭರವಸೆಯ ದಿನಾಂಕವನ್ನೂ ಒಳಗೊಂಡಂತೆ ಲಸಿಕೆ ಖರೀದಿಯ ಸಂಪೂರ್ಣ ದಾಖಲೆಯನ್ನೂ ನೀಡಿ ಎಂದು ನಿರ್ದೇಶಿಸಿದೆ.

35,000 ಕೋಟಿ ರು.ನಲ್ಲಿ ಲಸಿಕೆ ಖರೀದಿಗಾಗಿ ಕೇಂದ್ರ ಸರ್ಕಾರವು ಇದುವರೆಗೆ ಖರ್ಚು ಮಾಡಿರುವ ವಿವರಗಳನ್ನು ಕೇಳಿರುವ ಹಿನ್ನೆಲೆಯಲ್ಲಿ ಮೇ 11ರಂದು ಪ್ರಕಟಿಸಿದ್ದ ವರದಿಯನ್ನು ಮತ್ತೊಮ್ಮೆ ಇಲ್ಲಿ ಕೊಡಲಾಗಿದೆ.

ಲಸಿಕೆ; 35 ಸಾವಿರ ಕೋಟಿಯಲ್ಲಿ ಕೇಂದ್ರ ಖರ್ಚು ಮಾಡಿದ್ದು ಕೇವಲ 2,993 ಕೋಟಿ

ಪ್ರತಿ ಡೋಸ್‌ಗೆ 150 ರು. ದರದಲ್ಲಿ ಕೇಂದ್ರ ಸರ್ಕಾರವು ಲಸಿಕೆ ಖರೀದಿಸುತ್ತಿದೆ. ಇದರ ಪ್ರಕಾರ 2.1 ಬಿಲಿಯನ್‌ ಡೋಸ್‌ಗಳನ್ನು ಖರೀದಿಸಬಹುದು. ಆದರೆ ದೇಶದಲ್ಲಿ 18ಕ್ಕಿಂತ ಮೇಲ್ಪಟ್ಟ ವಯೋಮಾನದವರ ಸಂಖ್ಯೆ 2021ರಲ್ಲಿ 940 ಮಿಲಿಯನ್‌ ಇದೆ. ಹೀಗಾಗಿ 1.88 ಬಿಲಿಯನ್‌ ಡೋಸ್‌ ಅಗತ್ಯವಿದೆ. ಅಲ್ಲದೆ ಎಲ್ಲಾ ವಯೋಮಾನದವರಿಗೆ 2 ಡೋಸ್‌ ನೀಡಬೇಕೆಂದಾದರೆ ಇನ್ನುಳಿದ ಶೇ. 80ರಷ್ಟು ಹಣವನ್ನು ಬಳಸಬೇಕಾಗುತ್ತದೆ.

ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶವು 18ರಿಂದ 44 ವರ್ಷ ವಯಸ್ಸಿನವರಿಗೆ ಕೋವಿಶೀಲ್ಡ್‌ ಲಸಿಕೆ ನೀಡಲು ಸುಮಾರು 5,715 ಕೋಟಿ ಖರ್ಚು ಮಾಡಬೇಕು. ಇದು ಉತ್ತರ ಪ್ರದೇಶ ಸರ್ಕಾರದ 2021-22ರ ಆರೋಗ್ಯ ಬಜೆಟ್‌ನಲ್ಲಿ ಶೇ.18ರಷ್ಟಿದೆ. ಅಲ್ಲದೆ ಕೋವಾಕ್ಸಿನ್‌ನ್ನೂ ಖರೀದಿಸಬೇಕಾದರೆ ಇದರ ವೆಚ್ಚವು 2,000 ಕೋಟಿಯಿಂದ 7,620 ಕೋಟಿಗೆ ಹೆಚ್ಚಳವಾಗಲಿದೆ. ಒಟ್ಟಾರೆ ಆರೋಗ್ಯ ಬಜೆಟ್‌ನಲ್ಲಿ ಶೇ. 23ರಷ್ಟಾಗುತ್ತದೆ ಎಂದು ತಿಳಿದು ಬಂದಿದೆ.

ಅಲ್ಲದೆ 16.5 ಮಿಲಿಯನ್ ಡೋಸ್ ಕೋವಿಶೀಲ್ಡ್ (11 ಮಿಲಿಯನ್) ಮತ್ತು ಸ್ಥಳೀಯ ಕೊವಾಕ್ಸಿನ್ (5.5 ಮಿಲಿಯನ್) ಸಂಗ್ರಹಿಸಲು ಸರ್ಕಾರ 350 ಕೋಟಿ ರೂ. ( 47 ಮಿಲಿಯನ್) ಖರ್ಚು ಮಾಡಿತ್ತು. ಲಸಿಕಾಕರಣ ಕಾರ್ಯಕ್ರಮಕ್ಕಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈಗಾಗಲೇ 123 ಕೋಟಿ ರೂ. ಖರ್ಚು ಮಾಡಿದೆ.

ಇದಲ್ಲದೆ, ಸರ್ಕಾರವು 21 ಮಿಲಿಯನ್ ಕೋವಿಶೀಲ್ಡ್‌ಗೆ 1,732.50 ಕೋಟಿ ಮತ್ತು 2021 ಏಪ್ರಿಲ್ 28 ರಂದು 50 ಮಿಲಿಯನ್ ಡೋಸ್ ಕೋವಾಕ್ಸಿನ್‌ಗಾಗಿ 787.50 ಕೋಟಿ ಖರ್ಚು ಮಾಡಿದೆ. ಸೀರಮ್‌ ಇನ್ಸಿಟಿಟ್ಯೂಟ್‌ ಆಫ್ ಇಂಡಿಯಾ ಕಂಪನಿಗೆ 2021ರ ಏಪ್ರಿಲ್‌ 28ರಂದು 1,732.50 ಕೋಟಿ ರು.ಗಳನ್ನು ಮುಂಗಡವಾಗಿ ಬಿಡುಗಡೆ ಮಾಡಿದೆ. 10 ಕೋಟಿ ಡೋಸ್‌ ಕೋವಿಶೀಲ್ಡ್‌ ಲಸಿಕೆ ಬೇಡಿಕೆ ಪೈಕಿ 2021ರ ಮೇ 3ರ ಹೊತ್ತಿಗೆ 8.744 ಕೋಟಿ ಡೋಸ್‌ ವಿತರಿಸಿದೆ ಎಂದು ಕೇಂದ್ರ ಸರ್ಕಾರದ ಇತ್ತೀಚಿನ ಮಾಹಿತಿಯಿಂದ ತಿಳಿದು ಬಂದಿದೆ.

ಅದೇ ರೀತಿ ಮೇ, ಜೂನ್‌ ಮತ್ತು ಜುಲೈ ಅವಧಿಗೆ ಒಟ್ಟು 05 ಕೋಟಿ ಕೊವಾಕ್ಸಿನ್‌ ಡೋಸ್‌ಗಳ ಪೂರೈಕೆಗಾಗಿ ಭಾರತ್ ಬಯೋಟೆಕ್‌ ಇಂಡಿಯಾ ಲಿಮಿಟೆಡ್‌ಗೆ 2021ರ ಏಪ್ರಿಲ್‌ 28ರಂದು 787.50 ಕೋಟಿ ರು.ಗಳನ್ನು ಮುಂಗಡವಾಗಿ ಬಿಡುಗಡೆ ಮಾಡಲಾಗಿದೆ.

the fil favicon

SUPPORT THE FILE

Latest News

Related Posts