ಕೋವಿಡ್‌ 2ನೇ ಅಲೆಯಲ್ಲೂ ಭ್ರಷ್ಟಾಚಾರ; ಲೆಕ್ಕಪತ್ರ ಪರಿಶೀಲನೆಗೆ ಡಿ ಕೆ ಶಿವಕುಮಾರ್‌ ಪತ್ರ

ಬೆಂಗಳೂರು; ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ವೆಂಟಿಲೇಟರ್‌, ಆಕ್ಸಿಜನ್‌ ಸಿಲಿಂಡರ್‌, ಆಸ್ಪತ್ರೆ ಬೆಡ್‌ ಮತ್ತು ಇನ್ನಿತರೆ ಖರೀದಿಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಬಲವಾದ ಆರೋಪಗಳು ಕೇಳಿ ಬಂದಿವೆ. ಈ ಸಂಬಂಧ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಲೆಕ್ಕಪತ್ರಗಳ ಪರಿಶೀಲನೆ ನಡೆಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಅವರು ಪಿಎಸಿ ಅಧ್ಯಕ್ಷ ರಾಮಲಿಂಗಾರೆಡ್ಡಿ ಅವರಿಗೆ ಪತ್ರ ಬರೆದಿದ್ದಾರೆ.

ಕೋವಿಡ್‌ ಮೊದಲ ಅಲೆಯ ಸಂದರ್ಭದಲ್ಲೂ ಪಿಪಿಇ ಕಿಟ್‌, ಸ್ಯಾನಿಟೈಸರ್‌, ವೆಂಟಿಲೇಟರ್‌, ಪಲ್ಸ್‌ ಆಕ್ಸಿಮೀಟರ್‌ ಸೇರಿದಂತೆ ಇನ್ನಿತರೆ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಅಕ್ರಮ ನಡೆದಿತ್ತು ಎಂಬ ಆರೋಪಗಳ ಕುರಿತು ಪಿಎಸಿ ಹಿಂದಿನ ಅಧ್ಯಕ್ಷ ಎಚ್‌ ಕೆ ಪಾಟೀಲ್‌ ಅವರು ತನಿಖೆಗೆ ಮುಂದಾಗಿದ್ದರು. ಅದರೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇದಕ್ಕೆ ಸಹಕರಿಸಿರಲಿಲ್ಲ.

ಈ ಬೆಳವಣಿಗೆ ನಡುವೆ ಕೋವಿಡ್‌ 2ನೇ ಅಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆಕ್ಸಿಜನ್‌ ಸಿಲಿಂಡರ್‌, ವೆಂಟಿಲೇಟರ್‌ ಖರೀದಿ ಸಂಬಂಧ ಲೆಕ್ಕಪತ್ರಗಳ ಪರಿಶೀಲನೆ ನಡೆಸಲು ಪಿಎಸಿ ಹಾಲಿ ಅಧ್ಯಕ್ಷ ರಾಮಲಿಂಗಾರೆಡ್ಡಿ ಅವರಿಗೆ ಸೂಚಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಕೆಪಿಸಿಸಿ ಅಧ್ಯಕ್ಷರು 2021ರ ಮೇ 5ರಂದು ಬರೆದಿರುವ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಈ ಪತ್ರವನ್ನಾಧರಿಸಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಸದ್ಯದಲ್ಲೇ ಸ್ಪೀಕರ್‌ ಕಾಗೇರಿ ಅವರಿಗೆ ಅನುಮತಿ ಕೋರಿ ಪತ್ರ ಬರೆಯಲಿದೆ ಎಂದು ಗೊತ್ತಾಗಿದೆ. ಆದರೆ ಕಳೆದ ಬಾರಿ ಸ್ಪೀಕರ್‌ ಕಾಗೇರಿ ಅವರು ಹಿಂದಿನ ಪಿಎಸಿಗೆ ಯಾವುದೇ ಸಹಕಾರ ನೀಡಿರಲಿಲ್ಲ. ಈ ಬಾರಿಯೂ ಅಸಹಕಾರ ಮುಂದುವರೆಯಲಿದೆಯೇ ಅಥವಾ ಲೆಕ್ಕಪತ್ರಗಳ ಪರಿಶೀಲನೆಗೆ ಅನುಮತಿ ನೀಡಲಿದ್ದಾರೆಯೇ ಇಲ್ಲವೇ ಈ ಕುರಿತು ಯಾವ ನಿಲುವು ತಳೆಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಪತ್ರದಲ್ಲೇನಿದೆ?

ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದ ವೆಂಟಿಲೇಟರ್‌, ಆಕ್ಸಿಜನ್‌ ಸಿಲಿಂಡರ್‌ಗಳು, ಆಸ್ಪತ್ರೆ ಬೆಡ್‌ಗಳು ಮತ್ತಿತರ ಖರೀದಿಗಳ ಲೆಕ್ಕಪತ್ರಗಳ ಪರಿಶೀಲನೆ ನಡೆಸಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ತಾವು ರಾಜ್ಯ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾಗಿ ರೂಲ್ಸ್‌ ಅಫ್‌ ಪ್ರೊಸಿಜರ್‌ ಅಂಡ್‌ ಕಂಡಕ್ಟ್‌ ಆಫ್‌ ಬಿಸಿನೆಸ್‌ ಇನ್‌ ಕರ್ನಾಟಕ ಲೆಜಿಸ್ಲೇಚರ್‌ ಹಾಗೂ ವಿಧಾನಸಭೆ ನಿಯಮ 264ರ ಅಡಿಯಲ್ಲಿ ಕೂಡಲೇ ಸಮಿತಿ ಸಭೆ ಕರೆದು ಚರ್ಚಿಸಬೇಕು. ಈ ಸಂಬಂಧ ಮಧ್ಯಂತರ ವರದಿಯನ್ನು ಸಿದ್ಧಪಡಿಸಿ ವಿಧಾನಸಭಾಧ್ಯಕ್ಷರು ಮತ್ತು ವಿಧಾನಪರಿಷತ್‌ನ ಸಭಾಪತಿಗಳ ಮೂಲಕ ಸರ್ಕಾರಕ್ಕೆ ತಲುಪಿಸಬೇಕು . ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಚುರುಕು ಮುಟ್ಟಿಸುವ ಕೆಲಸ ಮಾಡಿ ಜನರಿಗೆ ನೆರವಾಗಬೇಕಿದೆ,’ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಅವರು ಪತ್ರದಲ್ಲಿ ಸೂಚಿಸಿದ್ದಾರೆ.

ಕೋವಿಡ್‌ ಮೊದಲ ಅಲೆಯ ಸಂದರ್ಭದಲ್ಲಿಯೂ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿತ್ತು ಎಂದು ಕರ್ನಾಟಕ ರಾಷ್ಟ್ರಸಮಿತಿ ನೀಡಿದ್ದ ದಾಖಲೆಗಳ ಸಮೇತ ದೂರಿನಲ್ಲಿ ಬಲವಾಗಿ ಆರೋಪಿಸಿತ್ತು. ಕೋವಿಡ್‌ ಭ್ರಷ್ಟಾಚಾರ ಕುರಿತಂತೆ ಸಮಿತಿಯು ಹಲವು ಸಭೆಗಳನ್ನು ನಡೆಸಿತ್ತು.

ಈ ಸಂಬಂಧ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಹಿಂದಿನ ಅಧ್ಯಕ್ಷ ಎಚ್‌ ಕೆ ಪಾಟೀಲ್‌ ಅವರು ಕೆಲವೆಡೆ ಸ್ಥಳ ಪರಿಶೀಲನೆ ನಡೆಸಿದ್ದರು. ಅಲ್ಲದೆ ದಾಖಲೆಗಳನ್ನಾಧರಿಸಿ ಮಧ್ಯಂತರ ವರದಿಯನ್ನೂ ಸಿದ್ಧಪಡಿಸಿದ್ದರು. ವರದಿಯನ್ನು ವಿಧಾನಮಂಡಲದಲ್ಲಿ ಮಂಡಿಸಲು ಸ್ಪೀಕರ್‌ ಕಾಗೇರಿ ಅವರು ಅನುಮತಿ ನೀಡಿರಲಿಲ್ಲ. ಈ ವಿಚಾರವಾಗಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮತ್ತು ಕಾಗೇರಿ ಅವರ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿದ್ದನ್ನು ಸ್ಮರಿಸಬಹುದು.

ಇದರ ಮಧ್ಯೆ ಸಿಎಜಿಗೆ ಪತ್ರ ಬರೆದಿದ್ದ ಎಚ್‌ ಕೆ ಪಾಟೀಲ್‌ ಅವರು ಕೋವಿಡ್‌ ನಿಯಂತ್ರಣ ಸಂಬಂಧ ವೈದ್ಯಕೀಯ ಸಲಕರಣೆಗಳ ಖರೀದಿ ಪ್ರಕ್ರಿಯೆ ಕುರಿತು ವಿಶೇಷ ಲೆಕ್ಕಪರಿಶೋಧನೆ ನಡೆಸಲು ಸೂಚಿಸಿದ್ದರು. ಆದರೆ ಈ ಸೂಚನೆಯನ್ನು ಸಿಎಜಿ ಪಾಲಿಸಿರಲಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಹಿಂದಿನ ಆರೋಗ್ಯ ಸಚಿವ ಶ್ರೀರಾಮುಲು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್‌ ಅವರು ಸಿಎಜಿಯಿಂದ ಲೆಕ್ಕ ಪರಿಶೀಲನೆ ನಡೆಸಲು ಅನುಮತಿ ನೀಡಿರಲಿಲ್ಲ.

the fil favicon

SUPPORT THE FILE

Latest News

Related Posts